Get Updates
Get notified of breaking news, exclusive insights, and must-see stories!

ಯಾವ ರಂಗೋಲಿಗೂ ತಾಳೆಯಾಗದ ಚುಕ್ಕಿಗಳು

ಆಕಾಶದ ಅಂತರಂಗ ಬಲ್ಲವರಾರು ?
ಅದರೊಡಲಿನ ಗಣಿತದ ಎಲ್ಲಾ ಸಾಧ್ಯತೆಗಳನ್ನು ನಿರಾಕರಿಸುವ ಚುಕ್ಕಿಗಳಂತೆಯೇ ಅದರ ಮನೋ ವ್ಯಾಪಾರ, ನಡವಳಿಕೆಗಳಿಗೆ ಚೌಕಟ್ಟು ಕೂರಿಸುವುದು ಕಷ್ಟ . ಆ ಮಟ್ಟಿಗೆ ಆಕಾಶ ಹಾಗೂ ಮನುಷ್ಯನ ಮನೋ ವ್ಯಾಪಾರಗಳಿಗೆ ಅಷ್ಟೊಂದು ಅಂತರವಿಲ್ಲ . ಮಳೆ, ಗುಡುಗು, ಸಿಡಿಲು, ಮಿಂಚು, ಬಿಸಿಲು, ಶೀತಲತೆ, ಆಹ್ಲಾದ .. ಯಾವುದು ಯಾವಾಗ ಯಾರಿಗಾಗಿ ಯಾವ ಮಟ್ಟಿಗೆ ಅನ್ನುವ ಪ್ರಶ್ನೆಗಳಿಗೆಲ್ಲ ಇಲ್ಲಿ ಉತ್ತರವಿಲ್ಲ .

ರಾಜ್ಯದ ಆಕಾಶವನ್ನೇ ನೋಡಿ . ಹದಿನೈದು ದಿನಗಳಿಂದ ಮುಂಗಾರಿನ ಬಿಸುಪನ್ನು ನೆನಪಿಸಿದ್ದ ಮಳೆ ಇದ್ದಕ್ಕಿದಂತೆ ಮುಸುಕು ಹೊದ್ದು ಮಲಗಿದೆ. ಯಾಕಾಗಿ ಬಂತು, ಯಾಕಾಗಿ ಸುಮ್ಮನಾಯಿತು ಅನ್ನುವ ತರ್ಕಕ್ಕೆ ಯಾವ ಮಾನದಂಡಗಳೂ ಇಲ್ಲ . ಲಕ್ಷದ್ವೀಪದಲ್ಲಿನ ಸುಳಿಗಾಳಿ ಅನ್ನುವುದು ಮಳೆ ಬಂದ ನಂತರ ಹುಡುಕಿಕೊಂಡ ಕಾರಣ ಅಷ್ಟೇ.

ಬದುಕೂ ಅಷ್ಟೇ, ಇಂಥದ್ದೇ ಮಾನದಂಡಗಳ ಹಂಗಿಲ್ಲದೆ ಸಾಗುತ್ತದೆ. ಖುಷಿಯಾಗಿರಲು ನಿಶ್ಚಯಿಸಿದರೆ, ವ್ಯಕ್ತಿಗೆ ತನ್ನ ಸಂತೋಷಕ್ಕೆ ಕಾರಣಗಳು ಸಿಗುತ್ತವೆ. ಅದೇ ರೀತಿ ದುಃಖಕ್ಕೂ. ಮೊದಲು ಭಾವನೆ, ಆನಂತರ ಅದಕ್ಕೆ ಸಮರ್ಥನೆಗಳು. ಇದನ್ನು ಒಪ್ಪುವುದಾದರೆ, ಬದುಕು, ಸಂಬಂಧಗಳು ಮುಂತಾದವುಗಳೆಲ್ಲ ಸಾಕಷ್ಟು ಸರಳವಾಗುತ್ತವೆ. ಭಾವುಕತೆ ವಾಸ್ತವದ ಒರೆಗಲ್ಲಿನಲ್ಲಿ ಬೇಯುತ್ತದೆ. ಆದರೆ, ಇದನ್ನೆಲ್ಲ ಒಪ್ಪಿಕೊಳ್ಳುವುದು ಕಷ್ಟ . ಯಾಕೆಂದರೆ, ಬದುಕು ಇಂದಿಗೇ ಮುಗಿಯುವುದು ಯಾರಿಗೆ ಬೇಕಿದೆ ಹೇಳಿ. ಸುಳ್ಳೋ ಸತ್ಯವೋ, ಇಷ್ಟವೋ ಕಷ್ಟವೋ ಜೊತೆಯಾಗಿ ನಡೆಯುವುದು ಅನಿವಾರ್ಯ. ಅದು ನಾವೇ ಇಷ್ಟ ಪಟ್ಟು ಸೃಷ್ಟಿಸಿಕೊಂಡ ಅಮರಾವತಿ.

ಇದೆಲ್ಲಾ ವೇದಾಂತ ನೆನಪಾಗಲಿಕ್ಕೆ ಕಾರಣ, ಸೋಮವಾರದ ಅಸಹನೀಯ ಧಗೆ . ಇಷ್ಟಕ್ಕೂ ತಾಪಮಾನ ಮುನ್ನಿನಷ್ಟಿಲ್ಲ , ಇಳಿತ ಕಂಡಿದೆ. ಆದರೆ, ತಂಪುಗಾಳಿಗೆ ಒಗ್ಗಿಕೊಂಡ ಮನಸ್ಸು ಮತ್ತೆ ಬಿಸಿಲಿಗೆ ಒಗ್ಗಲು ಬೇಸರಿಸಿಕೊಳ್ಳುತ್ತೆ . ಇಂಥಾ ಹೊತ್ತಿನಲ್ಲಿ ಸಿದ್ಧಾಂತಗಳು ನೆನಪಾಗುತ್ತವೆ. ಇವೆಲ್ಲವನ್ನೂ ಹೊರತುಪಡಿಸಿ ಹೇಳುವುದಾದರೆ, ರಾಜ್ಯದ ಆಕಾಶ ಸೋಮವಾರವೂ ಅಲ್ಲಲ್ಲಿ ಸಣ್ಣ ಕಿಂಡಿಗಳನ್ನು ಉಳಿಸಿಕೊಂಡಿತ್ತು . ಪರಿಣಾಮವಾಗಿ ಶೃಂಗೇರಿ, ಚನ್ನ ಪಟ್ಟಣಗಳಲ್ಲಿ ತಲಾ 4 ಸೆಂಮೀ ಮಳೆ ಬಿದ್ದಿದೆ. ಉಳಿದಂತೆ, ಕಳಸದಲ್ಲಿ 3, ಬಂಟ್ವಾಳ, ಶಿರಸಿ, ಲೊಂಡಾ ಹಾಗೂ ಶ್ರೀರಂಗಪಟ್ಟಣಗಳಲ್ಲಿ ತಲಾ 2 ಸೆಂಮೀ ಮಳೆ ಸುರಿದಿದೆ.

ಉತ್ತರ ಒಳನಾಡಿನ ಕೆಲವೆಡೆಗಳಲ್ಲಿ ಗರಿಷ್ಠ ತಾಪಮಾನದ ಕ್ರಮಾಂಕ ಹೆಚ್ಚಾಗಿದೆ. ದಿನದ ಗರಿಷ್ಠ ಉಷ್ಣಾಂಶ 41.4 ಡಿಗ್ರಿ ಸೆಲ್ಷಿಯಸ್‌ ಗುಲ್ಬರ್ಗಾದಲ್ಲಿ ದಾಖಲಾಗಿತ್ತು . ನಾಳೆ, ನಾಳಿದ್ದೂ ರಾಜ್ಯದ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಬೀಳಲಿದೆ ಎಂದು ಹವಾಮಾನ ವೀಕ್ಷಣಾಲಯ ಹೇಳಿದೆ. ಬೆಂಗಳೂರಿನಲ್ಲಿ ಭಾಗಶಃ ಮೋಡ, ಸಂಜೆ ಅಥವಾ ರಾತ್ರಿ ಸ್ವಲ್ಪ ಮಟ್ಟಿಗೆ ಮಳೆಯಾಗುವ ಸಾಧ್ಯತೆಯಿದೆ. ದಿನದ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಷಿಯಸ್‌ ಆಸುಪಾಸಿನಲ್ಲಿರುತ್ತದೆ. ಅಂದಹಾಗೆ, ಸಂದುಹೋದ ಅಕಾಲಿಕ ಮಳೆಗಾಲದಲ್ಲಿ ಬೆಂಗಳೂರಿನಲ್ಲಿ ಬಿದ್ದ ಮಳೆಯ ಒಟ್ಟು ಪ್ರಮಾಣ, 328.8 ಮಿಮೀ ಎನ್ನುತ್ತಿದೆ ಹವಾಮಾನ ಇಲಾಖೆ. ದಯವಿಟ್ಟು ನಂಬಿ, ನಂಬುವುದು ಒಳ್ಳೆಯದು.

ಕೊನೆಯದಾಗಿ - ನಿಮ್ಮ ಎದೆಯಲ್ಲಿ ಮಳೆ ಬಿದ್ದು ಎಷ್ಟು ಕಾಲವಾಯಿತು ! ಸಮೃದ್ಧರು , ಸಂತೃಪ್ತರು ಅನ್ನುವುದಾದರೆ ಶರಣು ಶರಣು .

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+