ರಿತೇಶ್, ಮಾನನ್‌ಗೆ ನಾಕ್‌ಔಟ್ ಹಾದಿ ಸುಗಮ
ಬೆಂಗಳೂರು : ಭಾರತದ ರಿತೇಶ್ ಷಾ, ರಿಶಬ್ ತುಕ್ರಾಲ್, ಮಾನನ್ ಚಂದ್ರ ಹಾಗೂ ಜಸ್ವಿಂದರ್ ಸಿಂಗ್ ಇಪ್ಪತ್ತೊಂದು ವರ್ಷದೊಳಗಿನವರ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ನ 4ನೇ ದಿನವಾದ ಬುಧವಾರ ಮುನ್ನಡೆ ಸಾಧಿಸಿದ್ದಾರೆ.
ನಗರದ ಬಿಲಿಯರ್ಡ್ಸ್ ಸಭಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಕತಾರ್‌ನ ಅಹಮದ್ ಅಲ್ ಸುಲೈತಿ ಅವರನ್ನು 4-0 ಫ್ರೇಂಗಳಿಂದ ರಿತೇಶ್ ಸೋಲಿಸಿದರು. ಮಲೇಶಿಯಾದ ನೊಗ್ ಮಿನ್ ಚೂನ್ ಅವರನ್ನು 4- 0 ಫ್ರೇಂಗಳಿಂದ ಸೋಲಿಸಿದ ಭಾರತದ ಮತ್ತೊಬ್ಬ ಆಟಗಾರ ರುಶಬ್ ತುಕ್ರಾಲ್ ಟೂರ್ನಿಯಲ್ಲಿ ಮುನ್ನಡೆ ಸಾಧಿಸಿದರು.
ಲೀಗ್‌ನ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರುತ್ತಾ ಬಂದಿರುವ ಮಾನನ್ ಚಂದ್ರ -ನ್ಯೂಜಿಲೆಂಡ್‌ನ ವೇಯ್ನ್ ಬೆಲ್‌ಮೌಂಟ್ ಅವರನ್ನು 4- 1 ಫ್ರೇಂಗಳಿಂದ ಸೋಲಿಸಿ, ನಾಕ್‌ಔಟ್ ಪ್ರವೇಶಿಸುವ ಅವಕಾಶವನ್ನು ಉತ್ತಮ ಪಡಿಸಿಕೊಂಡರು. ‘ಬಿ’ ಗುಂಪಿನಲ್ಲಿ ಭಾರತದ ಜಸ್ವಿಂದರ್ ಸಿಂಗ್ ನ್ಯೂಜಿಲೆಂಡ್‌ನ ವಿಲ್ಲಿ ಫ್ಲೋರೆನ್ಸ್ ವಿರುದ್ಧ 4- 2 ಫ್ರೇಂಗಳಿಂದ ಜಯ ಸಾಧಿಸಿದರು.
ಮರ್ಫಿ, ಜಿಮ್ಮಿಗೆ ಸೋಲು : ಚಾಂಪಿಯನ್‌ಷಿಪ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದ ಐರ್ಲೆಂಡಿನ ಅಗ್ರ ಶ್ರೇಯಾಂಕದ ಆಟಗಾರ ರಾಬರ್ಟ್ ಮರ್ಫಿ ಹಾಗೂ 8ನೇ ಶ್ರೇಯಾಂಕದ ಚೀನಾದ ಆಟಗಾರ ಜಿಮ್ಮಿ ಚೆಯ್ಯುಂಗ್ ಅನಿರೀಕ್ಷಿತ ಸೋಲುಂಡರು. ಲ್ಯಾಟಿವಿಯಾದ ಓಲಿವರ್ ಅನ್ಸ್ 4- 3 ಫ್ರೇಂಗಳಿಂದ ಮರ್ಫಿ ಅವರನ್ನು ಸೋಲಿಸಿದರೆ, ಥಾಯ್ಲೆಂಡ್‌ನ ಅರುಣ್‌ಪ್ರಾಪ್ ಪುತ್ರಕಲ್ 4- 0 ಫ್ರೇಂಗಳಿಂದ ಚೆಯ್ಯುಂಗ್ ವಿರುದ್ಧ ಗೆದ್ದರು.
ಮುಖಪುಟ / ಆಟದ ಅಂಗಳ