ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬಯಿ ಟೆಸ್ಟ್‌ : ಮೂವರು ವೇಗಿಗಳ ಆಡಿಸುವ ಸಂಭವ

By Oneindia Staff
|
Google Oneindia Kannada News

ಮುಂಬಯಿ : ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರದಿಂದ ಪ್ರಾರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ವೇಗತ್ರಯರಾದ ಶ್ರೀನಾಥ್‌, ಅಜಿತ್‌ ಅಗರ್ಕರ್‌ ಹಾಗೂ ಜಾಹೀರ್‌ ಖಾನ್‌ ಎಲ್ಲರನ್ನೂ ಆಡಿಸುವ ಸಂಭವವಿದೆ.

ಹುಲ್ಲಿನ ಎಳೆಗಳಿಂದ ತುಂಬಿದ ಪಿಚ್‌ ವೇಗಿಗಳಿಗೆ ಹೆಚ್ಚು ನೆರವಾಗುವುದೆಂಬ ನಿಚ್ಚಳ ಅಭಿಮತ ಭಾರತ ತಂಡದಲ್ಲಿ. ಈ ಕಾರಣ ಲೆಗಿ ನರೇಂದ್ರ ಹಿರ್ವಾನಿ ಮತ್ತು ಆಫ್‌ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌, ಈ ಇಬ್ಬರು ಸ್ಪಿನ್ನರ್‌ಗಳನ್ನು ಮಾತ್ರ ಆಡಿಸುವ ಇರಾದೆಯಿದೆ. ನೆಟ್‌ ಪ್ರಾಕ್ಟೀಸ್‌ ನಂತರ ಸುದ್ದಿಗಾರರೊಂದಿಗೆ ಮಾತಿಗೆ ಸಿಕ್ಕಿದ ಭಾರತ ತಂಡದ ನಾಯಕ ಸೌರವ್‌ ಗಂಗೂಲಿ, ಪಿಚ್ಚು ಹೆಚ್ಚು ರನ್‌ ದಕ್ಕಿಸಿಕೊಡುವಂತಿದೆ. ವಿಕೆಟ್‌ ಚೆಲ್ಲದೆ ಮನವಿಟ್ಟು ಆಡಿದಲ್ಲಿ ಸಾಕಷ್ಟು ರನ್‌ ದೋಚಬಹುದು. 11 ಆಟಗಾರರ ಅಂತಿಮ ತಂಡವನ್ನು ಮಂಗಳವಾರ ಆಟ ಪ್ರಾರಂಭವಾಗುವ ಮುನ್ನವಷ್ಟೇ ಪ್ರಕಟಿಸುತ್ತೇವೆ ಎಂದರು.

ಮುಂಬಯಿ ವಿರುದ್ಧದ ಮೂರು ದಿನಗಳ ಪಂದ್ಯದಲ್ಲಿ ಎಡಗೈ ಬೆರಳುಗಳ ನಡುವೆ ಗಾಯವಾಗಿ ಹೊಲಿಗೆ ಹಾಕಿಸಿಕೊಂಡಿದ್ದ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್‌ಮನ್‌ ಮಾರ್ಕ್‌ ವಾ ಈಗ ಗುಣಮುಖರಾಗಿದ್ದಾರೆ. ಅವರು ಮಂಗಳವಾರ ಆಡಲಿದ್ದಾರೆ. ಸೋಮವಾರದ ನೆಟ್‌ ಪ್ರಾಕ್ಟೀಸ್‌ನಲ್ಲೂ ಅವ ಆರಾಮಿದ್ದ. ಆದರೆ ಆತನನ್ನು ಸ್ಲಿಪ್‌ನಲ್ಲಿ ನಿಲ್ಲಿಸಲಾಗದು; ಗಾಯ ಇನ್ನೂ ಪೂರ್ತಿ ಮಾಗಿಲ್ಲವಲ್ಲ. ಅದೇನೂ ಅಂಥ ಹೊಡೆತ ಕೊಡೋದಿಲ್ಲ. ನಮ್ಮಲ್ಲಿ ಫೀಲ್ಡರ್‌ಗಳಿಗೇನೂ ಕೊರತೆಯಿಲ್ಲ. ಪಿಚ್‌ನಲ್ಲಿ ಹುಲ್ಲು ಎದ್ದಿರೋದು ನೋಡಿ ನನಗೆ ಆಶ್ಚರ್ಯವಾಗಿದೆ. ನಮ್ಮ ಅಂತಿಮ ತಂಡವನ್ನು ಮಂಗಳವಾರ ಪ್ರಕಟಿಸುತ್ತೇವೆ ಎಂದು ಕಾಂಗರೂ ನಾಯಕ ಸ್ಟೀವ್‌ ವಾ ಹೇಳಿದರು.

ಬಹುತೇಕ ಆಯ್ಕೆಯಾಗುವ ತಂಡ ಇಂತಿದೆ- ಶಿವಸುಂದರ್‌ ದಾಸ್‌, ಶಡಗೋಪನ್‌ ರಮೇಶ್‌, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡೂಲ್ಕರ್‌, ಸೌರವ್‌ ಗಂಗೂಲಿ (ನಾಯಕ), ನಯನ್‌ ಮೊಂಗಿಯಾ(ವಿಕೆಟ್‌ ಕೀಪರ್‌), ಜಾವಗಲ್‌ ಶ್ರೀನಾಥ್‌, ಅಜಿತ್‌ ಅಗರ್ಕರ್‌, ಜಾಹಿರ್‌ ಖಾನ್‌, ನರೇಂದ್ರ ಹಿರ್ವಾನಿ ಹಾಗೂ ಹರ್ಭಜನ್‌ ಸಿಂಗ್‌.

ಚಾಲೆಂಜರ್ಸ್‌ ಸರಣಿಯಲ್ಲಿ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾಗಿದ್ದ ಹೇಮಾಂಗ್‌ ಬದಾನಿಗೆ ಮೊದಲ ಟೆಸ್ಟ್‌ನಲ್ಲಿ ಆಡುವ ಅವಕಾಶ ಸಿಗದಿರುವ ಸಾಧ್ಯತೆಗಳೇ ಹೆಚ್ಚು. ಈವರೆಗೆ ಹಲವಾರು ಟೆಸ್ಟ್‌ಗಳಲ್ಲಿ ಆಡಿರುವ ವಿವಿಎಸ್‌ ಲಕ್ಷ್ಮಣ್‌ ಕೂಡ ಈ ಟೆಸ್ಟ್‌ನಲ್ಲಿ ಬ್ಯಾಟ್‌ ಹಿಡಿಯುವ ಅವಕಾಶವಿದ್ದಂತಿಲ್ಲ. ಆಸ್ಟ್ರೇಲಿಯಾ ವೇಗಿ ಮೆಕ್‌ಗ್ರಾತ್‌ ಅವರನ್ನೇ ನೆಚ್ಚಿಕೊಳ್ಳಲಿದ್ದು, ಲೆಗಿ ಶೇನ್‌ ವಾರ್ನ್‌ ಮತ್ತು ಆಫ್‌ ಸ್ಪಿನ್ನರ್‌ ಕೊಲಿನ್‌ ಮಿಲ್ಲರ್‌ ಆಡಲಿದ್ದಾರೆ.

ಮುಂಬಯಿ ವಿರುದ್ಧದ ಪಂದ್ಯದಲ್ಲಿ ಸಾಕಷ್ಟು ತಿಣುಕಾಡಿದ ಆಸ್ಟ್ರೇಲಿಯಾ ನೈತಿಕವಾಗಿ ಪಂದ್ಯದಲ್ಲಿ ಪರದಾಡಲಿದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಗಂಗೂಲಿ, ಹಾಗೆ ಅಂದುಕೊಳ್ಳುವುದು ಶುದ್ಧ ತಪ್ಪು. ಅದು ಮೊದಲ ದರ್ಜೆ ಪಂದ್ಯವಷ್ಟೆ. ಆದರೆ ಟೆಸ್ಟ್‌ ಪಂದ್ಯದ ಸ್ವರೂಪವೇ ಬೇರೆ ಎಂದರು.

ನಮ್ಮ ಆಟಗಾರರು ಚುರುಕಾಗಿದ್ದಾರೆ. ಸಾಕಷ್ಟು ಕಲಿತು, ಒಂದು ತಂಡವಾಗಿ ಮೈದಾನಕ್ಕೆ ಇಳಿಯಲಿದ್ದಾರೆ. ಸಮಯ ಮಾಡಿಕೊಂಡು ಕಾಸು ಕೊಟ್ಟು ಬರುವ ಅಭಿಮಾನಿಗಳಿಗೆ ಖಂಡಿತ ನಿರಾಸೆಯಾಗದು ಎಂದು ಭಾರತ ತಂಡದ ಕೋಚ್‌ ಜಾನ್‌ ರೈಟ್‌ ಹೇಳುವಾಗ ತಮ್ಮ ಮೊದಲ ಚಾಲೆಂಜ್‌ನಲ್ಲಿ ಗೆಲ್ಲುವ ಆತ್ಮವಿಶ್ವಾಸದ ನಗು ಮುಖ ತುಂಬಿತ್ತು.

(ಪಿಟಿಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X