• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿದು ಬೀದಿನಾಯಿಗಳ ಸ್ವರ್ಗ ! ಹೆಜ್ಜೆ ತಪ್ಪಿದರೆ ನಾಯಿಪಾಡು ಖಚಿತ !

By Staff
|

ಆ ಹುಡುಗನ ಬೆರಳುಗಳ ನಡುವಿನಿಂದ ರಕ್ತದ ಹನಿಗಳು ಒಂದೊಂದಾಗಿ ನೆಲ ಸೇರುತ್ತಿದ್ದರೆ, ಗಲ್ಲದ ಮೇಲಿನಿಂದ ಬಿಸಿಹನಿಗಳು ಉರುಳುತ್ತಿದ್ದವು. ಎರಡೂ ಉಪ್ಪುಪ್ಪು .

ಆ ಹುಡುಗ ಭಯ- ಅಸಹಾಯಕತೆಯಿಂದ ಕಂಗೆಟ್ಟಿದ್ದ . ಕೆಲವೇ ನಿಮಿಷಗಳ ಹಿಂದಷ್ಟೇ ಅವನಿಗೆ ನಾಯಿ ಕಡಿದಿತ್ತು . ಅಂದಹಾಗೆ, ಬೀದಿ ನಾಯಿಗಳ ಕಡಿತಕ್ಕೆ ಬೆಂಗಳೂರಿನಲ್ಲಿ ಪ್ರತಿದಿನ ತುತ್ತಾಗುವವರ ಸಂಖ್ಯೆ 66. ಆ ಸಂಖ್ಯೆಯಲ್ಲಿ ಆ ಹೊತ್ತು ಪಾಪದ ಹುಡುಗನೂ ಒಬ್ಬನಾಗಿದ್ದ. ಆತನ ಕಥೆ ಮುಂದೇನಾಯಿತೊ..

ಐಸೊಲೇಷನ್‌ ಆಸ್ಪತ್ರೆಯಲ್ಲಿ ‘ನಾನಿನ್ನು ಸಹಿಸಲಾರೆ, ನನ್ನನ್ನು ಕೊಲ್ಲಿ’ ಎಂದು ನರಳುತ್ತ ಬಿದ್ದಿರುವ ಆಲಿ ಎನ್ನುವ ನಡು ವಯಸ್ಕನ ದುರಂತವನ್ನು ಉದಾಹರಿಸುವುದಾದರೆ- ಆತ ರೇಬಿಸ್‌ನ ಕೊನೆಯ ಹಂತ ಹೈಡ್ರೋಫೋಬಿಯಾ ತಲುಪಿದ್ದಾನೆ. ಒಂದು ಸುಂದರ ಸಂಜೆ ಕೆಲಸ ಮುಗಿಸಿಕೊಂಡು ಕನಸುಗಳೊಂದಿಗೆ ಮನೆಗೆ ಮರಳುತ್ತಿದ್ದ ಆಲಿಯನ್ನು ಬೀದಿ ನಾಯಾಂದು ಕಚ್ಚಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ. ಆತ ಸಕಾಲಕ್ಕೆ ಆಸ್ಪತ್ರೆಯನ್ನು ಮುಟ್ಟಿ, ನಾಯಿ ಕಡಿತಕ್ಕೆ ನೀಡುವ ಚುಚ್ಚುಮದ್ದನ್ನೇನೋ ತೆಗೆದುಕೊಂಡ. ಮೂರು ಇಂಜೆಕ್ಷನ್‌ ತೆಗೆದುಕೊಳ್ಳುವಷ್ಟರಲ್ಲಿ ಆಲಿ ಸುಸ್ತಾಗಿ ಹೋದ. ಕಿತ್ತು ನಾಯಿಗೆ ಹಾಕುವಷ್ಟು ಹೊಕ್ಕಳು ನೋಯುತ್ತಿತ್ತು . ನಾಲ್ಕನೇ ಇಂಜೆಕ್ಷನ್‌ ತೆಗೆದುಕೊಳ್ಳುವಲ್ಲಿ ಉದಾಸೀನ ತೋರಿಸಿದ. ಪರಿಣಾಮ- ರೇಬಿಸ್‌. ಅದು ನಿರ್ದಯೆಯಿಲ್ಲದೆ ಮಸಣಕ್ಕೊಯ್ಯುವ ಮಾರಿ.

ಆಲಿ ಈಗ ಬದುಕಿಲ್ಲ . ಆಸ್ಪತ್ರೆಯಲ್ಲಿ ಹೊರಳಿ ನರಳಿ ನಾಲ್ಕು ದಿನಗಳ ನಂತರ ಸತ್ತುಹೋದ. ರೇಬಿಸ್‌ ಅವನನ್ನು ಎಷ್ಟು ಕಾಡಿಸಿತ್ತೆಂದರೆ- ಸಾವು ಅವನಿಗೆ ವರ ಅನ್ನಿಸುವಂತಿತ್ತು . ಈಗ ಅಳುವ ಸರದಿ ಆತನ ಹೆಂಡತಿ ಹಾಗೂ ಮಗಳದು.

ರಸ್ತೆಯಲ್ಲಿ ಹೋಗುವಾಗ ಹುಷಾರು, ನಾಯಿಯ ಹಲ್ಲುಗಳು ಗರಗಸದಂತಿವೆ

ಸಮೀಕ್ಷೆಯಾಂದು ಹೇಳುವಂತೆ ರಾಜ್ಯದಲ್ಲಿ ದಾಖಲಾಗುವ ರೇಬಿಸ್‌ ಪ್ರಕರಣಗಳಲ್ಲಿ ಶೇ. 75 ಬೆಂಗಳೂರು ನಗರವೊಂದರಲ್ಲೇ ವರದಿಯಾಗಿರುತ್ತವೆ. ಕೆಂಪೇಗೌಡ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಪ್ರತಿದಿನ 20 ರಿಂದ 25 ಮಂದಿ ನಾಯಿ ಕಡಿತಕ್ಕೊಳಗಾದವರು ಚಿಕಿತ್ಸೆಗಾಗಿ ಬರುತ್ತಾರೆ ಎನ್ನುತ್ತಾರೆ ಡಾ.ಬಿ.ಜೆ. ಮಹೇಂದ್ರ. ಬೆಂಗಳೂರು ಮಹಾನಗರ ಪಾಲಿಕೆಯ ಪ್ರಕಾರ- ಪ್ರತಿ ತಿಂಗಳು ಸುಮಾರು 2 ಸಾವಿರ ನಾಯಿ ಕಡಿತದ ಪ್ರಕರಣಗಳು ನಗರದಲ್ಲಿ ದಾಖಲಾಗುತ್ತಿವೆ. ಈ ಅಂಕಿ ಅಂಶಗಳೇ ಅಂತಿಮವೇನೂ ಅಲ್ಲ . ಏಕೆಂದರೆ ಪಾಲಿಕೆಯ ಮಾಹಿತಿ ಸಂಗ್ರಹ ಕಕ್ಷೆಯಿಂದ ಅನೇಕ ಖಾಸಗಿ- ಸರ್ಕಾರಿ ಆಸ್ಪತ್ರೆಗಳು ಹೊರಗುಳಿದಿವೆ.

ರೇಬಿಸ್‌ ವಿರುದ್ಧ ಬಳಸುವ ವ್ಯಾಕ್ಸೀನ್‌- ಸೀರಂ, ಬಡವರಿಗೆ ಕೈಗೆಟುಕುವ ಬೆಲೆಯದ್ದೇನಲ್ಲ . ಸುಮಾರು 1800 ರುಪಾಯಿಗಳನ್ನು ಅವರು ಹೊಂದಿಸುವುದಾದರೂ ಎಲ್ಲಿಂದ? ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ವ್ಯಾಕ್ಸೀನ್‌ ನೀಡುತ್ತಾರಾದರೂ, ಆ ಸೌಲಭ್ಯ ಸಮರ್ಪಕವಾಗಿಲ್ಲ ಹಾಗೂ ಆ ಚುಚ್ಚುಮದ್ದುಗಳ ಯಮ ಯಾತನೆಯನ್ನು ಸಹಿಸುವುದು ಕಷ್ಟವೇ. ವ್ಯಾಕ್ಸೀನ್‌ಗಳ ಕಾರ್ಯಕ್ಷಮತೆ ಕೂಡ ಸಂಪೂರ್ಣ ಸುರಕ್ಷಿತವೇನೂ ಅಲ್ಲ . ಇತ್ತೀಚೆಗೆ ನಾಯಿ ಕಡಿತ ಚಿಕಿತ್ಸೆ ಪಡೆದು ಗುಣ ಕಾಣದ ಹುಡುಗನೊಬ್ಬನನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್‌ಗೆ ದಾಖಲಿಸಲಾಯಿತು. ಆತ ಬದುಕುಳಿಯಲಿಲ್ಲ . ಆನಂತರ ಮೆದುಳನ್ನು ಸ್ಕ್ಯಾನ್‌ ಮಾಡಿದಾಗ- ನಾಯಿ ಕಡಿತಕ್ಕೆ ನೀಡಿದ ವ್ಯಾಕ್ಸೀನ್‌ ಆ ಹುಡುಗನ ಮೆದುಳಿಗೆ ಘಾಸಿ ಮಾಡಿದುದು ಕಂಡು ಬಂತು.

ನಾಯಿಗಳು ಕಚ್ಚುತ್ತಲೇ ಇವೆ, ಚಿಕಿತ್ಸೆಯಲ್ಲಿ ಶತಮಾನಗಳಷ್ಟು ಹಿಂದಿದ್ದೇವೆ

ಸದ್ಯಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರಕುತ್ತಿರುವ ವ್ಯಾಕ್ಸೀನ್‌ ಕನಿಷ್ಠ ನೂರು ವರ್ಷಗಳಷ್ಟು ಹಳೆಯದು. ಹೊಕ್ಕಳ ಸುತ್ತ 14 ಇಂಜೆಕ್ಷನ್‌ ತೆಗೆದುಕೊಳ್ಳುವ ಹಿಂಸೆ ಸಂಪೂರ್ಣವಾಗಿ ಅನುಭವಿಸುವವರ ಸಂಖ್ಯೆ ತೀರಾ ಕಡಿಮೆ. ಪ್ರಸ್ತುತ ಸರ್ಕಾರಿ ದವಾಖಾನೆಗಳು ಬಳಸುತ್ತಿರುವ ಕುರಿ ಮೆದುಳಿನಿಂದ ತಯಾರಿಸಿದ ವ್ಯಾಕ್ಸೀನನ್ನು 1996 ರಲ್ಲಿಯೇ ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯೂಹೆಚ್‌ಓ) ನಿಷೇಧಿಸಿದೆ. ನರ ದೌರ್ಬಲ್ಯ ಹಾಗೂ ಉಸಿರಾಟದ ತೊಂದರೆಗಳಂತಹ ಉಪ ಪರಿಣಾಮಗಳನ್ನು ಉಂಟು ಮಾಡುವ ಈ ವ್ಯಾಕ್ಸೀನ್‌, ಮರಣಕ್ಕೂ ವೇಗದ ಹೆದ್ದಾರಿ.

ಆರೋಗ್ಯ ಸಚಿವರು ಹೇಳುವುದೇ ಬೇರೆ- ಸಮಸ್ಯೆ ಗಂಭೀರವಲ್ಲ

ಆರೋಗ್ಯ ಸಚಿವ ಡಾ. ಮಲಕರೆಡ್ಡಿ ಅವರ ವಾದ , ಸಮಸ್ಯೆಯನ್ನು ತೀರಾ ಸರಳೀಕರಿಸುತ್ತದೆ. ವ್ಯಾಕ್ಸೀನ್‌ನಿಂದ ಉಂಟಾಗುತ್ತದೆಂದು ಹೇಳಲಾಗಿರುವ ನರ ದೌರ್ಬಲ್ಯ ಅಥವಾ ಉಸಿರಾಟದ ತೊಂದರೆಯಿಂದ ಮರಣ ಹೊಂದುವ ಯಾವ ಪ್ರಕರಣವನ್ನೂ ತಮ್ಮ ಎರಡು ದಶಕಗಳ ವೈದ್ಯಕೀಯ ಅನುಭವದಲ್ಲಿ ಕಂಡಿಲ್ಲ ಎನ್ನುತ್ತಾರೆ ಮಲಕರೆಡ್ಡಿ . ವ್ಯಾಕ್ಸೀನ್‌ ವಿರುದ್ಧ ಡಬ್ಲ್ಯೂಹೆಚ್‌ಓ ಹೇರಿರುವ ನಿಷೇಧವನ್ನು ಅಪ್ರಸ್ತುತ ಎಂದು ಬಣ್ಣಿಸುವ ಅವರು- ಡಬ್ಲ್ಯೂಹೆಚ್‌ಓ ತನ್ನದೇ ಆದ ನಿಯಾಮವಳಿ ಹೊಂದಿದೆ, ತಾವೇನಿದ್ದರೂ ಭಾರತ ಸರ್ಕಾರದ ನೀತಿಗಳನ್ನು ಪಾಲಿಸುತ್ತೇವೆ ಎನ್ನುತ್ತಾರೆ ಸಚಿವರು. ಅವರೂ ಓರ್ವ ವೈದ್ಯರು!

ಒಮ್ಮೆ ಬೆಂಗಳೂರಿನ ಆಸ್ಪತ್ರೆಗಳ ವಾರ್ಡ್‌ಗಳಲ್ಲಿ ಅಡ್ಡಾಡಿ ಬಂದರೆ, ರಸ್ತೆಗಳಲ್ಲಿ ಸಂಜೆವರೆಗೂ ಅಡ್ಡಾಡಿ ಬಂದರೆ ಬೆಂಗಳೂರಿಗೂ ಬೀದಿನಾಯಿಗಳಿಗೂ ಅಂಟಿರುವ ನಂಟಿನ ಸತ್ಯದರ್ಶನವಾಗುತ್ತದೆ. ಸಚಿವ ಮಲಕರೆಡ್ಡಿ ಅವರು ಆಶಾವಾದಿ ಅನ್ನುವುದೇನೋ ನಿಜ. ಆದರೆ ರೇಬಿಸ್‌ ಚಿಕಿತ್ಸೆಯ ಬಗ್ಗೆ ನಾವು ಯಾವುದೇ ಆಶಾಭಾವನೆ ಇರಿಸಿಕೊಳ್ಳುವುದು ಸಾಧ್ಯವಿಲ್ಲ ಅನ್ನುವುದೇ ವಿಪರ್ಯಾಸ.

(ಇನ್ಫೋ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more