Get Updates
Get notified of breaking news, exclusive insights, and must-see stories!

ವೀರಪ್ಪನ್‌ ಗಡುವು ನೀಡಿಲ್ಲ, 19ರೊಳಗೆವಿವರಣೆ ಕೇಳಿದ್ದಾನಷ್ಟೇ - ಕೃಷ್ಣ

ನಮ್ಮ ಪ್ರತಿನಿಧಿಯಿಂದ

ಬೆಂಗಳೂರು : ರಾಜ್‌ ಬಿಡುಗಡೆಗೆ ವೀರಪ್ಪನ್‌ ಗಡುವು ವಿಧಿಸಿಲ್ಲ . ಆದರೆ, ತನ್ನ ಬೇಡಿಕೆಗಳಿಗೆ ಸಂಬಂಧಿಸಿದಂತೆ ಆಗಸ್ಟ್‌ 19ರೊಳಗೆ ಉತ್ತರ ಕೊಡಬೇಕೆಂದು ಮಾತ್ರ ತಿಳಿಸಿದ್ದಾನೆ ಎಂದು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಶನಿವಾರ ಇಲ್ಲಿ ತಿಳಿಸಿದರು.

ಇದು ಅತ್ಯಂತ ಸೂಕ್ಷ್ಮವಾದ ವಿಷಯ, ನಾಜೂಕಿನಿಂದ ಸಮಸ್ಯೆಯ ಪರಿಹಾರಕ್ಕೆ ಸರಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಜನತೆ ತಾಳ್ಮೆ ಕಳೆದು ಕೊಳ್ಳದೆ ಸರಕಾರದೊಂದಿಗೆ ಸಹಕರಿಸಬೇಕು ಎಂದು ಅವರು ಮತ್ತೊಮ್ಮೆ ಮನವಿ ಮಾಡಿಕೊಂಡರು.

ಕಾವೇರಿ ನದಿ ಪ್ರಾಧಿಕಾರವನ್ನು ರದ್ದು ಮಾಡಿ, ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ವೀರಪ್ಪನ್‌ ತಿಳಿಸಿದ್ದಾನೆ, ಕಾವೇರಿ ನದಿ ಪ್ರಾಧಿಕಾರ ಕರ್ನಾಟಕದ ಪರವಾಗಿದೆ ಎಂಬ ಅಭಿಪ್ರಾಯವನ್ನೂ ಆತ ವ್ಯಕ್ತಪಡಿಸಿದ್ದಾನೆ. ಆದರೆ, ಪ್ರಾಧಿಕಾರವನ್ನು ರದ್ದು ಮಾಡಿ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಒಪ್ಪಿಸುವುದು ಕರ್ನಾಟಕದ ಕೈಲಿಲ್ಲ. ಅಷ್ಟೇಕೆ ತಮಿಳುನಾಡಿಗೂ ಇದು ಸಾಧ್ಯವಿಲ್ಲ. ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕೇರಳ ಹಾಗೂ ಪಾಂಡಿಚೇರಿ ರಾಜ್ಯಗಳೂ ಬರುತ್ತವೆ, ಕೇಂದ್ರ ಸರಕಾರವೂ ಇದರಲ್ಲಿ ಭಾಗಿ. ಹೀಗಾಗಿ ಈ ಬೇಡಿಕೆ ಸಾಧುವೂ ಅಲ್ಲ , ಸಮಂಜಸವೂ ಅಲ್ಲ . ಇದನ್ನು ವೀರಪ್ಪನ್‌ಗೆ ಮನವರಿಕೆ ಮಾಡಿಸಲಾಗುವುದು ಎಂದು ಅವರು ಹೇಳಿದರು.

ಚೆನ್ನೈನಿಂದ ಹಿಂತಿರುಗಿದ ನಂತರದ ಬೆಳವಣಿಗೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಮುಖ್ಯಮಂತ್ರಿಗಳು, ವೀರಪ್ಪನ್‌ನ ಹೊಸ ಬೇಡಿಕೆಗಳ ಬಗ್ಗೆಯೂ ಬೆಳಕು ಚೆಲ್ಲಿದರು. ಕರ್ನಾಟಕದಲ್ಲಿ ತಮಿಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆ ಮಾಡಬೇಕು. ಹತ್ತನೇ ತರಗತಿವರೆಗೆ ತಮಿಳು ಭಾಷೆ ಎರಡನೇ ಭಾಷೆಯಾಗ ಬೇಕು ಎಂದು ಕೇಳಲಾಗಿದೆ. ತಮಿಳುನಾಡಿನಲ್ಲಿ ಕನ್ನಡ ಕಡ್ಡಾಯ ಮಾಡಿ ಎಂದರೆ ಆದೀತೆ ಎಂದು ಪ್ರಶ್ನಿಸಿದರು.

ಈ ಬೇಡಿಕೆಯನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂಬುದು ವೀರಪ್ಪನ್‌ ನಿಲುವಾಗಿದೆ. ಆದರೆ, ಸಮಗ್ರ ನೀತಿಯನ್ವಯ ಯಾವುದೇ ರಾಜ್ಯ ಸರಕಾರಕ್ಕೆ ಈ ರೀತಿ ಮಾಡಲು ಬರುವುದಿಲ್ಲ. ಎಲ್ಲ ರಾಜ್ಯಗಳಿಗೆ ಅನ್ವಯವಾಗುವ ರೀತಿಯಲ್ಲಿ ನಾವು ರಾಜ್ಯಾಂಗ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಇದನ್ನು ವೀರಪ್ಪನ್‌ಗೆ ತಿಳಿಸಲಾಗುವುದು ಎಂದರು.

ತಿರುವಳ್ಳವರ್‌ ಪ್ರತಿಮೆ: ಬೆಂಗಳೂರಿನಲ್ಲಿ ತಿರುವಳ್ಳವರ್‌ ಪ್ರತಿಮೆ ಸ್ಥಾಪಿಸುವ ದಿನಾಂಕ ಪ್ರಕಟಿಸುವಂತೆ ವೀರಪ್ಪನ್‌ ಕೇಳಿದ್ದಾನೆ. ಸರ್ವಜ್ಞಮೂರ್ತಿಯ ಪ್ರತಿಮೆ ಸಿದ್ಧವಾಗುತ್ತಿದ್ದಂತೆ, ಎರಡೂ ರಾಜ್ಯಗಳು ಚರ್ಚಿಸಿ ದಿನಾಂಕ ನಿಗದಿ ಮಾಡುವುದಾಗಿ ಅವರು ಹೇಳಿದರು.

ಕಾವೇರಿ ಗಲಭೆಗೆ ಸಂಬಂಧಿಸಿದಂತೆ ಸದಾಶಿವ ಆಯೋಗದ ತಡೆಯಾಜ್ಞೆಗೆ ಮಾರ್ಪಾಡು ಮಾಡಲಾಗಿದೆ. ಪರಿಹಾರ ನೀಡುವ ಪ್ರಕ್ರಿಯೆ ನಡೆದೇ ಇದೆ. ಈಗಾಗಲೇ 2 ಕೋಟಿಗೂ ಹೆಚ್ಚು ಪರಿಹಾರ ನೀಡಲಾಗಿದೆ. ಕೆಲವು ಅರ್ಜಿಗಳ ವಿಚಾರಣೆ ನಡೆದಿದೆ ಎಂದು ಕೃಷ್ಣ ವಿವರಿಸಿದರು.

ಕನ್ನಡಿಗರಿಗೇ ಅನ್ಯಾಯ: ನೇಮಕಾತಿಗೆ ಸಂಬಂಧಿಸಿದಂತೆ ವೀರಪ್ಪನ್‌ ಬೇಡಿಕೆ ಇದೆ. ಆದರೆ, ಕರ್ನಾಟಕದಲ್ಲಿ ಕನ್ನಡಿಗರಿಗೇ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂಬುದು ನಮ್ಮ ವಾದ. ಕಾವೇರಿ ವಿಷಯ, ತಮಿಳು ಭಾಷೆ ಹಾಗೂ ನೇಮಕಾತಿಗೆ ಸಂಬಂಧಿಸಿದಂತೆ ಈ ರೀತಿ ಅತಿರೇಕದ ಬೇಡಿಕೆಗಳನ್ನು ವಿಧಿಸುವುದು ವಿಹಿತವಾದುದಲ್ಲ ಎಂದು ಕೃಷ್ಣ ಅಭಿಪ್ರಾಯಪಟ್ಟರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+