ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರಾವಣ, ಭಾದ್ರಪದ ಕಳೆದು ನವರಾತ್ರಿ ಬರುತ್ತಿದ್ದರೂ....

By Staff
|
Google Oneindia Kannada News

ಬೆಂಗಳೂರು : ಶ್ರಾವಣದ ಮಾಸದ ತಿಂಗಳು ಪೂರ್ತಿಯ ಹಬ್ಬದ ಸಂಭ್ರಮ, ಭಾದ್ರಪದದ ಗೌರಿಹಬ್ಬ, ಗಣೇಶ ಚೌತಿ ಮುಗಿದು ಈಗ ನಾಡಹಬ್ಬ ದಸರೆಯ ಸಂಭ್ರಮ ನಾಡಿಗೆ ಕಾಲಿಡುತ್ತಿದ್ದರೂ, ಭೀಮನ ಅಮಾವಾಸ್ಯೆಯಂದು ಅಪಹರಣವಾದ ರಾಜಣ್ಣ ಮಾತ್ರ ನಾಡಿಗೆ ಮರಳಿಲ್ಲ.

ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವರನಟ ರಾಜಣ್ಣ ಕಾಡಿನಲ್ಲಿ ಇರುವಾಗಲೇ ಈ ನಾಡಿನಲ್ಲಿ ಮತ್ತೊಂದು ಫಾಲ್ಕೆ ಪ್ರಶಸ್ತಿಯ ಪ್ರಕಟಣೆಯೂ ಹೊರಬಿದ್ದಿದೆ. ಕನ್ನಡ ನಾಡಿನ ಜನರಲ್ಲಿ ದುಗುಡ, ಆತಂಕ ಇದೆಯಾದರೂ ದೈನಂದಿನ ಚಟುವಟಿಕೆಗಳು ಸರಾಗವಾಗಿ ನಡೆಯುತ್ತಿವೆ. ಆರಂಭದ ನಾಲ್ಕಾರು ದಿನ ಇದ್ದ ತೀವ್ರತೆ, ಪೂಜೆ, ಪುನಸ್ಕಾರ, ಹವನ ಹೋಮ, ಪ್ರತಿಭಟನೆ, ಮೆರವಣಿಗೆ, ಬಂದ್‌ ಎಲ್ಲ ತಣ್ಣಗಾಗಿದೆ.

ಮೊದಲ ಹತ್ತು ಹದಿನೈದು ದಿನ ಮಾಧ್ಯಮಗಳಿಗೆ ಭಾರಿ ಆಹಾರವಾಗಿದ್ದ ರಾಜ್‌ ಅಪಹರಣದ ಸುದ್ದಿ ಈಗ ವಾರ್ತೆಗಳ ಕೊನೆಯ ಸಾಲಿನಲ್ಲಿ , ಪತ್ರಿಕೆಗಳ ಒಳ ಪುಟದಲ್ಲಿ ನುಸುಳುತ್ತಿದೆ. ರಾಜ್‌ ಅಪಹರಣದ ಕಹಿ ಘಟನೆಯನ್ನು ಜನ ಕೊಂಚ ಕೊಂಚವಾಗಿ ಮರೆತೇ ಬಿಟ್ಟಿದ್ದಾರೇನೋ ಎನ್ನುವ ವಾತಾವರಣ ಮೂಡಿದೆ. ರಾಜ್‌ ಕುಮಾರ್‌ ಅವರನ್ನು ಬಿಡಿಸಿಕೊಳ್ಳಲು ಕಳೆದ 50 ದಿನಗಳಿಂದ ರಾಜ್ಯ ಸರಕಾರ ತಮಿಳುನಾಡು ಜತೆಗೂಡಿ ಹರ ಸಾಹಸ ಮಾಡಿದೆ.

ಈಗ ‘ವೀರಪ್ಪನ್‌ ಬಿಟ್ಟಾಗ ಬಿಡಿಸಿಕೊಳ್ಳಿ ’ ಎನ್ನುವ ಧೋರಣೆಯನ್ನು ರಾಜ್ಯ ಸರಕಾರ ತಳೆದಂತಿದೆ. ಮುಂದೇನು ಮಾಡುವುದು ಎನ್ನುವುದು ರಾಜ್ಯ ಸರಕಾರಕ್ಕೂ ತಿಳಿದಿಲ್ಲ. ರಾಜ್ಯದ ಜನತೆಗೂ ಗೊತ್ತಿಲ್ಲ. ರಾಜ್‌ ಕುಟುಂಬದವರಿಗಂತೂ ಈ 50 ದಿನಗಳು ಅರ್ಧ ಶತಮಾನವೇ ಕಳೆದಂತೆ ಆಗಿದೆ. ದಿನವೂ ರಾಜ್‌ಕುಮಾರ್‌ ಅವರ ನಿವಾಸಕ್ಕೆ ಬಂದು ಸಾಂತ್ವನ ಹೇಳುತ್ತಿದ್ದ ಜನರ - ಗಣ್ಯರ ಸಂಖ್ಯೆಯೂ ಕುಗ್ಗಿದೆ.

ಈಗ ಉಳಿದಿರುವುದು ಹರಕೆ - ನಿರೀಕ್ಷೆ ಗಳು ಮಾತ್ರ

ಪರಿಸ್ಥಿತಿ ತಣ್ಣಗಾಗಿದ್ದರೂ, ರಾಜ್‌ ಅಪಹರಣದ ಮೊದಲ ದಿನಗಳಲ್ಲಿ ಹೇಳಿಕೆ ನೀಡಿ, ತಮ್ಮ ಹೇಳಿಕೆಗೆ ಕಟ್ಟು ಬಿದ್ದ ಕನ್ನಡ ಚಿತ್ರ ರಂಗ ಕಳೆದ 50 ದಿನಗಳಿಂದ ತನ್ನ ಎಲ್ಲ ಚಟುವಟಿಕೆ ನಿಲ್ಲಿಸಿದೆ. ಈಗ ವಿಧಿ ಇಲ್ಲದೆ, 25ರಿಂದ ಚಿತ್ರ ಚಟುವಟಿಕೆ ಆರಂಭಿಸುವ ನಿರ್ಧಾರವನ್ನೂ ತಳೆದಿದೆ. ಈ ನಿರ್ಧಾರದಿಂದ ರಾಜ್‌ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಬೇಕಾದೀತೆಂಬ ಭಯದಿಂದ ಚಿತ್ರ ಚಟುವಟಿಕೆ ಆರಂಭಿಸುವ ಮುನ್ನ ಸಾಂಕೇತಿಕವಾಗಿ ಪ್ರತಿಭಟನಾ ಮೆರವಣಿಗೆ ನಡೆಸುವ ತೀರ್ಮಾನ ಕೈಗೊಂಡಿದೆ.

ರಾಜ್‌ ಅವರನ್ನು ಬಿಡಿಸಿಕೊಂಡು ಬರಲು ವೀರಪ್ಪನ್‌ ಬಳಿಗೆ ತೆರಳಿದ್ದ ಗೋಪಾಲ್‌ ಮೂರು ಬಾರಿಯೂ ಬರಿಗೈಯಲ್ಲಿ ಮರಳಿದ್ದಾರೆ. ನಾನು ಮೊದಲು ಒಬ್ಬ ವೀರಪ್ಪನ್‌ನನ್ನು ಸಮಾಧಾನ ಪಡಿಸಬೇಕಿತ್ತು , ಈಗ ಕಾಡಿನಲ್ಲಿ 9 ವೀರಪ್ಪನ್‌ ಗಳಿದ್ದಾರೆ ಎಂದು ಅವರೇ ಬೆಂಗಳೂರಿನಲ್ಲಿ ನೀಡಿದ ಹೇಳಿಕೆ ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ. ಇಷ್ಟೇಲ್ಲಾ ಆಗಿದ್ದರೂ ರಾಜ್‌ ಬಿಡುಗಡೆಗೆ ಹೊಸ ಪರಿಹಾರೋಪಾಯಗಳು ಮಾತ್ರ ಕಂಡು ಬಂದಿಲ್ಲ.

ಕೃಷ್ಣ ಅವರಿಗಂತೂ ಪ್ರತಿಯಾಂದು ದಿನವೂ ಒಂದು ಯುಗದಂತೆ ಕಳೆಯುತ್ತಿದೆ. ರಾಜ್ಯದ ಎಲ್ಲ ಅಭಿವೃದ್ಧಿ ಕಾರ್ಯಗಳೂ ಸ್ಥಗಿತ ಗೊಂಡಿವೆ. ರಾಜ್ಯ ಸರಕಾರದ ಹಾಗೂ ನಾನಾ ಸಂಘ - ಸಂಸ್ಥೆಗಳ ನೂರಾರು ಅಧಿಕೃತ ಕಾರ್ಯಕ್ರಮಗಳ ರದ್ದಾಗಿವೆ. ರಾಜ್‌ ಇಲ್ಲದ ರಾಜ್ಯದಲ್ಲಿ ಉಂಟಾದ ನಷ್ಟ ಎಷ್ಟು ಎಂಬ ಬಗ್ಗೆ ಅಧ್ಯಯನ ಮಾಡುವ ಗೋಜಿಗೂ ಯಾರೂ ಹೋಗಿಲ್ಲ.

ರಾಜ್‌ ಅಪಹರಣದ ಲಾಭ ಪಡೆದು ಕನ್ನಡ ಜನರ ದೃಷ್ಟಿಯಲ್ಲಿ ಹೀರೋಗಳಾಗ ಬಯಸಿದವರ ಅಟಾಟೋಪಗಳೂ ಈಗ ಬಹಿರಂಗಗೊಂಡಿವೆ. ರಾಜ್‌ ಕುಮಾರ್‌ ಕುಟುಂಬದವರಂತೂ ಸರಕಾರದ ಪ್ರಯತ್ನಗಳನ್ನು ಮರೆತು ಕಂಡ ಕಂಡ ದೇವರಿಗೆಲ್ಲಾ ಕೈ ಮುಗಿಯುತ್ತಿದ್ದಾರೆ. ರಾಜ್‌ ಇನ್ನೊಂದು ವಾರದಲ್ಲಿ ಹಿಂತಿರುಗುತ್ತಾರೆ ಎಂದು ಆರಂಭದ ದಿನಗಳಲ್ಲಿ ಭವಿಷ್ಯ ನುಡಿದಿದ್ದ ಜ್ಯೋತಿಷ್ಕರೆಲ್ಲಾ ಮನೆಯಲ್ಲಿ ಮುದುರಿ ಕುಳಿತಿದ್ದಾರೆ. ಈಗ ಉಳಿದಿರುವುದು ಕೇವಲ ನಿರೀಕ್ಷೆ ಮಾತ್ರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X