ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿಯಲ್ಲಷ್ಟೇ ಅಲ್ಲ , ಪರಂಪರೆ ಉಳಿಸುವಲ್ಲೂ ಮುಂದು- ಇದು ‘ಇನ್ಫೋಸಿಸ್‌’

By Staff
|
Google Oneindia Kannada News

*ಡಿ. ವಾಸುದೇವನ್‌

ಮೈಸೂರು : ಎಲ್ಲಿಯ ಇನ್ಫೋಸಿಸ್‌, ಎಲ್ಲಿಯ ಮೈಸೂರು ದೊರೆ ಚಾಮರಾಜ ಒಡೆಯರ್‌. ಎತ್ತಣಿಂದೆತ್ತಣ ಸಂಬಂಧವಯ್ಯ ಅನ್ನುವುದಕ್ಕಿನ್ನು ಆಸ್ಪದವೇ ಇಲ್ಲ . ರಾಜ್ಯದ ಐಟಿ ವ್ಯಾಲಿಯ ಮುಕುಟವಿಲ್ಲದ ಮಹಾರಾಜ ‘ಇನ್ಫೋಸಿಸ್‌’- ಒಡೆಯರ್‌ ಕಾಲದಲ್ಲಿ ನಿರ್ಮಿತವಾದ ಗ್ರೀಕ್‌ ಶೈಲಿಯಲ್ಲಿಯ ಜಯಲಕ್ಷ್ಮಿ ವಿಲಾಸ್‌ ಮ್ಯಾನ್ಷನ್‌ಗೆ ಜೀವಕಳೆ ಹಾಗೂ ಹಳೆಯ ವೈಭವ ತಂದುಕೊಡಲು ನಿರ್ಧರಿಸಿದೆ. ಈ ಮೂಲಕ ಆಧುನಿಕ ತಂತ್ರಜ್ಞಾನದ ದೊಡ್ಡಣ್ಣ ಪರಂಪರೆಯ ನಂಟನ್ನು ಬೆಳೆಸಿದಂತಾಗಿದೆ.

ಮೂವರು ಮಗಳಲ್ಲಿ ಮೊದಲನೆಯ ಮಗಳಿಗಾಗಿ 1901 ರಲ್ಲಿ ಚಾಮರಾಜ ಒಡೆಯರ್‌ ಕಟ್ಟಿಸಿದ 800 ಎಕರೆ ವ್ಯಾಪ್ತಿಯ ಪ್ರದೇಶದಲ್ಲಿರುವ ಈ ಭವ್ಯ ಕಟ್ಟಡ ನಿರ್ಮಾಣಕ್ಕೆ ಆ ಕಾಲದಲ್ಲೇ 7 ಲಕ್ಷ ರುಪಾಯಿ ಖರ್ಚಾಗಿತ್ತು . ಸುತ್ತುವರೆದ ಸ್ವಂತ ಕಾನನ, ಟೆನ್ನಿಸ್‌ ಕೋರ್ಟ್‌, ಪೋಲೋ ಗ್ರೌಂಡ್‌ ಮಾತ್ರವಲ್ಲದೆ, ಸುಕ್ಕರಹಳ್ಳಿಯೆನ್ನುವ ಕೆರೆಯೂ ಕಟ್ಟಡಕ್ಕೆ ಹೊಂದಿಕೊಂಡಿದೆ.

ಈ ಮೆರವಣಿಗೆ, ಭವ್ಯತೆಯೆಲ್ಲ ಕಳೆದ ದಿನಗಳದ್ದು . ಸುಮಾರು ನಲವತ್ತು ವರ್ಷಗಳಿಂದ ನಿರಂತರವಾಗಿ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಸೌಧ- ‘ಜಯಲಕ್ಷ್ಮಿ ವಿಲಾಸ್‌ ಮ್ಯಾನ್ಷನ್‌’ ಪುನರುಜ್ಜೀವನಗೊಳಿಸಲು ಇನ್ಫೋಸಿಸ್‌ ಫೌಂಡೇಶನ್‌ನ ಸುಧಾಮೂರ್ತಿ ನಿರ್ಧರಿಸಿದ್ದಾರೆ. ಪ್ರಸ್ತುತ ಮೈಸೂರು ವಿಶ್ವ ವಿದ್ಯಾಲಯದ ಆಡಳಿತ ಕಚೇರಿಯಾಗಿರುವ ಈ ಕಟ್ಟಡದ ಪುನರುಜ್ಜೀವನ ಕಾರ್ಯ 1.17 ಕೋಟಿ ರುಪಾಯಿ ವೆಚ್ಚದಲ್ಲಿ ನಡೆಯಲಿದೆ.

ನೈಜತೆ ಉಳಿಸುವತ್ತಲೇ ಗಮನ, ಆದರೆ ಬಹಳಷ್ಟು ಈಗಾಗಲೇ ಹಾಳಾಗಿದೆ

ಸಂರಕ್ಷಣಾ ಕಾರ್ಯದಲ್ಲಿ ಮೂಲ ಕಲೆ- ನೈಜತೆಗೆ ತೊಂದರೆಗೊಳಿಸದಿರಲು ಆದಷ್ಟೂ ಪ್ರಯತ್ನಿಸಲಾಗುವುದು ಎನ್ನುತ್ತಾರೆ, ಜಯಲಕ್ಷ್ಮಿ ಮಹಲ್‌ಗೆ ಜೀವಕಳೆ ತುಂಬಲು ಟೊಂಕ ಕಟ್ಟಿರುವ ವಾಸ್ತುಶಿಲ್ಪ ಸಂರಕ್ಷಣಾ ಘಟಕದ ವಾಸ್ತುಶಿಲ್ಪಿ ಪಂಕಜ್‌ ಮೋದಿ. ಅವರು ಹೇಳುವಂತೆ- ಯದ್ವಾತದ್ವಾ ಬಳಿದಿರುವ ಸುಣ್ಣದಿಂದಾಗಿ ಗೋಡೆ ಹಾಗೂ ಕಂಬಗಳಲ್ಲಿನ ಶ್ರೇಷ್ಟ ಕೆತ್ತನೆಗಳು- ಹಿಂದೂ ಮೂರ್ತಿಗಳು ಮಸುಕಾಗಿವೆ.

ಗೋಡೆಗಳ ಸಂರಕ್ಷಣೆ ಹಾಗೂ ಅವುಗಳ ರೀಪೈಂಟ್‌ ಕೆಲಸ ಈಗ ಭಾರೀ ಸವಾಲಿನದು. ವಿವಿಧ ನಮೂನೆಯ ಸುಣ್ಣವನ್ನು ಉಪಯೋಗಿಸುವ ಬಳಸುವ ಮೂಲಕ ಗೋಡೆಗಳ ನೈಜತೆ ಕಾಪಾಡಲು ಪ್ರಯತ್ನಿಸಲಾಗುವುದು ಎನ್ನುತ್ತಾರೆ ಮೋದಿ. ಗೋಡೆಗಳಿಗಿಂತ ಹೆಚ್ಚು ದುಸ್ಥಿತಿಯಲ್ಲಿರುವುದು ತಾರಸಿ. ಸುಣ್ಣ, ಬೆಲ್ಲ , ಬಿಲ್ವಪತ್ರೆ ಹಾಗೂ ಸೀಗೆಕಾಯಿಗಳ ಮಿಶ್ರಣದ ಹಳೆಯ ತಂತ್ರಜ್ಞಾನವನ್ನು ತಾರಸಿಯ ರಿಪೇರಿಗೆ ಬಳಸಲಾಗುವುದು ಹಾಗೂ ತಾರಸಿಯನ್ನು ವಾಟರ್‌ಪ್ರೂಫ್‌ಗೊಳಿಸಲು ಉದ್ದೇಶಿಸಲಾಗಿದೆ.

ಹಾಸ್ಟೆಲ್ಲಾಗಿ ಬದಲಾದ ರಾಜಸೌಧ : ವಿಶ್ವ ವಿದ್ಯಾಲಯದ ಸುಪರ್ದಿಗೆ ರಾಜವಂಶದವರು ಜಯಲಕ್ಷ್ಮಿ ಮಹಲ್‌ ಬಿಟ್ಟುಕೊಟ್ಟದ್ದು 1960 ರಲ್ಲಿ . ಆನಂತರ ಮಹಲ್‌ಗೆ ಹೊಂದಿಕೊಂಡಂತೆ ಹೊಸ ಕಟ್ಟಡಗಳನ್ನು ವಿಶ್ವ ವಿದ್ಯಾಲಯ ನಿರ್ಮಿಸಿತು. ಹೆಚ್ಚೂಕಡಿಮೆ ಜಯಲಕ್ಷ್ಮಿ ಮಾನ್ಷನ್‌ ಹಾಸ್ಟೆಲ್ಲಾಗಿ- ವಿವಿಯ ಆಡಳಿತ ಕಚೇರಿಯಾಗಿ ಬದಲಾಯಿತು. ಆನಂತರವೇ ಪ್ರಾರಂಭವಾದದ್ದು ದುಸ್ಥಿತಿ. ಅಡುಗೆಮನೆಯ ತಾರಸಿಗೆ ಬೆಂಬಲವಾಗಿ ಮರದ ಗಳಗಳನ್ನು ನಿಲ್ಲಿಸಲಾಯಿತು. ವಾತಾಯನದ ಅವಸ್ಥೆಯಂತೂ ಹೇಳುವಂತೆಯೇ ಇಲ್ಲ . ಇದೆಲ್ಲ ಅದ್ಭುತ ಗ್ರೀಕ್‌ ವಾಸ್ತುಶಿಲ್ಪವನ್ನೊಳಗೊಂಡ ಕಟ್ಟಡದ ಕಥೆ. ಮಳೆಯಿಂದಾಗಿ ಮತ್ತಷ್ಟು ಕಗ್ಗಂಟಾಗುವ ಡ್ರೆೃನೇಜ್‌ ಸಿಸ್ಟಂನ ಸಮಸ್ಯೆಯ ಎಳೆಗಳನ್ನು ಬಿಡಿಸುವಲ್ಲಿ ವಾಸ್ತುಶಿಲ್ಪ ಸಂರಕ್ಷಣಾ ಸೆಲ್‌ನ ಮೇನೇಜರ್‌ ಆರ್‌.ಜಿ. ರಾವ್‌ ಹೆಣಗುತ್ತಿದ್ದಾರೆ.

ಮಹಲ್‌ನ ನೆಲದ ಹಾಸು ಸೆರಾಮಿಕ್‌ನದಾಗಿದ್ದು , ಬಹುತೇಕ ಹಾಸನ್ನು ವಿದೇಶಗಳಿಂದ ತರಿಸಿಕೊಳ್ಳಲಾಗಿದೆ. ಈ ಮುಂಚೆ ನಡೆಯಲಾದ ಅವೈಜ್ಞಾನಿಕ ಮಾದರಿಯ ರಿಪೇರಿಯಿಂದ ಹಾಸಿಗೆ ಹಾನಿಯಾಗಿದ್ದು , ಅಂದ ಕಳಕೊಂಡಿದೆ. ಈಗ ಸಣ್ಣ ಸಣ್ಣ ಬಣ್ಣದ ಸೆರಾಮಿಕ್‌ ತುಂಡುಗಳನ್ನು ಮರು ಜೋಡಿಸುವ ಮೂಲಕ ಸೌಧಕ್ಕೆ ಮೂಲ ಸೌಂದರ್ಯ ತಂದುಕೊಡಲು ಪ್ರಯತ್ನಿಸಲಾಗುತ್ತಿದೆ. ಇಷ್ಟಾದರೂ, ವಾಸ್ತುಶಿಲ್ಪಿಗಳಿಗೆ ಸೌಧದ ಮೂಲ ವಿನ್ಯಾಸವನ್ನು ಪೂರ್ಣವಾಗಿ ಗ್ರಹಿಸಲು ಸಾಧ್ಯವಾಗುತ್ತಿಲ್ಲ . ಯಾಕೆಂದರೆ, ಕಟ್ಟಡದ ಮೂಲರೂಪ ಅಷ್ಟರ ಮಟ್ಟಿಗೆ ಹಾಳಾಗಿದೆ. ಉಳಿದ ಭಾಗಗಳಿಂದಲೇ ಅವರು ವಿನ್ಯಾಸವನ್ನು ಊಹಿಸಿಕೊಳ್ಳಬೇಕಾಗಿದೆ ಎನ್ನುತ್ತಾರೆ ಮೋದಿ.

ಅಂದಹಾಗೆ, ಇದೇ ವರ್ಷದ ಕೊನೆಯ ವೇಳೆಗೆ ಜಯಲಕ್ಷ್ಮಿ ಮಹಲ್‌ಗೆ ಜೀವಕಳೆ ತುಂಬುವ ಕಾರ್ಯಾಚರಣೆ ಪೂರ್ಣವಾಗುವ ನಿರೀಕ್ಷೆಯಿದೆ. ಆನಂತರ ವಿಶ್ವ ವಿದ್ಯಾಲಯದ ಆಧುನಿಕ ‘ಮ್ಯೂಸಿಯಂ ಮನೆ’ಯಾಗಿ ಮಹಲ್‌ ಬದಲಾ ಗುವುದು. ಈ ಮಹತ್ತರ ಕಾರ್ಯದಲ್ಲಿ ತೊಡಗಿರುವ ಇನ್ಫೋಸಿಸ್‌ ಸುಖೀಭವ.

(ಯುಎನ್‌ಐ)

ವಾರ್ತಾ ಸಂಚಯ
ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X