ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರ್‌ ಮಳವಳ್ಳಿ ಎಂಬ ಕಂಪ್ಯೂಟರ್‌ ಕಲಿಕಾಕೇಂದ್ರದ ಹರಿಕಾರ

By Staff
|
Google Oneindia Kannada News

ಬೆಂಗಳೂರು : ತಾನು ಹುಟ್ಟಿ ,ಬೆಳೆದು, ಕಲಿತ ಕನ್ನಡ ನಾಡಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ನಡುವಿನ ಕಂಪ್ಯೂಟರ್‌ ಕಲಿಕೆಯ ವಿಷಯದಲ್ಲಿನ ಅಂತರ ತಗ್ಗಿಸಲು ಇದೋ ಇಲ್ಲೊಬ್ಬ ಅಮೆರಿಕನ್ನಡಿಗ ಮುಂದೆ ಬಂದಿದ್ದಾರೆ.

ಭಾರತದಾದ್ಯಂತ ಕಂಪ್ಯೂಟರ್‌ ಕಲಿಕಾ ಕೇಂದ್ರಗಳನ್ನು ಸ್ಥಾಪಿಸುವುದು ಈತನ ಗುರಿ. ಆದರೆ ಈ ಉದ್ದೇಶದ ಶುರುವಾತ್‌ ಕನ್ನಡ ನಾಡಲ್ಲೇ ಆಗಬೇಕೆಂಬುದು ಈತನ ಬಯಕೆ. ಅದೀಗ ಈಡೇರಿದೆ. ಮುಖ್ಯಮಂತ್ರಿ ಕೃಷ್ಣ ಬೆಂಗಳೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಎರಡು ಕಟ್ಟಡ ಕೊಡುವುದಾಗಿ ಹೇಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಈತನ ಕಲಿಕಾ ಕೇಂದ್ರಗಳು ಕಾರ್ಯ ಪ್ರವೃತ್ತವಾಗಲಿವೆ. ಈ ಒಳ್ಳೆ ಕೆಲಸ ಮಾಡಲು ಮುಂದೆ ಬಂದಿರುವ ಎನ್‌ಆರೈ ಹೆಸರು ಕುಮಾರ್‌ ಮಳವಳ್ಳಿ. ಹುಟ್ಟೂರು ಮೈಸೂರು.

ಕ್ಯಾಲಿಫೋರ್ನಿಯಾ ಮೂಲದ ಬ್ರೊಕ್ಯಾಡ್‌ ಕಮ್ಯುನಿಕೇಷನ್ಸ್‌ ಎಂಬ ಕಂಪನಿ ಕಟ್ಟಿದ ಕುಮಾರ್‌ ಈಗ ಅಮೆರಿಕದಲ್ಲಿ ಹೆಸರು ಮಾಡಿದ್ದಾರೆ. 8 ಬಿಲಿಯನ್‌ ಡಾಲರ್‌ ಮಾರುಕಟ್ಟೆ ವಹಿವಾಟಿನ ಕಂಪನಿ ಅವರದು. 12 ರಿಂದ 20 ಕಂಪ್ಯೂಟರ್‌ಗಳು, ಒಬ್ಬ ಇನ್‌ಸ್ಟ್ರಕ್ಟರ್‌ ಹಾಗೂ ಉತ್ತಮ ಶಿಕ್ಷಕರನ್ನು ಕಲಿಕಾ ಕೇಂದ್ರಗಳು ಒಳಗೊಳ್ಳಲಿವೆ. ಸಿಡೀಸ್‌ ಎಜುರೈಟ್‌ ಟೆಕ್ನಾಲಜೀಸ್‌ ಎಂಬ ಹೆಸರಿನ ಈ ಕಲಿಕಾ ಕೇಂದ್ರಗಳು ಹೈಸ್ಕೂಲು ಮಕ್ಕಳಿಗಾಗಿ ಸಿದ್ಧವಾಗಲಿವೆ.

ಇದೊಂದು ಖಾಸಗಿ ಪಾಠ ಹೇಳಿ ಕೊಡುವಂಥಾ ಸಂಸ್ಥೆ. ಶಾಲಾ ಶಿಕ್ಷಣಕ್ಕೆ ಇನ್ನಷ್ಟು ಪುಷ್ಟಿ ಕೊಡಬಲ್ಲ ಬೋಧನೆ ಕೇಂದ್ರಗಳಲ್ಲಿ ಲಭ್ಯ. ಹಳ್ಳಿ ಮಕ್ಕಳಿಗೂ ಕಂಪ್ಯೂಟರ್‌ ಕಲಿಸುವುದು ನಮ್ಮ ಉದ್ದಿಶ್ಯ. ನಾನು ಎಂಜಿನಿಯರಿಂಗ್‌ವರೆಗೆ ಕಲಿತ ನಾಡಿನಲ್ಲಿ , ನಗರ ಹಾಗೂ ಗ್ರಾಮೀಣ ಮಕ್ಕಳ ನಡುವೆ ಇರುವ ಕಂಪ್ಯೂಟರ್‌ ಶಿಕ್ಷಣದ ವಿಭಜನೆಯನ್ನು ಹೋಗಲಾಡಿಸುವ ವಿಚಾರ ಕ್ಯಾಲಿಫೋರ್ನಿಯಾದಲ್ಲಿದ್ದರೂ ತಲೆ ಕೊರೆಯುತ್ತಿತ್ತು ಎನ್ನುತ್ತಾರೆ ಮಳವಳ್ಳಿ.

ಮುಖ್ಯಮಂತ್ರಿ ಕೃಷ್ಣ ಅವರನ್ನು ಭೆಟ್ಟಿಯಾಗಿ ಕಲಿಕಾ ಕೇಂದ್ರ ತೆರೆಯುವ ನನ್ನ ಇಂಗಿತ ಹೇಳಿದೆ. ಅದಕ್ಕೆ ಅವರು ಒಪ್ಪಿಗೆ ಕೊಟ್ಟು, ಬೆಂಗಳೂರು ಮತ್ತು ಮಂಡ್ಯದಲ್ಲಿ ಕಟ್ಟಡಗಳನ್ನು ಗುರ್ತಿಸಿ, ಅವು ಸಿಕ್ಕ 45 ದಿನಗಳೊಳಗೆ ಕೇಂದ್ರಗಳನ್ನು ಕಾರ್ಯಗತಗೊಳಿಸಬೇಕೆಂದು ಅಧಿಕಾರಿಯಾಬ್ಬರಿಗೆ ಆದೇಶಿಸಿದರು. ಪ್ರತಿ ಕೇಂದ್ರಕ್ಕೆ 30 ಸಾವಿರ ಡಾಲರ್‌ ಹಣವನ್ನು ಖರ್ಚು ಮಾಡುತ್ತಿದ್ದೇನೆ ಎನ್ನುತ್ತಾರೆ ಮಳವಳ್ಳಿ.

ರಾಜ್ಯ ಸಾರ್ವಜನಿಕ ಸಲಹಾ ಸಮಿತಿಯ ಆಯುಕ್ತ ಟಿ.ಎಂ.ವಿಜಯ್‌ ಭಾಸ್ಕರ್‌ ಹೇಳುವಂತೆ ಇನ್ನು 10 ದಿನಗಳಲ್ಲಿ ಕಟ್ಟಡಗಳನ್ನು ಗೊತ್ತು ಪಡಿಸಲಾಗುವುದು.

ಹಲವು ಕೆರೆಯ ನೀರು ಅರಗಿಸಿಕೊಂಡ ಮಳವಳ್ಳಿ

ಬ್ರೊಕೇಡ್‌ ಕಮ್ಯುನಿಕೇಷನ್ಸ್‌ ಹುಟ್ಟು ಹಾಕುವ ಮೊದಲು ಪಶ್ಚಿಮ ಜರ್ಮನಿ, ಕೆನಡಾ ಹಾಗೂ ಅಮೆರಿಕಾದ ವಿವಿಧ ಕಂಪನಿಗಳಲ್ಲಿ ಮಳವಳ್ಳಿ ಕೆಲಸ ಮಾಡಿದ್ದರು. ಗುಜರಾತ್‌ ಭೂಕಂಪದ ಹಿನ್ನೆಲೆಯಲ್ಲಿ ಸೇವಾರ್ಥಕ್ಕಾಗಿ ರಚಿತವಾದ ಅಮೆರಿಕ ಇಂಡಿಯಾ ಫೌಂಡೇಷನ್‌ (ಎಐಎಫ್‌) ನ ದತ್ತಿ ಮಂಡಳಿಯ ಸದಸ್ಯರಲ್ಲಿ ಇವರೂ ಒಬ್ಬರು. ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ಇದರ ಗೌರವಾಧ್ಯಕ್ಷ.

ಮಳವಳ್ಳಿ ಅವರನ್ನು ಹೊರತು ಪಡಿಸಿದರೆ ಎಕ್ಸೋಡಸ್‌ ಕಮ್ಯುನಿಕೇಷನ್‌ನ ವ್ಯವಸ್ಥಾಪಕ ಬಿ.ವಿ.ಜಗದೀಶ್‌ ಅವರೊಬ್ಬರೇ ಬೆಂಗಳೂರು ಕಾರ್ಪೊರೇಷನ್‌ ನಡೆಸುವ ಶಾಲೆಗಳ ಪ್ರಾಥಮಿಕ ಶಿಕ್ಷಣಕ್ಕಾಗಿ 1 ಮಿಲಿಯನ್‌ ಡಾಲರ್‌ಗಳ ನೆರವನ್ನು ನೀಡಿದ್ದಾರೆ. ಇದೇ ರೀತಿ ಐಐಟಿ ಹಾಗೂ ಐಐಎಂಗಳಿಗೆ ನಿಧಿ ಒದಗಿಸಿರುವ ಅನಿವಾಸಿ ಭಾರತೀಯರ ಸಂಖ್ಯೆಯೇನೂ ಕಡಿಮೆಯದಲ್ಲ .

ಅದೇನೇ ಇದ್ದರೂ, ಮಳವಳ್ಳಿಯವರ ಮಹತ್ವಾಕಾಂಕ್ಷೆಯ ಯೋಜನೆ ಸಫಲವಾದಲ್ಲಿ ಇನ್ನಷ್ಟು ಅನಿವಾಸಿ ಭಾರತೀಯರು ಭಾರತದಲ್ಲಿ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗುವುದು ಖಚಿತ. ಹೀಗಾದಲ್ಲಿ ದೇಶ ಹೊಸದೊಂದು ಭರವಸೆಯ ಪಥದತ್ತ ಸಾಗುವುದು ಖಚಿತ. ಈ ಹಿನ್ನೆಲೆಯಲ್ಲಿ ಮಳವಳ್ಳಿಯವರಿಗೆ ಹರಿಕಾರ ಅನ್ನುವ ಅಗ್ಗಳಿಕೆ ಸಲ್ಲುತ್ತದೆ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X