ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್ತಿನಲ್ಲಿ ಎನ್‌ಆರ್‌ಐಗಳಿಗೂ ಪ್ರಾತಿನಿಧ್ಯ ಕೊಡಿ- ದುಬೈ ಉದ್ಯಮಿ

By Staff
|
Google Oneindia Kannada News

* ಮೃದುಲ ಕೃಷ್ಣ

ದುಬೈ : ನಲವತ್ತೊಂದು ವರ್ಷಗಳ ಹಿಂದೆ ಒಪ್ಪೊತ್ತು ಊಟ ಸಿಕ್ಕಿದರೆ ಸಾಕೆಂದು ಭಾರತದಿಂದ ದುಬೈಗೆ ಬಂದಿದ್ದ ಹುಡುಗ ಈ ಹೊತ್ತು ಇಲ್ಲಿ ಮನೆಮಾತು. ಯಾವ ದೇಶ ತನ್ನನ್ನು ಹೊರಗಟ್ಟಿತೋ (ಭಾರತ) ಅದೇ ದೇಶದಿಂದ ಇಲ್ಲಿಗೆ ಬಂದ ಜನರ ಮೂಲಭೂತ ಸಮಸ್ಯೆಗಳನ್ನು ನೀಗಿಸಲು ಟೊಂಕಕಟ್ಟಿ ನಿಂತು, ಅದರಲ್ಲಿ ಯಶಸ್ವಿಯೂ ಆಗಿರುವ ವ್ಯಕ್ತಿ ರಾಮ್‌ ಬುಕ್ಸಾನಿ.

ಜೀವನದಲ್ಲಿ ಸಾಕಷ್ಟು ನೊಂದು- ಬೆಂದು, ಪಾಕ ಬಿಟ್ಟಿರುವ ಈ ಅಸಾಮಾನ್ಯನ ನೆನಪಿನಂಗಳ, ಅನುಭವ ಮಂಟಪ ಇಲ್ಲಿದೆ....

ಆಗ ನನಗೆ 18 ವರ್ಷ. 5 ದಿನಗಳ ಕಾಲ ಹಡಗಿನಲ್ಲಿ ಪ್ರಯಾಣಿಸಿ ಇಲ್ಲಿಗೆ ಬಂದೆ. ಅಬ್ಬಾ, ಆ ದಿನಗಳು ಎಷ್ಟು ಕರಾಳ? ಕುಡಿಯೋ ನೀರಲ್ಲಿ ಸೀಮೆಎಣ್ಣೆ ವಾಸನೆ. ಯಾಕೆಂದರೆ ನಾವು ನೀರು ತರುತ್ತಿದ್ದುದು ಸೀಮೆಎಣ್ಣೆ ಕ್ಯಾನಿನಲ್ಲಿ. ಈಗಿನಂತೆ ಸೌದಿ ಅಂದರೆ ಕಂಡಾಪಟ್ಟೆ ಉದ್ಯೋಗ ಸಿಗುತ್ತದೆ ಅನ್ನುವಂಥ ಕಾಲ ಅದಾಗಿರಲಿಲ್ಲ.

1959. ಐಟಿಎಲ್‌ ಕಂಪನಿಗೆ ಗುಮಾಸ್ತನಾಗಿ ಸೇರಿದೆ. ಕಷ್ಟಪಟ್ಟೆ. ಆಗ ನಾನು ನಿದ್ರಿಸದ ರಾತ್ರಿಗಳೆಷ್ಟೋ? ಊಟ ಮಾಡದ ಹೊತ್ತುಗಳೆಷ್ಟೋ? ನಾನು ಪಟ್ಟ ಕಷ್ಟ ಫಲ ಕೊಟ್ಟಿದೆ. ಇವತ್ತು ಅದೇ ಕಂಪನಿಯಲ್ಲಿ ನಾನು ಒಬ್ಬ ನಿರ್ದೇಶಕ! (ಹೀಗೆನ್ನುವಾಗ ಸಾರ್ಥಕತೆಯ ಸಂಕೇತವಾದ ಹೂವಿನಂಥ ಮುಗುಳ್ನಗುವನ್ನು ರಾಮ್‌ ಮುಖ ಬಿಂಬಿಸುತ್ತದೆ)

ಆ ದಿನಗಳಲ್ಲಿ ದೀಪಾವಳಿ ಬಂತೆಂದರೆ ಇಲ್ಲಿರುವ ಭಾರತೀಯರ ಮೋಜಿಗೆ ಎಣೆಯೇ ಇಲ್ಲ . ಕುಣಿತ, ಹಾಡು- ಹಸೆ ಹೊನಲಾಗುತ್ತಿತ್ತು. ಆಗ ದುಬೈಯನ್ನು ಆಳುತ್ತಿದ್ದ ಶೇಕ್‌ ರಶೀದ್‌ ಬಿನ್‌ ಶಈದ್‌ ಆಲ್‌ ಮಕ್ಟೋಮ್‌ ಅನೇಕ ಭಾರತೀಯರ ಮನೆಗಳಿಗೆ ಭೇಟಿ ಕೊಟ್ಟು ಸಿಹಿಯುಣ್ಣುತ್ತಿದ್ದರು. ಊಟ- ತಿಂಡಿಗೂ ಪರದಾಡುತ್ತಿದ್ದ ಭಾರತೀಯರ ಬಂಜರು ಜೀವನದಲ್ಲಿನ ಹಸಿರು ಆ ದೀಪಾವಳಿ.

ಅಲ್ಲಿದ್ದುದು ಒಂದೇ ಶಾಲೆ, ವಿದ್ಯಾರ್ಥಿಗಳು ಮಾತ್ರ ಮೂವರು

ನಾನು ದುಬೈಗೆ ಬಂದಾಗ ಇಲ್ಲಿ ಒಂದೇ ಒಂದು ಶಾಲೆ ಇತ್ತಷ್ಟೆ. 1957ರಲ್ಲಿ ಹೇಮ್‌ಕಲಾ ಎಂಬುವರು ಭಾರತೀಯ ವಿದ್ಯಾಲಯ ಅನ್ನೋ ಶಾಲೆ ತೆರೆದರು. ಈಗ ಆ ಮಹಾತಾಯಿ ಇಲ್ಲ. ತನ್ನ ಗಂಡನ ಕಳೆದುಕೊಂಡ ನೋವನ್ನು ಮರೆಯುವ ಉದ್ದೇಶದಿಂದ ಆಕೆ ಕಟ್ಟಿದ ಆ ಶಾಲೆ ಶುರುವಾದಾಗ ಆಕೆಯ ಮೂರು ಮಕ್ಕಳಷ್ಟೇ ಅದರ ವಿದ್ಯಾರ್ಥಿಗಳು. ನಂತರ ಅದು ಇಂಡಿಯನ್‌ ಸ್ಕೂಲ್‌ ಆಯಿತು. ಈಗ ನಾನು ಅದರ ಅಧ್ಯಕ್ಷ. 8,500 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ವಿದೇಶದಲ್ಲಿರುವ ಭಾರತೀಯರ ಅತಿ ದೊಡ್ಡ ಹಾಗೂ ಒಳ್ಳೆಯ ಶಾಲೆಗಳಲ್ಲಿ ಇದೂ ಒಂದು.

ಅದೇಕೋ ನನಗೆ ಬರೇ ಹೊಟ್ಟೆ ಬಟ್ಟೆ ನೋಡಿಕೊಂಡು ಸುಮ್ಮನಿರಲು ಮನಸ್ಸಾಗಲಿಲ್ಲ. ಇಲ್ಲಿರುವ ಭಾರತೀಯರನ್ನು ಆರ್ಥಿಕವಾಗಿ ಮೇಲೆತ್ತುವ ಆಸೆಯಾಯಿತು. ಜೊತೆಗೆ ಭಾರತೀಯ ಮೂಲದ ಸಣ್ಣ ಕಂಪನಿಗಳು ನಲುಗುತ್ತಿದ್ದವು. 13 ವರ್ಷಗಳ ಹಿಂದೆ ಓವರ್‌ಸೀಸ್‌ ಇಂಡಿಯನ್ಸ್‌ ಎಕನಾಮಿಕ್‌ ಫೋರಂ (ಓಐಇಎಫ್‌) ಕಟ್ಟಿದೆ. ಇತರೆ ಕೆಲವು ಭಾರತೀಯ ಮೂಲದವರೂ ನನ್ನ ಯತ್ನಕ್ಕೆ ಕೈಗೂಡಿಸಿದರು. ಪರಿಣಾಮ ಭಾರತ- ಯುಎಇ ನಡುವಣ ಆರ್ಥಿಕ ಸಂಬಂಧ ಉತ್ತಮವಾಯಿತು. ಭಾರತೀಯ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಹಾಗೂ ವಾಣಿಜ್ಯ ಸಚಿವಾಲಯದೊಂದಿಗೆ ಓಐಇಎಫ್‌ ಸದಾ ಸಂಪರ್ಕ ಇಟ್ಟುಕೊಂಡಿತು.

ಇಲ್ಲಿರುವ ಭಾರತದ ಕೈಗಾರಿಕೆಗಳು ಇನ್ನೂ ಬೆಳೆಯಲು ಸಾಧ್ಯ. ಅದಕ್ಕೆ ಭಾರತ ಸರ್ಕಾರ ಮನಸ್ಸು ಮಾಡಬೇಕು. ಭಾರತದ ಸಂಸತ್ತಿನ ಉಭಯ ಸದನಗಳಲ್ಲಿ ಎನ್‌ಆರ್‌ಐಗಳಿಗೂ ಪ್ರಾತಿನಿಧ್ಯ ಕೊಡಬೇಕು. ಹೊರದೇಶಗಳಿಗೆ ಹೋಗಿ ಏನಾದರೂ ಸಾಧಿಸಿದಂಥವರಿಗೆ ಈ ಅವಕಾಶ ನೀಡಬೇಕು. ಆಗ ಸ್ವತಃ ಭಾರತದ ಆರ್ಥಿಕ ಸ್ಥಿತಿ ಸುಧಾರಿಸುವುದಲ್ಲದೆ ಎನ್‌ಆರ್‌ಐಗಳೂ ತಮ್ಮ ಸಮಸ್ಯೆ ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಬಣ್ಣ ಬಣ್ಣದ ಕನಸು ಬೇಡಿರಣ್ಣ : ವಿದೇಶಕ್ಕೆ ಹೋಗುವ ಕನಸು ಕಾಣುತ್ತಿರುವ ಭಾರತೀಯರಿಗೆ ಅದು ಬಣ್ಣ ಬಣ್ಣ. ಆದರೆ ಇವತ್ತೂ ಅವರ ಎಷ್ಟೋ ಮೂಲಭೂತ ಸಮಸ್ಯೆಗಳು ಬಗೆಹರಿದಿಲ್ಲ. ಕೆಲವು ದೇಶಗಳಲ್ಲಂತೂ ಎನ್‌ಆರ್‌ಐಗಳು ಅಲ್ಪ ಸಂಖ್ಯಾಕರು. ಅವರ ದನಿ ಆಳುವವರಿಗೆ ತಲುಪುವುದೇ ಇಲ್ಲ. ಎಷ್ಟೋ ದೇಶಗಳಲ್ಲಿ ಭಾರತೀಯರ ಹೆಣಗಳನ್ನು ಹೂಳಲು/ಸುಡಲು ಮಸಣವಿಲ್ಲ. ರಾಮ್‌ ಬುಕ್ಸಾನಿ ಅವರ ಅನುಭವ ಇದನ್ನು ಸಾಬೀತು ಪಡಿಸುತ್ತದೆ. ಅವರು ಭಾರತದ ಸಂಸತ್ತಿನಲ್ಲಿ ಎನ್‌ಆರ್‌ಐಗಳಿಗೆ ಪ್ರಾತಿನಿಧ್ಯ ಕೊಡಬೇಕೆಂದು ಕೇಳುತ್ತಿರುವುದೂ ಮೂಲತಃ ಎನ್‌ಆರ್‌ಐಗಳ ಮೂಲಭೂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೆಂದೇ. ಅವರ ದನಿಗೆ ಸರ್ಕಾರ ಏನಂದೀತು?

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X