Get Updates
Get notified of breaking news, exclusive insights, and must-see stories!

ಅನ್ನಕೊಡುವ ಭೂಮಿತಾಯಿ ಮಸಣ ಮಾತೆಯಾದಾಳು

ಎಂ.ಕೆ. ಮಧುಸೂದನ್‌

ಬೆಂಗಳೂರು : ಭತ್ತ ಬೆಳೆಯುವ ಉತ್ತರ ಕರ್ನಾಟಕದ ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸದಿದ್ದಲ್ಲಿ ಉಳುವರಿ ಭೂಮಿ ರುದ್ರಭೂಮಿಯಾದೀತು ಜೋಕೆ !

ವೀದೇಶದಿಂದ ಆಮದಾಗುವ ಅಗ್ಗದ ಭತ್ತಕ್ಕೆ ಆಮದು ಸುಂಕವೂ ಹೆಚ್ಚಿಲ್ಲದ ಕಾರಣ ನಮ್ಮ ಮಾರುಕಟ್ಟೆಯ ಜನ ಅದಕ್ಕೇ ಮುಗಿಬಿದ್ದು, ಸ್ಥಳೀಯ ರೈತರಿಗೆ ಬೆಂಬಲ ಬೆಲೆಯೂ ಸಿಗದಂತಾಗಿದೆ. ಸಾಲದ್ದಕ್ಕೆ ಇದೇ ಸಮಯವನ್ನು ಉಪಯೋಗಿಸಿಕೊಂಡು ರೈತರ ಬೆವರಿನಲ್ಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ದಲ್ಲಾಳಿಗಳ ಸಣ್ಣತನ. ಈ ಸಮಸ್ಯೆ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ಸರ್ಕಾರದ ಪ್ರತಿನಿಧಿಗಳೇ ಮಾರುಕಟ್ಟೆಗೆ ಇಳಿದು ಭತ್ತ ಬೆಳೆದ ರೈತರಿಗೆ ಬೆಂಬಲ ಬೆಲೆ ದೊರೆಯುವಂತೆ ನೋಡಿಕೊಳ್ಳಬೇಕೆಂಬ ಭರವಸೆ ಹೊರಬಿದ್ದಿದೆ. ಆದರೆ ಈ ಭರವಸೆ ಇನ್ನೂ ಅನುಷ್ಠಾನಕ್ಕೆ ಬರದಿರುವುದು ರೈತರ ಬಿಸಿಯುಸಿರು ಉಲ್ಬಣಿಸಲು ಕಾರಣವಾಗುತ್ತಿದೆ.

ರೈತರ ರಕ್ತದ ಕುದಿ ದಿನೇ ದಿನೇ ಹೆಚ್ಚುತ್ತಿದೆ. ಕಳೆದ ಕೆಲ ವಾರಗಳಿಂದಲೂ ಊರಿಂದ ಪಟ್ಟಣಕ್ಕೆ ಭತ್ತ ಹೊತ್ತು ತಂದು ಈವತ್ತಾದರೂ ಎರಡು ಕಾಸು ಹೆಚ್ಚು ಕಂಡೇನು ಎಂಬ ನಿರೀಕ್ಷೆ ಕಣ್ಣ ತುಂಬಿಕೊಂಡ ರೈತ ಹತಾಶನಾಗಿದ್ದಾನೆ. ಇದೊಂದು ಗಂಭೀರವಾದ ಸಮಸ್ಯೆ ಎನ್ನುತ್ತಾರೆ ಅಪರ ಪೊಲೀಸ್‌ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಡಿ.ಸಿಂಗ್‌.

ಸರ್ಕಾರ ಮಾರುಕಟ್ಟೆಗೆ ಪ್ರವೇಶಿಸಬೇಕು ಎಂಬೊಂದೇ ಬೇಡಿಕೆ ನಮ್ಮದಲ್ಲ. ಶಾಶ್ವತವಾಗಿ ರೈತರ ಕಣ್ಣೊರೆಸುವಂಥ ಒಂದು ಪಕ್ಕಾ ಯೋಜನೆಯನ್ನು ಸರ್ಕಾರ ಹಮ್ಮಿಕೊಳ್ಳಬೇಕೆಂಬುದು ನಮ್ಮ ಮನವಿ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಬೇರೆ ಬೇರೆ ಹೆಸರುಗಳಲ್ಲಿ ರೈತರ ಹಿತಾಸಕ್ತಿ ಕಾಪಾಡುವ ಇಂಥ ಯೋಜನೆಗಳು ಜಾರಿಯಲ್ಲಿವೆ. ಪ್ರಸ್ತುತ ತೀರಾ ಹದಗೆಟ್ಟಿರುವ ಭತ್ತದ ಬೆಳೆಗಾರರ ಸ್ಥಿತಿ ಸುಧಾರಿಸಲು ಸರ್ಕಾರ ಮಾರುಕಟ್ಟೆಗೆ ಇಳಿಯಲಿ ಎಂದು ಕೇಳಿದ್ದೇವೆ ಎನ್ನುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘ (ಕೆ ಆರ್‌ ಆರ್‌ ಎಸ್‌)ದ ಅಧ್ಯಕ್ಷ ಪ್ರೊ.ಎಂ.ಡಿ.ನಂಜುಂಡ ಸ್ವಾಮಿ.

ಬೆಂಗಳೂರಿಂದ 600 ಕಿ.ಮೀ. ದೂರದಲ್ಲಿರುವ ಉತ್ತರ ಕರ್ನಾಟಕದ ಗಂಗಾವತಿ ಮತ್ತು ರಾಯಚೂರಿನ ರೈತರು ಜೈಲ್‌ ಭರೋ ಚಳವಳಿಯನ್ನು ನವೆಂಬರ್‌ 17ರಿಂದಲೇ ನಡೆಸಬೇಕೆಂದು ತೀರ್ಮಾನಿಸಿದ್ದರು. ಸರ್ಕಾರ ಸದ್ಯದಲ್ಲೇ ಆವರ್ತ ನಿಧಿ ಸ್ಥಾಪಿಸುವುದಾಗಿ ಭರವಸೆ ಕೊಟ್ಟ ಕಾರಣ ಈ ನಿರ್ಧಾರವನ್ನು ಕೈಬಿಡಲಾಯಿತು. ಈ ವರ್ಷ ಏಪ್ರಿಲ್‌ನಲ್ಲಿ ಮಂಡಿಸಲಾದ 2000-2001ನೇ ಸಾಲಿನ ಬಜೆಟ್‌ನಲ್ಲಿ 100 ಕೋಟಿ ರುಪಾಯಿಗಳ ಆವರ್ತ ನಿಧಿ ಸ್ಥಾಪಿಸುವುದಾಗಿ ಸರ್ಕಾರ ಹೇಳಿತ್ತು. ಆದರೆ ಅನುಷ್ಠಾನಕ್ಕೆ ತರಲಿಲ್ಲ. ಪರಿಣಾಮ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಅದು ವಿಫಲವಾಯಿತು ಎಂದು ನಂಜುಂಡಸ್ವಾಮಿ ಹೇಳುತ್ತಾರೆ.

ಡಬ್ಲ್ಯು ಟಿ ಓ ಜೊತೆ ಭಾರತ ಮಾಡಿಕೊಂಡಿರುವ ಒಪ್ಪಂದದನ್ವಯ ಹೊರ ದೇಶಗಳಿಂದ ಅಗ್ಗದ ಬೆಲೆಯಲ್ಲಿ ಬಿತ್ತನೆ ಬೀಜ ಮತ್ತು ಕೃಷಿ ಉತ್ಪಾದನೆಗಳು ಆಮದಾಗುತ್ತಿವೆ. ಇವುಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವಂತೆ ಬಹು ದಿನಗಳಿಂದ ಸರ್ಕಾರವನ್ನು ಒ್ತತಾಯಿಸುತ್ತಿದ್ದರೂ ಸರ್ಕಾರ ಅದಕ್ಕೆ ಕಿವಿಗೊಟ್ಟಿಲ್ಲ ಎಂಬುದು ನಂಜುಂಡಸ್ವಾಮಿ ಅವರ ದೂರು.

ಕಳೆದೊಂದು ತಿಂಗಳಿಂದ ರೈತ ಬೆಳೆದದ್ದಕ್ಕೆ ತಕ್ಕ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ. ಅದರಲ್ಲೂ ಭತ್ತ ಬೆಳೆದವರ ಕಣ್ಣಲ್ಲಂತೂ ರಕ್ತ ಬರುವುದೊಂದೇ ಬಾಕಿ. ಈ ವಿಷಯವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ ಎನ್ನುತ್ತದೆ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್‌).

ಮಾಹಿತಿ ಮತ್ತು ತಂತ್ರಜ್ಞಾನದ ಮೇಲೆ ಮಾತ್ರ ಒಲವಿರುವ ನಮ್ಮ ಮುಖ್ಯಮಂತ್ರಿಗಳಿಗೆ ರೈತರ ಅಳಲು ಕೇಳುತ್ತಿಲ್ಲ, ಕೇಳಲು ಆಸಕ್ತಿಯೂ ಇಲ್ಲ ಎಂಬಂತಿದೆ ಅವರ ಧೋರಣೆ. ಇದು ಹೀಗೇ ಮುಂದುವರೆದರೆ ನೊಂದ ರೈತರು ಆತ್ಮ ಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ. ಮುಂದೊಂದು ದಿನ ಇದು ತಲೆಹೋಗುವಂಥ ಸಮಸ್ಯೆಯನ್ನು ನಾಡಿನಲ್ಲಿ ಹುಟ್ಟು ಹಾಕಲಿದೆ ಎಂದು ಕೆಪಿಆರ್‌ಎಸ್‌ ಅಧ್ಯಕ್ಷ ಮಾರುತಿ ಮಾನ್ಪಡೆ ಎಚ್ಚರಿಕೆ ಕೊಟ್ಟಿದ್ದಾರೆ.

ವೈಜ್ಞಾನಿಕವಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿ ಕ್ವಿಂಟಾಲ್‌ ಭತ್ತಕ್ಕೆ 750 ರುಪಾಯಿ ನಿಗದಿ ಪಡಿಸಬೇಕು. ಸರ್ಕಾರಿ ಸಂಸ್ಥೆಗಳೇ ದಾಸ್ತಾನು ಮಾಡಿಟ್ಟುಕೊಂಡು ವಿಲೇವಾರಿ ಮಾಡಬೇಕು. ದಕ್ಷಿಣ ಕರ್ನಾಟಕದ ರೈತರ ಬೆಳೆಗಳೂ ಇನ್ನೊಂದೆರಡು ತಿಂಗಳಲ್ಲಿ ಮಾರುಕಟ್ಟೆಗೆ ಬರಲಿವೆ. ಆಗಲೂ ಇದೇ ಪರಿಸ್ಥಿತಿ ಮುಂದುವರೆದರೆ ಸರ್ಕಾರವನ್ನು ನಂಬಿ ಸದ್ಯಕ್ಕೆ ಸುಮ್ಮನಿರುವ ರೈತರ ಆಕ್ರೋಶ ಭುಗಿಲೆದ್ದೀತು ಜೋಕೆ ಎಂಬುದು ನಂಜುಂಡಸ್ವಾಮಿ ಕೊಡುವ ಎಚ್ಚರಿಕೆ.

ಈ ಎಚ್ಚರಿಕೆ ಇನ್ನಾದರೂ ಸರ್ಕಾರವನ್ನು ಮುಟ್ಟೀತೆ? ಹೈಟೆಕ್‌ ಮುಖ್ಯಮಂತ್ರಿಗಳಿಗೆ ಬಡರೈತನ ಅಂತರಂಗ ಅರ್ಥವಾದೀತೆ?

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+