ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆಗಳನ್ನು ಮುಚ್ಚುವುದರಲ್ಲಿ ಅರ್ಥವಿಲ್ಲ - ಡಾ. ರಾಜಾರಾಮಣ್ಣ

By Staff
|
Google Oneindia Kannada News

ಬೆಂಗಳೂರು : ಶಾಲೆ ಎಷ್ಟೇ ಕೆಟ್ಟದಾದರೂ, ಅದನ್ನು ಅಭಿವೃದ್ಧಿಪಡಿಸಬೇಕೆ ಹೊರತು ಮುಚ್ಚುವುದರಲ್ಲಿ ಅರ್ಥವಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಪ್ರಸಿದ್ಧ ಅಣು ವಿಜ್ಞಾನಿ ಹಾಗೂ ಶಿಕ್ಷಣ ಸುಧಾರಣೆ ಕಾರ್ಯಪಡೆಯ ಅಧ್ಯಕ್ಷ ಡಾ.ರಾಜಾರಾಮಣ್ಣ 2 ಸಾವಿರ ಶಾಲೆಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತಮ್ಮ ಅಸಮಾಧಾನ ಸೂಚಿಸಿದ್ದಾರೆ.

ಮಕ್ಕಳ ಸಂಖ್ಯೆ ಕಡಿಮೆ ಇದೆ ಎನ್ನುವ ಕಾರಣಕ್ಕಾಗಿ ಶಾಲೆ ಮುಚ್ಚುವುದು ಪರಿಹಾರ ಅಲ್ಲ . ಬದಲಾಗಿ, ಮಕ್ಕಳನ್ನು ಆಕರ್ಷಿಸುವ ಕೆಲಸವನ್ನು ಮಾಡಬೇಕು. ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳನ್ನು ಉತ್ತಮಪಡಿಸಬೇಕು ಎಂದು ರಾಜಾರಾಮಣ್ಣ ಅಭಿಪ್ರಾಯಪಟ್ಟರು. ಪಿಇಎಸ್‌ ಶಿಕ್ಷಣ ಸಂಸ್ಥೆಗಳು ಹಾಗೂ ಪೇಸರ್‌ ಪ್ರತಿಷ್ಠಾನ ಸಂಯುಕ್ತವಾಗಿ ದತ್ತು ಪಡೆದಿರುವ ವಾಜರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಶಾಲೆ ಬಿಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಶೌಚಾಲಯವಿಲ್ಲ ಎಂದು ಹೆಣ್ಣು ಮಕ್ಕಳು ಶಾಲೆಗೇ ಬರುತ್ತಿಲ್ಲ . ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಕುಡಿಯುವ ನೀರು, ಕಟ್ಟಡ, ಶೌಚಾಲಯ ಸೌಕರ್ಯಗಳನ್ನು ಒದಗಿಸಬೇಕು. ಗ್ರಾಮೀಣ ಶಾಲೆಗಳ ಶಿಕ್ಷಕರಿಗೂ ವಸತಿ, ನೀರು ಮುಂತಾದ ಸೌಲಭ್ಯಗಳ ಕಲ್ಪಿಸಬೇಕಾದ ಅಗತ್ಯವಿದೆ ಎಂದರು.

ದತ್ತು ಪಡೆದ ಶಾಲೆಗಳಲ್ಲಿ ಕಂಪ್ಯೂಟರ್‌ ಶಿಕ್ಷಣ ಸೌಲಭ್ಯ

ಪಿಇಎಸ್‌ ಶಿಕ್ಷಣ ಸಂಸ್ಥೆ ದತ್ತು ಪಡೆದಿರುವ ಎಲ್ಲಾ 12 ಶಾಲೆಗಳಲ್ಲಿಯೂ ಬರುವ ವರ್ಷದಿಂದ ಕಂಪ್ಯೂಟರ್‌ ಶಿಕ್ಷಣ ನೀಡಲಾಗುವುದು ಹಾಗೂ ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಈ ಶಾಲೆಗಳಲ್ಲಿಯೂ ಕಲ್ಪಿಸಲಾಗುವುದು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಇಎಸ್‌ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಕಾರ್ಯದರ್ಶಿ ಪ್ರೊ.ಎ.ಆರ್‌. ದೊರೆಸ್ವಾಮಿ ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸರಿಯಾಗಿಲ್ಲ ಎನ್ನುವ ಭಾವನೆಯನ್ನು ಹೋಗಲಾಡಿಸಲು ನಾವು ಶ್ರಮಿಸುತ್ತಿದ್ದೇವೆ. ರಾಜಾರಾಮಣ್ಣ ಸಮಿತಿಯ ಶಿಫಾರಸ್ಸಿನಂತೆ ಶಾಲೆಗಳಲ್ಲಿ ನೀರು, ಶೌಚಾಲಯ ಮುಂತಾದ ಸೌಲಭ್ಯ ಕಲ್ಪಿಸಿದ್ದೇವೆ. ನಮ್ಮ ಪ್ರಯತ್ನಗಳಿಂದಾಗಿ, ದತ್ತು ತೆಗೆದುಕೊಂಡಿರುವ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ದೊರೆಸ್ವಾಮಿ ಸಂತಸ ವ್ಯಕ್ತಪಡಿಸಿದರು.

ಶಾಸಕ ಆರ್‌. ಅಶೋಕ್‌, ಬೆಂಗಳೂರು ನಗರ ಜಿಲ್ಲಾ ವಿಶೇಷಾಧಿಕಾರಿ ಎಸ್‌.ಎನ್‌. ನಾಗರಾಜ್‌ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X