ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಕೀರನ್‌ ಗೋಪಾಲ್‌: ಐದು ವಿಫಲ ಯಾತ್ರೆಗಳ ಸರದಾರ

By Staff
|
Google Oneindia Kannada News

ಚೆನ್ನೈ : ಈ ಹೊತ್ತು ಸುದ್ದಿಯಲ್ಲಿರುವುದು ಡಾ.ರಾಜ್‌ ಅಲ್ಲ. ವೀರಪ್ಪನ್‌ ಕೂಡ ಅಲ್ಲ . ಮುಖ್ಯಮಂತ್ರಿಗಳಾದ ಕೃಷ್ಣ ಮತ್ತು ಕರುಣಾನಿಧಿ ಅವರೂ ಅಲ್ಲ . ಸುದ್ದಿಯ ಕೇಂದ್ರದಲ್ಲಿರುವ ವ್ಯಕ್ತಿ ನೆಡುಮಾರನ್‌. ಐದು ವಿಫಲ ಯಾತ್ರೆ ನಡೆಸಿದ ಗೋಪಾಲ್‌ ನಾಯಕನಂತೂ ಆಗಲಿಲ್ಲ. ಇಂಥ ಗೋಪಾಲ್‌ನ ಹಿನ್ನೆಲೆ ಏನು?

ರಾಜ್‌ ಪ್ರಕರಣದಲ್ಲಿ ಗೋಪಾಲ್‌ ಹೊರತುಪಡಿಸಿ ಮಾಡುವಂತಾದ್ದು ಏನೂ ಇಲ್ಲ ಎಂಬ ನಂಬಿಕೆಗಳನ್ನು ಹುಸಿ ಮಾಡಿದ ತಮಿಳು ರಾಷ್ಟ್ರೀಯವಾದಿ ಆಂದೋಲನದ ನಾಯಕ ನೆಡುಮಾರನ್‌, ಗೋಪಾಲ್‌ ಅವರ ಓಟಕ್ಕೆ ಪರೋಕ್ಷ ತಡೆ ಒಡ್ಡಿದ್ದಾರೆ. ಇಷ್ಟೆಲ್ಲದರ ನಡುವೆಯೂ ಗೋಪಾಲ್‌ ಅವರ ಮೊದಲ ನಾಲ್ಕು ಸಂಧಾನ ಯಾತ್ರೆಗಳನ್ನು ಕಡೆಗಣಿಸುವಂತಿಲ್ಲ ಹಾಗಾಗಿ ಮತ್ತೆ ಆತ ನೆನಪಾಗುತ್ತಾನೆ.

ಯಾರೀ ಗೋಪಾಲ್‌ : ವೀರಪ್ಪನ್‌ ಪ್ರಕರಣದಲ್ಲಷ್ಟೇ ಸುದ್ದಿಯಾಗಿದ್ದ ಈ ಗೋಪಾಲ್‌ ಉಳಿದ ದಿನಗಳಲ್ಲಿ ಹತ್ತರಲ್ಲಿ ಹನ್ನೊಂದನೆಯವನಾಗುತ್ತಾನೆ. ಇಷ್ಟಕ್ಕೂ ಯಾರೀ ಗೋಪಾಲ್‌? ನೂರಾರು ಪೊಲೀಸರಿಗೆ ದಶಕಗಳಿಂದ ಚಳ್ಳೆಹಣ್ಣು ತಿನ್ನಿಸುತ್ತಿರುವ ದಂತಚೋರ ಗೋಪಾಲ್‌ಗಷ್ಟೇ ಹೇಗೆ ಕಾಣಸಿಗುತ್ತಾನೆ? ದಂತಚೋರನ ಜಾಡು ಅವನಿಗೆ ಸಿಗುವ ಬಗೆ ಹೇಗೆ? ಗೋಪಾಲ್‌ ಬಗೆಗಷ್ಟೇ ವೀರಪ್ಪನ್‌ ವಿಶ್ವಾಸ ಏಕೆ? ಹೇಗೆ?- ವೀರಪ್ಪನ್‌ನ ಪ್ರತಿ ಅಪಹರಣದ ಸಂದರ್ಭದಲ್ಲಿ ಉದ್ಭವಿಸುವ ಈ ಪ್ರಶ್ನೆಗಳು ನಂತರದ ದಿನಗಳಲ್ಲಿ ಮರೆತೇ ಹೋಗುತ್ತವೆ. ರಾಜ್‌ ಅಪಹರಣದ ಸಂದರ್ಭದಲ್ಲಿ ಈ ಪ್ರಶ್ನೆಗಳು ಮತ್ತೆ ಜೀವಂತವಾಗಿದ್ದವು.

ಆರ್‌. ರಾಜಗೋಪಾಲ್‌ ನಿಮಗೆ ಗೊತ್ತೇ? : ಬಹಳಷ್ಟು ಜನರ ಉತ್ತರ ಗೊತ್ತಿಲ್ಲ ಎಂದೇ. ನಕ್ಕೀರನ್‌ ಗೋಪಾಲ್‌ ಎಂದರೆ, ಆರ್‌. ಗೋಪಾಲ್‌ ಎಂದರೆ ಮಾತ್ರ ಹುಬ್ಬುಗಳು ಮೇಲೇರುತ್ತವೆ. ಇವತ್ತು ಗೋಪಾಲನ್‌ ಏನಾದರೂ ಹೆಸರು, ಪ್ರಸಿದ್ಧಿ ಸಂಪಾದಿಸಿದ್ದರೆ ಅದಕ್ಕೆಲ್ಲಾ ಕಾರಣ, ವೀರಪ್ಪನ್‌ನೊಂದಿಗಿನ ಅವನ ಭೇಟಿಯ ಪ್ರಕರಣಗಳು. ಗೋಪಾಲ್‌ ಒಬ್ಬ ಪತ್ರಕರ್ತ. ವೃತ್ತಿ ಶುರು ಮಾಡಿದ್ದು ಪುಟ ವಿನ್ಯಾಸಕಾರನಾಗಿಯಾದರೂ, ಪಳಗಿದ್ದು ವರದಿಗಾರಿಕೆಯಲ್ಲಿ . ವೃತ್ತಿಯ ಆರಂಭದ ದಿನಗಳಲ್ಲಿ ಗೋಪಾಲ್‌ ಅಂಥಾ ಯಶಸ್ಸನ್ನೇನೂ ಕಂಡಿರಲಿಲ್ಲ . ಯಶಸ್ಸು ಕಂಡಿದ್ದು ತನ್ನದೇ ಪತ್ರಿಕೆ ನಕ್ಕೀರನ್‌ ಸ್ಥಾಪಿಸಿದಾಗ. ನಕ್ಕೀರನ್‌ ಶುರುವಾದದ್ದು ಸುಮಾರು 10 ವರ್ಷಗಳ ಹಿಂದೆ. ಮೊದಲಿಗೆ ಜಯಲಲಿತಾ ಭ್ರಷ್ಟಾಚಾರಗಳ ಬಗ್ಗೆ ಬರೆದ ಗೋಪಾಲ್‌ ಜನಪ್ರಿಯತೆ ಗಳಿಸುವುದರ ಜೊತೆಗೆ ಜಯಲಲಿತಾರ ಕೋಪಕ್ಕೂ ತುತ್ತಾದರು. 91- 92 ರಲ್ಲಿ ಗೋಪಾಲ್‌ ಗೂಂಡಾಗಳಿಂದ ಹಲ್ಲೆಗೂಳಗಾದರು. ಪ್ರೆಸ್‌ಗೆ ನುಗ್ಗಿದ ಗೂಂಡಾಗಳು ಪತ್ರಿಕೆಯ ಪ್ರತಿಗಳನ್ನು ಸುಟ್ಟರು. ಈ ಹಲ್ಲೆಯಲ್ಲಿ ತಮ್ಮ ಸಹೋದ್ಯೋಗಿಯನ್ನು ಗೋಪಾಲ್‌ ಕಳೆದುಕೊಂಡರು.

ವೀರಪ್ಪನ್‌ ಸಂದರ್ಶನ ಪ್ರಕಟ : ವೀರಪ್ಪನ್‌ನೊಂದಿಗೆ ಕೂತು ಸಂದರ್ಶನ ನಡೆಸಿ ಪ್ರಕಟಿಸಿದ ಕೀರ್ತಿ ನಕ್ಕೀರನ್‌ ಗೋಪಾಲ್‌ ಅವರದ್ದು . ಆದರೆ, ಬಹಳಷ್ಟು ಜನ ವೀರಪ್ಪನ್‌ನನ್ನು ಭೇಟಿ ಮಾಡಿದ ಮೊದಲ ಪತ್ರಕರ್ತ ಗೋಪಾಲ್‌ ಎಂದು ತಿಳಿದಿದ್ದಾರೆ. ಆ ಕೀರ್ತಿ ಶಿವಸುಬ್ರಹ್ಮಣ್ಯ ಅವರದ್ದು . ಭೇಟಿಯ ನಂತರ ಗೋಪಾಲ್‌ ಅವರನ್ನು ವೀರಪ್ಪನ್‌ ಬಳಿಗೆ ಕರೆದೊಯ್ದದ್ದೂ ಅವರೇ. ವೀರಪ್ಪನ್‌ ಸಂದರ್ಶನ ಸಾಧ್ಯವಾದದ್ದು (1990) ಆಗಲೇ. ವೀರಪ್ಪನ್‌ ಸಂದರ್ಶನ ಪ್ರಕಟವಾದದ್ದೇ ತಡ, ನಕ್ಕೀರನ್‌ ಹಾಗೂ ಗೋಪಾಲ್‌ ತಮಿಳುನಾಡಿನಲ್ಲಿ ಮನೆ ಮಾತಾದರು.

ಕರ್ನಾಟಕದ ಅರಣ್ಯ ಅಧಿಕಾರಿಗಳನ್ನು 1997 ರಲ್ಲಿ ವೀರಪ್ಪನ್‌ ಅಪಹರಿಸಿದಾಗ, ಸಂಧಾನಕಾರನ ಪಾತ್ರ ವಹಿಸಿದ್ದು ಗೋಪಾಲ್‌ ಅವರೇ. ನಂತರ ಕೃಪಾಕರ, ಸೇನಾನಿ ಅವರ ಅಪಹರಣದ ಸಂದರ್ಭದಲ್ಲೂ ಗೋಪಾಲ್‌ ವೀರಪ್ಪನ್‌ನನ್ನು ಸಂಪರ್ಕಿಸಿದ್ದರು. ಪ್ರತಿ ಸಲ ವೀರಪ್ಪನ್‌ನನ್ನು ಭೇಟಿ ಮಾಡಿದಾಗಲೂ ನಕ್ಕೀರನ್‌ ಗೋಪಾಲ್‌ ಅವರ ಹೆಸರು ದೇಶದ ಗಡಿಗಳನ್ನು ದಾಟಿತ್ತು .

ಗೋಪಾಲ್‌ ಸಾಹಸ ಮತ್ತು ಸಂಶಯಗಳು : ಪ್ರತಿಯಾಂದು ಬಾರಿ ವೀರಪ್ಪನ್‌ನನ್ನು ಗೋಪಾಲ್‌ ಭೇಟಿಯಾದಾಗಲೂ, ನಮ್ಮ ಪೊಲೀಸರೇನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ. ನರಹಂತಕನನ್ನು

ಓರ್ವ ಪತ್ರಕರ್ತ ಭೇಟಿ ಮಾಡುವುದಾದರೆ, ಪೊಲೀಸರಿಗೇಕೆ ಆತ ಸಿಕ್ಕುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟ . ಉತ್ತರ ಹುಡುಕುತ್ತಾ ಹೋದರೆ ಪೊಲೀಸರ ಕಾರ್ಯಾಚರಣೆಯ ಬಗೆಗೇ ಸಂಶಯ ಮೂಡುತ್ತದೆ. ವೀರಪ್ಪನ್‌ಗೆ ರಾಜಕಾರಣಿಗಳ ಕುಮ್ಮಕ್ಕೂ ಇದೆ ಎನ್ನುವ ಗುಮಾನಿ ಬಲವಾಗುತ್ತದೆ. ಆದರೆ, ಸತ್ಯ ಗೊತ್ತಿರುವುದು ಗೋಪಾಲ್‌ಗೆ ಮಾತ್ರ. ಅದನ್ನಾತ ಬಹಿರಂಗ ಪಡಿಸುವುದಿಲ್ಲ . ವೀರಪ್ಪನ್‌ ತನ್ನನ್ನು ನಂಬಿರುವುದರಿಂದ ತಾನವನಿಗೆ ದ್ರೋಹವೆಸಗಲಾರೆ ಎನ್ನುತ್ತಾನೆ. ಸರ್ಕಾರ ಕೂಡ ಅವನ ಅಭಿಪ್ರಾಯವನ್ನು ಒತ್ತಾಯಪಡಿಸುವ ಗೋಜಿಗೆ ಹೋಗಿಲ್ಲ . ಒತ್ತಾಯ ಪಡಿಸಬಾರದೆನ್ನುವ ಷರತ್ತಿನ ಮೇಲೆಯೇ ಆತ ಪ್ರತಿ ಸಾರಿಯೂ ಅರಣ್ಯ ಪ್ರವೇಶಿಸಿದ್ದಾನೆ. ಒಟ್ಟಿನಲ್ಲಿ ವೀರಪ್ಪನ್‌ ಮತ್ತು ಗೋಪಾಲ್‌ ಭೇಟಿ ಪ್ರಕರಣದಲ್ಲಿ ನಾವು ತಿಳಿದಿರುವುದಕ್ಕಿಂತ ತಿಳಿಯದಿರುವ ವಿಷಯಗಳೇ ಹೆಚ್ಚಾಗಿರುವ ಸಾಧ್ಯತೆಗಳೇ ಬಹಳ.

ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X