ಯಾವುದೇ ಕ್ಷಣದಲ್ಲಿ ರಾಜ್‌ಕುಮಾರ್ ಬಿಡುಗಡೆ : ಖರ್ಗೆ
ಬೆಂಗಳೂರು : ಸಂಧಾನಕಾರ ಗೋಪಾಲ್ ಅವರು ವೀರಪ್ಪನ್ ಜತೆ ಸಂಪರ್ಕ ಸಾಧಿಸಿದ್ದು, ಅವರು ಈ ಬಾರಿ ತಮ್ಮ ಜತೆಯಲ್ಲೇ ರಾಜ್‌ಕುಮಾರ್ ಹಾಗೂ ಮತ್ತಿತರ ಮೂವರು ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರುತ್ತಾರೆ. ರಾಜ್‌ಕುಮಾರ್ ಅವರ ಬಿಡುಗಡೆ ಯಾವುದೇ ಕ್ಷಣದಲ್ಲಿ ಬೇಕಾದರೂ ಆಗಬಹುದು ಎಂಬ ವಿಶ್ವಾಸವನ್ನು ರಾಜ್ಯ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ವ್ಯಕ್ತಪಡಿಸಿದ್ದಾರೆ.
ಮೈಸೂರು ನ್ಯಾಯಾಲಯವು ವೀರಪ್ಪನ್ ಸಹಚರರ ಮೇಲಿನ ಟಾಡಾ ಮೊಕದ್ದಮೆಗಳನ್ನು ಕೈಬಿಡಲು ರಾಜ್ಯ ಸರಕಾರಕ್ಕೆ ಅನುಮತಿ ನೀಡಿದ್ದು, ಇನ್ನು ಜಾಮೀನು ಪ್ರಕ್ರಿಯೆ ವಿಳಂಬವಾಗುವುದಿಲ್ಲ. ಇದರಿಂದ ವೀರಪ್ಪನ್ ಸಂತುಷ್ಟನಾಗುತ್ತಾನೆ ಹಾಗೂ ರಾಜ್ ಅವರನ್ನು ಗೋಪಾಲ್ ಅವರ ಜತೆಯಲ್ಲೇ ಕಳಿಸಿಕೊಡುತ್ತಾನೆ ಎಂಬ ಭರವಸೆ ತಮಗಿದೆ ಎಂದರು.
ಶಾಲೆಗಳಲ್ಲಿ ಮತ್ತೆ ಬಾಂಬ್ ಬೆದರಿಕೆ: ಬೆಂಗಳೂರಿನ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಹುಸಿ ದೂರವಾಣಿ ಕರೆ ಶನಿವಾರವೂ ಮುಂದುವರಿದಿದೆ. ರಾಜಾಜಿನಗರದ ಕೆಟಿಎಸ್‌ಸಿ ಕಾಲೇಜ್ ಹಾಗೂ ಕಾಮಾಕ್ಷಿ ಪಾಳ್ಯದ ಎಸ್.ವಿ.ಜಿ. ಸನ್‌ರೈಸ್ ಶಾಲೆಗಳು ಇಂದಿನ ಹುಸಿಬಾಂಬ್ ಕರೆಯಿಂದ ತತ್ತರಿಸಿದವು ಎಂದು ನಗರ ಪೊಲೀಸ್ ಕಮೀಷನರ್ ಟಿ. ಮಡಿಯಾಳ್ ತಿಳಿಸಿದರು.
ಆದಾಗ್ಯೂ ಪೊಲೀಸರು, ಶ್ವಾನದಳ ಹಾಗೂ ಬಾಂಬ್ ನಿಷ್ಕಿೃಯ ದಳದೊಂದಿಗೆ ಶಾಲೆಗಳಲ್ಲಿ ಬಾಂಬ್‌ಗೆ ಶೋಧಿಸಿದರು. ತಪಾಸಣೆಯ ನಂತರ ಇವು ಹುಸಿ ಬಾಂಬ್ ಕರೆಗಳು ಎಂದು ಸಾಬೀತಾಯಿತು ಎಂದು ತಿಳಿಸಿದರು.