ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

108 ದಿನ ನಿದ್ದೆ ಗೆಟ್ಟಿರುವ ಕೃಷ್ಣರಿಗೆ 3 ದಿನ ಕಣ್ತುಂಬ ನಿದ್ದೆ ಮಾಡುವಾಸೆ

By Staff
|
Google Oneindia Kannada News

ಬೆಂಗಳೂರು : ಎಲ್ಲಿ ಹಾವು, ಚೇಳು, ಆನೆ, ಕಾಡು ಪ್ರಾಣಿಗಳು ತಮ್ಮ ಗುಡಾರದತ್ತ ಬರುತ್ತವೋ ಎಂದು ಕಾಡಿನಲ್ಲಿದ್ದಷ್ಟು ದಿನವೂ ರಾಜ್‌ಕುಮಾರ್‌, ನಾಗೇಶ್‌, ನಾಗಪ್ಪ ಹಾಗೂ ಗೋವಿಂದರಾಜು ನಿದ್ದೆಗೆಟ್ಟಿದ್ದರೆ, ಇತ್ತ ಸುಪ್ಪತ್ತಿಗೆಯಲ್ಲಿ ಮಲಗಿದ್ದರೂ ನಿದ್ದೆಗೆಟ್ಟವರು ಯಾರು ಗೊತ್ತೆ?

ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ. ಗುರುವಾರ ಈ ವಿಷಯವನ್ನು ಸ್ವತಃ ಅವರೇ ಹೇಳಿದ್ದಾರೆ. ರಾಜ್‌ ಕಾಡಿನಲ್ಲಿದ್ದ ಆ 108 ದಿನವೂ ನಾನು ನೆಮ್ಮದಿಯಿಂದ ಕಣ್ಣುಮುಚ್ಚಿಲ್ಲ. ಸದಾ ರಾಜ್ಯದಲ್ಲಿ ಉಂಟಾಗಬಹುದಾದ ಅಶಾಂತಿ, ರಾಜ್‌ಕುಮಾರ್‌ ಹಾಗೂ ಇನ್ನಿತರ ಒತ್ತೆಯಾಳುಗಳ ಸುರಕ್ಷತೆ, ಅವರನ್ನು ಹೇಗೆ ಬಿಡುಗಡೆ ಮಾಡಿಸುವುದು ಎಂದು ಚಿಂತಿಸಿ, ಚಿಂತಿಸಿ ತಮಗೆ ನಿದ್ರೆಯೇ ಬರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.

ವಿಧಾನಸೌಧದ ಮೊಗಸಾಲೆಯಲ್ಲಿ ಆರಾಮವಾಗಿ ಕುಳಿತು ಪತ್ರಕರ್ತರೊಂದಿಗೆ ಮನಬಿಚ್ಚಿ ಮಾತನಾಡಿದ ಮುಖ್ಯಮಂತ್ರಿ ಕೃಷ್ಣ , ಈಗ ರಾಜ್‌ಕುಮಾರ್‌ ಅವರ ಬಿಡುಗಡೆ ಆಗಿದೆ. ನಾನು ಒಂದು ಮೂರು ದಿನ ದೂರದ ಪ್ರದೇಶಕ್ಕೆ ಹೋಗಿ ವಿಶ್ರಾಂತಿ ಪಡೆಯಬೇಕು ಎಂದು ತೀರ್ಮಾನಿಸಿದ್ದೇನೆ ಎಂದು ಹೇಳಿದಾಗ, ಅವರ ಮುಖದಲ್ಲಿ ತೃಪ್ತಿಯ ನಗೆ ಚಿಮ್ಮಿತ್ತು.

ರಾಜ್‌ ಅಪಹರಣ ಕಾಲದಲ್ಲಿ ರಾಜ್ಯದಲ್ಲಿ ತಮಿಳು ಹಾಗೂ ಕನ್ನಡಿಗರ ಜೀವ - ಆಸ್ತಿ ಪಾಸ್ತಿಗೆ ಹಾನಿಯುಂಟಾಗದಂತೆ ನೋಡಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆಯಾಗಿತ್ತು. ರಾಜ್ಯ ಸರಕಾರ ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳದೆ ಈ ಸಂದಿಗ್ಧ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿತು ಎಂದು ಅವರು ಹೇಳಿದರು.

ಸಚಿವ ಸಂಪುಟ ಪುನಾರಚನೆ ಇಲ್ಲ : ಸಧ್ಯಕ್ಕಂತೂ ಸಚಿವ ಸಂಪುಟವನ್ನು ಪುನಾರಚಿಸುವುದಿಲ್ಲ. ಈ ಬಗ್ಗೆ ಲವಲೇಶವೂ ಶಂಕೆ ಬೇಡ. ನೀವು ಪ್ರಶ್ನಾರ್ಥಕ ಚಿನ್ಹೆಗಳನ್ನು ಬಳಸುವ ಅಗತ್ಯವೂ ಇಲ್ಲ ಎಂದು ಸ್ಪಷ್ಟ ನಡಿಗಳಲ್ಲಿ ತಿಳಿಸುವ ಮೂಲಕ ಮುಖ್ಯಮಂತ್ರಿಗಳು ಸಚಿವ ಪದವಿಯ ಮೇಲೆ ಕಣ್ಣಿಟ್ಟು ಕಸರತ್ತು ನಡೆಸುತ್ತಿದ್ದವರ ಕನಸನ್ನು ನುಚ್ಚುನೂರು ಮಾಡಿದರು.

ಯಾವ ಜಿಲ್ಲೆಯ ನಿಯೋಗ ಬಂದು ತಮಗೆ ಅವರನ್ನು ಸಚಿವರನ್ನಾಗಿ ಮಾಡಿ, ಇವರನ್ನು ಸಚಿವ ಸ್ಥಾನದಿಂದ ಕೈಬಿಡಿ ಎಂದರೂ ಪರವಾಗಿಲ್ಲ. ಸಧ್ಯಕ್ಕೆ ನಾನು ಸಚಿವ ಸಂಪುಟದ ಪುನಾರಚನೆ ಬಗ್ಗೆ ಚಿಂತನೆಯನ್ನೇ ಮಾಡಿಲ್ಲ ಎಂದ ಅವರು, ನೀವು ಮಾಧ್ಯಮದವರು, ಅವರು ಮಂತ್ರಿಯಾಗುವ ಸಂಭವ ಇದೆ, ಇವರು ಮಂತ್ರಿಯಾಗುವ ಸಂಭವ ಇದೆ ಎಂದು ಬರೆದು ಯಾವ ಶಾಸಕರನ್ನೂ ಸಚಿವರನ್ನಾಗಿ ಮಾಡುವ ಸಾಹಸ ಮಾಡಬೇಡಿ ಎಂದರು.

ಕೆಲವು ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಅನ್ಯಾಯವಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ನಾಜೂಕಿನಿಂದಲೇ ಉತ್ತರಿಸಿದ ಮುಖ್ಯಮಂತ್ರಿಗಳು ತಮ್ಮ ಲೋಕಾಭಿರಾಮ ಮಾತುಕತೆಗೆ ಮಂಗಳ ಹಾಡಿ ಒಳನಡೆದರು.

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X