• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೈಲದ ನಾಡಿಗೆ ತೆರಳಿದವರ ತವಕ ತಲ್ಲಣಗಳು

By Staff
|

*ಹಬೀಬ್‌ ರಹಮಾನ್‌, ಕುವೈತ್‌

ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ 1 ಲಕ್ಷ ಭಾರತೀಯರು ಉದ್ಯೋಗಕ್ಕೆಂದು ಗಲ್ಫ್‌ಗೆ ಹಾರಿದ್ದಾರೆ. ಅವರಲ್ಲಿ ನಿಮ್ಮ ಸೋದರನೋ, ಸೋದರಿಯೋ ಇದ್ದಿರಬಹುದು. ಅವರ ಉದ್ಯೋಗದ ಬಗ್ಗೆ ನೀವು ಅನೇಕ ಭರವಸೆಗಳನ್ನೂ ಕಟ್ಟಿಕೊಂಡಿರಬಹುದು. ಆದರೆ, ಸತ್ಯ ಸಂಗತಿ ತಿಳಿಯುತ್ತಿದ್ದಂತೆ ನಿಮ್ಮ ನಿರೀಕ್ಷೆಗಳೆಲ್ಲಾ ಕರಗಿಹೋಗುತ್ತವೆ. ಯಾಕೆಂದರೆ, ಗಲ್ಫ್‌ಗೆ ಹೋದವರೆಲ್ಲ ಅಷ್ಟು ಅದೃಷ್ಟವಂತರಲ್ಲ .

ಇತ್ತೀಚೆಗೆ ಅರಬ್ಬರೂ, ಅವರ ಮಕ್ಕಳೂ ವಿದ್ಯಾವಂತರಾಗುತ್ತಿದ್ದಾರೆ. ಪ್ರತಿವರ್ಷ ಅವರ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದಾಗಿ, ನಿರುದ್ಯೋಗದ ಸಮಸ್ಯೆಯನ್ನು ಗಲ್ಫ್‌ (ಜಿಸಿಸಿ) ಸರ್ಕಾರ ಎದುರಿಸುವಂತಾಗಿದೆ. ಸೌದಿ ಅರೇಬಿಯಾದ ಮಾನವ ಸಂಪನ್ಮೂಲ ಸಮಿತಿಯ ಉಪ ಕಾರ್ಯದರ್ಶಿ ಹಲ್‌ ಹಜ್ಮಿ ಅವರ ಹೇಳಿಕೆಯನ್ನು ಇಲ್ಲಿ ಗಮನಿಸಬಹುದು - ಹೆಚ್ಚುತ್ತಿರುವ ಅಪರಾಧಗಳಿಗೆ ನಿರುದ್ಯೋಗವನ್ನು ನಿಂದಿಸಬೇಕು. ಮಣ್ಣಿನ ಮಕ್ಕಳಿಗಾಗಿ ಒಂದಷ್ಟು ಸೊತ್ತನ್ನು , ನಿರ್ದಿಷ್ಟ ಅವಕಾಶಗಳನ್ನು ಕಾಯ್ದಿರಿಸುವುದಲ್ಲದೆ ಬೇರೆ ವಿಧಿಯಿಲ್ಲ . ಇದರಿಂದಾಗಿ ಭಾರತೀಯರು ಸಂಬಳ ಕಡಿತ ಮುಂತಾದ ಸಮಸ್ಯೆಗಳನ್ನು ಎದುರಿಸುವುದು ಅನಿವಾರ್ಯ. ಇದೇ ಪರಿಸ್ಥಿತಿ ಎಲ್ಲ ಏಷ್ಯನ್ನರದು.

ಇದನ್ನೆಲ್ಲ ಹೊರತುಪಡಿಸಿದರೆ, ಕೆಲಸದ ವಾತಾವರಣ ಭಾರತೀಯರಿಗಿಲ್ಲಿ ಅನುಕೂಲಕರವಾಗಿಯೇ ಇದೆ. ಭಾರತೀಯ ವಿದೇಶಾಂಗ ಸಚಿವಾಲಯ ಹಾಗೂ ಜಿಸಿಸಿ ಸರ್ಕಾರ ದ್ವಿಪಕ್ಷೀಯ ಮಾತುಕತೆಗಳಲ್ಲಿ ಹಲವಾರು ಸಮಸ್ಯೆಗಳನ್ನು ತಿಳಿಗೊಳಿಸಿವೆ. ಇದರಿಂದಾಗಿಯೇ, ಗಲ್ಫ್‌ಗೆ ಬರುವ ವಿದೇಶಿಯರಲ್ಲಿ ಭಾರತೀಯರದ್ದು ದೊಡ್ಡ ಪಾಲು.

ಕಾನೂನು ಸರಿಯಿದೆ, ನಮ್ಮವರದೇ ಬೇಜವಾಬ್ದಾರಿ

ಸಹಜವಾಗಿಯೇ ಅರಬ್ಬರು ಸಂಪ್ರದಾಯವಾದಿಗಳು ಹಾಗೂ ಉದಾರಿಗಳು. ಅವರ ಕಾರ್ಮಿಕ ಕಾನೂನುಗಳು ಕನಿಷ್ಠ ವೇತನ ಹಾಗೂ ಇತರ ಸೌಲಭ್ಯಗಳನ್ನು ಎಲ್ಲ ರಂಗಗಳಲ್ಲಿಯೂ ಕಾರ್ಮಿಕರಿಗೆ ಒದಗಿಸಿಕೊಟ್ಟಿವೆ. ಆದರೆ, ಕೆಲವು ಆಸೆಬುರುಕ ಲೋಭಿ ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿರುವ ಭಾರತೀಯ ಕಾರ್ಮಿಕರ ಪಾಡು ಅಸಹನೀಯವಾಗಿದೆ. ಇದಕ್ಕೆ ಅಲ್ಲಿನ ಕಾನೂನು ಕಾರಣವಲ್ಲ . ಬದಲಿಗೆ ಭಾರತದ ವಿದೇಶಾಂಗ ಸಚಿವಾಲಯ ಹಾಗೂ ರಾಯಭಾರಿಗಳ ಬೇಜವಾಬ್ದಾರಿತನವೇ ಈ ಶೋಷಣೆಗೆ ಕಾರಣ. ಭಾರತೀಯ ಸಂಸದರು ಹಾಗೂ ಅಧಿಕಾರಿಗಳು ಕೂಡ ತಮ್ಮ ಸೌದಿ ಭೇಟಿಯ ಸಂದರ್ಭದಲ್ಲಿ ಶೋಷಿತರ ನೋವುಗಳನ್ನು ಹಂಚಿಕೊಳ್ಳುವ ಗೋಜಿಗೆ ಹೋಗಿಲ್ಲ .

ಇತ್ತೀಚಿನ ಕೆಲವು ಘಟನೆಗಳನ್ನು ಗಮನಿಸಿ

ಕೆಲವು ಫಿಲಿಫೈನ್ಸ್‌ ಮಹಿಳೆಯರು, ಮಾಲೀಕರಿಂದ ಹಿಂಸೆ ಅನುಭವಿಸುತ್ತಿರುವ ವಿಷಯವನ್ನು ತಮ್ಮ ರಾಯಭಾರ ಕಚೇರಿಯ ಗಮನಕ್ಕೆ ತಂದರು. ತಕ್ಷಣವೇ ಕಾರ್ಯ ಪ್ರವೃತ್ತವಾದ ಫಿಲಿಫೈನ್ಸ್‌ ರಾಯಭಾರ ಕಚೇರಿ, ಸ್ಥಳೀಯ ಆಡಳಿತವನ್ನು ಸಂಪರ್ಕಿಸಿ, ಪರಿಸ್ಥಿತಿಯನ್ನು ಸುಧಾರಿಸಿತು. ಇಂಥದ್ದೇ ಘಟನೆ, ಭಾರತೀಯ ಮಹಿಳೆಯರು ಅನುಭವಿಸಿದಾಗ ನಡೆದ ಸಂಗತಿ ಬೇರೆಯೇ.

180 ಶಿಕ್ಷಿತ ಭಾರತೀಯ ದಾದಿಯರು (ನರ್ಸಿಂಗ್‌ ಅಸಿಸ್ಟೆಂಟ್‌ ಹುದ್ದೆಗೆ ಅರ್ಹರಾಗಿದ್ದರೂ ಹೆಲ್ಪರ್ಸ್‌ ಆಗಿ ಕರ್ತವ್ಯದಲ್ಲಿದ್ದಾರೆ) ತಾವು ಮೋಸ ಹೋಗಿರುವುದಾಗಿ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರು. ಕೇರಳ ಸಂಘಟನೆಗಳ ನೆರವಿನೊಂದಿಗೆ ಕಚೇರಿ ದಾದಿಯರಿಗೆ ವಸತಿಯನ್ನೇನೋ ಕಲ್ಪಿಸಿತು. ಆದರೆ, ಮಾತುಕತೆಯ ಸಂದರ್ಭದಲ್ಲಿ ದಾದಿಯರಿಗೆ ನ್ಯಾಯವೇನೂ ಸಿಗಲಿಲ್ಲ . ಪರಿಣಾಮವಾಗಿ, ದೀರ್ಘ ಕಾಲದ ನರಳುವಿಕೆಯ ನಂತರ ದಾದಿಯರು ಕೆಲಸವನ್ನು ತ್ಯಜಿಸುವ ಅಥವಾ ಅವಮಾನಕರ ಷರತ್ತುಗಳಿಗೆ ಒಪ್ಪಬೇಕಾದ ಪರಿಸ್ಥಿತಿ ಎದುರಾಯಿತು. ಅದು ಭಾರತೀಯ ರಾಯಭಾರಿ ಕಚೇರಿಯ ದಕ್ಷತೆಯ ಒಂದು ಮುಖ. ಇದು ಕೆಲವು ತಿಂಗಳುಗಳ ಕಾಲ ಭಾರತೀಯ ಸಮುದಾಯದಲ್ಲಿ ವಿವಾದದ ವಿಷಯವಾಗಿ ಚರ್ಚೆಯಲ್ಲಿತ್ತು .

ಬಲು ದುಬಾರಿ ಏರ್‌ ಇಂಡಿಯಾ : 2000 ಸಾಲಿನಲ್ಲಿ ಚರ್ಚೆಯಲ್ಲಿದ್ದುದು ಏರ್‌ ಇಂಡಿಯಾ. ಹಠಾತ್ತನೆ ದರಗಳನ್ನು ಏರಿಸಿದ ಏರ್‌ ಇಂಡಿಯಾದ ನೀತಿ, ಗಲ್ಫ್‌ ಆಕಾಶವನ್ನು ಮತ್ತಷ್ಟು ಎತ್ತರಕ್ಕೊಯ್ದಿತು. ಏಷ್ಯಾದ ಇತರ ರಾಷ್ಟ್ರಗಳ ವಾಯು ದರಗಳಿಗೆ ಹೋಲಿಸಿದರೆ, ಏರ್‌ ಇಂಡಿಯಾದ ದರ ಶೇ. 40 ರಿಂದ 60ರಷ್ಟು ಜಾಸ್ತಿ ಇದೆ. ಇದರಿಂದಾಗಿ ನಷ್ಟ ಅನುಭವಿಸಿದವರು, ಕಡಿಮೆ ಹಾಗೂ ಮಧ್ಯಮ ದರ್ಜೆಯ ವೇತನಗಳನ್ನು ಪಡೆಯುತ್ತಿದ್ದವರು.

ಇತ್ತೀಚಿನ ದಿನಗಳಲ್ಲಂತೂ, ಅಪರಿಣಿತ ಕೆಲಸಗಾರರ ಪಾಲಿಗೆ ತೈಲೋದ್ಯಮದ ಬಾಗಿಲು ಮುಚ್ಚಿದೆ. ಪ್ರಸ್ತುತ, ಅಲ್ಲಿರುವವರನ್ನು ಕೂಡ ಕೆಲಸ ಬಿಡುವಂತೆ ಒತ್ತಾಯಿಸಲಾಗುತ್ತಿದೆ. ಇದರಿಂದಾಗಿ, ಉಂಟಾಗಬಹುದಾದ ಆರ್ಥಿಕ ಪರಿಣಾಮಗಳಾದರೂ ಎಂಥವು ? ಮುಖ್ಯವಾಗಿ ಮಾನವಶಕ್ತಿಯನ್ನು ರಫ್ತು ಮಾಡುವ ಕೇರಳದಂಥ ರಾಜ್ಯದ ಗತಿಯೇನು ? ಒಮ್ಮೆಗೇ, ದೊಡ್ಡ ಸಂಖ್ಯೆಯ ಮಂದಿ ವಾಪಸ್ಸು ತಾಯ್ನಾಡಿಗೆ ಬಂದರೆ, ಅವರಿಗೆಲ್ಲ ಪುನರ್ವಸತಿ ಕಲ್ಪಿಸುವುದೇ ಒಂದು ದೊಡ್ಡ ಸಮಸ್ಯೆಯಾದೀತು.

ಗಲ್ಫ್‌ಗೆ ಯಾವುದಾದರೂ ಭಾರತೀಯ ಅಧಿಕಾರಿ ಆಗಮಿಸಿದಾಗ, ಅವರಲ್ಲಿ ಮನವಿ ಪತ್ರಗಳನ್ನು ಸಲ್ಲಿಸುವುದು ಇಲ್ಲಿನ ಭಾರತೀಯ ಸಂಸ್ಥೆಗಳ ಸಂಪ್ರದಾಯ. ಆದರೆ, ಈ ಸಂಸ್ಥೆಗಳು ನೀಡುವ ಮನವಿ ಪತ್ರಗಳಲ್ಲಿ ಸಾಮ್ಯವೇ ಇರುವುದಿಲ್ಲ . ಈಗಷ್ಟೇ, ಅವರು ತಮ್ಮ ಆದ್ಯತೆಗಳನ್ನು ಗುರ್ತಿಸಲು ತೊಡಗಿದ್ದಾರೆ.

ಇಷ್ಟಕ್ಕೂ, ಗಲ್ಫ್‌ ಭಾರತೀಯರ ಬೇಡಿಕೆಗಳನ್ನು ಈಡೇರಿಸುವುದು ಕಷ್ಟವೇನಲ್ಲ . ದಶಕಗಳ ಕಾಲದಿಂದ ಎನ್‌ಆರ್‌ಐಗಳಿಂದ ಭಾರತೀಯ ಸರ್ಕಾರ ಲಾಭ ಹೊಂದುತ್ತಿದೆ ಅನ್ನುವುದನ್ನು ಮರೆಯಬಾರದು. ವಾಯು ಸಾರಿಗೆ ದರಗಳನ್ನು ಕಡಿಮೆ ಮಾಡುವುದರಿಂದ, ಬಂದು ಹೋಗುವವರ ಸಂಖ್ಯೆಯಲ್ಲಿ ಹೆಚ್ಚಳವಾಗುವುದು, ಇದರಿಂದಾಗಿ ನಷ್ಟದಲ್ಲಿರುವ ಏರ್‌ ಇಂಡಿಯಾಕ್ಕೂ ಲಾಭವಾಗುವುದು.

ಎನ್‌ಆರ್‌ಐಗಳು ದೆಹಲಿಗೆ ರ್ಯಾಲಿ ಒಯ್ಯುವುದು ಸಾಧ್ಯವಿಲ್ಲ

ಅವರು ಯಾರಾದರೂ ಅಧಿಕಾರಿಯ ಆಗಮನಕ್ಕೆ ಕಾಯಬೇಕು, ಮನವಿ ಪತ್ರ ಸಲ್ಲಿಸಬೇಕು. ಆದರೆ, ಈ ರೀತಿ ಭೇಟಿಗಳು, ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮಗಳು ಎಷ್ಟೋ ಆಗಿ ಹೋದರೂ, ಫಲಿತಾಂಶ ಶೂನ್ಯ . ಸರ್ಕಾರ ದೇಶದೊಳಗಿನ ಪ್ರಜೆಗಳಿಗೆ ಅಂಜುವಷ್ಟು , ಸೀಮೆಯಾಚೆಯ ಜನರಿಗೆ ಅಂಜುವುದಿಲ್ಲ . ಎನ್‌ಆರ್‌ಐಗಳು ಎದುರಿಸುತ್ತಿರುವ ದುರಂತ ಇದೇನೆ.

ಇದೇ ಹೊತ್ತಿಗೆ, ಕೇರಳದ ನಯನಾರ್‌ ಸರ್ಕಾರ ಎನ್‌ಆರ್‌ಐಗಳಿಗೆ ಶುಭ ಸುದ್ದಿಯಾಂದನ್ನು ಪ್ರಕಟಿಸಿದೆ. ಗಲ್ಫ್‌ನಿಂದ ವಾಪಸ್ಸು ಬರುವವರಿಗೆ ಪಿಂಚಣಿ ಯೋಜನೆಯಾಂದನ್ನು ಕೇರಳ ಸರ್ಕಾರ ರೂಪಿಸಿದೆ. ಜೀವನದ ಮುಖ್ಯಭಾಗವನ್ನು ಅಲ್ಲಿ ಕಳೆದು ವಾಪಸ್ಸು ಬರುವ ಮಂದಿಗೆ, ಬರಿಗೈ ಅನ್ನಿಸದಿರಲು ಈ ಪಿಂಚಣಿ ಅತ್ಯಗತ್ಯ.

ಪಿಂಚಣಿ ಯೋಜನೆಯಿಂದ ಕೇರಳ ಕಲಾ ಪ್ರೇಮಿಗಳ ಒಕ್ಕೂಟ (ಕಲಾ) ಖುಷಿಯಾಗಿದೆ. ಏಕೆಂದರೆ, ಈ ಯೋಜನೆ ಒಕ್ಕೂಟದ ಕೂಸು, ಕನಸು. ಒಕ್ಕೂಟದ ಅನೇಕ ಬೇಡಿಕೆಗಳ ಪಟ್ಟಿಯಲ್ಲಿ ಈ ಯೋಜನೆಗೇ ಆದ್ಯತೆ ನೀಡಲಾಗಿತ್ತು . ಕೊನೆಯದಾಗಿ, ಅನಿವಾಸಿ ಭಾರತೀಯರ ಬೇಡಿಕೆಗಳ ಪಟ್ಟಿಯಲ್ಲಿರುವ ಕೆಲವು ಮುಖ್ಯಾಂಶಗಳನ್ನು ಗಮನಿಸಬಹುದು.

 • ಏರ್‌ ಇಂಡಿಯಾ ಟಿಕೆಟ್‌ದರಗಳನ್ನು ಇಳಿಸಬೇಕು, ನ್ಯಾಯಬದ್ಧವಾಗಿ ಅಳವಡಿಸಬೇಕು
 • ಗಲ್ಫ್‌ನಿಂದ ವಾಪಸ್ಸು ಬರುವವರಿಗೆ ಪುನರ್ವಸತಿ ಕಲ್ಪಿಸುವುದನ್ನು ಕಾನೂನುಬದ್ಧಗೊಳಿಸಬೇಕು
 • ಗಲ್ಫ್‌ನಲ್ಲಿ ನಿಧನರಾದ ಭಾರತೀಯರ ದೇಹಗಳನ್ನು ತವರಿಗೆ ಸಾಗಿಸಲು, ವಾಯುದರದಲ್ಲಿ ರಿಯಾಯಿತಿ ನೀಡುವುದು
 • ಸರ್ಕಾರ ಹಾಗೂ ರಾಯಭಾರ ಕಚೇರಿಗಳು, ಕನಿಷ್ಠ ವೇತನ ಹಾಗೂ ಸೌಲಭ್ಯಗಳನ್ನು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ಎಚ್ಚರ ವಹಿಸುವುದು
 • ಮುಖಪುಟ / ಲೋಕೋಭಿನ್ನರುಚಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more