ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ ಪ್ರಕರಣ ವಿಧಾನಸಭೆಯಲ್ಲಿ ಬಿಜೆಪಿ ಸಭಾತ್ಯಾಗ

By Staff
|
Google Oneindia Kannada News

ಬೆಂಗಳೂರು : ರಾಜ್‌ ಅಪಹರಣ ಪ್ರಕರಣವನ್ನು ಕುರಿತು ಚರ್ಚಿಸಲು ಅವಕಾಶ ನೀಡದ ಸರಕಾರದ ಕ್ರಮವನ್ನು ವಿರೋಧಿಸಿ ಬಿಜೆಪಿ ಸದಸ್ಯರು ಸೋಮವಾರ ಸಭಾತ್ಯಾಗ ಮಾಡಿದರು.

ಈ ಸಂಬಂಧ ನಿಲುವಳಿ ಸೂಚನೆಯಡಿ ಚರ್ಚೆಯಾಗಬೇಕೆಂದು ಒತ್ತಾಯಿಸಿದ ವಿರೋಧ ಪಕ್ಷದ ನಾಯಕ ಜಗದೀಶ್‌ ಶಟ್ಟರ್‌, ರಾಜ್‌ ಬಿಡುಗಡೆ ಸಂಬಂಧ ಮಾಧ್ಯಮಗಳಲ್ಲಿ ವಿವಿಧ ರೀತಿಯ ವರದಿಗಳು ಬರುತ್ತಿದ್ದು, ಜನರಿಗೆ ವಾಸ್ತವ ವಿಷಯವನ್ನು ವಿವರಿಸಬೇಕೆಂದು ಆಗ್ರಹಿಸಿದರು. ಆಗ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ಕೃಷ್ಣ ಅವರು ಸರ್ವಪಕ್ಷ ಸಭೆ ನಡೆದ ನಂತರ ಮಂಗಳವಾರ ಸದನದಲ್ಲಿ ಹೇಳಿಕೆ ನೀಡುವುದಾಗಿ ತಿಳಿಸಿದರು. ಈ ಸಂಬಂಧದ ನಿಲುವಳಿ ಸೂಚನೆಯನ್ನು ಬೇರೆ ರೀತಿಯಲ್ಲಿ ಪರಿವರ್ತಿಸಿದ್ದು ಅದರಡಿ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಪತಿ ವೆಂಕಟಪ್ಪ ಅವರು ಹೇಳಿದಾಗ ಪ್ರತಿಪಕ್ಷದ ಸದಸ್ಯರು ಆಕ್ಷೇಪ ಎತ್ತಿದರು. ಸದನದಲ್ಲಿ ಚರ್ಚೆಸಲು ಅವಕಾಶ ನೀಡದ ಕ್ರಮವನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು.

ವಿಧಾನ ಪರಿಷತ್‌: ರಾಜ್‌ ಅಪಹರಣ ಪ್ರಕರಣ ಕುರಿತು ವಿಧಾನ ಪರಿಷತ್‌ನಲ್ಲೂ ವಿರೋಧಿ ಸದಸ್ಯರಾದ ಬಿಜೆಪಿಯ ಬಿ.ಎಸ್‌. ಯಡೆಯೂರಪ್ಪ ಅವರು ನಿಲುವಳಿ ಸೂಚನೆ ಮಂಡಿಸಲು ಯತ್ನಿಸಿದರಲ್ಲದೆ, ಹೇಳಿಕೆ ನೀಡಲು ಅವಕಾಶ ಕೊಡಬೇಕೆಂದು ಕೋರಿದರು. ವೀರಪ್ಪನ್‌ನನ್ನು ಬಂಧಿಸಲು, ರಾಜ್‌ ಬಿಡುಗಡೆಯಾದ ಕ್ಷಣದಿಂದಲೇ ಸರಕಾರ ಕ್ರಮ ಕೈಗೊಳ್ಳಬೇಕಿತ್ತು ಎಂದರು. ಆಗ ಮಧ್ಯೆಪ್ರವೇಶಿಸಿದ ಭಾರೀ ನೀರಾವರಿ ಸಚಿವ ಎಚ್‌. ಕೆ. ಪಾಟೀಲ್‌, ಕೆಳಮನೆಯಲ್ಲಿ ಕೃಷ್ಣ ನೀಡಿರುವ ಹೇಳಿಕೆಯನ್ನೇ ಪುನರುಚ್ಚರಿಸಿದರು.

ರಾಜ್‌ ಬಿಡುಗಡೆಯಾದ ನಂತರ ವೀರಪ್ಪನ್‌ ನಮ್ಮ ದೇಶದಲ್ಲಿ ಇದ್ದಾನೆಯೇ?ಎಂದು ಬಿಜೆಪಿಯ ಮತ್ತೊಬ್ಬ ಸದಸ್ಯ ಡಾ. ಎಂ. ಆರ್‌. ತಂಗಾ ಪ್ರಶ್ನಿಸಿದರು. ವೀರಪ್ಪನ್‌ ತಪ್ಪಿಸಿಕೊಳ್ಳಲು ಸರಕಾರವೇ ಅವಕಾಶ ಮಾಡಿಕೊಟ್ಟಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ ಎಂದು ಜನತಾದಳ (ಯು)ನ ಎಂ.ಪಿ. ನಾಡಗೌಡ ಹೇಳಿದರು.

ರಾಜ್ಯದ ಇಬ್ಬರು ಮಾಜಿ ಪೋಲಿಸ್‌ ಮಹಾ ನಿರ್ದೇಶಕರು ವೀರಪ್ಪನ್‌ನ ಹಿತೈಷಿಗಳಾಗಿದ್ದಾರೆ ಎಂದು ಬಿಜೆಪಿಯ ಮಧೂಸೂದನ್‌ ಆಪಾಧಿಸಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮುಂದೆ ಈ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಾಗಿ ಅಧ್ಯಕ್ಷರು ತಿಳಿಸಿದರು.

ಪರಿಷತ್‌ನಲ್ಲಿ ಸೆಲ್‌ಫೋನ್‌ ನಿಷೇಧ : ಪರಿಷತ್‌ನಲ್ಲಿ ಸೆಲ್‌ ಫೋನುಗಳನ್ನು ಬಳಸಬಾರದೆಂದು ಪರಿಷತ್‌ ಅಧ್ಯಕ್ಷ ಡೇವಿಡ್‌ ಸಿಮೆಯೋನ್‌ ಸೋಮವಾರ ರೂಲಿಂಗ್‌ ನೀಡಿದ್ದಾರೆ.

ಮಾಹಿತಿ ಹಕ್ಕು -2000 ಮಸೂದೆಯ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಜನತಾದಳದ ಎಂ.ಸಿ. ನಾಣಯ್ಯ ಅವರು ಸೆಲ್‌ ಫೋನುಗಳನ್ನು ನಿಷೇಧಿಸಬೇಕೆಂದು ಕೋರಿದರಲ್ಲದೆ ದೇಶವನ್ನು ಉಲ್ಲಂಘಿಸುವ ಸದಸ್ಯರನ್ನು ಬಂಧಿಸಬೇಕು ಎಂದರು.

ನಾಣಯ್ಯ ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅನೇಕ ಸದಸ್ಯರು, 15ರಿಂದ 20 ಸಾವಿರ ಬೆಲೆಬಾಳುವ ಫೋನ್‌ ಸೆಟ್‌ಗಳನ್ನು ಇಡಲು ಸುರಕ್ಷಿತ ಸ್ಥಳವಿಲ್ಲ ಎಂದು ವಾದಿಸಿದರು. ಈ ಹಂತದಲ್ಲಿ ಸಭಾಧ್ಯಕ್ಷರು, ಸದನದಲ್ಲಿ ಫೋನ್‌ಗಳನ್ನು ಬಂದ್‌ ಮಾಡಬೇಕೆಂದು ರೂಲಿಂಗ್‌ ನೀಡಿದರು. ಈ ಸಂಬಂಧ ಲಿಖಿತ ಆದೇಶ ಹೊರಡಿಧಿಸುವುದಾಗಿ ಹೇಳಿದ ಅವರು ಆದೇಶ ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಈ ಹಿಂದೆ ಸದನದಲ್ಲಿ ಸೆಲ್‌ ಫೋನ್‌ಗಳನ್ನು ನಿಷೇಧಿಸಿದ್ದ ಡಿ.ಬಿ. ಕಲ್ಮಣ್‌ಕರ್‌ ಅವರ ಆದೇಶವನ್ನು ಸಿಮೆಯೋನ್‌ ಸ್ಮರಿಸಿಕೊಂಡರು.

ನಿವೇಶನ ಹಿಂದಕ್ಕೆ ಪಡೆಯಲು ಒತ್ತಾಯ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಅಜರುದ್ದೀನ್‌ ಅವರಿಗೆ ಬೆಂಗಳೂರಿನಲ್ಲಿ ನೀಡಿರುವ ಸರಕಾರಿ ನಿವೇಶನವನ್ನು ಹಿಂದಕ್ಕೆ ಪಡೆಯಲು ವಿಧಾನಪರಿಷತ್‌ನಲ್ಲಿ ಸದಸ್ಯರು ಒತ್ತಾಯಿಸಿದರು.

ಮ್ಯಾಚ್‌ ಫಿಂಕ್ಸಿಂಗ್‌ನಲ್ಲಿ ಅಜರುದ್ದೀನ್‌ ಭಾಗಿಯಾಗಿದ್ದಾರೆ ಮತ್ತು ಭೂಗತ ದೊರೆಗಳ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ವರದಿಗಳನ್ನಾಧರಿಸಿ ಸದಸ್ಯರು ಈ ಒತ್ತಾಯ ಮಾಡಿದರು.

ಈ ಸಂಬಂಧ ಪತ್ರಿಕೆಗಳಲ್ಲಿ ವರದಿಗಳನ್ನು ಮಾತ್ರ ತಾವು ನೋಡಿದ್ದು ಕೇಂದ್ರದಿಂದ ಸೂಕ್ತ ಮಾಹಿತಿ ಸಿಕ್ಕ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿದರು.

ಮಂತ್ರಿಗಳ ಗೈರು ಸಭಾತ್ಯಾಗ : ಲಂಚ್‌ ವಿರಾಮದ ನಂತರ ಸಭೆ ಸೇರಿದಾಗ ವಿರೋಧಿಸದಸ್ಯರ ಪ್ರಶ್ನೆಗಳಿಗದೆ ಉತ್ತರಿಸಬೇಕಾದ ಮಂತ್ರಿಗಳ ಸದನದಲ್ಲಿ ಇಲ್ಲದ್ದನ್ನು ಪ್ರತಿಭಟಿಸಿ ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ ಅಪರೂಪದ ಘಟನೆ ಪರಿಷತ್‌ನಲ್ಲಿ ನಡೆಯಿತು. ಆಗ ಕೆಲಕಾಲ ಸದನ ಮುಂದೂಡಿದ ಅಧ್ಯಕ್ಷರು, ಸದಸ್ಯರು ಹಿಂತಿರುಗಿ ಬಾರದ್ದರಿಂದ ಸದನವನ್ನು ನಾಳೆಗೆ ಮುಂದೂಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X