ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಮ್ಮೇನಹಳ್ಳೀಲಿ ಮಲೇರಿಯಾಕಾಟವೋ ಕಾಟ, ಕಿಂದರಿಜೋಗಿ ಎಲ್ಲಿ ?

By Staff
|
Google Oneindia Kannada News

ಹೊಸದುರ್ಗ : ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನಲ್ಲಿರುವ ಬೊಮ್ಮೇನಹಳ್ಳಿಗೆ ಈ ವರ್ಷ ಬಂದಿರುವುದು ಎಂದಿನಂಥಾ ಬೇಸಗೆಯಲ್ಲ , ಸುಡು ಬೇಸಗೆ. ಬಂದ ಬೇಸಗೆ ಬರಿಗೈನಲ್ಲಿ ಬರಲಿಲ್ಲ , ಮಲೇರಿಯಾವನ್ನೂ ಕರಕೊಂಡು ಬಂದಿದೆ.

ಬೆಂಗಳೂರಿನ ಯಾವುದೋ ಬಡಾವಣೆಯ ಕಿರಿದಾದ ಕಿರಿಕಿರಿ ರಸ್ತೆಯಾಂದರ ಕಿಷ್ಕಿಂದೆಯಂಥಾ ಓಣಿಯಾಂದನ್ನು ಬೊಮ್ಮೇನಹಳ್ಳಿ ಹೋಲುತ್ತದೆ. 200 ಮನೆಗಳ ಪುಟ್ಟಗ್ರಾಮವಿದು. ಪ್ರತಿ ಮನೆಗೂ ಮಲೇರಿಯಾ ಪಾದಬೆಳೆಸಿದೆ. ಹಿರಿ ಕಿರಿಯರೆನ್ನುವ ಭೇದವಿಲ್ಲದೆ ಒಬ್ಬರಲ್ಲಾ ಒಬ್ಬರು ಜ್ವರದಿಂದ ಹಾಸಿಗೆಗೆ. ಸುಮಾರು ಒಂದು ತಿಂಗಳಿನಿಂದ ಊರನ್ನು ಕಾಡುತ್ತಿರುವ ಈ ಕಾಯಿಲೆಗೆ ಮೊನ್ನೆ ತಾನೇ 55 ವರ್ಷದ ವೃದ್ಧೆ ಬಲಿಯಾಗಿದ್ದಾರೆ.

ಪ್ರಸ್ತುತ, ಗ್ರಾಮದ ಕನಿಷ್ಠ 150 ಮಂದಿ ಮಲೇರಿಯಾದಿಂದ ಬಳಲುತ್ತಿದ್ದಾರೆ. ಅಂದಮಾತ್ರಕ್ಕೆ ಗ್ರಾಮ ಕೊಳಗೇರಿಯಂತಿದೆ ಎಂದೇನಲ್ಲ . ಸಾಕಷ್ಟು ಸ್ವಚ್ಛತೆಯ ಪಾಠ ಕಲಿತಿಕೊಂಡಿರುವ ಊರಿದು. ಎಲ್ಲ ಊರುಗಳಲ್ಲಿರುವಂತೆ ಇಲ್ಲೂ ಸೊಳ್ಳೆಗಳಿವೆ. ಇಷ್ಟಕ್ಕೂ ಬೊಮ್ಮೇನಹಳ್ಳಿಗೆ ಮಲೇರಿಯಾ ಹೊಸದೇನೂ ಅಲ್ಲ . 1993, 97 ರಲ್ಲಿ ಇಂಥದ್ದೇ ಪರಿಸ್ಥಿತಿ ಇತ್ತು . ನಾಲ್ಕು ವರ್ಷಗಳಿಗೊಮ್ಮೆ ಊರು ಮಲೇರಿಯಾಕ್ಕೆ ತುತ್ತಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಸುತ್ತಲ ಮತ್ತೋಡು, ಗುಡ್ಡದ ನೇರಲಕೆರೆ, ತಂಡಗ, ಕಂಚಿಪುರ ಭಾಗಗಳಲ್ಲಿಯೂ ಮಲೇರಿಯಾ ಹಬ್ಬುತ್ತಿದೆ.

ಊರನ್ನು ಮಲೇರಿಯಾ ಕಾಡುತ್ತಿದ್ದರೂ, ಔಷಧಿಗಾಗಿ ಸಮೀಪದ ಬೆಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 7 ಕಿಮೀ ದೂರವನ್ನು ಸವೆಸಬೇಕಾದ ಶೋಚನೀಯ ಸ್ಥಿತಿ ರೋಗಿಗಳದಾಗಿದೆ. ಸುತ್ತಮುತ್ತಲ ಏಳೆಂಟು ಹಳ್ಳಿಗರ ಅವಶ್ಯಕತೆಗಳನ್ನು ಪೂರೈಸಬೇಕಾದ ಸ್ಥಿತಿಯಲ್ಲಿರುವ ಬೆಲಗೂರು ಆಸ್ಪತ್ರೆಯಲ್ಲೂ ಮೂಲಭೂತ ಸೌಕರ್ಯಗಳು ಸಮರ್ಪಕವಾಗೇನೂ ಇಲ್ಲ .

ಇನ್ನು ಕೆಲವೇ ದಿನಗಳಲ್ಲಿ ಚಿಕ್ಕಮಗಳೂರು ಕಡೆ ಕಾಫಿ ತೋಟಕ್ಕೆ ಕೂಲಿಗೆ ಹೋದವರು ವಾಪಸ್ಸು ಬರುತ್ತಾರೆ. ಅವರೊಂದಿಗೆ ಮಲೇರಿಯಾ ಕೂಡ ಊರನ್ನು ಪ್ರವೇಶಿಸುತ್ತದೆ ಅನ್ನುತ್ತಾರೆ ಊರಿನ ಹಿರೀಕರು. ಅಲ್ಲಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.

ಸದ್ಯಕ್ಕೆ ಬೊಮ್ಮೇನಹಳ್ಳಿ ಜನರಿಗೆ ಜರೂರಾಗಿ ಬೇಕಾಗಿರುವುದು ಚಿಕಿತ್ಸೆ . ಊರಿನಲ್ಲಿಯೇ ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರವೊಂದನ್ನು ಸ್ಥಾಪಿಸುವುದರಿಂದ ರೋಗಿಗಳು ಏಳೆಂಟು ಕಿಮೀ ನಡೆಯುವುದು ತಪ್ಪುತ್ತದೆ. ಸಂಚಾರಿ ಆರೋಗ್ಯ ಕೇಂದ್ರವೊಂದನ್ನು ಸ್ಥಾಪಿಸುವುದು ಸಾಧ್ಯವಾದರೆ, ಸುತ್ತ ಮುತ್ತಲ ಗ್ರಾಮಸ್ಥರಿಗೂ ಅನುಕೂಲವಾಗುತ್ತದೆ.

(ಇನ್ಫೋ ವಾರ್ತೆ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X