ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್‌ ಕ್ಷಾಮದ ನಾಡಿನಲ್ಲಿ ಗೇರುಸೊಪ್ಪೆಯೆಂಬ ಬೆಳ್ಳಿಚುಕ್ಕಿ

By Staff
|
Google Oneindia Kannada News

ಕಾರವಾರ : ರಾಜ್ಯದ ವಿದ್ಯುತ್‌ ಕ್ಷಾಮವನ್ನು ನಿವಾರಿಸುವ ಪ್ರಯತ್ನದಲ್ಲಿ ತನ್ನದೂ ಒಂದು ಕೈ ಜೋಡಿಸಲು ಸಿದ್ಧವಾಗಿರುವ ಗೇರುಸೊಪ್ಪ ಜಲ ವಿದ್ಯುದಾಗಾರ ಈಗ ವಿದ್ಯುತ್‌ ಉತ್ಪಾದನೆಗೆ ಸನ್ನದ್ಧ . ಮೇ 15 ರ ಮಂಗಳವಾರ, ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವುದರೊಂದಿಗೆ ವಿದ್ಯುದಾಗಾರದ ಕಾರ್ಯಾರಂಭಕ್ಕೆ ಅಧಿಕೃತ ಮೊಹರು ಬೀಳಲಿದೆ.

500 ಮೀಟರ್‌ ಉದ್ದ ಹಾಗೂ 58 ಮೀಟರ್‌ ಎತ್ತರವಿರುವ ಅಣೆಕಟ್ಟೆಯ ನಿರ್ಮಾಣಕ್ಕೆ 135 ಕೋಟಿ ರುಪಾಯಿ ಖರ್ಚಾಗಿದೆ. ಯೋಜನೆಯ ಒಟ್ಟು ವೆಚ್ಚದ ಅಂದಾಜು 400 ಕೋಟಿ ರುಪಾಯಿ. 240 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಸಾಮರ್ಥ್ಯವಿರುವ ಈ ವಿದ್ಯುದಾಗಾರದ ನಾಲ್ಕು ಘಟಕಗಳ ಪೈಕಿ ಎರಡು ಘಟಕಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಅಕ್ಟೋಬರ್‌ ವೇಳೆಗೆ ಮೂರನೇ ಘಟಕ, ಬರುವ ವರ್ಷದ ಮಾರ್ಚ್‌ಗೆ 4 ನೇ ಘಟಕ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ.

ಅಂಕುಡೊಂಕಿನ ಹಾದಿಯಲ್ಲಿ ಶರಾವತಿ ಟೇಲ್‌ರೇಸ್‌

ಗೇರುಸೊಪ್ಪ ವಿದ್ಯುದಾಗಾರದ ಕನಸಿನ ಯೋಜನೆಗೆ ಚಾಲ್ತಿ ಸಿಕ್ಕಿದ್ದು 1990 ರಲ್ಲಿ . ಶರಾವತಿ ಟೇಲ್‌ರೇಸ್‌ ಎಂದೇ ಹೆಸರಾದ ಈ ಯೋಜನೆ ಮೊದಲ ದಿನದಿಂದಲೂ ಅಡ್ಡಗಾಲುಗಳನ್ನು ದಾಟುತ್ತಲೇ ಬಂದಿದೆ. ಪರಿಸರವಾದಿಗಳ ವಿರೋಧದ ತೀವ್ರತೆ ಮೊದಲ ಐದು ವರ್ಷಗಳನ್ನು ಮುಳುಗಡೆ ಮಾಡಿದುದರಿಂದ, ಯೋಜನೆಯ ಕಾಮಗಾರಿ ಪ್ರಾರಂಭವಾದದ್ದು 1995 ರಲ್ಲಿ .

ಯೋಜನೆಯಿಂದಾಗಿ ಅರಣ್ಯ ಮುಳುಗಡೆಯಾಗುತ್ತದೆನ್ನುವುದು ಪರಿಸರವಾದಿಗಳ ಅಳಲು. ಸುಮಾರು 700 ಹೆಕ್ಟೇರ್‌ ಭೂಮಿಯನ್ನು ನುಂಗಿರುವ ಈ ಯೋಜನೆಯನ್ನು ಅವರು ಶತಾಯಗತಾಯ ವಿರೋಧಿಸಿದ್ದರು, ನ್ಯಾಯಾಲಯದ ಕಟ್ಟೆಯನ್ನೂ ಹತ್ತಿದ್ದರು. ಈ ಎಲ್ಲ ಅಡ್ಡಿಗಳನ್ನು ದಾಟಿ ವಿದ್ಯುದಾಗಾರ ಕಾರ್ಯಾರಂಭಕ್ಕೆ ಅಣಿಯಾಗಿದೆ. ಅರಣ್ಯನಾಶವನ್ನು ಸಮರ್ಥಿಸುವಂತಿಲ್ಲವಾದರೂ- ಪರಿಸರಕ್ಕೆ ಹೆಚ್ಚಿನ ಹಾನಿ ತರುವ ಶಾಖೋತ್ಪನ್ನ ಹಾಗೂ ಅಣು ವಿಕಿರಣ ಸ್ಥಾವರಗಳ ಸ್ಥಾಪನೆಗಿಂತ ಜಲ ವಿದ್ಯುತ್‌ ಯೋಜನೆ ಹೆಚ್ಚು ಅನುಕೂಲಕರ. ಜಲ ವಿದ್ಯುತ್‌, ಕಡಿಮೆ ವೆಚ್ಚದ ಸುರಕ್ಷಿತ ಯೋಜನೆಯೂ ಹೌದು.

ಗಡುವಿಗೆ ಮುನ್ನವೇ ಮುಗಿದ ಕಾಮಗಾರಿ : ಗೇರುಸೊಪ್ಪ ಯೋಜನೆಯ ಕಾಮಗಾರಿ ಅವಧಿಗೆ ಮುಂಚಿತವಾಗಿಯೇ ಮುಗಿದಿರುವುದು ಗಮನಾರ್ಹ. 2001 ರ ಮೇ ತಿಂಗಳಿಗೆ ಮುಗಿಯಬೇಕಿದ್ದ ಕಾಮಗಾರಿ ನವಂಬರ್‌ 2000 (6 ತಿಂಗಳು ಮುನ್ನ) ಕ್ಕೇ ಮುಗಿದಿರುವುದರಿಂದ ಸರ್ಕಾರಕ್ಕೆ ಅಪಾರ ಲಾಭವಾಗಿದೆ ಎನ್ನುತ್ತಾರೆ ಕೆಪಿಸಿ ಜಲವಿದ್ಯುತ್‌ ಯೋಜನೆಗಳ ನಿರ್ದೇಶಕ ಕೆ. ಸಂಕಪ್ಪ ಶೆಟ್ಟಿ . ಕಾಮಗಾರಿಯಲ್ಲಿನ ಸಮಯದ ಮಿಗಿತದಿಂದಾಗಿ 250 ದಶಲಕ್ಷ ಯೂನಿಟ್‌ ವಿದ್ಯುತ್‌ ಉತ್ಪಾದಿಸಲಾಗಿದ್ದು, ಸುಮಾರು 40 ಕೋಟಿ ರುಪಾಯಿ ಆದಾಯ ಬಂದಿದೆ ಎಂದು ಶೆಟ್ಟಿ ಸಂತೋಷ ವ್ಯಕ್ತಪಡಿಸುತ್ತಾರೆ.

ಬಾಲಂಗೋಚಿ : ರೈತರಿಗೆ ತಡೆರಹಿತ 10 ಗಂಟೆಗಳ ವಿದ್ಯುತ್‌ ಒದಗಿಸುವ ಮುಖ್ಯಮಂತ್ರಿಗಳ ಕನಸಿಗೆ ಗೇರುಸೊಪ್ಪೆಯಾದರೂ ನೀರೆರೆದೀತೆ ?

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X