ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ಸಿಗೆ ಕಲ್ಲು ತೂರಿದ ಪ್ರಕರಣ : ಬೆಂಗಳೂರಲ್ಲಿ ಒಬ್ಬನ ಬಂಧನ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರಿನಲ್ಲಿ ಬೆಳಗ್ಗೆ ವಾಹನಗಳ ಓಡಾಟ ಇತ್ತು. ಬಿಸಿಲೇರುತ್ತಿದ್ದಂತೆ, ಬಂದ್‌ಗೆ ಕಾವೂ ಏರಿತು. ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು. ವಿರಳವಾಗಿ ಓಡಾಡುತ್ತಿದ್ದ ಬಸ್‌ಗೆ ಕಲ್ಲು ತೂರಿದ ಘಟನೆಯೂ ನಡೆಯಿತು. ಈ ಸಂಬಂಧ ಒಬ್ಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ನಗರ ಪೊಲೀಸ್‌ ಕಮೀಷನರ್‌ ಟಿ. ಮಡಿಯಾಳ್‌ ತಿಳಿಸಿದ್ದಾರೆ.

ರಾಜ್ಯದ್ಯಂತ ಬಂದ್‌ ಶಾಂತಿಯುತವಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆದ ವರದಿ ಬಂದಿಲ್ಲ ಎಂದು ಪೊಲೀಸ್‌ ಮಹಾನಿರ್ದೇಶಕ ಸಿ. ದಿನಕರ್‌ ತಿಳಿಸಿದ್ದಾರೆ. ರಾಜ್‌ಕುಮಾರ್‌ ಶೀಘ್ರ ಬಿಡುಗಡೆಗೆ ಆಗ್ರಹಿಸಿ ಮತ್ತು ಕೇಂದ್ರದ ಮಧ್ಯ ಪ್ರವೇಶಕ್ಕೆ ಒತ್ತಾಯಿಸಿ, ಕರೆ ನೀಡಲಾಗಿದ್ದ ಬಂದ್‌ ಬಹುತೇಕ ಶಾಂತಿಯುತವಾಗಿತ್ತು.

ಆಡಳಿತ ಯಂತ್ರ ಹಾಗೂ ಸಾರಿಗೆ ವ್ಯವಸ್ಥೆ ತಡೆಯಿಲ್ಲದೆ ನಡೆಯುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗಿನಿಂದಲೇ ಸಾರಿಗೆ ವಾಹನಗಳು ವಿರಳವಾಗಿ ನಗರದಲ್ಲಿ ಸಂಚರಿಸಿದವು. ರಾಜ್ಯ ಸರಕಾರಿ ಕಚೇರಿಗಳಲ್ಲಿ ಎಂದಿನಂತೆ ಹಾಜರಾತಿ ಬೆರಳೆಣಿಕೆಯಷ್ಟಿತ್ತು. ವಿಧಾನಸೌಧ - ಹೈಕೋರ್ಟ್‌ ಆವರಣ ಹಾಳು ಸುರಿಯುತ್ತಿತ್ತು. ರಸ್ತೆಗಳು ನಿರ್ಜನವಾಗಿದ್ದವು. ಆಫೀಸಿಗಳಿಗೆ ಹೋಗಲೇ ಬೇಕಾದವರು ನಟರಾಜ ಸರ್ವಿಸ್‌ನಲ್ಲಿ ಹೋದರು. ಉಳಿದವರು ಟಿವಿ ಚಾನಲ್‌ಗಳಿಗೆ, ಕುಟುಂಬದವರೊಂದಿಗೆ ಸಹಭೋಜನಕ್ಕೆ ಶರಣಾದರು.

ಶಾಲೆಗಳಿಗೆ ರಜೆ : ಮಂಡ್ಯ, ಮೈಸೂರು, ಹಾಸನ, ಕೋಲಾರದಲ್ಲೂ ಶಾಲೆಗಳಿಗೆ ರಜೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ಶಂಕಿತರನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಬುಧವಾರ ರಾತ್ರಿಯವರೆಗೆ ಸುಮಾರು 500 ಜನರನ್ನು ಬಂಧಿಸಲಾಗಿತ್ತು. 10 ಸಾವಿರ ಸಶಸ್ತ್ರ ಪೊಲೀಸರ ಜತೆಗೆ ಹೋಂಗಾರ್ಡ್ಸ್‌ ಸಿಬ್ಬಂದಿ ಸಹ ಶಾಂತಿ ಪಾಲನೆಯಲ್ಲಿ ನೆರವಾಗಿದ್ದರು. ರೈಲು ಸಂಚಾರ ಮಾಮೂಲಿನಂತಿತ್ತು. ಚಿತ್ರಮಂದಿರಗಳು ಪ್ರದರ್ಶನ ರದ್ದು ಮಾಡಿವೆ.

ವಾಟಾಳ್‌ ಬಂಧನ : ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಚಳವಳಿ ನಾಯಕ ವಾಟಾಳ್‌ ನಾಗರಾಜ್‌ ಹಾಗೂ ಅವರ ಹತ್ತು ಮಂದಿ ಬೆಂಬಲಿಗರನ್ನು ಯಥಾಪ್ರಕಾರ ಬಂಧಿಸಲಾಯಿತು. ಬಂಧನಕ್ಕೆ ಮೊದಲು ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್‌ ರಾಜ್‌ ಅಪಹರಣ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರವನ್ನು ವಜಾ ಮಾಡುವಂತೆ ಒತ್ತಾಯಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X