ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌- ಇಂಡಿಯಾ 2001, ‘ಹಕ್ಕಿ’ ಹಾರುತಿದೆ ನೋಡಿದಿರಾ !

By Staff
|
Google Oneindia Kannada News

ಬೆಂಗಳೂರು : ಕಾಮನಬಿಲ್ಲಿನ ಕ್ಯಾನ್‌ವಾಸ್‌ ಮೇಲೆ ಹೊಗೆಗಳ ರೇಖಾ ಚಿತ್ರ. ಕಣ್ಣರೆಪ್ಪೆ ಯ ಒಂದೊಂದು ಹೊಡೆತಕ್ಕೂ ಬಾನೆತ್ತರ ಹಾರುತ್ತಾ ಸಣ್ಣಗಾಗುವ ಬಣ್ಣದ ‘ಪುಟ್ಟ ಹಕ್ಕಿ’ಗಳೇ ಪೆನ್ಸಿಲ್‌ಗಳು. ಹಕ್ಕಿಗಳೆಂದರೆ ಜೀವ ತುಂಬಿಕೊಂಡಿರುವವಲ್ಲ ; ಗ್ಯಾಸೋಲಿನ್‌ ತುಂಬಿಕೊಂಡವು. ಫೆಬ್ರವರಿ 7ರಿಂದ ಪ್ರಾರಂಭವಾಗಲಿರುವ ಏರೋ ಇಂಡಿಯಾ- 2001ರ ಮುನ್ನಾ ತಾಲೀಮು, 3 ದಿನಗಳ ಕಾಲದ ಏರ್‌ ಇಂಡಿಯಾ- 2001 ಭಾನುವಾರ ಶುರುವಾದದ್ದು ಹೀಗೆ.

ರಾಜ್ಯಪಾಲೆ ವಿ.ಎಸ್‌.ರಮಾದೇವಿ ಹಗುರ ವಿಮಾನಗಳ ಈ ರಂಗುರಂಗಿನ ಹಾರಾಟಕ್ಕೆ ಹಸಿರು ನಿಶಾನೆ ತೋರಿದರು. 4 ಸೆಸ್ನ, ಒಂದು ಎಚ್‌ಪಿಟಿ- 32, ಕ್ಸೆನ್‌ ಏರ್‌, ಹಂಸ- 3 ಮೊದಲಾದ ಹಗುರ ಚೆಲುವ ಚೆಲುವೆಯರು ನಭ ಶೋಧಿಸಲು ಹಾರಿದವು. ಇನ್ನು 3 ದಿನಗಳ ಬಳಿಕ, ಅಂದರೆ ಫೆಬ್ರವರಿ 6ನೇ ತಾರೀಖು ಇವು ಸ್ವಸ್ಥಾನಕ್ಕೆ ಮರಳುವ ಮುನ್ನ 850 ನಭೋ ಮೈಲಿಗಳನ್ನು ಸುತ್ತಲಿವೆ. ಇವುಗಳ ಮೇಲ್ವಿಚಾರಕನಾಗಿ ಚೇತಕ್‌ ಹೆಲಿಕಾಫ್ಟರ್‌ ಕೂಡ ಹಾರಿದೆ.

ಎರಡೂವರೆ ಸಾವಿರ ಕಿಲೋಗಿಂತಲೂ ಕಡಿಮೆ ತೂಕದ ಹಗುರ ವಿಮಾನಗಳ ಈ ತಾಲೀಮಿಗೆ ಗೋವಾ ಹಾಗೂ ಬೀದರ್‌ಗಳು ಜಂಕ್ಷನ್‌ಗಳಾಗಲಿವೆ. ರಾತ್ರಿ ಹೊತ್ತು ಈ ಬಣ್ಣದ ಸುಂದರ ಸುಂದರಿಯರಿಗೆ ರೆಸ್ಟು. ಅಗತ್ಯ ಬಿದ್ದಾಗ ಇಂಧನ ತುಂಬಿಸುವ ಮಾರ್ಷಲ್‌ ಆಗಿ ಚೇತಕ್‌ ಜೊತೆಗಿದ್ದೇ ಇರುತ್ತದೆ. ಫೆಬ್ರವರಿ 7ರಿಂದ ಪ್ರಾರಂಭವಾಗುವ ಏರೋ ಇಂಡಿಯಾ- 2001ರ ಕರ್ಟನ್‌ ರೈಸರ್ರೇ ಇಷ್ಟೊಂದು ಸೊಗಸಾಗಿದೆ.

ಐಟಿ ಹಿಂದೋಡದೆ ಏವಿಯೇಷನ್‌ಗೂ ಬನ್ನಿ : ಹಗುರ ವಿಮಾನಗಳ ಹಾರಾಟಕ್ಕೆ ಹಸಿರು ನಿಶಾನೆ ತೋರಿದ ನಂತರ ಮಾತನಾಡಿದ ರಾಜ್ಯಪಾಲರು ಒಂದು ಹಿಡಿ ಸಲಹೆ ಕೊಟ್ಟರು-

1. ವ್ಯವಸಾಯದಲ್ಲಿ ವಿಮಾನ ಬಳಸಿಕೊಂಡು ಮುಂದೆ ಬರಲು ಸಾಧ್ಯವಿದೆ.

2. ಬರೇ ಮಾಹಿತಿ ತಂತ್ರಜ್ಞಾನದ ಹಿಂದೆ ಓಡೋದು ಬಿಟ್ಟು ವೈಮಾನಿಕ ಕ್ಷೇತ್ರಕ್ಕೂ ಸೇರಬೇಕು.

3. ವಿಮಾನ ಯಾನದ ನಿಗದಿತ ಸಮಯದಲ್ಲಿ ಏರು ಪೇರಾಗೋದನ್ನ ತಡೆಯಬೇಕು. ತುಟ್ಟಿಯಾಗಿರುವ ವಿಮಾನ ಯಾನ ದರವನ್ನ ಅಗ್ಗವಾಗಿಸಿ, ಸಾಮಾನ್ಯನೂ ವಿಮಾನ ಹತ್ತುವಂತೆ ಮಾಡಬೇಕು.

ಇವೆಲ್ಲಾ ನಮ್ಮ ಆಸ್ತಿ : ಅಂದಿನ ಪುಷ್ಪಕ್‌ನಿಂದ ಇಂದಿನ ಎಲ್‌ಸಿಎವರೆಗೆ ದೇಶ ಕಂಡುಹಿಡಿರುವ ವಿಮಾನಗಳು ನಮ್ಮ ಆಸ್ತಿ. ಸಂಶೋಧನೆ ಮತ್ತು ಅಭಿವೃದ್ಧಿ ಕೇತ್ರದಲ್ಲಿ ನಮ್ಮ ದೇಶದ ಪ್ರಗತಿಗೆ ಕನ್ನಡಿ ಹಿಡಿದಿವೆ ಈ ಶೋಧನೆಗಳು. ಯುವಕರು ಈ ಕ್ಷೇತ್ರದ ಬಗ್ಗೆ ಒಲವು ಬೆಳೆಸಿಕೊಂಡು ಮುಂದೆ ಬರಬೇಕು. ಇ್ಲಲಿ ಭವಿಷ್ಯವಿದೆ. ದೇಶದ ವಿವಿಧೆಡೆಗಳಲ್ಲಿ ಇಂಥ ರೇಸ್‌ಗಳನ್ನು ಆಯೋಜಿಸಲು ಎಚ್‌ಎಎಲ್‌ ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ಕೆಲವು ಸ್ಥಳೀಯ ಹಾರಾಟದ ಕ್ಲಬ್ಬುಗಳೊಡನೆ ಒಡಂಬಡಿಕೆಗೆ ಸಂಸ್ಥೆ ಸಹಿ ಹಾಕಲಿದೆ ಎಂದು ಎಚ್‌ಎಎಲ್‌ ಅಧ್ಯಕ್ಷ ಡಾ. ಸಿ.ಜಿ. ಕೃಷ್ಣದಾಸ್‌ ಹೇಳಿದರು.

2003ಕ್ಕಾಗಿ ಈ ತಾಲೀಮು : ಏರೋನಾಟಿಕಲ್‌ ಸೊಸೈಟಿ ಆಫ್‌ ಇಂಡಿಯಾದ ಏರ್‌ ಮಾರ್ಷಲ್‌ ಪಿ.ರಾಜ್‌ಕುಮಾರ್‌ ಮಾತನಾಡುತ್ತಾ, ಮಾನವ ಗಗನಕ್ಕೆ ವಿಮಾನ ಹಾರಿಸಿದ 100 ವರ್ಷದ ಆಚರಣೆಯ ಸಂದರ್ಭ- 2003ರಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ವಿಮಾನ ರೇಸಿಗೆ ಇಂಥ ಹಾರಾಟಗಳು ಅಭ್ಯಾಸಕ್ಕೆ ಅವಕಾಶ ಮಾಡಿಕೊಡುತ್ತವೆ. ಪೈಲಟ್‌ಗಳ ಒಟ್ಟಾರೆ ಸಾಮರ್ಥ್ಯ ಬಹುಮಾನದ ಮಾನದಂಡವಾಗಿರುತ್ತದೆ. ಕೇವಲ ವಿಮಾನಗಳ ವೇಗವಷ್ಟೇ ಅಲ್ಲ ಎಂದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X