ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂತುರು ಮಳೆಯಾಂದಿಗೆ ಬೆಂಗಳೂರಿಗೆ ಬಿಜಯಂಗೈದ ಮಾನ್ಸೂನ್‌

By Staff
|
Google Oneindia Kannada News

ಬೆಂಗಳೂರು : ರಾಜಧಾನಿಯ ಬಾನಂಗಳಕ್ಕೆ ಸೋಮವಾರವಷ್ಟೆ ತಮ್ಮ ವಾರ್ಷಿಕ ಪಯಣದ ನಿಮಿತ್ತ ಬಿಜಯಂಗೈದ ಮಾನ್ಸೂನ್‌ ಮಾರುತಗಳು ಗಂಟೆ ಕಾಲದ ಚುಮುಚುಮು ಮಳೆಕರೆಯುವ ಮೂಲಕ ತಮ್ಮ ಆಗಮನವನ್ನು ಸಾರಿದವು. ಮಳೆಯ ಕರೆದ ಅತಿಥಿಗಳು ಆಪೋಷನ ತೆಗೆದುಕೊಂಡದ್ದು ಎರಡು ಡಿಗ್ರಿ ಸೆಲ್ಷಿಯಸ್‌ ತಾಪಮಾನವನ್ನು .

ಅತಿಥಿಗಳು ಬಂದಿರುವರೆಂದ ಮಾತ್ರಕ್ಕೆ ವರ್ಷ ವೃಷ್ಟಿಯೇ ಸಾಧ್ಯವಾದೀತೆಂದು ಹಿಗ್ಗಲಿಕ್ಕೆ ಕಾರಣವಿಲ್ಲ . ನಗರದ ಹವೆಯಲ್ಲಿ ಗಮನಾರ್ಹ ಬದಲಾವಣೆಗಳು ಸದ್ಯಕ್ಕೇನೂ ನಿರೀಕ್ಷಿಸುವಂತಿಲ್ಲ , ಆಕಾಶ ಮಾತ್ರ ಮೋಡಚ್ಛಾದಿತವಾಗಿರುತ್ತದೆ ಎಂದು ಹವಾಮಾನ ಇಲಾಖೆ ಮೂಲಗಳು ಉದ್ಧರಿಸಿವೆ.

ಸೋಮವಾರ ಬೆಂಗಳೂರಿನ ಕನಿಷ್ಠ ತಾಪಮಾನ 20.8 ಡಿಗ್ರಿ ಸೆಲ್ಷಿಯಸ್‌ಗಿಳಿದಿತ್ತು . ವಿಮಾನ ನಿಲ್ದಾಣ ಪ್ರದೇಶದಲ್ಲಿ ತುಸು ಉಸಿರುಕಟ್ಟಿಸುವ ಸುಡು ವಾತಾವರಣ ಮುಂದುವರಿದಿದ್ದು , ಅಲ್ಲಿನ ತಾಪಮಾನ 29.2 ಡಿಗ್ರಿ ಸೆಲ್ಷಿಯಸ್‌ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ಬಿತ್ತನೆ ಬೀಜವನ್ನೇನೋ ಹೊಂಚಿಕೊಂಡಿದ್ದಾಯಿತು,
ಮಳೆಯ ಮೋರೆಯೇ ಕಾಣದಲ್ಲ

ಕರಾವಳಿ ಪ್ರದೇಶದಲ್ಲಿ ಕಳೆದೊಂದು ತಿಂಗಳಿಂದ ಕಂತು ಪ್ರಕಾರ ಮಳೆ ಸುರಿಯುತ್ತಿದ್ದರೆ, ನಿತ್ಯ ಭಾಗ್ಯಶಾಲಿ ಬೆಂಗಳೂರು ಆಗಾಗ ತೇವಗೊಳ್ಳುತ್ತಲೇ ಇದೆ. ನಿಜವಾದ ಗುಟ್ಟು ಅರಿಯಲು ಬಯಲು ಸೀಮೆ ಒಳಭಾಗಗಳಲ್ಲಿ ಸಂಚರಿಸಬೇಕು. ಗುಲ್ಬರ್ಗಾ, ರಾಯಚೂರು, ಹುಬ್ಬಳ್ಳಿ- ಧಾರವಾಡ, ಚಿತ್ರದುರ್ಗ, ಮಂಡ್ಯ, ಮೈಸೂರುಗಳಲ್ಲಿನ ಬೇಗೆ ಸದ್ಯಕ್ಕೆ ಕೊನೆಗೊಳ್ಳುವ ಯಾವ ಲಕ್ಷಣಗಳೂ ಅಲ್ಲಿನ ಬಾನಂಗಳದಲ್ಲಿ ಕಾಣಿಸಿಕೊಂಡಿಲ್ಲ .

ಬೇಗೆಯ ಮನೆ ಹಾಳಾಗಲಿ, ರೈತನ ದಿಗಿಲು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಡಿಪಾಟಲು ಪಟ್ಟು ಹೊಂಚಿಕೊಂಡಿರುವ ಬಿತ್ತನೆ ಬೀಜವನ್ನೊಮ್ಮೆ ಆಕಾಶವನ್ನೊಮ್ಮೆ ಆತ ನೋಡುತ್ತಿದ್ದಾನೆ. ಕಳೆದ ವರ್ಷ ಈ ಹೊತ್ತಿಗೆ ಮುಂಗಾರು ಚುರುಕಾಗಿತ್ತು . ರಾಜ್ಯದ ಅನೇಕ ಭಾಗಗಳ ಕೆರೆ ಕುಂಟೆಗಳಲ್ಲಿ ಕೆಂಪು ನೀರು ಹೊಯ್ದಾಡುತ್ತಿತ್ತು . ಈ ವರ್ಷ ರೈತನಿಗೆ ಭರವಸೆಯುಕ್ಕಿಸಬೇಕಾಗಿದ್ದ ಭರಣಿ ಮಳೆ ಕೈ ಕೊಟ್ಟಿದೆ. ಜೂನ್‌ ಕೊನೆಯವರೆಗೂ ಮಳೆ ಬರದಿದ್ದಲ್ಲಿ ವಾರ್ಷಿಕ ಕೃಷಿ ಕಾರ್ಯಗಳು ಅಸ್ತವ್ಯಸ್ತವಾಗುವುದರಲ್ಲಿ ಸಂಶಯವಿಲ್ಲ .

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X