ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್‌. ನರಸಿಂಹಯ್ಯನವರಿಗೆ ಬಸವಶ್ರೀ, ಗುಂಜಾಳರಿಗೆ ಸಾಹಿತ್ಯಶ್ರೀ

By Staff
|
Google Oneindia Kannada News

ಬೆಂಗಳೂರು : ಜನಪ್ರಿಯ ಶಿಕ್ಷಣ ತಜ್ಞ ಡಾ. ಹೆಚ್‌. ನರಸಿಂಹಯ್ಯ ಹಾಗೂ ಜನಪ್ರಿಯ ಗ್ರಂಥಪಾಲಕ ಡಾ.ಎಸ್‌.ಆರ್‌. ಗುಂಜಾಳ್‌ ಅವರು, ನಗರದ ಬಸವ ವೇದಿಕೆ ನೀಡುವ ಬಸವಶ್ರೀ ಹಾಗೂ ಸಾಹಿತ್ಯ ಶ್ರೀ ಪ್ರಶಸ್ತಿಗಳಿಗೆ ಕ್ರಮವಾಗಿ ಆಯ್ಕೆಯಾಗಿದ್ದಾರೆ.

ಏ. 26 ರ ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರು ಗಣ್ಯರಿಗೂ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು. ಸಿದ್ಧಗಂಗೆ ಮಠಾಧೀಶ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಉದ್ಘಾಟಿಸುವರು. ಈ ವಿಷಯವನ್ನು ಬಸವ ವೇದಿಕೆಯ ಕಾರ್ಯಾಧ್ಯಕ್ಷ ಸಿ. ಸೋಮಶೇಖರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೃಷ್ಣ ಅವರು ನರಸಿಂಹಯ್ಯನವರಿಗೆ ಬಸವ ಶ್ರೀ ಪ್ರಶಸ್ತಿಯನ್ನು ಹಾಗೂ ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಗುಂಜಾಳರಿಗೆ ಪ್ರದಾನ ಮಾಡುವರು. ಇದೇ ಸಂದರ್ಭದಲ್ಲಿ ಸಹಕಾರ ಸಚಿವ ಡಿ.ಕೆ. ಶಿವಕುಮಾರ್‌ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್‌ ಸದಸ್ಯ ಎಂ.ವಿ. ರಾಜಶೇಖರನ್‌ ವಹಿಸುವರು.

ಎತ್ತರದ ಸಾಧನೆಯ ಎತ್ತರದ ವ್ಯಕ್ತಿಗಳು

ನರಸಿಂಹಯ್ಯ ಹಾಗೂ ಗುಂಜಾಳ್‌ ತಂತಮ್ಮ ಕ್ಷೇತ್ರಗಳಲ್ಲಿ ಎತ್ತರದ ಸಾಧನೆಗಳನ್ನು ಮಾಡಿದ ಮಹಾನುಭಾವರು. ಶಿಕ್ಷಣ ಕ್ಷೇತ್ರದಲ್ಲಿ ನಿಷ್ಠುರ ನಿಲುವು ಹಾಗೂ ಸಮಾಜ- ಸಂಸ್ಕೃತಿ ಮುಖಿ ಒಲವುಗಳಿಂದ ನರಸಿಂಹಯ್ಯ ಪ್ರಸಿದ್ಧರು. ಸಾಯಿಬಾಬಾ ಅವರ ಪವಾಡಕ್ಕೆ ಸವಾಲೊಡ್ಡಿದ ಅವರ ವೈಚಾರಿಕತೆಯೂ ಮನೆ ಮಾತಾಗಿದೆ. ಅಪ್ಪಟ ಗಾಂಧಿವಾದಿಯೂ ಆದ ಪ್ರೀತಿಯ ಮೇಷ್ಟ್ರು ಹೆಚ್ಚೆನ್‌ ನಮ್ಮ ನಡುವಿನ ಅಪರೂಪದ ವ್ಯಕ್ತಿಗಳು.

ಡಾ. ಎಸ್‌.ಆರ್‌. ಗುಂಜಾಳ್‌ ಕರ್ನಾಟಕ ಕಂಡ ಅತ್ಯಂತ ದಕ್ಷ ಗ್ರಂಥಪಾಲಕರಲ್ಲೊಬ್ಬರು. ಪುಸ್ತಕಗಳು ಇರುವುದು ಓದುವುದಕ್ಕಾಗಿ ಅನ್ನುವ ಭಾರತೀಯ ಗ್ರಂಥಾಲಯ ಪಿತಾಮಹ ಡಾ.ಎಸ್‌. ಆರ್‌. ರಂಗನಾಥನ್‌ರ ತತ್ವವನ್ನು ಸಾಕಾರಕ್ಕೆ ತಂದ ಕೆಲವೇ ವ್ಯಕ್ತಿಗಳಲ್ಲಿ ಗುಂಜಾಳ್‌ ಪ್ರಮುಖರು. ಪುಸ್ತಕಪ್ರೀತಿ, ಕಾಯಕಕ್ಕೆ ಸಂಬಂಧಿಸಿದಂತೆ ಗುಂಜಾಳರು ಕೆಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಶರಣ ಸಾಹಿತ್ಯದಲ್ಲೂ ಅವರ ಕೃಷಿಯನ್ನು ಗುರ್ತಿಸಬಹುದು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X