ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂದಗಿ ಬಳಿಯ ಈ ಊರಿಗೆ ಸ್ವಾತಂತ್ರ್ಯ ಬಂದಿದ್ದು ಮೊನ್ನೆಯಷ್ಟೇ!

By Staff
|
Google Oneindia Kannada News

ಸಿಂದಗಿ : ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಯಾವಾಗ? ಎಂದರೆ, ಶಾಲಾ ಬಾಲಕನೂ ಕೂಡ 1947 ಎಂದು ಹೇಳಿ ಬಿಡುತ್ತಾನೆ. ಆದರೆ, ಸಿಂದಗಿಗೆ ಕೇವಲ 45 ಕಿ.ಮೀಟರ್‌ ದೂರದಲ್ಲಿರುವ ಹಾಳಗುಂಡಕನಾಳ ಗ್ರಾಮಸ್ಥರನ್ನು ನೀವು ಈ ಪ್ರಶ್ನೆ ಕೇಳಿದರೆ, ಅವರು ಅಂಜದೆ, ಅಳುಕದೆ, ತಮಗೆ ಸ್ವಾತಂತ್ರ್ಯ ಸಿಕ್ಕಿದ್ದು 2001ರಲ್ಲಿ ಎಂದೇ ಹೇಳುತ್ತಾರೆ?

ಏನು ದೇಶಕ್ಕೇ ಸ್ವಾತಂತ್ರ್ಯ ಸಿಕ್ಕರೂ ಹಾಳಗುಂಡಕನಾಳದ ಜನತೆಗೆ ಸ್ವಾತಂತ್ರ್ಯ ದೊರಕಿರಲಿಲ್ಲವೇ? ಎಂದು ಹುಬ್ಬೇರಿಸುವ ಅಗತ್ಯ ಇಲ್ಲ. ದೇಶಕ್ಕೆ ಸ್ವತಂತ್ರ ಬಂದು 53 ವರ್ಷಗಳು ಕಳೆದ ಬಳಿಕ ಈ ಊರಿಗೆ ಈಗ ಬಸ್‌ ಬಂದಿದೆ. ಬಸ್ಸೇ ಕಾಣದ ಊರಿನ ಜನತೆ ತಮ್ಮೂರಿಗೆ ಬಸ್‌ ಬಂದ ದಿನವೇ ತಮಗೆ ಸ್ವಾತಂತ್ರ್ಯ ದೊರಕಿದ್ದು ಎನ್ನುತ್ತಾರೆ.

ಈ ಊರಿನಿಂದ ಮುಖ್ಯರಸ್ತೆಗೆ ಅಥವಾ ತಾಲೂಕು ಕೇಂದ್ರಕ್ಕೆ ಬರಲೂ ಆಗದಂತ ಹದಗೆಟ್ಟ ರಸ್ತೆ ಇತ್ತು. ಪ್ರತಿ ಬಾರಿ ಚುನಾವಣೆ ನಡೆದಾಗಲೂ ಜನಪ್ರತಿನಿಧಿಗಳು ರಸ್ತೆ ಮಾಡಿಸುವ ಭರವಸೆ ನೀಡುತ್ತಲೇ ಬಂದಿದ್ದರು. ಕಾಲ್ನಡಿಗೆಗೂ ಅಯೋಗ್ಯವಾಗಿದ್ದ ರಸ್ತೆಯಲ್ಲಿ ಜನ ಕತ್ತೆಗಳನ್ನೇ ತಮ್ಮ ಸಾಗಣೆಯ ವಾಹನವಾಗಿ ಬಳಸುತ್ತಿದ್ದರು. ಈಗಲೂ ಇದಕ್ಕೆ ಮೂಕ ಸಾಕ್ಷಿಯಾಗಿ ಹಲವಾರು ಕತ್ತೆಗಳು ಈ ಊರಿನಲ್ಲಿವೆ.

ವಾಟಾಳ್‌ ನಾಗರಾಜರ ಪ್ರತಿಭಟನೆಗೆ, ಮಳೆ ಆಗದಿದ್ದಾಗ ಮದುವೆಗೆ ಅಣಿಯಾಗಿ ಸುದ್ದಿ ಮಾಡುತ್ತಿದ್ದ ಕತ್ತೆಗಳು ಇಲ್ಲಿ ಸದ್ದು ಗದ್ದಲವಿಲ್ಲದೆ, ಹಾಳಗುಂಡಕನಾಳದ ಜನರ ಸೇವೆ ಮಾಡುತ್ತಾ ದಿನ ಕಳೆಯುತ್ತಿದ್ದವು. ಈಗ ಬಸ್‌ ಬಂದಮೇಲೆ ಕತ್ತೆ ಚಾಕರಿಗೆ ತೆರೆಬಿದ್ದಿದೆ.

ಈ ಊರಿನ ಸ್ಥಿತಿ ಎಷ್ಟರಮಟ್ಟಿಗಿತ್ತೆಂದರೆ, ಬಸ್ಸೂ ಕಾಣದ ಊರಿಗೆ ಹೆಣ್ಣು ಕೊಡುವುದು ಹೇಗೆ ಎಂದು ಜನ ಹಿಂಜರಿಯುತ್ತಿದ್ದುದೂ ಉಂಟು. ಈಗ ಶಾಸಕ ಶರಣಪ್ಪ ಸುಣಗಾರ ಅವರು ಊರಿಗೆ ಸಂಪರ್ಕ ರಸ್ತೆ ಕಲ್ಪಿಸಿದ್ದಷ್ಟೇ ಅಲ್ಲದೆ ಬಸ್‌ ಸೌಕರ್ಯವನ್ನೂ ಕಲ್ಪಿಸಿದರು. ಊರಿಗೆ ಬಸ್‌ ಬಂದ ದಿನ ಜನ ತಮಗೆ ಸ್ವತಂತ್ರ ಬಂತು ಎಂದು ಹರ್ಷದಿಂದ ಕುಣಿದು ಕುಪ್ಪಳಿಸಿದರು.

ಈ ಹರ್ಷಕ್ಕೆ ನಿಜವಾದ ಕಾರಣ ಇನ್ನಾದರೂ ತಮ್ಮೂರಿಗೆ ನೆರೆಯೂರಿನವರು ಹೆಣ್ಣು ಕೊಡಲು ಹಿಂದೇಟು ಹಾಕುವುದಿಲ್ಲ ಎಂಬುದೇ ಆನಂದ ಎಂದು ಮತ್ತೆ ಹೇಳುವ ಅಗತ್ಯ ಇಲ್ಲ. ಸ್ವಾತಂತ್ರ್ಯ ಬಂದ ನಂತರ ಈ ಊರಿಗೆ ಬಸ್‌ ಬಂತೋ, ಬಸ್‌ ಬಂದ ನಂತರ ಈ ಊರಿಗೆ ಸ್ವಾತಂತ್ರ್ಯ ಬಂತೋ? ಎಂಬ ಪ್ರಶ್ನೆಗೆ ಉತ್ತರ ಕೊಡುವುದು ಕಷ್ಟ. ಕತ್ತೆಗಳಿಗಂತೂ ಇನ್ನು ಮುಂದೆ ಖಂಡಿತಾ ಸ್ವತಂತ್ರ ಸಿಕ್ಕಂತೆಯೇ!

(ರಾಯಚೂರು ಪ್ರತಿನಿಧಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X