ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶರಣಾದ ಭಾರತ, ಆಸ್ಟ್ರೇಲಿಯಾಗೆ 10 ವಿಕೆಟ್‌ ಜಯ

By Staff
|
Google Oneindia Kannada News

ಮುಂಬಯಿ : ತೆಂಡೂಲ್ಕರ್‌ ನಿರ್ಗಮನದ ನಂತರ ಭಾರತದ ಇತರೆ ಕ್ರಿಕೆಟಿಗರು ಪೆರೇಡ್‌ ಮಾಡುವುದರೊಂದಿಗೆ ಭಾರತ ಕಾಂಗರೂಗಳಿಗೆ ಅಕ್ಷರಶಃ ಶರಣಾಯಿತು. 2ನೇ ಪಾಳಿಯಲ್ಲಿ 219 ರನ್‌ಗಳಿಗೆ ಕುಸಿದ ಭಾರತ ಗೆಲ್ಲಲು ಆಸ್ಟ್ರೇಲಿಯನ್ನರಿಗೆ 47 ರನ್‌ಗಳ ಪುಡಿ ಗುರಿಯನ್ನು ಕೊಟ್ಟಿತು. ಏಳೇ ಏವರ್‌ಗಳಲ್ಲಿ ಈ ಗುರಿ ಮುಟ್ಟಿದ ಆಸ್ಟ್ರೇಲಿಯಾ ಮೊದಲ ಟೆಸ್ಟ್‌ ಗೆದ್ದು, ವಿಜಯೋತ್ಸವ (ಸತತ 16 ನೇ ಟೆಸ್ಟ್‌ ಗೆಲುವು) ಮುಂದುವರೆಸಿತು.

ಗುರುವಾರ ಮುಂಜಾನೆ ಮೂರನೇ ದಿನದಾಟ ಶುರುವಾದಾಗ ನೆಲಕಚ್ಚಿ ಆಡುವ ದ್ರಾವಿಡ್‌ ಹಾಗೂ ಸಚಿನ್‌ ಇರಾದೆ ಸ್ಪಷ್ಟವಾಗಿತ್ತು. ಅದನ್ನು ಅವರು ಚಾಚೂ ತಪ್ಪದೆ ನಡೆಸಿಕೊಂಡೂ ಬಂದರು. ಆದರೆ ಅದೃಷ್ಟ ಕೈಕೊಟ್ಟಿತು. ಭಾರತ 154 ರನ್‌ ಗಳಿಸಿದ್ದಾಗ ಮಾರ್ಕ್‌ ವಾ ಎಸೆತಗಳಿಗೆ ದಿಟ್ಟ ಉತ್ತರ ಕೊಡುತ್ತಿದ್ದ ಸಚಿನ್‌ ಹೊಡೆದ ಚೆಂಡನ್ನು ಪಾಂಟಿಂಗ್‌ ತಮ್ಮ ಬಲಕ್ಕೆ ಜಿಂಕೆಯಂತೆ ಜಿಗಿದು ಹಿಡಿದರು. ಅಲ್ಲಿಗೆ ಚಿಗುರುತ್ತಿದ್ದ ಭಾರತದ ಪಂದ್ಯಪೋಟಿಯ ಆಸೆ ಕಮರಿತು. ನಂತರ ಎಲ್ಲರೂ ಬಂದಾ ಪುಟ್ಟ ಹೋದ ಪುಟ್ಟ ಎಂಬಂತೆ ಫಾರ್ಮಾಲಿಟಿ ತೀರಿಸಿದರು. ಅದೃಷ್ಟ ವಂಚಿತ ಸಚಿನ್‌ ಔಟಾದ ಮರುಕ್ಷಣವೇ ಭಾರತದ ಸಂಪೂರ್ಣ ಶರಣಾಗತಿಯ ಭಾವ ವ್ಯಕ್ತವಾಗತೊಡಗಿತು.

ಭಾರತದ ಪರ ಸಚಿನ್‌ 65 (10 ಬೌಂಡರಿ), ರಮೇಶ್‌ 44, ದ್ರಾವಿಡ್‌ 39 (197 ಎಸೆತ!) ಹಾಗೂ ನಯನ್‌ ಮೊಂಗಿಯಾ 28 ರನ್‌ ಗಳಿಸಿದರು. ಅಗರ್ಕರ್‌ ‘ಶೂನ್ಯ ಸಂಪಾದನೆ ವೀರ’ ಪಟ್ಟವನ್ನು ಉಳಿಸಿಕೊಂಡರು. ಶ್ರೀನಾಥ್‌ ಹಾಗೂ ಸಾಂಘ್ವಿ ಕೂಡ ರನ್‌ ಗಳಿಸುವ ಗೊಡವೆಗೇ ಹೋಗಲಿಲ್ಲ, ಆಗಲೂ ಇಲ್ಲ ಅನ್ನಿ. ರನ್‌ ಓಡೋದೆಂದರೆ ಆಗದೆಂಬ ಸ್ವಭಾವದ ಸೌರವ್‌ (1) ತಮ್ಮ ಜೋಭದ್ರತನಕ್ಕೇ ಬಲಿಯಾಗಿ, ರನ್‌ಔಟ್‌ ಆದರು. ಆಸ್ಟ್ರೇಲಿಯಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಮಾರ್ಕ್‌ ವಾ ಹಾಗೂ ಗಿಲ್ಲೆಸ್ಪಿ ತಲಾ 3 ವಿಕೆಟ್‌ ಪಡೆದರೆ, ಮೆಕ್‌ ಗ್ರಾತ್‌ 2 ಹಾಗೂ ವಾರ್ನ್‌ 1 ವಿಕೆಟ್‌ ಕಿತ್ತರು.

ಪಂದ್ಯವನ್ನು ಬೇಗ ಮುಗಿಸುವ ತರಾತುರಿಯಲ್ಲೇ ಆಡಿದ ಆಸ್ಟ್ರೇಲಿಯಾದ ಆರಂಭಿಕ ಜೋಡಿ ಕೇವಲ 7 ಓವರ್‌ಗಳಲ್ಲಿ ಆಟ ಮುಗಿಸಿತು. ಹೇಡನ್‌ 21 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್‌ ಇದ್ದ 28 ರನ್‌ ಗಳಿಸಿದರೆ, ಸ್ಲೇಟರ್‌ 4 ಬೌಂಡರಿಗಳಿದ್ದ 19 ರನ್‌ ಗಳಿಸಿದರು. ಭಾರತದ ಕೈಯಿಂದ ಪಂದ್ಯ ಕಸಿದುಕೊಂಡ ಕಾಂಗರೂಗಳ ದೊಡ್ಡ ಕೈ, ಮೊದಲ ಇನ್ನಿಂಗ್ಸ್‌ನಲ್ಲಿ ಮಿಂಚಿನ ಶತಕ ಗಳಿಸಿದ ಗಿಲ್‌ಕ್ರಿಸ್ಟ್‌ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರವಾದರು.

ಆಸ್ಟ್ರೇಲಿಯಾ ತನ್ನ 16ನೇ ಟೆಸ್ಟ್‌ ವಿಜಯ ದಕ್ಕಿಸಿಕೊಂಡರೆ, ಭಾರತ ತನ್ನ ಪೂರ್ಣ ಪ್ರಮಾಣದ ಅಳ್ಳೆದೆಯ ಆಟ ಹಾಗೂ ಸಚಿನ್‌ ಡಿಪೆಂಡೆನ್ಸಿಯನ್ನು ತೋರಿಕೊಂಡಿತು.

ಸ್ಕೋರು : ಮೊದಲ ಇನ್ನಿಂಗ್ಸ್‌ - ಭಾರತ 176, ಆಸ್ಟ್ರೇಲಿಯಾ 349

ಎರಡನೇ ಇನ್ನಿಂಗ್ಸ್‌- ಭಾರತ 219, ಆಸ್ಟ್ರೇಲಿಯಾ 47/0

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X