ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ್ಮಹತ್ಯೆ ತಡೆಯೋದು ಹೇಗೆ ? ಹೇಳಿಕೊಡಲೊಂದು ಕೋರ್ಸು !

By Staff
|
Google Oneindia Kannada News

* ಅನ್ನಪೂರ್ಣ ಝಾ

ಬೆಂಗಳೂರು : ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ಸ್‌ಟಿಟ್ಯೂಟ್‌ ಆಫ್‌ ಏರೋಸ್ಪೇಸ್‌ ಮೆಡಿಸಿನ್‌ (ಐಎಎಮ್‌) ಆತ್ಮಹತ್ಯೆ ತಡೆಗಟ್ಟುವ ಕೋರ್ಸೊಂದನ್ನು ಶುರುಮಾಡಿದೆ. ಇದು ಕೇವಲ ಏರ್‌ಫೋರ್ಸ್‌ಗಷ್ಟೇ ಸೀಮಿತವಲ್ಲ ; ಸಾಮಾನ್ಯ ಜನರ ಆತ್ಮಹತ್ಯೆ ತಡೆಗೂ ಕೋರ್ಸು ಒತ್ತು ನೀಡುತ್ತಿದೆ.

ಐಎಎಮ್‌ನ ಕಮಾಂಡೆಂಟ್‌ ಕೆ.ಎಸ್‌.ಸೂದನ್‌ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ. ಜನ ಆತ್ಮಹತ್ಯೆ ಯಾಕೆ ಮಾಡಿಕೊಳ್ಳುತ್ತಾರೆ ಎಂಬ ಅಂಶಗಳನ್ನು ಪತ್ತೆ ಮಾಡಿ, ಅವರು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಗಟ್ಟುವುದು ಹೇಗೆ ಎಂಬುದನ್ನು ಕೋರ್ಸಿನಲ್ಲಿ ಹೇಳಿಕೊಡಲಾಗುತ್ತದೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವಂಥ ಮಾನಸಿಕ ಸ್ಥಿತಿ ಅರಿತು, ಜನರಲ್ಲಿ ಜಾಗೃತಿ ಮೂಡಿಸಿ ಅನಾಹುತ ತಪ್ಪಿಸಬಹುದಾಗಿದೆ ಎಂದರು.

ಇಂಡಿಯನ್‌ ಏರ್‌ಫೋರ್ಸ್‌ನಲ್ಲಿ ಈ ಕೋರ್ಸನ್ನು ಪ್ರಾರಂಭಿಸಲು ಕಾರಣವೇನು ? ವಿವರಿಸುತ್ತಾರೆ ಸೂದನ್‌...

ತನ್ನ ಹದಿನೇಳು ಹದಿನೆಂಟನೇ ವಯಸ್ಸಿಗೇ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ (ಎನ್‌ಡಿಎ) ಗೆ ಸೇರುವ ವ್ಯಕ್ತಿ, ಬೌದ್ಧಿಕವಾಗಿ ಸಾಕಷ್ಟು ಮುಂದಿದ್ದರೂ ಮಾನಸಿಕವಾಗಿ ಎಳಸುತನ ಇಣುಕುತ್ತಿರುತ್ತದೆ. ಮನೆಯಿಂದ ದೂರ ಉಳಿಯುವ ಇವರು ಕ್ಲಿಷ್ಟಕರವಾದ ತರಪೇತಿಯಿಂದ ರೋಸಿಹೋಗುವ ಸಾಧ್ಯತೆ ಇದೆ. ಅರ್ಧದಲ್ಲೇ ಬಿಟ್ಟು ಮನೆಗೆ ಹೋದರೆ ಪುಕ್ಕಲುತನ ಎನ್ನುತ್ತಾರೆ. ಇಲ್ಲಿನ ವಾತಾವರಣ ಅಕ್ಷರಶಃ ನರಕ ಎಂಬ ಪ್ರಜ್ಞೆ ಮೂಡುವ ಸಾಧ್ಯತೆಯಿದೆ. ಇಂತಹ ಇಬ್ಬಂದಿತನ ಮಾನಸಿಕ ಸ್ಥೈರ್ಯ ಕುಸಿಯಲು ಕಾರಣವಾಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಇದನ್ನು ತಪ್ಪಿಸಲು ಪ್ರಸ್ತುತ 20 ಮಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮನಃ ಸ್ಥಿತಿ ಪತ್ತೆ ಮಾಡುವ ತರಪೇತಿ ನೀಡಿದ್ದೇವೆ. ಇವರೆಲ್ಲಾ ಮೆಂಟಾರ್‌ಗಳು. ಯುವಕರ ಮೇಲೆ ಸದಾ ನಿಗಾ ಇಟ್ಟಿರುತ್ತಾರೆ. ಅವರ ತದೇಕಚಿತ್ತತೆಯೇ ಇವರ ಗುರಿ. ಆದರಲ್ಲಿ ಕಿಂಚಿತ್ತು ಏರುಪೇರಾದರೂ ತಕ್ಷಣವೇ ಜಾಗೃತರಾಗಿ, ಯುವಕರು ವಿಚಲಿತರಾಗದಂತೆ ನೋಡಿಕೊಳ್ಳುತ್ತಾರೆ. ಮಾನಸಿಕ ಸ್ಥೈರ್ಯ ಹೆಚ್ಚಿಸಿ, ಉತ್ತಮ ಭವಿಷ್ಯ ಕಟ್ಟಿಕೊಡಲು ತಕ್ಕ ತರಪೇತಿ ಆಯೋಜಿಸುತ್ತಾರೆ.

ಒಬ್ಬ ಸಾಮಾನ್ಯ ನಾಗರಿಕನನ್ನು ದೇಶ ಕಾಯುವ ಯೋಧನಾಗಿ, ಶಕ್ತಿಯಾಗಿ ರೂಪಿಸುವುದು ಬಲು ನಾಜೂಕಿನ ಕೆಲಸ ಎಂಬುದನ್ನು ಆತ್ಮಹತ್ಯೆ ತಡೆಯುವ ಕೋರ್ಸು ಹೇಳಿಕೊಡುತ್ತಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X