Get Updates
Get notified of breaking news, exclusive insights, and must-see stories!

22ರಿಂದ ಬೆಳಗಾವಿಯಲ್ಲಿ ರಾಜ್ಯ ಪತ್ರಕರ್ತರ 23ನೇ ಸಮ್ಮೇಳನ

ಬೆಂಗಳೂರು :ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 23ನೇ ರಾಜ್ಯ ಸಮ್ಮೇಳನ ಸೆ. 22ರಿಂದ 24ರವರೆಗೆ ಬೆಳಗಾವಿಯ ಪ್ರಭುದೇವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.

ಸಮ್ಮೇಳನದ ವಿವರಗಳನ್ನು ನೀಡಲು ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಹೊಸ ಸಹಸ್ರಮಾನದಲ್ಲಿ ಪತ್ರಿಕೋದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಸಮ್ಮೇಳನ ಬೆಳಕುಚೆಲ್ಲಲಿದೆ ಎಂದು ತಿಳಿಸಿದರು. ಕನ್ನಡ ಸಾರಸ್ವತ ಲೋಕದ ದಿಗ್ಗಜ ಡಿ.ವಿ. ಗುಂಡಪ್ಪನವರು ಕಟ್ಟಿದ ಸಂಘಕ್ಕೆ 68 ವರ್ಷಗಳ ಸುದೀರ್ಘ ಇತಿಹಾಸವಿದೆ, ಕಾರ್ಮಿಕ ಹಾಗೂ ವೃತ್ತಿ ಸಂಘಟನೆಯಾದ ಸಂಘ, ರಾಜ್ಯದ ಎಲ್ಲ ವರ್ಗದ ಪತ್ರಕರ್ತರನ್ನೂ ಪ್ರತಿನಿಧಿಸುವ ಏಕೈಕ ಸಂಸ್ಥೆಯಾಗಿದ್ದು, ಸಮ್ಮೇಳನದಲ್ಲಿ ಪತ್ರಿಕೋದ್ಯಮದ ಅಭಿವೃದ್ಧಿಗೆ ಪೂರಕವಾದ ವಿಷಯಗಳ ಬಗ್ಗೆ ವಿಚಾರ ಸಂಕಿರಣಗಳು ನಡೆಯಲಿದೆ ಎಂದರು.

ವಿಚಾರ ಸಂಕಿರಣ : ವಿಚಾರ ಸಂಕಿರಣದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಭಾಷೆ ; ಸ್ಥಳೀಯ ಮತ್ತು ಮಧ್ಯಮ ಪತ್ರಿಕೆಗಳ ಸಮಸ್ಯೆ - ಸವಾಲುಗಳು; ಮುದ್ರಣ ಮಾಧ್ಯಮದ ಮುಂದಿನ ಸವಾಲುಗಳು; ಮಾಹಿತಿ ಹಕ್ಕು -2000 ವಿಧೇಯಕ ; ಡಾಟ್‌ಕಾಂ ಪತ್ರಿಕೋದ್ಯಮ ಎಂಬ ವಿಷಯಗಳ ಬಗ್ಗೆ ಅನುಕ್ರಮವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ, ಕನ್ನಡಮ್ಮ ಪತ್ರಿಕೆಯ ಸಂಪಾದಕಿ ಉಮಾದೇವಿ ಟೋಪಣ್ಣನರ್‌, ಪ್ರಜಾವಾಣಿ ಪತ್ರಿಕೆಯ ವರದಿಗಾರರಾದ ಡಾ. ಓಂಕಾರ ಕಾಕಡೆ, ಕನ್ನಡಪ್ರಭ ದಿನಪತ್ರಿಕೆಯ ಹಿರಿಯ ಉಪಸಂಪಾದಕ ತಿಮ್ಮಪ್ಪ ಭಟ್‌ ಹಾಗೂ ಕನ್ನಡ.ಇಂಡಿಯಾ ಇನ್‌ಫೋ ಡಾಟ್‌ ಕಾಂನ ಹಿರಿಯ ಉಪಸಂಪಾದಕ ಟಿ.ಎಂ. ಸತೀಶ್‌ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕೋದ್ಯಮದ ಬಗ್ಗೆ ಉಪಯುಕ್ತ ಮಾಹಿತಿ ಇರುವ ಸ್ಮರಣ ಸಂಚಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು. ರಾಜ್ಯಾದ್ಯಂತ ಇರುವ ಸುಮಾರು 1,500 ಪತ್ರಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು. ಪತ್ರಕರ್ತರು ಹೆಚ್ಚು ಕ್ರಿಯಾಶೀಲರಾಗಿ ಸೇವೆ ಸಲ್ಲಿಸಲಿ ಎಂಬ ಉದ್ದೇಶದಿಂದ ಪ್ರತಿವರ್ಷವೂ ಸಂಘ ಪತ್ರಿಕೋದ್ಯಮದ ವಿವಿಧ ವಿಭಾಗಗಳ ಅತ್ಯುತ್ತಮ ಸುದ್ದಿ, ಲೇಖನ, ಮಾನವೀಯ ವರದಿ, ತನಿಖಾ ವರದಿಗೆ ಪ್ರಶಸ್ತಿ ನೀಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಅನಂತಕುಮಾರ್‌, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾದ ವಿ.ಎಸ್‌. ಕೌಜಲಗಿ, ನಾಗನೂರು ರುದ್ರಾಕ್ಷಿಮಠದ ಶ್ರೀ. ಮ.ನಿ.ಪ್ರ. ಸಿದ್ಧರಾಮ ಸ್ವಾಮಿಗಳು, ರಾಜ್ಯ ಸಚಿವರುಗಳಾದ ಡಿ.ಬಿ. ಚಂದ್ರೇಗೌಡ, ಡಿ.ಬಿ. ಇನಾಂದಾರ್‌, ವೀರಕುಮಾರ್‌ ಪಾಟೀಲ್‌, ಸಗೀರ್‌ ಅಹ್ಮದ್‌, ಡಾ. ಜಿ. ಪರಮೇಶ್ವರ್‌, ಎಚ್‌.ಕೆ. ಪಾಟೀಲ್‌, ಪ್ರೊ. ಬಿ.ಕೆ. ಚಂದ್ರಶೇಖರ್‌, ಆರ್‌.ವಿ. ದೇಶಪಾಂಡೆ, ಸಂಸದರಾದ ಅಮರಸಿಂಹ ಪಾಟೀಲ್‌, ಜನತಾದಳದ ಉಮೇಶ್‌ ಕತ್ತಿ, ವಿಧಾನ ಪರಿಷತ್‌ ಸದಸ್ಯ ಸತೀಶ್‌ ಜಾರ್ಕಿಹೋಳಿ, ಬೆಳಗಾವಿ ಮಹಾಪೌರರಾದ ಶಿವಾಜಿರಾವ್‌ ಸುಂಠಕರ, ಮಾಜಿ ಸಚಿವರಾದ ಎ.ಬಿ. ಪಾಟೀಲ್‌ ಮುಂತಾದವರು ಭಾಗವಹಿಸುವರು ಎಂದು ತಿಳಿಸಿದರು.

ಹಿರಿಯ ಪತ್ರಕರ್ತರಾದ ಪಿ. ರಾಮಯ್ಯ, ಗರುಡನಗಿರಿ ನಾಗರಾಜ್‌ ಅವರೂ ಪತ್ರಿಕೋದ್ಯಮದ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಅಲ್ಲದೆ ಸ್ಥಳೀಯ ಪತ್ರಕರ್ತರನ್ನು ಗೌರವಿಸುವ ಕಾರ್ಯಕ್ರಮವೂ ಇದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸುಧೀಂದ್ರಕುಮಾರ್‌, ಉಪಾಧ್ಯಕ್ಷರಾದ ಗುಡಿಹಳ್ಳಿ ನಾಗರಾಜ್‌, ಖಜಾಂಚಿಗಳಾದ ಪೊಲೀಸ್‌ ನ್ಯೂಸ್‌ ಮಲ್ಲಿಕಾರ್ಜುನಯ್ಯ ಇದ್ದರು.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+