ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೋಕ ಸಾಗರದಲ್ಲಿ ಬಿಜಾಪುರ, ಬಾಂಗ್ಲಾದ ಕುಕೃತ್ಯಕ್ಕೆ ಖಂಡನೆ

By Staff
|
Google Oneindia Kannada News

ವಿಜಾಪುರ : ಅಸ್ಸಾಂ ಗಡಿಯಲ್ಲಿ ಬಾಂಗ್ಲಾ ದೇಶ್‌ ರೈಫಲ್ಸ್‌ (ಬಿಡಿಆರ್‌) ಚಿತ್ರಹಿಂಸೆ ನೀಡಿ ಬರ್ಬರವಾಗಿ ಕಗ್ಗೊಲೆ ಮಾಡಿದ 17 ಮಂದಿ ಬಿ.ಎಸ್‌.ಎಫ್‌. ವೀರಯೋಧರಲ್ಲಿ ರಾಷ್ಟ್ರ ರಕ್ಷಣೆಗಾಗಿ ಕನ್ನಡ ನಾಡಿನಿಂದ ತೆರಳಿದ್ದ ವೀರಯೋಧ ರಾಮನಗೌಡ ಗುರುನಾಥಪ್ಪ ಗೌಡ ಅಂಗಡನೂ ಒಬ್ಬ.

ದೇಶದ ಗಡಿಯ ರಕ್ಷಣೆಗಾಗಿ ಹಗಲಿರುಳು ಚಳಿ, ಮಳೆ, ಗಾಳಿ ಲೆಕ್ಕಿಸದೆ ಶತ್ರು ಪಾಳಯದ ಜತೆ ಹೋರಾಡಲು ಸನ್ನದ್ಧನಾಗಿದ್ದ ಈ ವೀರಯೋಧ ಬಿಡಿಆರ್‌ನ ಅಮಾನವೀಯ ಕುಕೃತ್ಯಕ್ಕೆ ಬಲಿಯಾದ. ಕನ್ನಡ ಮಣ್ಣಿನಲ್ಲಿ ಹುಟ್ಟಿದ ಈ ವೀರಯೋಧನ ಸಾವಿನ ಸುದ್ದಿ ಏ.21ರ ಮಧ್ಯಾಹ್ನ ಬರಸಿಡಿಲಿನಂತೆ ಬಂದೆರಗಿದಾಗ ಬಿಜಾಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ತೆಲಗಿ ಗ್ರಾಮವೇ ಕಂಬನಿ ಮಿಡಿಯಿತು. ಸಾವಿನ ಸುದ್ದಿ ಬಿಜಾಪುರ ಜಿಲ್ಲೆಯನ್ನು ಶೋಕಸಾಗರದಲ್ಲಿ ಮುಳುಗಿಸಿತು.

ಗಡಿಭದ್ರಾತಾ ಪಡೆಯ 118 ಬೆಟಾಲಿಯನ್‌ನ ಕಮಾಂಡಿಂಗ್‌ ಅಧಿಕಾರಿ ಹವಾಲ್ದಾರ್‌ ರಾಮನಗೌಡನ ಸಾವಿನ ಹಾಗೂ ಆತನ ಅಂತ್ಯ ಸಂಸ್ಕಾರ ಮಾಡಿದ ಸುದ್ದಿಯನ್ನು ಟೆಲಿಗ್ರಾಂ ಮೂಲಕ ತೆಲಗಿಯಲ್ಲಿರುವ ಯೋಧನ ಕುಟುಂಬದವರಿಗೆ ತಿಳಿಸಿದ್ದರು.

ಸುದ್ದಿ ತಿಳಿದೊಡನೆ ಊರಿಗೆ ಊರೇ ಈ ವೀರಯೋಧನ ಮನೆಗೆ ಧಾವಿಸಿ, ರಾಮನಗೌಡನ ವೃದ್ಧ ತಾಯಿ, ಪತ್ನಿ ಹಾಗೂ ಮಕ್ಕಳಿಗೆ ಸಾಂತ್ವನ ಹೇಳಿತು. ಸಂತೈಸಿತು, ಅವರ ದುಃಖದಲ್ಲಿ ಭಾಗಿಯಾಯಿತು. ವೀರಯೋಧನ ಕುಟುಂಬದವರಿಗೆ ಆತ್ಮಸ್ಥೈರ್ಯ ತುಂಬಲು ಮುಂದಾಯಿತು. ಮಗನ ಸಾವಿನ ಸುದ್ದಿ ತಿಳಿದು ಮೂರ್ಛಾವಸ್ಥೆಯಲ್ಲಿದ್ದ ವೀರಮಾತೆ ಲಕ್ಷ್ಮೀಬಾಯಿ, ಯೋಧನ ಪತ್ನಿ ಸುವರ್ಣಾ, ಮಕ್ಕಳಾದ ಸುಧಾ, ಸಚಿನ್‌, ಭಾಗ್ಯಶ್ರೀ ಅವರಿಗೆ ಧೈರ್ಯ ತುಂಬಿತು.

ಸಾಂತ್ವನದ ಮಾತುಗಳಿಂದ ಕುಟುಂಬವರ್ಗದವರ ದುಃಖ ಕಡಿಮೆ ಆಗದಿದ್ದಾಗ ಭಾನುವಾರ ರಾತ್ರಿ ತಮ್ಮ ಗ್ರಾಮದ ಹೆಮ್ಮೆಯ ಯೋಧನ ಸಾಂಕೇತಿಕ ಅಂತ್ಯಕ್ರಿಯೆಯನ್ನೂ ನೆರವೇರಿಸಿ, ದುಃಖ ಮರೆಸಲು ಯತ್ನಿಸಿದರು. ಊರಿಗೆ ಊರೆ ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿತ್ತು.

ಬಿಜಾಪುರಷ್ಟೇ ಅಲ್ಲ ಇಡೀ ಕರ್ನಾಟಕವೇ ವೀರಯೋಧನ ಈ ಸಾವಿಗೆ ಕಂಬನಿಗರೆದಿದೆ. ಶ್ರದ್ಧಾಂಜಲಿ ಸಲ್ಲಿಸಿದೆ. ಬಾಂಗ್ಲಾದೇಶದ ಈ ಅಮಾನವೀಯ ಕುಕೃತ್ಯವನ್ನು ಖಂಡಿಸಿದೆ.

ಘೋರ ಕೃತ್ಯ : ಮೇಘಾಲಯದ ಪಿರ್ಡಿವಾಹ್‌ ಮತ್ತು ಅಸ್ಸಾಂನ ಬೋರೈಬಾರಿಯಲ್ಲಿ ಕಳೆದ ವಾರ ಭಾರತೀಯ ಪಡೆಗಳ ಮೇಲೆ ಏಕಪಕ್ಷೀಯವಾಗಿ ದಾಳಿ ಮಾಡಿದ ಬಾಂಗ್ಲಾದೇಶ್‌ ರೈಫಲ್ಸ್‌ ಅತಿ ಹತ್ತಿರದಿಂದ 8 ಯೋಧರಿಗೆ ಗುಂಡು ಹಾರಿಸಿದೆ. ಒಬ್ಬ ಯೋಧನನ್ನು ಕತ್ತುಹಿಸಿಕಿ ಕೊಂದಿದೆ.

ಯೋಧರ ಗುರುತೇಸಿಗದಂತೆ ವಿರೂಪಗೊಳಿಸಲಾಗಿದೆ. ಅಮಾನುಷವಾಗಿ ಕೊಲ್ಲಲಾದ ಹಾಗೂ ಕೊಳೆತು ನಾರುತ್ತಿದ್ದ ಶವಗಳನ್ನು ಒಂದೊಂದಾಗಿ ಭಾರತದ ವಶಕ್ಕೆ ನೀಡಿದೆ. ಈ ಬರ್ಬರ ಹತ್ಯೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ವಾಜಪೇಯಿ ಹಾಗೂ ಬಾಂಗ್ಲಾ ಪ್ರಧಾನಿ ಹಸೀನಾ ಭಾನುವಾರ ಈ ಸಂಬಂಧ ಅರ್ಧಗಂಟೆಗೂ ಹೆಚ್ಚು ಕಾಲ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.

ಭಾರತದಲ್ಲಿರುವ ಬಾಂಗ್ಲಾ ರಾಯಭಾರಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಗಡಿ ಗುರುತಿಸುವಲ್ಲಿ ಆಗಿರುವ ವಿಳಂಬದಿಂದ ಇಂತಹ ಘೋರ ನಡೆದಿದ್ದು, ಈಗಲಾದರೂ ಗಡಿ ವಿವಾದ ಇತ್ಯರ್ಥ ಪಡಿಸಿಕೊಳ್ಳಬೇಕೆಂದು ಸಲಹೆ ಮಾಡಿದ್ದಾರೆ. ಈ ಮಧ್ಯೆ ಭಾರತೀಯ ಯೋಧರ ಹತ್ಯೆಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಭಾನುವಾರದಿಂದಲೇ ವಿಚಾರಣೆ ಆರಂಭಿಸಿದೆ.

ಸಂಸತ್ತಿನಲ್ಲೂ ಸೋಮವಾರ ಈ ವಿಷಯ ಮಾರ್ದನಿಸಿದೆ. ಬಾಂಗ್ಲಾ ಪಾತಕಿಗಳ ದುಸ್ಸಾಹಸವನ್ನು ಖಂಡಿಸಿದೆ. ಈ ಘೋರ ಕೃತ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತ ಬಾಂಗ್ಲಾದೇಶವನ್ನು ಆಗ್ರಹಿಸಿದೆ. ಸಮವಸ್ತ್ರದಲ್ಲಿರುವ ದೇಶದ ಯೋಧರನ್ನು ವಿಚ್ಛಿದ್ರವಾಗಿ ಕೊಂದಿರುವ ಘಟನೆಯನ್ನು ಭಾರತ ಲಘುವಾಗಿ ಸ್ವೀಕರಿಸದು ಎಂದೂ ಎಚ್ಚರಿಸಿದೆ. ಈ ಮಧ್ಯೆ ಮತ್ತೊಮ್ಮೆ ಭಾರತೀಯ ಬೇಹುಗಾರಿಕೆ ವಿಫಲವಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.

(ಬಿಜಾಪುರ ಪ್ರತಿನಿಧಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X