ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯೂ ನಿಲ್ಲಬೇಕಿಲ್ಲ : ಆನ್‌ಲೈನ್‌ ಮೂಲಕ ಪಿಯುಸಿ ಪ್ರವೇಶ

By Staff
|
Google Oneindia Kannada News

*ಇಮ್ರಾನ್‌ ಖುರೇಷಿ

ಬೆಂಗಳೂರು : ಇದೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ಪದವಿ ಪೂರ್ವ ತರಗತಿಗೆ ವಿದ್ಯಾರ್ಥಿಗಳಿಗೆ ಪ್ರವೇಶಾವಾಕಾಶ ಕಲ್ಪಿಸಲು ದೇಶದ ಅತ್ಯುತ್ತಮ ಕಾಲೇಜುಗಳಲ್ಲೊಂದಾದ ಸೇಂಟ್‌ ಜೋಸೆಫ್ಸ್‌ ವಾಣಿಜ್ಯ ಕಾಲೇಜು ಮುಂದಾಗಿದೆ. ಅರ್ಜಿ ಪಡೆಯಲು- ಸಲ್ಲಿಸಲು ವಿದ್ಯಾರ್ಥಿಗಳು ಸಾಲು ನಿಲ್ಲಬೇಕಾದ ಅವಶ್ಯಕತೆಯಿಲ್ಲ . ಪ್ರವೇಶದ ಎಲ್ಲ ಪ್ರಕ್ರಿಯೆ ಆನ್‌ಲೈನ್‌ ಮೂಲಕವೇ. ಈ ರೀತಿ ಕನಿಷ್ಠ 300 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲು ಕಾಲೇಜು ಉದ್ದೇಶಿಸಿದೆ.

ಆನ್‌ಲೈನ್‌ ಮೂಲಕ ಪ್ರವೇಶಾವಕಾಶ ಕಲ್ಪಿಸುವ ಈ ಎಲ್ಲ ಕ್ರೆಡಿಟ್‌ ಬೆಂಗಳೂರಿನ ಸಾಫ್ಟ್‌ವೇರ್‌ ಅಭಿವೃದ್ಧಿ ಪಡಿಸುವ ವಿಮ್‌ಸಾಫ್ಟ್‌ ಕಂಪನಿಗೆ ಸಲ್ಲಬೇಕು. ಅರ್ಜಿಯನ್ನು ಪಡೆಯುವ ವಿಧಾನ ಅತ್ಯಂತ ಸರಳ. www.admission4u.com ಗೆ ಭೇಟಿ ಕೊಡುವ ಮೂಲಕ ವಿದ್ಯಾರ್ಥಿಗಳು ಅರ್ಜಿ ಪಡೆಯಬಹುದು. ಆನ್‌ಲೈನ್‌ನಲ್ಲೇ ಭರ್ತಿ ಮಾಡಿ, ಆ ಕ್ಷಣವೇ ಅರ್ಜಿ ಸಲ್ಲಿಸಬಹುದು. ಈ ಎಲ್ಲ ಪ್ರಕ್ರಿಯೆ ಕೆಲವು ನಿಮಿಷಗಳಲ್ಲೇ ಮುಗಿಯುತ್ತದೆ. ಇಷ್ಟಕ್ಕೆ ನಿಮ್ಮ ಕೆಲಸ ಮುಗಿಯುವುದಿಲ್ಲ . ಅರ್ಜಿ ಶುಲ್ಕ 200 ರುಪಾಯಿಗಳ ಡಿಡಿಯನ್ನು ಮಾತ್ರ ಅಂಚೆಯ ಮೂಲಕವೇ ಕಾಲೇಜಿಗೆ ಕಳುಹಿಸಬೇಕು. ಈ ಸಂಬಂಧ ಅಗತ್ಯವಾದ ರೆಫರೆನ್ಸ್‌ ನಂಬರ್‌ ನೀವು ಅರ್ಜಿ ಸಲ್ಲಿಸಿದಾಗ ದೊರೆಯುತ್ತದೆ. ಕಾಲೇಜು ನಿಮಗೊಂದು ರಸೀದಿ ಕಳುಹಿಸಿಕೊಡುತ್ತದೆ. ಅರ್ಜಿ ಗತಿಯೇನಾಯಿತು ಎನ್ನುವುದನ್ನು ಆನ್‌ಲೈನ್‌ನಲ್ಲಿಯೇ ತಿಳಿಯಬಹುದು.

ಸಮಯ ಉಳಿತಾಯ, ದುಡ್ಡೂ ಉಳಿಯುತ್ತೆ
ಆನ್‌ಲೈನ್‌ನಲ್ಲಿ ಪ್ರವೇಶ ಕಲ್ಪಿಸುವ ಈ ಕ್ರಮ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಕಾಲೇಜಿನ ಸಿಬ್ಬಂದಿಗೂ ಅನುಕೂಲಕರವಾಗಿದೆ. ಸಾವಿರಾರು ವಿದ್ಯಾರ್ಥಿಗಳನ್ನು ಒಮ್ಮೆಗೇ ನಿಭಾಯಿಸುವುದು ತಲೆನೋವಿನ ಕೆಲಸ. ಬದಲಿಗೆ, ಇಂಟರ್ನೆಟ್‌ ಮೂಲಕ ಈ ಕೆಲಸವನ್ನು ಹೆಚ್ಚು ಸಮರ್ಪಕವಾಗಿ ರಗಳೆಯಿಲ್ಲದೆ ಮಾಡಬಹುದಾಗಿದೆ. ಕಾಲೇಜಿನಲ್ಲಿರುವ ಪ್ರವೇಶಗಳ ಸಂಖ್ಯೆ, ಕಟ್‌ ಆಫ್‌ ಪರ್ಸೆಂಟೇಜ್‌, ಮೀಸಲಾತಿ ವಿವರ ಎಲ್ಲವನ್ನೂ ವೆಬ್‌ಸೈಟ್‌ನಲ್ಲಿ ಪಡೆಯಬಹುದು.

ಇದೇನೂ ಹೊಸ ಪರಿಕಲ್ಪನೆಯಲ್ಲ , ದಶಕಗಳಷ್ಟು ಹಳೆಯದು. ಏನಾದರೂ ಇರಲಿ, ಈಗಾದರೂ ಜಾರಿಗೆ ಬಂದು ಸಮಯ ಉಳಿಯುವಂತಾಯಿತಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಫಾದರ್‌ ಅವೇಲಿನ್‌ ಡಿಸೋಜಾ ತೃಪ್ತಿ ವ್ಯಕ್ತಪಡಿಸುತ್ತಾರೆ. ಈ ಸೌಲಭ್ಯ ಕೇವಲ ಪ್ರವೇಶಾವಕಾಶಕ್ಕೆ ಮಾತ್ರವಲ್ಲ ದೆ, ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ನೀಡುವ ಒಂದಂಗವಾಗಿಯೂ ಬಳಸಿಕೊಳ್ಳಲಾಗುವುದು ಎನ್ನುತ್ತಾರವರು.

ನಂತರದ ದಿನಗಳಲ್ಲಿ ಈ ವಿಧಾನದ ಬಳಕೆಯಿಂದ ಸಮಯ ಮಾತ್ರವಲ್ಲದೆ ಬಹಳಷ್ಟು ಹಣದ ಉಳಿತಾಯವೂ ಆಗಲಿದೆ. ವಿದ್ಯಾರ್ಥಿ ಹಾಗೂ ಕಾಲೇಜು ಇಬ್ಬರಿಗೂ ಆರ್ಥಿಕವಾಗಿ ಅನುಕೂಲ ಎನ್ನುತ್ತಾರೆ ವಿಮ್‌ಸಾಫ್ಟ್‌ ಸಾಫ್ಟ್‌ವೇರ್‌ನ ಹರ್ಷ ಪ್ರಭಾಕರ್‌. ಅಂದಹಾಗೆ, ಸದ್ಯಕ್ಕೆ ಈ ಆನ್‌ಲೈನ್‌ ವ್ಯವಸ್ಥೆಯನ್ನು ನಿಭಾಯಿಸುವುದು ಪ್ರಭಾಕರ್‌ ಅವರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಲಾಭ ಗಳಿಸಲಿಕ್ಕೆ ನಮ್ಮದೇನು ಡಾಟ್‌ಕಾಂ ಕಂಪನಿಯಲ್ಲ . ಆದರೂ, ನಿರ್ವಹಣಾ ವೆಚ್ಚವಾಗಿ ಯಾವ ರೀತಿ ಶುಲ್ಕ ವಸೂಲಿ ಮಾಡಬಹುದೆನ್ನುವ ಬಗ್ಗೆ ಕಾಲೇಜಿನ ಆಡಳಿತದೊಂದಿಗೆ ಚರ್ಚಿಸಲಾಗುವುದು ಎನ್ನುತ್ತಾರವರು.

ಇದುವರೆಗೆ ಎರಡೂವರೆ ಲಕ್ಷ ರುಪಾಯಿಗಳನ್ನು ಪ್ರಭಾಕರ್‌ ಆನ್‌ಲೈನ್‌ ಪ್ರವೇಶಾವಕಾಶ ಯೋಜನೆಗಾಗಿ ಖರ್ಚು ಮಾಡಿದ್ದಾರೆ. ಇದೇ ವ್ಯವಸ್ಥೆಯನ್ನು ಅಳವಡಿಸಲು ಅವರು ಮತ್ತೊಂದು ಕಾಲೇಜಿನೊಂದಿಗೆ ಈಗಾಗಲೇ ಮಾತುಕತೆ ನಡೆಸುತ್ತಿದ್ದಾರೆ.

ಆನ್‌ಲೈನ್‌ ಮೂಲಕ ಪ್ರವೇಶ ಕಲ್ಪಿಸುವ ವ್ಯವಸ್ಥೆ ಕ್ಲಿಕ್ಕಾಗುತ್ತಾ ?

ಹೇಳಲಿಕ್ಕಾಗದು ಎನ್ನುತ್ತಾರೆ ಫಾದರ್‌ ಡಿಸೋಜಾ. ಇಂಟರ್ನೆಟ್‌ ಬಗ್ಗೆ ಜನಕ್ಕೆ ನಂಬಿಕೆ ಕಡಿಮೆ. ಇಂಟರ್ನೆಟ್‌ ಸೌಲಭ್ಯ ಹೊಂದಿರುವ ಬಹಳಷ್ಟು ಮಂದಿ ಕೂಡ ನೇರ ಕಾಲೇಜಿಗೆ ಬಂದು ಅರ್ಜಿ ಪಡೆಯುತ್ತಿರುವುದುಂಟು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವವರು ಕೂಡ ಕಾಲೇಜಿಗೆ ಬಂದು ಅರ್ಜಿ ಸಲ್ಲಿಸಿದ್ದಾರೆ. ಇಂಥಾದರೆ, ತಂತ್ರಜ್ಞಾನದ ಉಪಯೋಗವೇನು ? ಅವರೇ ಹೇಳುವಂತೆ- ಎಲ್ಲಕ್ಕೂ ಸಮಯ ಹಿಡಿಯುತ್ತದೆ, ಕಾಯಬೇಕು.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X