ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾದಾಮಿ, ಐಹೊಳೆ, ಪಟ್ಟದ ಕಲ್ಲು ನೋಡಿದ್ದೀರಾ?

By Staff
|
Google Oneindia Kannada News

ಬಾದಾಮಿ ಎಂದೊಡನೆ ಕರ್ನಾಟಕವನ್ನಾಳಿದ ಹೆಮ್ಮೆಯ ಚಾಲುಕ್ಯರ ನೆನಪಾಗುತ್ತದೆ. ಐಹೊಳೆ, ಬಿಜಾಪುರ, ಪಟ್ಟದಕಲ್ಲುಗಳ ಶಿಲ್ಪಕಲಾ ಸೌಂದರ್ಯವೂ ಕೈಬೀಸಿ ಕರೆಯುತ್ತದೆ.

ಉತ್ತರ ಕರ್ನಾಟಕ ಸಾಹಿತ್ಯ, ಕಲೆ, ಸಂಸ್ಕೃತಿ, ಪರಂಪರೆಯ ತವರು. ಇಲ್ಲಿನ ಶಿಲ್ಪಗಳು ಕಲೆಯನ್ನು ಕಣ್ಣುತುಂಬಾ ವರ್ಣಿಸುತ್ತವೆ. ಇಲ್ಲಿ ನಡೆಯುವ ನಾಟಕ, ನೃತ್ಯ, ಸಂಗೀತೋತ್ಸವಗಳು ಉತ್ತರ ಕರ್ನಾಟಕದ ಕಲಾಶ್ರೀಮಂತಿಕೆಯನ್ನು ಬಿಂಬಿಸುತ್ತವೆ. ಇದಕ್ಕೆ ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳು ಸಾಕ್ಷಿಗಳಾಗಿವೆ.

ಬಾದಾಮಿ : ಒಂದು ಬಾರಿ ಕೂಗಿದರೆ 7 ಬಾರಿ ಮಾರ್ದನಿಸುವ ವಿಶ್ವ ವಿಖ್ಯಾತ ಗೋಳಗುಮ್ಮಟವಿರುವ ಬಿಜಾಪುರಕ್ಕೆ 120 ಕಿ.ಮೀಟರ್‌ ದೂರದಲ್ಲಿರುವ ಬಾದಾಮಿ ಶಿಲ್ಪಕಲಾ ಸ್ಮಾರಕಗಳಿಂದ ಶತಮಾನಗಳಿಂದಲೂ ಜನಮನವನ್ನು ಸೂರೆಗೊಂಡ ಕರ್ನಾಟಕದ ಹೆಮ್ಮೆಯ ಪ್ರವಾಸಿತಾಣ.

ಬಾದಾಮಿ ಶಿವ ಹಾಗೂ ವಿಷ್ಣುವಿನ ದೇವಾಲಯಗಳ ತವರು. ಗುಹಾಂತರ ದೇವಾಲಯಗಳ ನಾಡು. ಸುಂದರ ಹಾಗೂ ಕಲಾತ್ಮಕ ಕೆತ್ತನೆ ಕೆಲಸಗಳು ಇಲ್ಲಿನ ಎಲ್ಲ ಮನೆಮನೆಗಳಲ್ಲೂ ರಾರಾಜಿಸುತ್ತವೆ. ಬಾದಾಮಿಯು ಸುಂದರ ಪುಷ್ಕರಣಿ ಹಾಗೂ ಮಣ್ಣಿನ ಬಣ್ಣದ ಬಳಪದ ಕಲ್ಲಿನ ಗುಡ್ಡಗಳ ನಡುವೆ ಇರುವ ಸುಂದರ ತಾಣ.

ಪಟ್ಟದಕಲ್ಲು : ಪಟ್ಟದಕಲ್ಲು ಚಾಲುಕ್ಯರ ಶಿಲ್ಪಕಲೆಗೆ ಸಾಕ್ಷಿಯಾಗಿ ನಿಂತ ಮತ್ತೊಂದು ಸುಂದರ ತಾಣ. ವಿಶ್ವ ಪರಂಪರೆಯ ಕೇಂದ್ರ. ಮಲಪ್ರಭ ನದಿಯ ದಂಡೆಯಲ್ಲಿರುವ ಇಲ್ಲಿನ ದೇವಾಲಯಗಳ ಭಿತ್ತಿಗಳಲ್ಲಿ (ಗೋಡೆ) ಪುರಾಣದ ಕತೆಗಳ ಕೆತ್ತನೆಗಳಿವೆ.

ಬಿಜಾಪುರದಿಂದ 134 ಕಿ.ಮೀಟರ್‌ಗಳ ದೂರದಲ್ಲಿರುವ ಪಟ್ಟದಕಲ್ಲು ನೋಡಲೇಬೇಕಾದ ಸ್ಥಳ.

ಐಹೊಳೆ : ಬಿಜಾಪುರದಿಂದ 110 ಕಿ.ಮೀಟರ್‌ ದೂರದಲ್ಲಿರುವ ಐಹೊಳೆಯು ಬಾದಾಮಿ ಹಾಗೂ ಪಟ್ಟದಕಲ್ಲುಗಳ ಜೊತೆ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ. ನೂರಾರು ದೇವಾಲಯಗಳ ನಾಡಾದ ಐಹೊಳೆಯಲ್ಲಿ ಕ್ರಿಸ್ತ ಶಕ 5ನೇ ಶತಮಾನದಲ್ಲಿ ಕಟ್ಟಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರವೂ ಇದೆ.

ಬಿಜಾಪುರ : ಅರಬ್ಬೀ ಮತ್ತು ಹಿಂದೂ ಸಂಸ್ಕೃತಿಗಳು ಪರಸ್ಪರ ಸುತ್ತಿಕೊಂಡ ಗೋಲಗುಮ್ಮಟವಿರುವ ಆದಿಲ್‌ಶಾಹಿ ಸಂಸ್ಥಾನದ ರಾಜಧಾನಿಯಾಗಿದ್ದ ಬಿಜಾಪುರ ಬೆಂಗಳೂರಿನಿಂದ 530 ಕಿ.ಮೀಟರ್‌ ದೂರದಲ್ಲಿರುವ ಅತ್ಯದ್ಭುತ ತಾಣ. ಇಬ್ರಾಹಿಮ್‌ ರೋಜಾ, ನಗರ್‌ಖಾನಾ, ಜುಮ್ಮಾ ಮಸೀದಿಗಳೂ ಬಿಜಾಪುರದಲ್ಲಿ ನೋಡಲೇಬೇಕಾದ ಸ್ಥಳಗಳು. ಬೆಂಗಳೂರಿನಿಂದ ಬಿಜಾಪುರಕ್ಕೆ ಹೋಗಿ ಅಲ್ಲಿಂದ ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ, ಬಾದಾಮಿಯನ್ನು ನೋಡಬಹುದು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯಲ್ಲಿ ಹಂಪಿಯೂ ಸೇರಿದಂತೆ, ಬಾದಾಮಿ, ಐಹೊಳೆ, ಪಟ್ಟದಕಲ್ಲು , ಚಿಕ್ಕ ಪಡಸಲಗಿ ಬ್ಯಾರೇಜ್‌ ಇತ್ಯಾದಿ ಸ್ಥಳಗಳಿಗೆ ಹೋಗಿ ಬರಲು ಬೆಂಗಳೂರಿನಿಂದ 5 ದಿನಗಳ ಪ್ಯಾಕೇಜ್‌ ಟೂರ್‌ಕೂಡ ಇದೆ.

ಕೂಡಲ ಸಂಗಮ : ಬೆಂಗಳೂರಿಂದ 597 ಕಿ.ಮೀ ಹಾಗೂ ಬಿಜಾಪುರದಿಂದ 67 ಕಿ.ಮೀಟರ್‌ ದೂರದಲ್ಲಿರುವ ಕೂಡಲ ಸಂಗಮ ಶೈವರಿಗೆ ಹಾಗೂ ಶರಣರಿಗೆ ಪವಿತ್ರವಾದ ಸ್ಥಳ. ಕೃಷ್ಣ ಹಾಗೂ ಮಲಪ್ರಭಾ ನದಿಗಳು ಸೇರುವ ಈ ಸಂಗಮ ಸ್ಥಳದಲ್ಲಿ ದೇವಾಲಯವೂ ಇದೆ. ಅರಿವೆ ಗುರು, ಕಾಯಕವೇ ಕೈಲಾಸ ಎಂದು ಸಾರಿದ ಬಸವಣ್ಣನವರಿಂದ ಕೂಡಲ ಸಂಗಮ ವಿಶ್ವವಿಖ್ಯಾತವಾಗಿದೆ.

ಮುಖಪುಟ / ನೋಡು ಬಾ ನಮ್ಮೂರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X