ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕು ಕಟ್ಟಿ ಕೊಡುವ ಬಳೆ, ರಿಬ್ಬನ್ನು ...

By Staff
|
Google Oneindia Kannada News

ದಿನದಿಂದ ದಿನಕ್ಕೆ ಬಿಸಿಲು ಬಲಿಯುತ್ತಿದ್ದಂತೆ ಮಾಘದ ಕಳೆಗೂ ಏರುಮುಖ. ಬೆಂಗಳೂರಿನಲ್ಲೇ ನೋಡಿ. ಕಲ್ಯಾಣ ಮಂಟಪಗಳ ತುಂಬೆಲ್ಲಾ ಗಿಜಿಗಿಜಿ ಗಮಲು. ಬೆವರು ಬಸಿಯುವ ಹವೆಯ ನಡುವೆಯೂ ಭಾರದ ಜರಿ ಸೀರೆಗಳುಟ್ಟು ಸಂಭ್ರಮಿಸುತ್ತ ಧಾರೆಗೆ ಸಾಕ್ಷಿಯಾಗುವ ನೀರೆಯರು. ಇದೇ ಹೊತ್ತಿನಲ್ಲಿ ಹೊಸಿತಿಲಲ್ಲೇ ಇವೆ- ಶಿವರಾತ್ರಿ, ನಂತರದ ಹೆಜ್ಜೆಗೆ ಯುಗಾದಿ. ಈಗಾಗಲೇ, ಜಾಗರಣೆಯ ಸಿದ್ಧತೆಗಳೂ ನಡೆದಿವೆ. ಪಂದ್ಯ ಪೋಟಿಗಳು, ಸಂಗೀತೋತ್ಸವಗಳು, ಹರಿಕಥೆ.. ಏನೆಲ್ಲಾ . ಮನರಂಜನೆಯದೇ ಮೇಲುಗೈ.

ಅದೇ ಸಂಭ್ರಮ ಕರಾವಳಿಯಲ್ಲೂ . ಮೊನ್ನೆ ಪೊಳಲಿಯಲ್ಲಿ ನಡೆದ ರಾಜ ರಾಜೇಶ್ವರಿ ಅಮ್ಮನ ಬ್ರಹ್ಮ ಕಲಶೋತ್ಸವಕ್ಕೆ ಕಮ್ಮಿ ಅಂದರೆ ಅರವತ್ತು ಸಾವಿರ ಜನ ಕಲೆತಿದ್ದರು ಎಂದು ನಿಧಾನಗತಿಯಲ್ಲಿ ಸುದ್ದಿ ರವಾನಿಸಿರುವ ನಮ್ಮ ಮಂಗಳೂರು ಬಾತ್ಮೀದಾರರು ತಿಳಿಸಿದ್ದಾರೆ. ಮಂಗಳೂರಿನಿಂದ ಪೊಳಲಿಗೆ ಉಚಿತ ಬಸ್ಸು ವ್ಯವಸ್ಥೆಯೂ ಇತ್ತಂತೆ. ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಅಮ್ಮನಿಗೆ ಬೆಳ್ಳಿರಥ ಸಮರ್ಪಿಸಿ ಕೈ ಮುಗಿದರು.

ಬದುಕು ಯಾಕೆ ಸಂಭ್ರಮವನ್ನು ಬಯಸುತ್ತದೆ. ಗುಜರಾತಿನ ಭೂಕಂಪದಂಥಾ ದುರಂತ ಸಂಭವಿಸಿದಾಗ, ಎಲ್ಲಕ್ಕೂ ವಿಮುಖವಾಗುವ ಮನಸು, ಬಂಧುಸಮೂಹದ ನಡುವೆಯೂ ಒಂಟಿಯೆಂದು ರೋಧಿಸುವ ಮನಸು, ಪೊಳಲಿಯ ಉತ್ಸವದಲ್ಲಿ ಹಕ್ಕಿಯಾಗುತ್ತದೆ. ಅದೆಂಥಾ ಸೋಜಿಗ ಚಿತ್ತದ್ದು. ಕ್ಷಣಕ್ಕೊಮ್ಮೆ ನಿರಿಗೆ ಸರಿಪಡಿಸಿಕೊಳ್ಳುತ್ತ , ನಿಮಿಷಕ್ಕೊಮ್ಮೆ ಮುಗ್ಗರಿಸುವ ಪುಟ್ಟಿಯ ಹುಮ್ಮಸ್ಸಿನ ಗರ್ಭದಲ್ಲಿ ಇರುವುದಾದರೂ ಏನು? ಅವಳು ಅಮ್ಮನಲ್ಲಿ ಬೇಡಿಕೊಂಡದ್ದಾದರೂ ಏನು? ಎಸ್ಟೇಟು, ಕಾರು, ಬಂಗಲೆ, ನೆಮ್ಮದಿ, ಆರೋಗ್ಯ... ಬಳೆ, ರಿಬ್ಬನ್ನು.. ಏನಾದರೂ ಇರಬಹುದು, ಅವಳ ಪುಟ್ಟ ಹೃದಯದ ದೊಡ್ಡ ಜಗತ್ತಿನಲ್ಲಿ .

ಇಷ್ಟಕ್ಕೂ, ಬದುಕಿನ ಪ್ರತಿಯಾಂದು ಕ್ರಿಯೆಗೂ ಅರ್ಥ ಹೆಕ್ಕುತ್ತ ಹೋಗುವುದು ವೃಥಾ ಕಸರತ್ತು ಅನ್ನಿಸುತ್ತದೆ. ಶುಕ್ರವಾರ (ಸತತ ಎರಡನೆ ದಿನ) ರಾಜ್ಯದಲ್ಲಿ ಅತ್ಯಂತ ಕನಿಷ್ಠ ತಾಪಮಾನ(14 ಡಿ.ಸೆ) ಬೆಳಗಾವಿಯಲ್ಲೇಕೆ ದಾಖಲಾಗಿತ್ತು ಅನ್ನುವಂಥಾ ಪ್ರಶ್ನೆಯಾಗಲೀ, ಒಣಹವೆ ರಾಜ್ಯದಲ್ಲಿ ಈವತ್ತೂ ಯಾಕೆ ಮುಂದುವರಿದಿತ್ತು ಅನ್ನುವುದಾಗಲೀ, ನಾಳೆಯೂ ಒಣಹವೆಯಲ್ಲೆ ರಾಜ್ಯ ಬೇಯುವುದು ಅನಿವಾರ್ಯ ಅನ್ನುವುದಾಗಲೀ ಅಷ್ಟೊಂದು ಮುಖ್ಯವೆನ್ನಿಸುವುದಿಲ್ಲ . ಅದೆಲ್ಲಾ ಕಾಲನ ವ್ಯಾಪಾರ. ಋತು ವಿಲಾಸ. ಈ ನಡುವೆ, ಸಿಕ್ಕಿದ್ದನ್ನು ಹೆಕ್ಕಿಕೊಂಡು, ಸಣ್ಣ ಪುಟ್ಟ ಘಟನೆಗಳ ಮೂಲಕವೇ ಬದುಕನ್ನು ಕಟ್ಟಿಕೊಂಡು ಬದುಕುವುದು ಒಂದು ಸವಾಲಿನ ಕಲೆ. ಅದು ಎಲ್ಲರಿಗೂ ಸಿದ್ಧಿಸಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X