• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮರೆಯಲಾಗದ ಸಾಮ್ರಾಜ್ಯಕ್ಕೆ ಮರುಪಯಣ

By Super
|
ಕಲ್ಲಿನ ಬೆನ್ನೇರಿ ಬಂತು ಕಲ್ಪನಾ ವಿಲಾಸ ಪಂಪಾಪತಿ ಅಥವಾ ವಿರೂಪಾಕ್ಷ ದೇಗುಲ ಸಮುಚ್ಚಯ ಹಂಪೆಯ ಕೇಂದ್ರಸ್ಥಳ. ಮೊದಲು ನಿರಾಡಂಬರವಾಗಿದ್ದು, ಕಾಲಕ್ರಮೇಣ ಮಂಟಪ ಪ್ರಾಂಗಣಗಳೊಂದಿಗೆ ಬೆಳೆದು ವಿಶಾಲ ಸಮುಚ್ಚಯವಾಗಿ ಬೆಳೆದಿದೆ. ಗುಡಿಯ ಮುಂಭಾಗದಲ್ಲಿರುವ 50ಮೀ ಎತ್ತರದ, 11 ಅಂತಸ್ತುಗಳ ಬಿಷ್ಟಪ್ಪಯ್ಯನ ಗೋಪುರದ ತಳಭಾಗ 63ಮೀ ಉದ್ದ ಮತ್ತು 41ಮೀ ಅಗಲವುಳ್ಳದ್ದಾಗಿದೆ. ಇದರ ಹಿಂದೆ ರಾಯಗೋಪುರವೆಂದು ಹೆಸರಾಗಿರುವ ಚಿಕ್ಕಗೋಪುರವಿದೆ. ಇದು ಕೃಷ್ಣದೇವರಾಯ ತನ್ನ ಪಟ್ಟಾಭಿಷೇಕ ಸಂದರ್ಭದಲ್ಲಿ ಕಟ್ಟಿಸಿದ ಗೋಪುರ. ಇದಕ್ಕೂ ಹಿಂದೆ ಕನಕಗಿರಿ ಗೋಪುರ ಎನ್ನುವ ಮತ್ತೊಂದು ದೊಡ್ಡ ಗೋಪುರವಿದೆ. ಪಂಪಾಪತಿ, ಪಂಪಾದೇವಿ ಇಲ್ಲಿನ ಮುಖ್ಯದೈವಗಳು. ಹರಿಹರರ ಸಾಮ್ಯವನ್ನು ಸೂಚಿಸುವ ಯೋಗಾ ನರಸಿಂಹ ಇರುವುದು ಇದೇ ಪ್ರಾಕಾರದಲ್ಲಿ.

ದೇಗುಲದಲ್ಲಿ ತಪ್ಪದೆ ತ್ರಿಕಾಲಜ್ಞಾನ ನಂದಿಯನ್ನು ನೋಡಲೇಬೇಕು. ಮೂರುತಲೆಯ ಈ ನಂದಿ ದರ್ಶಿಸದಿದ್ದರೆ ಪಂಪಾಯಾತ್ರೆ ನಿಷ್ಪ್ರಯೋಜಕವೆಂಬುದು ಒಂದು ನಂಬಿಕೆ.

ಬಿಷ್ಟಪ್ಪಯ್ಯನ ಗೋಪುರದ ಮುಂಭಾಗದಲ್ಲಿ ಒಂದು ಕಿಮಿ ಉದ್ದಕ್ಕೆ ಹರಡಿಕೊಂಡಿರುವ ಹಂಪೆಯ ಪೇಟೆಬೀದಿ ಬಗ್ಗೆ ಹೆಚ್ಚು ತಿಳಿಯಬೇಕೆಂದರೆ ನೀವು ವಿದೇಶಿ ಬರಹಗಾರರ ಬರಹಗಳತ್ತಲೇ ಹೊರಳಬೇಕು. ಈಗೇನಿದ್ದರೂ ವೈಭವ ನೆನಪಿಸಿಕೊಳ್ಳುತ್ತ ದಿನನೂಕುವ ಮುದಿಮುಂಡೆಯ ವೈಭವ ಈ ಬೀದಿಯದು.

ಬಜಾರಿನ ಕೊನೆಯಲ್ಲಿ ಎರಡು ಮಂಟಪಗಳಿವೆ. ಒಂದು ಕರಿಯ ನುಣುಪು ಕಂಬಗಳ, ಎರಡು ಅಂತಸ್ತುಗಳ ವಿಶಾಲ ಮಂಟಪ. ಪಂಪಾಪತಿಗೆ ಅಭಿಮುಖವಾಗಿರುವ ಎದುರು ಬಸವ ಇರುವುದು ಮತ್ತೊಂದು ಮಂಟಪದಲ್ಲಿ. ಬಸವನ ಹಿಂದೆ ಮಾತಂಗ ಪರ್ವತ ಕಾಣುತ್ತದೆ. ಮತಂಗರು ತಪಸ್ಸಾಚರಿಸಿದ ಈ ಸುಂದರ ಪರ್ವತವೇರಲು ಪಾವಟಿಗಳಿವೆ.

ಎದುರು ಬಸವನ ಮುಂಭಾಗದಲ್ಲಿ ನದೀಕಡೆಗೆ ಹೊರಳುವ ಸೀಳುದಾರಿಯಲ್ಲಿ ಋಷ್ಯಮೂಕ ಪರ್ವತವಿದೆ. ವಾಲಿಗಂಜಿದ ಸುಗ್ರೀವ ಆಶ್ರಯ ಪಡೆದುಕೊಂಡಿದ್ದುದು ಇದೇ ಪರ್ವತದಲ್ಲಂತೆ. ಸಮಾಪದಲ್ಲಿಯೆ ಇರುವ ಚಕ್ರತೀರ್ಥದ ದಡದ ಬಳಿ ಕೋದಂಡರಾಮನ ಗುಡಿಯಿದೆ. ಇದರ ಹಿಂಭಾಗದಲ್ಲಿ ಸೂರ್ಯನಾರಾಯಣನ ಗುಡಿಯಿದೆ. ಮತ್ತೂ ಹಿಂಭಾಗಕ್ಕೆ ಇರುವ ಗುಡ್ಡಕ್ಕೆ ಹೊಂದಿಕೊಂಡಂತೆ ಯಂತ್ರೋದ್ಧಾರಕ ಹನುಮಂತದೇವರ ಗುಡಿ ಇದೆ. ಮತ್ತೊಂದು ಮುಖ್ಯ ದೇವಾಲಯ ಅಚ್ಯುತರಾಯನ ಗುಡಿಯಿರುವುದು ಸೂಳೆಬಜಾರಿನಲ್ಲಿ. ವಿಜಯನಗರ ಸಾಮ್ರಾಜ್ಯದ ವೇಶ್ಯೆಯರು ವಾಸಿಸುತ್ತಿದ್ದುದು ಇಲ್ಲಿಯೆ.

ಶಿಲ್ಪಕಲಾ ವಿಮರ್ಶಕರಾದ ಫರ್ಗ್ಯುಸನ್‌, ಲಾಂಗ್‌ಹರ್ಸ್ಟ್‌ರ ಮೆಚ್ಚುಗೆ ಪಡೆದ ವಿಜಯ ವಿಠ್ಠಲ ಗುಡಿ ಹಂಪೆಯಲ್ಲಿನ ಗುಡಿಗಳಲ್ಲೆಲ್ಲಾ ಸುಂದರವಾದುದು. ಏಕಶಿಲೆಯಲ್ಲಿ ಸಣ್ಣಸಣ್ಣ ಅಂಗಭೂತವಾದ ಗುಂಪುಕಂಬಗಳ ಕೆತ್ತನೆಯ ಸ್ಥೂಲಾಕಾರದ ಕಂಬಗಳು ಆಶ್ಚರ್ಯ ಹುಟ್ಟಿಸುವಷ್ಟು ಸೊಗಸಾಗಿವೆ. ಜಗತ್ಪ್ರಸಿದ್ಧ ಶಿಲ್ಪ ಚಮತ್ಕೃತಿ ಕಲ್ಲಿನ ತೇರು ಇದೇ ದೇಗುಲದ ಅಂಗಳದಲ್ಲಿದೆ.

ಹಂಪೆಯ ಪಂಚಾದ್ರಿಗಳಲ್ಲಿ ಒಂದಾದ ಹೇಮಕೂಟ ಪಂಪಾಪತಿ ಗುಡಿಯ ದಕ್ಷಿಣಕ್ಕಿದೆ. ಈ ಗುಡ್ಡದ ಮೇಲೆ ಶೈವ, ವೈಷ್ಣವ ವಿಗ್ರಹಗಳಿರುವ ದೇಗುಲಗಳಿವೆ. ಹೇಮಕೂಟದ ತುದಿಯಲ್ಲಿರುವ ಅಗಸಿ ಬಾಗಿಲ ಪಕ್ಕದಲ್ಲಿರುವ ದೊಡ್ಡ ಬಂಡೆಯ ಮೇಲೆ 5ಮೀ ಎತ್ತರದ ಭಾರೀ ಆಕಾರದ ಕಡಲೆಕಾಳು ಗಣಪತಿ ವಿಗ್ರಹವಿದೆ. ದಕ್ಷಿಣಕ್ಕೆ ಸ್ವಲ್ಪ ದೂರದಲ್ಲಿ ಮತ್ತೊಂದು ಪ್ರಸಿದ್ಧ ಗಣಪತಿ 2.5ಮೀ ಎತ್ತರದ ಸಾಸಿವೆಕಾಳು ಗಣಪತಿ ವಿಗ್ರಹವಿದೆ.

ಹೇಮಕೂಟದ ಪೂರ್ವಭಾಗದಲ್ಲಿರುವ ಬೆಟ್ಟಪ್ರದೇಶಕ್ಕೆ ರತ್ನಕೂಟ ಎಂದು ಹೆಸರು. ನೋಡಲೇಬೇಕಾದ ಹಂಪೆಯ ಇತರ ಸ್ಥ ಳಗಳಲ್ಲಿ ಮಹಾನವಮಿದಿಬ್ಬ, ದರ್ಬಾರ್‌ ಹಾಲ್‌, ಕಮಲಮಹಲ್‌, ಗಜಶಾಲೆ, ರಾಣಿಯರ ಸ್ನಾನದ ತೊಟ್ಟಿ ಮುಖ್ಯವಾದವು. ಹಂಪೆಯ ಮತ್ತೊಂದು ಆಕರ್ಷಣೆ ಕನ್ನಡ ವಿಶ್ವವಿದ್ಯಾನಿಲಯ. ಕನ್ನಡತನವನ್ನು ಬೆಳಸುವ ಉದ್ದೇಶ ಈ ವಿಶ್ವವಿದ್ಯಾಲಯದ್ದು.

ನೋಡಬೇಕಾದ ಸ್ಥಳಗಳು ಹಂಪೆಯಲ್ಲಿ ಸುತ್ತಿದಷ್ಟೂ ಉಳಿಯುತ್ತವೆ. ಹಂಪೆಯ ಪ್ರತಿ ಕಲ್ಲೂ ಜೀವಂತ ಎನ್ನುವುದು ಈ ಕಾರಣಕ್ಕಾಗಿಯೆ.

ಹಂಪೆಯನ್ನು ತಲುಪುವ ಬಗೆ

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪೆ ರಾಷ್ಟ್ರೀಯ ಹೆದ್ದಾರಿ 13ರ ಸಂಪರ್ಕವನ್ನು ಹೊಂದಿದೆ. ಬೆಂಗಳೂರಿನಿಂದ ಹಂಪೆಗೆ 338ಕಿಮೀ ದೂರ. ಬೆಂಗಳೂರಿನಿಂದ ಹಂಪೆಗೆ ಪ್ರತಿನಿತ್ಯ ಬಸ್ಸುಗಳು ಓಡಾಡುತ್ತವೆ. ಹತ್ತಿರದ ವಿಮಾನ ನಿಲ್ದಾಣ 259ಕಿಮೀ ದೂರದ ಬೆಳಗಾಂನಲ್ಲಿದೆ.

ಹಂಪೆಯಲ್ಲಿ ವಸತಿ ಸೌಕರ್ಯಗಳಿಲ್ಲ. ವಸತಿಗೆ 13ಕಿಮೀ ದೂರದ ಹೊಸಪೇಟೆಗೆ ಹೋಗಬೇಕು. ಪ್ರವಾಸೋದ್ಯಮ ಇಲಾಖೆಯವರು ಪ್ರತಿದಿನ ಹೊಸಪೇಟೆಯಿಂದ ಹಂಪೆ ಮತ್ತು ಟಿಬಿ ಡ್ಯಾಂಗಳಿಗೆ ಬಸ್‌ ಸೌಲಭ್ಯ ಕಲ್ಪಿಸಿದ್ದಾರೆ. ಈ ಬಸ್‌ಗಳು ಬೆಳಗ್ಗೆ 9-30ಕ್ಕೆ ಹೊರಟು ಸಂಜೆ 5-30ಕ್ಕೆ ಹಿಂತಿರುಗುತ್ತವೆ. ಒಬ್ಬರಿಗೆ 60ರುಪಾಯಿ . ಪ್ರಯಾಣದರ. ಉಳಿದ ವಿವರಗಳಿಗೆ ಕೆಳಗಿನ ವಿಳಾಸಗಳನ್ನು

ಸಂಪರ್ಕಿಸಬಹುದು, ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಸೇಂಟ್‌ಮಾರ್ಕ್ಸ್‌ ರಸ್ತೆ, ಬೆಂಗಳೂರು-1 ಫೋನ್‌- 579139ಅಥವಾಪ್ರವಾಸೋದ್ಯಮ ಮಾಹಿತಿ ಕೇಂದ್ರ, ಕಾವೇರಿ ಭವನ, ಕಂಪೇಗೌಡ ರಸ್ತೆ, ಬೆಂಗಳೂರು. ಫೋನ್‌- 2215489

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hampi, Vijayanagar, ruin, krishnadevaraya, hakka, bukka, bellary, hospet, ratha, ugranarasimha, ruins, kamal mahal, vijayavithala temple

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more