ಗೇರುಸೊಪ್ಪೆ ಯೋಜನೆ : ಮೊದಲ ಘಟಕ ಕಾರ್ಯಾರಂಭ
ಬೆಂಗಳೂರು : ರಾಜ್ಯದ ವಿದ್ಯುತ್ ಸಂಪತ್ತು ಮಂಗಳವಾರದಿಂದ 37 ಮೆಗಾ ವ್ಯಾಟ್‌ನಷ್ಟು ಹೆಚ್ಚಾಗಿದೆ. ಇದು ಗೇರುಸೊಪ್ಪೆ ಹೈಡ್ರೋ ವಿದ್ಯುತ್ ಯೋಜನೆಯ ಪ್ರಥಮ 60 ಮೆಗಾವ್ಯಾಟ್ ಸಾಮರ್ಥ್ಯದ ಘಟಕದ ಕೊಡುಗೆ.
ಕಳೆದ ಮೂರು ದಿನಗಳಿಂದ ಪ್ರಾಯೋಗಿಕ ಕಾರ್ಯಾಚರಣೆಯಲ್ಲಿದ್ದ ಶರಾವತಿ ಜಲಾನಯನ ಪ್ರದೇಶದಲ್ಲಿನ ಘಟಕ ಎಲ್ಲಾ ಪರೀಕ್ಷೆಗಳಲ್ಲೂ ಪಾಸಾಗಿದೆ. 240 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆ ಪೂರ್ಣವಾದ ಬಳಿಕ ಸಾಕಷ್ಟು ದಶಲಕ್ಷಗಟ್ಟಲೆ ಯೂನಿಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಯೋಜನೆಯ ಎರಡನೇ ಘಟಕ ಮೇ ತಿಂಗಳಾಂತ್ಯದ ಹೊತ್ತಿಗೆ ತಲೆ ಎತ್ತಲಿದೆ. ಡಿಸೆಂಬರ್‌ನಲ್ಲಿ ಮೂರನೇ ಘಟಕ ಹಾಗೂ ಮುಂದಿನ ವರ್ಷ ಮಾರ್ಚ್ ಹೊತ್ತಿಗೆ ನಾಲ್ಕನೇ ಘಟಕ ಕಾರ್ಯಾರಂಭ ಮಾಡಲಿವೆ. 500 ಕೋಟಿ ರುಪಾಯಿ ವೆಚ್ಚದ ಈ ಯೋಜನೆಯ ನಾಲ್ಕೂ ಘಟಕಗಳು ವಿದ್ಯುತ್ ಉತ್ಪಾದಿಸಲು ಶುರುಮಾಡಿದ ನಂತರ ರಾಜ್ಯಕ್ಕೆ ವಾರ್ಷಿಕ 625 ದಶಲಕ್ಷ ಯೂನಿಟ್ ಲಭ್ಯವಾಗಲಿದೆ. ಕೆಪಿಟಿಸಿಎಲ್ ಪ್ರಕಟಣೆ ಈ ವಿಷಯವನ್ನು ಪ್ರಕಟಿಸಿದೆ.
(ಯುಎನ್‌ಐ)












Click it and Unblock the Notifications