ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಅಲಸೂರು ಕೆರೆಯಲ್ಲಿ ವೀರ ಯೋಧರ ಸಮರ !

By Staff
|
Google Oneindia Kannada News

ಬೆಂಗಳೂರು : ಎಂ.ಇ.ಜಿ.ಯ ವೀರಯೋಧರು ಈ ಹೊತ್ತು ಬೆಂಗಳೂರಿನ ಐತಿಹಾಸಿಕ ಅಲಸೂರು ಕೆರೆಯಲ್ಲಿ ಸಮರ ನಡೆಸುತ್ತಿದ್ದಾರೆ. ಏನು! ಕೆರೆಯಲ್ಲಿ ಯುದ್ಧವೇ ಎಂದು ಅಚ್ಚರಿಪಡಬೇಡಿ. ಇದು ಕಳೆ ಕೀಳುವ ಸಮರ. ಅಲಸೂರು ಕೆರೆಯ ಸೌಂದರ್ಯಕ್ಕೇ ಮಾರಕವಾಗಿ, ಈ ಪ್ರದೇಶದ ಜನರ ಆರೋಗ್ಯ ಹಾಳು ಮಾಡುತ್ತಿದ್ದ ಕಳೆಯನ್ನು ಶನಿವಾರದಿಂದ ಕಿತ್ತೊಗೆಯಲಾಗುತ್ತಿದೆ.

ಕತ್ತೆ ಕಿವಿಯಂತೆ ಕಾಣುವ ಹಾಗೂ ಕತ್ತೆ ಕಿವಿ ಸೊಪ್ಪು ಎಂದೇ ಹೆಸರಾದ ಹೈಯಾಸಿಂತ್‌ ಎಂಬ ಹಸಿರು ಕಳೆ ಅಲಸೂರು ಕೆರೆಯನ್ನೆಲ್ಲಾ ಆವರಿಸಿಬಿಟ್ಟಿದೆ. ಈಗ ಪಾಲಿಕೆಯ ಸಹಯೋಗದಲ್ಲಿ ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ನ 4000 ಸೈನಿಕರು ಈ ಕಳೆ ಕೀಳುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಶನಿವಾರ ಬೆಳಗ್ಗೆ 8ಗಂಟೆಗೆ ಆರಂಭವಾದ ಈ ಸಮರೋಪಾದಿಯ ಕಾರ್ಯಾಚರಣೆ ಭಾನುವಾರ ಸಂಜೆ 6-30ರವರೆಗೂ ನಿರಂತರವಾಗಿ ನಡೆಯಲಿದೆ. ಸೈನಿಕರು ಮೂರು ಪಾಳಿಯಲ್ಲಿ ಕೆಲಸ ಮಾಡಿ ಹಗಲಿರುಳನ್ನೂ ಲೆಕ್ಕಿಸದೆ ಈ ಕಳೆಯನ್ನು ಸಂಪೂರ್ಣ ಮೂಲೋತ್ಪಾಟನೆ ಮಾಡಲಿದ್ದಾರೆ.

ದೋಣಿಗಳಲ್ಲಿ ಕೆರೆಗಳಿದು ಕಳೆಯನ್ನು ಹೊರಕ್ಕೆ ಸಾಗಿಸಲಾಗುತ್ತಿದೆ. ಕಳೆ ಕೀಳಲು ಜೆ.ಸಿ.ಬಿ.ಗಳ ನೆರವನ್ನೂ ಪಡೆಯಲಾಗಿದೆ. ಸುಮಾರು 40 ಟ್ರಕ್‌ಗಳು ಹಾಗೂ 15 ಲಾರಿಗಳು ಈ ಕಳೆಯನ್ನು ಸಾಗಿಸುವ ಕಾರ್ಯದಲ್ಲಿ ನಿರತವಾಗಿವೆ. ಈ ಕಾರ್ಯದ ಮೇಲುಸ್ತುವಾರಿಯನ್ನು ಎಂಇಜಿ ಬ್ರಿಗೆಡಿಯರ್‌ ವಿಜಯ್‌ ಪವಾರ್‌ ಹಾಗೂ 50ಕ್ಕೂ ಹೆಚ್ಚು (ಆರೋಗ್ಯ ಇಲಾಖೆ) ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಇಂದಿರಾನಗರ ಬಳಿಯ ಕದರನಪಾಳ್ಯದ ಗುಂಡಿಗೆ ಈ ಕಳೆಯನ್ನು ತಂದು ಹಾಕಲಾಗುತ್ತಿದೆ.

ಪ್ರತಿಭಟನೆ : ಈಗಾಗಲೇ ಸುಮಾರು 1000 ಲೋಡ್‌ ಕಳೆಯನ್ನು ಸಾಗಿಸಲಾಗಿದ್ದು, ಭಾನುವಾರ ಸಂಜೆಯ ಹೊತ್ತಿಗೆ ಕೆರೆ ಸಂಪೂರ್ಣ ಸ್ವಚ್ಛವಾಗುವ ಆಶ್ವಾಸನೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕದರನಪಾಳ್ಯದ ಜನತೆ ಕಳೆಯನ್ನು ತಮ್ಮ ಪ್ರದೇಶಕ್ಕೆ ತಂದು ಹಾಕುತ್ತಿರುವ ಬಗ್ಗೆ ಪ್ರತಿಭಟನೆಯನ್ನೂ ನಡೆಸಿದರು. ಅಧಿಕಾರಿಗಳು ಈ ಕಳೆಯ ಮೇಲೆ ಕೀಟನಾಶಕ ಸಿಂಪಡಿಸಿ, ಮಣ್ಣು ಹಾಕಿ ಮುಚ್ಚುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಪ್ರತಿಭಟನಕಾರರಿಗೆ ಸಮಾಧಾನಪಡಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X