ವಾಹಿನಿಗಳ ವಾರ್ತಾ ಪ್ರಸಾರದ ಬಿರುಕಿನಲ್ಲಿ ಸಂತ್ರಸ್ತ ಮನಸ್ಸುಗಳು
ಅಹಮದಾಬಾದ್ : ಮೂಡು ಮುಳುಗುವ ರವಿ ಶಶಿಯರಂತೆಯೇ ಗುಜರಾತಿನ ಜನತೆಗೆ ಆಗಾಗ ಸಂಭವಿಸುವ ಭೂ ಕಂಪಗಳೂ ಸಾಮಾನ್ಯವಾಗಿವೆ. ಮೊನ್ನೆ ತಾನೆ, ಅಪ್ಪ ಅಮ್ಮನ ಗುರ್ತಿಸಲು ಕಲಿತ ಮಗುವೂ ಕಂಪನದ ಬಗ್ಗೆ ತಿಳಿವಳಿಕೆ ಹೊಂದಿದೆ. ಈವತ್ತು ಗುಜರಾತಿಗಳು ಭೂಕಂಪಕ್ಕೆ ಅಂಜುತ್ತಿಲ್ಲ . ಆದರೆ, ಟಿವಿ ಸೆಟ್ಟುಗಳ ಕಂಡರೆ ಅವರು ಹೌಹಾರುತ್ತಿದ್ದಾರೆ.
ಜನವರಿ 26 ರಂದು ಭೂಕಂಪ ಸಂಭವಿಸಿದ್ದೇ ತಡ- ವಾಹಿನಿಗಳು ಪೈಪೋಟಿಗಿಳಿದವು. ಭೂಕಂಪದ ತೀವ್ರತೆಯೆಷ್ಟು , ಕಟ್ಟಡದಡಿ ಸಿಕ್ಕಿ ಬಿದ್ದವರು, ನುಜ್ಜುಗುಜ್ಜಾದವರು, ಜೀವ ಕಳಕೊಂಡ ಅಪ್ಪ ಅಮ್ಮನ ಹೆಣಗಳ ನಡುವೆ ದಾರಿ ಮಾಡಿಕೊಂಡು ಬಾಲಕಿಯ ರಕ್ಷಿಸಿದ್ದು , ಅಪ್ಪ ಅಮ್ಮ ಅಪ್ಪಚ್ಚಿಯಾದರು ಹಾಲುಗಲ್ಲದ ಹಸುಳೆ ಜೀವಂತವಾಗಿ ಉಳಿದದ್ದು , ಕಾಲು ಕಳಕೊಂಡವರು, ಕೈ ಕಳಕೊಂಡವರು, ರಕ್ತ ಕುಣಿದು ಬಣ್ಣ ಬದಲಿಸಿಕೊಂಡ ನೆಲ, ಸಂತ್ರಸ್ತರ ರೋಧನ, ಮತ್ತೆ ನೆಲ ನಡುಗಬಹುದೆನ್ನುವ ಭವಿಷ್ಯ- ದಿನದ ಇಪ್ಪತ್ತನಾಲ್ಕು ಗಂಟೆಯೂ ಇಂಥದ್ದೇ ತುಣುಕುಗಳು. ಭೂಕಂಪಗಳೇನೂ ಪ್ರತಿ ವರ್ಷವೂ ಸಂಭವಿಸುವುದಿಲ್ಲವಲ್ಲ ಅನ್ನುವ ಆತಂಕ ವಾಹಿನಿಗಳಿಗೆ ಇದ್ದೀತೇನೊ ಅನ್ನುವ ಧಾವಂತ. ಈ ದೃಶ್ಯಗಳನ್ನೆಲ್ಲಾ ಕಣ್ಣು ತುಂಬಿಕೊಂಡ ಗುಜರಾತಿ ಮನಸ್ಸುಗಳೀಗ ಭೂಕಂಪದ ಫೋಬಿಯಾಕ್ಕೊಳಗಾಗಿವೆ.
ಸಂತ್ರಸ್ತ ಮನಸ್ಸುಗಳಿಗೆ ಬರೆ : ಕೃಷ್ಣಬೆನ್ ಪಟೇಲ್. ಅಹಮದಾಬಾದ್‌ನ ಬಾಪುನಗರ್ ನಿವಾಸಿ. 22 ವಯಸ್ಸಿನ ಯುವತಿ. ಭೂಕಂಪ ಸಂಭವಿಸಿದಾಗ ಅಷ್ಟೇನೂ ಧೃತಿಗೆಡದ ಈ ಯುವತಿ, ತಾಸುಗಟ್ಟಲೆ ನಿರಂತರವಾಗಿ ವಾಹಿನಿಗಳ ವಾರ್ತಾ ಪ್ರಸಾರವನ್ನು (ಶನಿವಾರ, ಫೆ.3) ವೀಕ್ಷಿಸಿದ್ದೇ ತಡ, ತನ್ನ ಭವಿಷ್ಯದ ಕುರಿತು ಕಂಗಾಲಾದಳು. ಕೊನೆಗೆ, ಆಕೆಗೆ ಹೊಳೆದದ್ದು - ಮೂರು ವರ್ಷದ ಮಗುವಿನೊಂದಿಗೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹತ್ತಿಸಿಕೊಳ್ಳುವುದು. ಮಗು ಸುಟ್ಟು ಹೋಯಿತು. ಅರೆಬರೆ ಸತ್ತ ಕೃಷ್ಣ ಆಸ್ಪತ್ರೆಯಲ್ಲಿದ್ದಾಳೆ. ಅವಳ ಮೇಲೀಗ ಕೊಲೆಯ ಆರೋಪ ದಾಖಲಾಗಿದೆ.
ಉತ್ತರ ಗುಜರಾತಿನ ಬನಾಸ್‌ಕಾಂತ ಜಿಲ್ಲೆಯ ಪಾಲನ್‌ಪುರ್‌ನಿಂದ ವರದಿಯಾಗಿರುವ ಮತ್ತೊಂದು ವರದಿ- ವಿಲಾಸ್(35) ಅನ್ನುವ ಮಹಿಳೆ, ಬ್ಯಾಂಕ್ ಉದ್ಯೋಗಿ. ಉದ್ಯೋಗದ ನಿಮಿತ್ತ ರಾಜಸ್ತಾನದ ಉದಯ್‌ಪುರ್‌ಗೆ ವರ್ಗವಾಗಿದ್ದಳು. ಭೂಕಂಪಕ್ಕೆ ಸಂಬಂಧಿಸಿದ ವಾರ್ತೆಗಳು, ಈಕೆಯನ್ನು ಎಷ್ಟರ ಮಟ್ಟಿಗೆ ಘಾಸಿಗೊಳಿಸದವೆಂದರೆ, ವಾರ್ತಾ ಪ್ರಸಾರ ನೋಡ ನೋಡುತ್ತಳೇ ಕುಸಿದಳು. ಆಕೆ ಮೆದುಳಿನ ಆಘಾತದಿಂದ ಸತ್ತಿದ್ದಾಳೆಂದು ಆಸ್ಪತ್ರೆಯಲ್ಲಿ ಘೋಷಿಸಲಾಯಿತು. ವಿಲಾಸ್ ಅತ್ಯಂತ ಸೂಕ್ಷ್ಮಮತಿ. ಆಕೆ ಭುಜ್‌ಗೆ ತೆರಳಲು, ಸಂತ್ರಸ್ತರಿಗೆ ನೆರವಾಗಲು ಬಯಸಿದ್ದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಆದರೀಗ, ವಿಲಾಸ್ ಮನೆಯವರನ್ನೇ ಸಂತ್ರಸ್ತಳಾಗಿಸಿದ್ದಾಳೆ.
ಹೆಚ್ಚುತ್ತಿರುವ ಮಾನಸಿಕ ಸಮಸ್ಯೆಗಳು : ಸಂತ್ರಸ್ತರ ಪರಿಹಾರ ಕಾಮಗಾರಿಗಳು ನಡೆಯುತ್ತಿರುವ ಬೆನ್ನಿಗೇ ಇಂಥಾ ಘಟನೆಗಳು ಹೆಚ್ಚುತ್ತಿರುವುದು ಸ್ಥಳೀಯ ಪ್ರಭುತ್ವಕ್ಕೆ ತಲೆ ನೋವು ತಂದಿದೆ. ಪ್ರಸಿದ್ಧ ಮನೋಶಾಸ್ತ್ರಜ್ಞ ಡಾ. ಮೃಗೇಶ್ ವೈಷ್ಣವ್ ಅವರು ಇಂಥಾ ಅನೇಕ ದುರಂತಗಳನ್ನು ಕಂಡಿದ್ದಾರೆ. ಭೂಕಂಪದಿಂದ ರಕ್ಷಿಸಲ್ಪಟ್ಟ ಪ್ರತಿಶತ 30 ರಿಂದ 40 ಮಂದಿ ಮಾನಸಿಕ ಆಘಾತಕ್ಕೆ ತುತ್ತಾಗುತ್ತಿದ್ದಾರೆ. ಅಸಹಾಯಕತೆ, ಭವಿಷ್ಯದಲ್ಲಿನ ಆತಂಕ, ಸದ್ಯದ ದುರಂತ, ಭೂಕಂಪ ಮರುಕಳಿಸಿದರೇನು ಅನ್ನುವ ಭಯ- ಅನೇಕ ಪ್ರಶ್ನೆಗಳಿಂದ ಜರ್ಝರಿತರಾದವರು ಕೊನೆಗೆ ಶರಣಾಗುವುದು ಆತ್ಮಹತ್ಯೆಗೆ. ಮನಸ್ಸುಗಳನ್ನು ಘಾಸಿಗೊಳಿಸುವಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಗಳ ಪಾತ್ರ ಸಾಕಷ್ಟಿದೆ ಅನ್ನುವುದು ಅವರ ಸ್ಪಷ್ಟ ಅಭಿಪ್ರಾಯ.
ಗುಜರಾತಲ್ಲೀಗ ಮಾನಸಿಕ ತಜ್ಞರ ಹಿಂಡೇ ನೆರೆದಿದೆ. ಸಂತ್ರಸ್ತ ಮನಸ್ಸುಗಳನ್ನು ವಾಸ್ತವಿಕ ನೆಲೆಗಟ್ಟಿಗೆ ತರುವಲ್ಲಿ ಅವರು ಹೆಣಗುತ್ತಿದ್ದಾರೆ. ಅವರದ್ದು ವಾಹಿನಿಗಳಂತೆ ವಾಣಿಜ್ಯೋದ್ದೇಶವಲ್ಲ . ಅಂದ ಮಾತ್ರಕ್ಕೆ, ಸತ್ಯವನ್ನು ಬಿಂಬಿಸುತ್ತಿರುವ ವಾಹಿನಿಗಳನ್ನು ಹಳಿಯುವಂತೆಯೂ ಇಲ್ಲ . ಸೂಕ್ಷ್ಮ ಸನ್ನಿವೇಶಗಳ ನಡುವಿನ ಗೆರೆಗಳನ್ನು ಅರ್ಥ ಮಾಡಿಕೊಳ್ಳುವ ಮಾನವೀಯ ಸೂಕ್ಷ್ಮತೆ ದಕ್ಕಿದಲ್ಲಿ ಇಂಥಾ ಅನರ್ಥಗಳ ಕಡಿಮೆ ಮಾಡಬಹುದು.
(ಯುಎನ್‌ಐ)
![]() | ||
ಮುಖಪುಟ |