ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕಡಿಮೆ ಬೆಲೆಗೆ ವಿದ್ಯುತ್‌ ಕೊಡಿ, ಇಲ್ಲವೇಒಪ್ಪಂದ ಮರೆತುಬಿಡಿ’

By Staff
|
Google Oneindia Kannada News

ಬೆಂಗಳೂರು : ಮಹಾರಾಷ್ಟ್ರದಲ್ಲಿ ಎನ್ರಾನ್‌ ಕಂಪನಿ ತಂದ ಸಮಸ್ಯೆಗೆ ಧನ್ಯವಾದಗಳು ! ಅದರಿಂದ ಪಾಠ ಕಲಿತಿರುವ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿರುವ 11 ಕಂಪನಿಗಳಿಗೆ ಕಡಿಮೆ ದರದಲ್ಲಿ ವಿದ್ಯುತ್‌ ಪೂರೈಸುವಂತೆ ಸೂಚನೆ ಕೊಟ್ಟಿದೆ.

ಸ್ಪರ್ಧಾತ್ಮಕ ಮಟ್ಟಕ್ಕೆ ವಿದ್ಯುತ್‌ ದರವನ್ನು ಅಗ್ಗಗೊಳಿಸಿ, ಇಲ್ಲವೇ ಕರ್ನಾಟಕಕ್ಕೆ ವಿದ್ಯುತ್‌ ಮಾರುವುದನ್ನು ಮರೆತುಬಿಡಿ ಎಂದು 11 ಕಂಪನಿಗಳಿಗೂ ಸ್ಪಷ್ಟವಾಗಿ ತಿಳಿಸಿರುವುದಾಗಿ ಕೆಪಿಟಿಸಿಎಲ್‌ ಅಧ್ಯಕ್ಷ ವಿ.ಪಿ.ಬಳಿಗಾರ್‌ ಮಾಧ್ಯಮಗಳಿಗೆ ಭಾನುವಾರ ಹೇಳಿದ್ದಾರೆ.

ಪ್ರಸ್ತುತ ನಿಗಮ ತಾನು ಮಾರುವ ವಿದ್ಯುತ್‌ ದರ ಯೂನಿಟ್‌ಗೆ 2 ರುಪಾಯಿ 30 ಪೈಸೆ. ಕಂಪನಿಗಳೂ ಇದೇ ದರದಲ್ಲಿ ವಿದ್ಯುತ್‌ ಪೂರೈಸಬೇಕು. ಅತಿ ಹೆಚ್ಚೆಂದರೆ 2 ರುಪಾಯಿ 60 ಪೈಸೆಗಾದರೂ ಪೂರೈಸಬೇಕು. ಈಗ ಜಿಂದಾಲ್‌ ಕಂಪನಿಯವರು ಇದೇ ದರದಲ್ಲಿ ವಿದ್ಯುತ್‌ ನೀಡುತ್ತಿದ್ದಾರೆ. ಇದಕ್ಕೆ ಹೆಚ್ಚು ದರವನ್ನು ಭರಿಸುವ ಚೈತನ್ಯ ಕೆಪಿಟಿಸಿಎಲ್‌ಗೆ ಇಲ್ಲ ಎಂದರು.

ಖಾಸಗಿ ಕಂಪನಿಗಳು ತಾವು ಬಳಸುವ ಇಂಧನದ ಖರ್ಚು ಆಧರಿಸಿ ಬೆಲೆ ನಿಗದಿ ಪಡಿಸಿವೆ. ನ್ಯಾಫ್ತಾ ಬಳಸುವ ಘಟಕಗಳು ಯೂನಿಟ್‌ಗೆ 4 ರಿಂದ 5 ರುಪಾಯಿ ದರ ನಿಗದಿ ಪಡಿಸಿದರೆ, ಕಲ್ಲಿದ್ದಲು ಉಪಯೋಗಿಸುವ ಘಟಕಗಳು 3 ರುಪಾಯಿ ನಿಗದಿ ಪಡಿಸುತ್ತವೆ. ಖರೀದಿಸಿದ ವಿದ್ಯುತ್ತಿನ ದರದ ಬಾಕಿಯನ್ನು ನಿಗಮ ಎಂದೂ ಉಳಿಸಿಕೊಂಡಿಲ್ಲ. ನಿಗಮ ಆರ್ಥಿಕವಾಗಿ ಚೆನ್ನಾಗಿಯೇ ಇದೆ. ಆದರೆ, ಅದರ ಚೈತನ್ಯಕ್ಕೆ ಮೀರಿದ ಕೆಲಸ ದುಸ್ತರ. ಒಪ್ಪಂದಕ್ಕೆ ಮಣಿದು, ದುಬಾರಿ ದರದಲ್ಲಿ ವಿದ್ಯುತ್‌ ಖರೀದಿಸಿದರೆ, ಬಾಕಿ ಉಳಿಸಿಕೊಳ್ಳಬೇಕಾಗುತ್ತದೆ ಎಂದು ಬಳಿಗಾರ್‌ ವಿವರಿಸಿದರು.

ಎನ್ರಾನ್‌ ಇಡೀ ದೇಶಕ್ಕೆ ಪಾಠ ಕಲಿಸಿದೆ. ವಿದ್ಯುತ್‌ ಖರೀದಿ ಒಪ್ಪಂದಕ್ಕೆ ಸಹಿ ಹಾಕುವಾಗ ಎಚ್ಚರಿಕೆ ವಹಿಸಲು ಪ್ರೇರೇಪಿಸಿದೆ. ದರ ಅಗ್ಗ ಮಾಡುವಂತೆ ನಿಗಮ ತರುತ್ತಿರುವ ಒತ್ತಡದಿಂದ ಈಗಾಗಲೇ ಕೆಲವು ಕಂಪನಿಗಳು ವಿದ್ಯುತ್‌ ಮಾರಾಟ ಮಾಡುವುದರಿಂದ ಹಿಂದೆ ಸರಿದಿವೆ ಎಂದು ಅವರು ಹೇಳಿದರು.

ತಣ್ಣೀರು ಬಾವಿ ಯೋಜನೆ ರದ್ದಾಗಿಲ್ಲ : ತಣ್ಣೀರು ಬಾವಿ ಯೋಜನೆಯಲ್ಲೂ ವಿದ್ಯುತ್‌ ಉತ್ಪಾದನೆ ದುಬಾರಿಯಾಗುವ ಕಾರಣ ಅದನ್ನು ಸ್ಥಗಿತಗೊಳಿಸಲಾಗಿದೆ ಎಂಬುದು ಸುಳ್ಳು. ಕಡಿಮೆ ದರದ ವಿದ್ಯುತ್ತನ್ನು ಮೊದಲು ಖರೀದಿಸಿ, ನಂತರ ದುಬಾರಿ ಬೆಲೆ ತೆರಬೇಕಾದ ವಿದ್ಯುತ್‌ನತ್ತ ಗಮನ ಕೊಡುತ್ತೇವೆ. ಮಳೆ ಚೆನ್ನಾಗಿ ಬಂದರೆ ಬೇಡಿಕೆ ಪ್ರತಿನಿತ್ಯ 50 ದಶಲಕ್ಷ ಯೂನಿಟ್‌ ಇರುತ್ತದೆ. ಇಲ್ಲವಾದರೆ 90 ದಶಲಕ್ಷ ಯೂನಿಟ್‌ ಆಗಿರುತ್ತದೆ ಎಂದು ಬಳಿಗಾರ್‌ ತಿಳಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X