ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀರಪ್ಪನ್‌ ಹಿಡಿಯಲು ಸೈನ್ಯವೇ ಬರಬೇಕೆ ?

By Super
|
Google Oneindia Kannada News

ಬೆಂಗಳೂರು: ರಾಜ್‌ಕುಮಾರ್‌ ಅವರನ್ನು ಹಿಡಿದಿಟ್ಟುಕೊಳ್ಳುವ ಮೂಲಕ ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳ ಕೈಕಟ್ಟಿರುವ ವೀರಪ್ಪನ್‌ ಹಿಡಿಯಲು ಸೈನ್ಯವೇ ಬರಬೇಕೆ ? ಈ ಹಂತದಲ್ಲಿ ವೀರಪ್ಪನ್‌ ಹಿಡಿಯುವ ವಿಚಾರ ಅಪ್ರಸ್ತುತ ಎನಿಸಿದರೂ ಕಾಡುಗಳ್ಳನ ಭದ್ರಕೋಟೆ ಅಲುಗಾಡಿಸಲು ಸೈನ್ಯದ ನೆರವು ಪಡೆಯುವುದು ಅನಿವಾರ್ಯ ಎನ್ನುತ್ತಾರೆ ಒಬ್ಬ ಮಾಜಿ ಸೈನ್ಯಾಧಿಕಾರಿ.

1993ರಲ್ಲಿ ವೀರಪ್ಪನ್‌ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಗಡಿ ಭದ್ರತಾಪಡೆಯಲ್ಲಿದ್ದ ಜಿ.ಬಿ. ಮುತ್ತುಕುಮಾರ್‌ ಅವರ ಅಭಿಪ್ರಾಯದಂತೆ ವೀರಪ್ಪನ್‌ ಕಾರ್ಯಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಎರಡೂ ರಾಜ್ಯಗಳ ಪೊಲೀಸರನ್ನು ವಾಪಸ್‌ ಕರೆಸಿಕೊಂಡು ವೀರಪ್ಪನ್‌ ಬೇಟೆಗೆ ಸೈನ್ಯವನ್ನು ಕರೆಯಬೇಕು.

ವೀರಪ್ಪನ್‌ ಗ್ಯಾಂಗ್‌ ಸಂಚರಿಸುವ ಕಾಡಿಗೆ ಸಮೀಪದಲ್ಲಿರುವ ಗೋಪಿಚಟ್ಟಿಪಾಳ್ಯಂ ನವರಾದ ಮುತ್ತುಕುಮಾರ್‌, ಕರ್ನಾಟಕ ಹಾಗೂ ತಮಿಳುನಾಡು ಎರಡೂ ಸರಕಾರಗಳ ಪೊಲೀಸರ ಕಾರ್ಯಾಚರಣೆಯನ್ನು ತಾವು ನೋಡಿದ್ದು , ಸೈನ್ಯದಂತೆ ಕಾರ್ಯಾಚರಣೆ ನಡೆಸಲು ಪೊಲೀಸರಿಗೆ ಅನೇಕ ಮಿತಿಗಳಿವೆ. ದಟ್ಟ ಕಾಡಿನೊಳಗೆ ಕಾರ್ಯಾಚರಣೆ ಮಾಡಲು ಪೊಲೀಸರಿಗೆ ತರಬೇತಿ ಕೊರತೆಯಿದೆ ಎಂದು ಹೇಳಿದ್ದಾರೆ.

ಮದ್ರಾಸ್‌ ರೆಜಿಮೆಂಟ್‌ ಸೂಕ್ತ :ವೀರಪ್ಪನ್‌ ಕಾರ್ಯಕ್ಷೇತ್ರವಿರುವ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಮದ್ರಾಸ್‌ ರೆಜಿಮೆಂಟಿನ ಸೇನೆ ಸೂಕ್ತ ಎಂದು ಮುತ್ತುಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ. ಈ ರೆಜಿಮೆಂಟಿನಲ್ಲಿರುವ ಅನೇಕ ಸೈನಿಕರಿಗೆ ಸ್ಥಳೀಯ ಭಾಷೆ ಬರುತ್ತದೆ. ಇದರಿಂದ ಮಾಹಿತಿ ಸಂಗ್ರಹಿಸುವುದು ಸುಲಭ. ಆದರೆ ಇದಕ್ಕಾಗಿ ತಮಿಳುನಾಡು ಮತ್ತು ಕರ್ನಾಟಕ ಸರಕಾರಗಳು ತಮ್ಮ ಪೊಲೀಸ್‌ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳಬೇಕಾದುದು ಅಗತ್ಯ ಎಂದು ಅವರು ಹೇಳಿದ್ದಾರೆ.

ತಮಿಳುನಾಡು ಸರಕಾರಗಳು ಯಾವಾಗಲೂ ವೀರಪ್ಪನ್‌ ಪರವಾದ ನಿಲುವು ತಾಳುತ್ತಲೇ ಬಂದಿವೆ ಎಂದು ಶಂಕಿಸಿರುವ ಮುತ್ತುಕುಮಾರ್‌, 1993ರಲ್ಲಿ ಗಡಿಭದ್ರತಾಪಡೆ ವೀರಪ್ಪನ್‌ನನ್ನು ಆತನ ಗ್ಯಾಂಗ್‌ ಸಮೇತ ಸುತ್ತುವರಿದಿತ್ತು. ಆದರೆ ಆಗಿನ ಮುಖ್ಯಮಂತ್ರಿ ಜಯಲಲಿತಾ ಅವರು ಆಕ್ಪೇಪ ವ್ಯಕ್ತಪಡಿಸಿದ್ದರು. ವೀರಪ್ಪನ್‌ ಸಂಚರಿಸುವ ಭಾಗದಲ್ಲಿ ಅಂದರೆ ತಮಿಳುನಾಡು ರಾಜ್ಯದ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲು ರಾಜ್ಯ ಸರಕಾರದ ಅನುಮತಿ ಪಡೆದಿಲ್ಲ ಆದ್ದರಿಂದ ಆ ಪ್ರದೇಶವನ್ನು ಸೇನಾಪಡೆಗಳು ಪ್ರವೇಶಿಸಬಾರದೆಂದು ಆಗಿನ ಬಿ. ಎಸ್‌. ಎಫ್‌ ಮುಖ್ಯಸ್ಥರಾಗಿದ್ದ ವಾಲ್ಟರ್‌ ದೇವಾರಂ ಅವರ ಮೂಲಕ ಜಯಲಲಿತಾ ಸಂದೇಶ ನೀಡಿದ್ದರೆಂದು ತಿಳಿಸಿದ್ದಾರೆ.

ವೀರಪ್ಪನ್‌ ಬೇಡಿಕೆಗಳಿಗೆ ಮನ್ನಣೆ ನೀಡುವುದೆಂದರೆ :1993ರಲ್ಲಿ ಮುತ್ತುಕುಮಾರ್‌ ಅವರನ್ನು, ಭ್ರತಾಪಡೆ ಮತ್ತು ಪೋಲೀಸರಿಗೆ ಸಹಾಯ ನೀಡಲು ವಿಶೇಷವಾಗಿ ನಿಯೋಜಿಸಲಾಗಿತ್ತು . ಆಗ ಸೈನ್ಯಕ್ಕೆ ಅರಣ್ಯದೊಳಗೆ ನುಗ್ಗಲು ತುಂಬಾ ಉತ್ಸಾಹವಿತ್ತು ಆದರೆ ಪೊಲೀಸರ ಸೂಕ್ತ ಬೆಂಬಲವಿಲ್ಲದೆ ಕಾರ್ಯಾಚರಣೆ ಸ್ಥಗಿತಗೊಂಡಿತು. ಆದರೂ ವೀರಪ್ಪನ್‌ನ ಅನೇಕ ಸಹಚರರನ್ನು ಬಂಧಿಸಲಾಗಿತ್ತು. ಈಗ ಉದ್ಬವಿಸಿರುವ ಪರಿಸ್ಥಿಯಲ್ಲಿ ವೀರಪ್ಪನ್‌ ಬೇಡಿಕೆಗಳಿಗೆ ಮನ್ನಣೆ ನೀಡುವುದೆಂದರೆ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆ. ಇದರಿಂದ ಇನ್ನೊಬ್ಬ ಪ್ರಭಾಕರನ್‌ (ಎಲ್ಟಿಟಿಇ) ಹುಟ್ಟಲು ಅವಕಾಶ ನೀಡಿದಂತಾಗುತ್ತದೆ.

ಇದೆಲ್ಲದಕ್ಕಿಂತಲೂ ಮುಖ್ಯವಾದ ಸುದ್ದಿ ಎಂದರೆ ವೀರಪ್ಪನ್‌ ಗ್ಯಾಂಗನ್ನು ಅನೇಕ ತಮಿಳು ಉಗ್ರಗಾಮಿಗಳು ಸೇರಿದ್ದಾರೆ. ಇದು ಬಹುಶಃ ಕರುಣಾನಿಧಿ ಅವರ ಗಮನಕ್ಕೆ ಬಂದಿರಲಿಕ್ಕಿಲ್ಲ. ಇದು ಹೀಗೇ ಮುಂದುವರಿದರೆ ದಕ್ಷಿಣ ಭಾರತ ಭಯೋತ್ಪಾದಕ ಚಟುವಟಿಕೆಗಳ ತಾಣವಾಗಲಿದೆ ಎಂದು ಎಚ್ಚರಿಸಿರುವ ಮುತ್ತುಕುಮಾರ್‌, ಕರಾವಳಿ ಪ್ರದೇಶ ವನ್ನು ಕಾರ್ಯಕ್ಷೇತ್ರವನ್ನಾಗಿಸಿಕೊಳ್ಳವ ಹುನ್ನಾರ ನಡೆದಿದೆ. ವೀರಪ್ಪನ್‌ನ ತಮಿಳುಪರ ಬೇಡಿಕೆಗಳು ಇದನ್ನು ಸೂಚಿಸುತ್ತವೆ. ವೀರಪ್ಪನ್‌ ಹಾಗೂ ವೀರಪ್ಪನ್‌ನಂಥವರನ್ನು ನಿಗ್ರಹಿಸಲು ರಾಜಕೀಯ ಇಚ್ಛಾಶಕ್ತಿ ಹಿಂದೆಂದಿಗಿಂತಲೂ ಇಂದು ಬಹು ಮುಖ್ಯವಾಗಿ ಬೇಕಾಗಿದೆ ಎಂದು ಅವರು ಹೇಳಿದ್ದಾರೆ.

English summary
army is the only option to nab veerappan, says former army officer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X