ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲೆಯೇರಿಕೆಯ ಬಿಸಿಯಲ್ಲಿ ಗಣೇಶನ ಹಬ್ಬದ ಸಡಗರ

By Staff
|
Google Oneindia Kannada News

ಬೆಂಗಳೂರು : ಬೆಂಗಳೂರು ಕೃಷ್ಣರಾಜೇಂದ್ರ ಮಾರುಕಟ್ಟೆ, ಗಾಂಧೀಬಜಾರ್‌, ಮಲ್ಲೇಶ್ವರ, ಯಶವಂತಪುರ, ಜಯನಗರ, ಇಂದಿರಾನಗರ ಮಾರುಕಟ್ಟೆಗಳಲ್ಲಿ ಗೌರಿ - ಗಣೇಶನ ಹಬ್ಬದ ವ್ಯಾಪಾರದ ಭರಾಟೆ ಗುರುವಾರ ಬೆಳಗ್ಗಿನಿಂದಲೇ ಜೋರಾಗಿತ್ತು. ಬೆಲೆ ಏರಿಕೆಯ ಬಿಸಿ ಪ್ರತಿವರ್ಷದಂತೆ ಈ ವರ್ಷವೂ ಗಣೇಶನ ಭಕ್ತರನ್ನು ಕಾಡುತ್ತಿತ್ತು.

ರಾಜ್‌ಕುಮಾರ್‌ ಅಪಹರಣದ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವಗಳ ಭರಾಟೆ ಕಡಿಮೆ ಆಗಿದೆ. ಗಣೇಶೋತ್ಸವದ ಹೆಸರಿನಲ್ಲಿ ನಗರದ ಶಾಂತಿ ಸುವ್ಯವಸ್ಥೆ ಹಾಳಾಗಬಾರದೆಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ನಿಟ್ಟಿನಲ್ಲಿ ಬೀದಿಗಳಲ್ಲಿ ಗಣೇಶನ ಕೂರಿಸಲು ಪೊಲೀಸ್‌ ಇಲಾಖೆ ಅನುಮತಿ ನೀಡಲು ಹಿಂದು ಮುಂದು ನೋಡುತ್ತಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಮನೆಗಣಪನಿಗೆ ಮಾತ್ರ ಹೂವು, ಹಣ್ಣು ಖರೀದಿಸುವವರು ಕಾಣ ಬರುತ್ತಿದ್ದಾರೆ.

ಈ ಬಾರಿ ಗೌರಿ ಹಾಗೂ ಗಣೇಶ ಎರಡೂ ಹಬ್ಬಗಳು ಒಂದೇ ದಿನ ಬಂದಿರುವುದರಿಂದ ಒಂದೇ ದಿನದಲ್ಲೇ ಲಾಭ ಮಾಡುವ ವ್ಯಾಪಾರಿ ಮನೋಭಾವ ಹೂವು - ಹಣ್ಣು - ತರಕಾರಿಯ ಬೆಲೆ ಏರುವಂತೆ ಮಾಡಿದೆ. ಕೃಷ್ಣರಾಜ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯ ಕಾರಣ ವ್ಯಾಪಾರ 3-4 ದಿನ ಸ್ಥಗಿತಗೊಂಡಿತ್ತು. ಆಗ ಆದ ನಷ್ಟವನ್ನು ಇಂದು ತುಂಬಿಕೊಳ್ಳುವ ಪ್ರಯತ್ನವೂ ವ್ಯಾಪಾರಸ್ಥರಿಂದ ನಡೆದಿದೆ.

ನಗರದ ಬಡಾವಣೆಗಳಲ್ಲಿ ಚಿಲ್ಲರೆ ವ್ಯಾಪಾರಿಗಳ ಬಳಿ ದೊರಕುವ ದರಕ್ಕಿಂತ ಹೆಚ್ಚಿನ ದರದಲ್ಲಿ ತರಕಾರಿ, ಹಣ್ಣು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ. ಆದರೂ ಜನಜಂಗುಳಿ ಏನೂ ಕಡಿಮೆ ಇಲ್ಲ. ಬಿಡಿ ಸೇವಂತಿಗೆ ಕೆ.ಜಿಗೆ 30ರಿಂದ 40 ರುಪಾಯಿ ವರೆಗೂ ಮಾರಾಟವಾಗುತ್ತಿದ್ದರೆ, ಕಳೆದ ವಾರ ಕೆ.ಜಿ.ಗೆ 14 ರುಪಾಯಿ ಇದ್ದ ಬಾಳೆ ಹಣ್ಣು ಕೆ.ಜಿ.ಗೆ 20 ರುಪಾಯಿ ದಾಟಿದೆ. ಒಂದು ಮಾರು ಹೂವಿಗೆ 20 ರುಪಾಯಿ ಎನ್ನುತ್ತಿದ್ದಾರೆ ಮಾರಾಟಗಾರರು. ಬಾಳೆ ಕಂದು ಜೋಡಿಗೆ 20 ರಿಂದ 150 ರು. ಅದರ ಗಾತ್ರ, ಎತ್ತರಕ್ಕೆ ತಕ್ಕಂತೆ ಬೆಲೆ. ಮಾವಿನ ಸೊಪ್ಪಿನ ಬೆಲೆಯೂ ಗಗನಕ್ಕೆ ಏರಿದೆ, ಒಂದೆರಡು ಬಾಗಿಲಿಗೆ ಸಾಕಾಗುವಷ್ಟು ಮಾವಿನ ಸೊಪ್ಪು ಬೇಕೆಂದರೂ 5-10 ರು. ತೆರಲೇ ಬೇಕು.

ಇನ್ನು ಕೆ.ಆರ್‌. ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಹೆಚ್ಚಿದೆ. ಆರು, ಎಂಟು ರು. ಇದ್ದ ಬದನೆ, ತೊಗರಿಕಾಯಿ, ಕ್ಯಾರೆಟ್‌ ಎಲ್ಲ ಈಗ ಕೆ.ಜಿ.ಗೆ ಹತ್ತು ರುಪಾಯಿ. ತಾಳೆ ಹೂ, ಡೇರೆ, ಕಮಲದ ಹೂಗಳ ಬೆಲೆಯೂ ಏರಿದೆ. ಗಣೇಶನ ಪೂಜೆಗೆ ತರುವ ಪಂಚಫಲಗಳ ಬೆಲೆಯಂತೂ ಹಿಗ್ಗಾಮುಗ್ಗಾ ಏರಿದೆ. ಮಲ್ಲಿಗೆ, ಕನಕಾಂಬರಗಳ ಬೆಲೆ ಅಂಬರದಲ್ಲೇ ಹಾರಾಡುತ್ತಿವೆ.

ಬೆಲೆ ಎಷ್ಟೇ ಆದರೂ, ಶಕ್ತ್ಯಾನುಸಾರ ಪೂಜಿಸಲೇ ಬೇಕೆನ್ನುವ ಭಕ್ತರು, ಮಾರುಕಟ್ಟೆಯಲ್ಲಿ ಮುಗಿಬಿದ್ದು ಕೊಳ್ಳುತ್ತಿದ್ದಾರೆ. ಗುರುವಾರ ಸಂಜೆಯ ವೇಳೆಗೆ ಬೆಲೆ ಕೊಂಚ ತಗ್ಗಬಹುದು ಎಂಬುದು ಕೆಲವರ ವಾದ. ಬೆಂಗಳೂರಿನಲ್ಲಿ ಈಗ ಮೋಡ ಮುಸುಕಿದೆ. ಸಂಜೆ ಅಥವಾ ರಾತ್ರಿ ಮಳೆ ಬರುವ ಸಾಧ್ಯತೆ ಇದೆ. ಒಂದೆರಡು ಹನಿ ಮಳೆ ಬಿದ್ದರಂತೂ ಬೆಲೆ ಧರೆಗಿಳಿಯುತ್ತದೆ. ಅಷ್ಟರೊಳಗೆ ತಮ್ಮ ಬಂಡವಾಳ ಹಾಗೂ ಲಾಭ ಎರಡನ್ನೂ ದೋಚಲು ವ್ಯಾಪಾರಸ್ಥರು ಅನುಭವದಿಂದ ಕಲಿತ ವ್ಯಾಪಾರ ತಂತ್ರವನ್ನೇಲ್ಲಾ ಬಳಸುತ್ತಿದ್ದಾರೆ.

ದೊಡ್ಡ ಸೈಜ್‌ ಗಣೇಶನಿಗಿಲ್ಲ ಬೇಡಿಕೆ: ಸಾರ್ವಜನಿಕ ಗಣೇಶನ ಆಚರಣೆ ಈ ಬಾರಿ ಕಡಿಮೆ ಆಗಿದೆ. ರಾಜ್‌ ಮರಳಿದ ನಂತರ ಗಣೇಶನ ಕೂರಿಸೋಣ ಎನ್ನುವ ಸಂಘ - ಸಂಸ್ಥೆಗಳ ನಿಲುವಿನಿಂದ ಸದ್ಯಕ್ಕಂತೂ ದೊಡ್ಡ ಸೈಜ್‌ ಗಣಪನಿಗೆ ಬೇಡಿಕೆ ಇಲ್ಲ. ಮನೆಯಲ್ಲಿ ಪೂಜಿಸುವ ಒಂದಡಿ ಗಣಪನ ಮೂರ್ತಿಗಳು 20 ರಿಂದ 70 ರುಪಾಯಿ ವರೆಗೆ ಮಾರಾಟವಾಗುತ್ತಿವೆ. ಜತೆಗೆ ಪುಟ್ಟ ಗೌರಿಯ ಮಾರಾಟವೂ ಭರದಿಂದ ಸಾಗಿದೆ. ಮಾರುಕಟ್ಟೆಗಳಲ್ಲಿ ಕೊಳ್ಳಲು ಬಂದವರೆಲ್ಲ , ಇಲ್ಲಿಗಿಂತ ನಮ್ಮ ಏರಿಯಾದಲ್ಲೇ ಚೀಪಾಗಿತ್ತು. ಹೇಗೂ ಬಂದಾಗಿದೆ, ಒಂದಿಷ್ಟು ಕೊಳ್ಳೋಣ ಎನ್ನುವ ವಾದಕ್ಕೆ ಅಂಟಿಕೊಂಡಿದ್ದು ಕಂಡು ಬಂತು.

ಸದ್ದಿಲ್ಲದ ಬಟ್ಟೆ ವ್ಯಾಪಾರ : ಪ್ರತಿವರ್ಷ ಗಣೇಶನ ಹಬ್ಬಕ್ಕಾಗಿಯೇ ವಿಶೇಷ ರಿಯಾಯಿತಿ, ಬಹುಮಾನದ ಕೂಪನ್‌ ಇತ್ಯಾದಿ ಆಮಿಷ ಒಡ್ಡುತ್ತಿದ್ದ ಬಟ್ಟೆ ವ್ಯಾಪಾರಿಗಳು ಈ ಬಾರಿ ಅಂತಹ ಯಾವುದೇ ಆಮಿಷಗಳನ್ನು ಗ್ರಾಹಕರ ಮುಂದಿಟ್ಟಿಲ್ಲ. ಭಾರಿ ಪ್ರಮಾಣದಲ್ಲಿ ರಿಯಾಯಿತಿಗಳ ಪೈಪೋಟಿಯೂ ಇಲ್ಲ. ಎಲ್ಲೋ ಒಂದೆರಡು ಅಂಗಡಿಗಳಲ್ಲಿ ಈ ಪೈಪೋಟಿ ಇದೆ. ಆದರೂ ಸದ್ದು ಗದ್ದಲ ಇಲ್ಲದೆ, ಬಟ್ಟೆ ವ್ಯಾಪಾರ ಭರದಿಂದ ಸಾಗಿದೆ. ಹಣವಂತರು ಮನೆಮಂದಿಗೆಲ್ಲಾ ಹೊಸ ಬಟ್ಟೆ ಕೊಳ್ಳುತ್ತಿದ್ದರೆ, ಮಧ್ಯಮ ವರ್ಗದ ಮಂದಿ ತಮಗೆ ಹಬ್ಬಕ್ಕೆ ಹೊಸ ಬಟ್ಟೆ ಇಲ್ಲದಿದ್ದರೂ ಬೇಡ ಮಕ್ಕಳಿಗಾದರೂ ಹೊಸ ಬಟ್ಟೆ ಕೊಡಿಸೋಣ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ಸೀರೆಯಂಗಡಿಗಳೆಲ್ಲಾ ಪ್ರಮಿಳಾ ಸಾಮ್ರಾಜ್ಯವೇ ಆಗಿದೆ. ಮಕ್ಕಳ ಬಟ್ಟೆಗಳು ಹಾಗೂ ಸೀರೆ - ಚೂಡಿದಾರ್‌ಗಳ ವ್ಯಾಪಾರವಂತೂ ಬಿಡುವಿಲ್ಲದೆ ಸಾಗಿದೆ. ಕೆಲವೆಡೆ ಸೀರೆಗಳ ಪ್ರದರ್ಶನ ಮಾರಾಟವೂ ನಡೆಯುತ್ತಿದೆ. ಸೀರೆ ಹಾಗೂ ಮಕ್ಕಳ ಬಟ್ಟೆಗಳ ಬೆಲೆ ಕೊಂಚ ಇಳಿದಿದೆ. ನಗರದ ಟೈಲರ್‌ಗಳೆಲ್ಲ ಹಗಲು ರಾತ್ರಿ ದುಡಿಯುತ್ತಿದ್ದಾರೆ.

ಚಿನ್ನಾಭರಣಗಳಿಗೂ ಬೇಡಿಕೆ : ಹಬ್ಬಕ್ಕಾಗಿ ಚಿನ್ನಾಭರಣ ಕೊಳ್ಳುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಚಿಕ್ಕ ಚಿಕ್ಕ ಬೆಳ್ಳಿ ಗಣಪನ ವಿಗ್ರಹಗಳೂ ಮಾರಾಟವಾಗುತ್ತಿವೆ. ಪಂಚಲೋಹದ ವಿಗ್ರಹಗಳಿಗೂ ಬೇಡಿಕೆ ಇದೆ. ಹಬ್ಬದ ಪ್ರಯುಕ್ತ ಚಿನ್ನದ ಬೆಲೆ ಕೊಂಚ ಇಳಿದಿದೆ. ಇಂದು ಸ್ಟಾಂಡರ್ಡ್‌ ಚಿನ್ನದ ಬೆಲೆ 10 ಗ್ರಾಂಗೆ 4510 ರು. ಇತ್ತು. ವಿವಿಧ ನಮೂನೆಯ ಚಿನ್ನಾಭರಣ ಕೊಳ್ಳುವವರು ಚಿನಿವಾರ ಪೇಟೆಯಲ್ಲಿ ಜಮಾಯಿಸಿದ್ದಾರೆ.

ಮೈಕ್‌ಸೆಟ್‌ಗಳ ಹಾವಳಿ ಇಲ್ಲ : ಪ್ರತಿವರ್ಷ ಇಷ್ಟು ಹೊತ್ತಿಗಾಗಲೇ ತಲೆ ಎತ್ತುತ್ತಿದ್ದ ಪೆಂಡಾಲ್‌ಗಳು ಈ ಬಾರಿ ಯಾವ ರಸ್ತೆಯಲ್ಲೂ ಕಾಣಬರುತ್ತಿಲ್ಲ. ಮೈಕಾಸುರನ ಹಾವಳಿಯೂ ಇಲ್ಲ. ಮನೆಯಲ್ಲಿ ಭಕ್ತಿ ಭಾವದಿಂದ ಗಣಪನ ಆರಾಧಿಸುವವರಿಗೆ ಯಾವುದೇ ಅಡ್ಡಿಯಂತೂ ಇಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X