ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಸರಾಂತ ಮಕ್ಕಳ ಸಾಹಿತಿ ಸಿಸು ಸಂಗಮೇಶ ಇನ್ನಿಲ್ಲ

By Staff
|
Google Oneindia Kannada News

ಬಿಜಾಪುರ : ಮಕ್ಕಳ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದ ಸಾಹಿತಿ ಸಿಸು ಸಂಗಮೇಶ ಅವರು ಮಂಗಳವಾರ ರಾತ್ರಿ 11-15ರಲ್ಲಿ ಹೃದಯಾಘಾತದಿಂದ ನಿಧನರಾದರು. ಕಡಿಮೆ ರಕ್ತದ ಒತ್ತಡದಿಂದ ನರಳುತ್ತಿದ್ದ ಅವರನ್ನು ಮಂಗಳವಾರ ಬಿಎಲ್‌ಡಿಇ ಆಸ್ಪತ್ರೆಗೆ ಸೇರಿಸಲಾಗಿತ್ತು.

ಮಕ್ಕಳ ಸಾಹಿತ್ಯ ರಚನೆ, ಸಂಪಾದನೆ, ಮುದ್ರಣ ಹಾಗೂ ಪ್ರಕಟಣೆಯ ಕ್ಷೇತ್ರದಲ್ಲಿ ಅರ್ಧ ಶತಮಾನಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಸಿಸು ಸಂಗಮೇಶ ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ, ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರು ಇದ್ದಾರೆ.

ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕು ಯರನಾಳದಲ್ಲಿ 1929ರಲ್ಲಿ ಜನಿಸಿದ ಸಂಗಮೇಶ ಸಿದ್ಧರಾಮಪ್ಪ ಮನಗೊಂಡ ಅವರು ಆಧುನಿಕ ಕನ್ನಡದ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಿದ್ಧರಾಮ ಸುತ (ಸಿಸು) ಎಂಬ ಕಾವ್ಯನಾಮದಿಂದಲೇ ಖ್ಯಾತರಾಗಿದ್ದರು.

ಮೂರು ದಶಕಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಭಾರತೀಯ ಸಾಹಿತ್ಯ ಭಂಡಾರ ಪ್ರಕಾಶನ ಎಂಬ ಸಂಸ್ಥೆಯನ್ನೂ ಆರಂಭಿಸಿದ್ದರು. ಈ ಸಂಸ್ಥೆಯು ಸಿಸು ಸಂಗಮೇಶರ ಕೃತಿಗಳನ್ನಷ್ಟೇ ಅಲ್ಲದೆ ಇತರ ಶಿಕ್ಷಕರು ರಚಿಸಿದ ಸುಮಾರು 30ಕ್ಕೂ ಹೆಚ್ಚು ಪುಸ್ತಕಗಳನ್ನು ಮುದ್ರಿಸಿ, ಪ್ರಕಾಶಿಸಿದೆ.

ಬಾಲಭಾರತಿ ಪ್ರಕಾಶನದ ಮಕ್ಕಳ ವಿಭಾಗದಲ್ಲಿ 80ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ ಖ್ಯಾತಿ ಸಂಗಮೇಶರದು. ನರಿಯ ಫಜೀತಿ, ಮಂಕುಮರಿ, ಆಸೆಬುರುಕಿ ಆಶಾ, ದಾರಿಯ ಬುತ್ತಿ ಮೊದಲಾದ ಕೃತಿಗಳು ಇಂದಿಗೂ ಜನಪ್ರಿಯ. ನನ್ನ ಗೆಳೆಯ ಜಪಾನದ ಟಾರೋ, ನನ್ನ ಮನೆ ಕೃತಿಗಳಿಗೆ ರಾಷ್ಟ್ರಪ್ರಶಸ್ತಿ, ನನ್ನ ಗೆಳೆಯ ಎಸ್ಕಿಮೋ ಇಗ್ಲಿಯುಕ್‌ ಕೃತಿಗೆ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಸಂಗಮೇಶರು ಪಡೆದಿದ್ದರು.

ಅಂತ್ಯಕ್ರಿಯೆ : ಬುಧವಾರ ಮಧ್ಯಾಹ್ನ ಬಬಲೇಶ್ವರ ನಾಕಾ ಬಳಿಯ ರುದ್ರಭೂಮಿಯಲ್ಲಿ ಸಿಸು ಸಂಗಮೇಶರ ಅಂತ್ಯಕ್ರಿಯೆ ನಡೆಯಿತು ಎಂದು ಅವರ ಹಿರಿಯ ಪುತ್ರ ಬಸವರಾಜ ಮನಗೊಂಡ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X