ವಿಕೃತಕಾಮಿ ವಿಸ್ಮಯ ಸಂಗತಿಗಳು: ಎಂಡ್ ಎಫ್ ಎಸ್ಕೇಪ್ ಜರ್ನಿ
ಬೆಂಗಳೂರು, ಸೆ. 29: ಗಲ್ಲುಶಿಕ್ಷೆಗೆ ಗುರಿಯಾಗಿರುವ ವಿಕೃತಕಾಮಿ, ಸರಣಿ ಹಂತಕ ಉಮೇಶ್ ರೆಡ್ಡಿ ಪೊಲೀಸರಿಗೆ ಅನೇಕ ಬಾರಿ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಅತ್ಯಾಚಾರ ಮಾಡಿದ ಬಳಿಕ ಕೊಲೆ ಮಾಡಿ ಅವರ ಒಳ ಉಡುಪುಗಳನ್ನು ಕದಿಯುತ್ತಿದ್ದ. ಈತನನ್ನು ಮೊದಲು ಗುರುತು ಪತ್ತೆ ಮಾಡಿದ್ದು ಶಾಲಾ ಬಾಲಕಿ, ಅದು ಗಣರಾಜ್ಯೋತ್ಸವ ಪೆರೇಡ್‌ನಲ್ಲಿ. ವಿಕೃತಕಾಮಿ ಉಮೇಶ್ ರೆಡ್ಡಿ ವಿಚಾರದಲ್ಲಿ ಮರೆಯಲಾಗದ ರೋಚಕ ಸಂಗತಿಗಳ ವಿವರ ಇಲ್ಲಿದೆ.
ಕೈಕೋಳ ಸಮೇತ ಎಸ್ಕೇಪ್ ಆಗಿದ್ದ: ಯಾರೋ ಟಿವಿಎಸ್ ಗಾಡಿಯಲ್ಲಿ ಬಂದು ಆಕ್ಸಿಡೆಂಡ್ ಮಾಡಿಕೊಂಡು ಬಿದ್ದೋಗಿದ್ದಾನೆ ಅಂತ ಸುದ್ದಿ ಬಂತು. ಕೂಡಲೇ ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಿದಾಗ ಅವನು ವಿಕೃತ ಕಾಮಿ ಉಮೇಶ್ ರೆಡ್ಡಿ ಎಂಬ ವಿಚಾರ ಗೊತ್ತಾಯಿತು. ಅವನ ವಿರುದ್ಧ ಅನೇಕ ಕೋರ್ಟ್ ವಾರಂಟ್ ಇತ್ತು. ಎಚ್ಚರಿಕೆ ವಹಿಸಿ ಆಸ್ಪತ್ರೆಗೆ ಸೇರಿಸಿ ಎರಡು ಕೈಗೆ ಲಾಕಪ್ ಹಾಕಿ ಆತನಿಗೆ ಚಿಕಿತ್ಸೆ ಕೊಡಿಸುತ್ತಿದ್ದ ಹಾಸಿಗೆಗೆ ಲಾಕ್ ಮಾಡಿಟ್ಟಿದ್ದೆವು! ರಾತ್ರಿಯಲ್ಲಿ 70 ಕೆ.ಜಿ. ತೂಕದ ಹಾಸಿಗೆ ಸಮೇತ ಎಸ್ಕೇಪ್ ಆಗಿದ್ದ. ಹುಡುಕಾಡಲು ಶುರು ಮಾಡಿದಾಗ ಪಶು ಆಸ್ಪತ್ರೆಯ ಕಾಂಪೌಂಡ್ ಬಳಿ ಬಿದ್ದಿದ್ದ. ಕೂಡಲೇ ಅವನನ್ನು ಬಂಧಿಸಿ ಚಿತ್ರದುರ್ಗದ ಪೊಲೀಸರಿಗೆ ಒಪ್ಪಿಸಿದ್ದೆವು. ಅಂತ ಕಿಲಾಡಿ ಉಮೇಶ್ ರೆಡ್ಡಿ!
ಹೈಕೋರ್ಟ್ ತೀರ್ಪಿನಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಸರಣಿ ಹಂತಕ, ವಿಕೃತ ಕಾಮಿ ಉಮೇಶ್ ರೆಡ್ಡಿಯ ಬಂಧನದ ರೋಚಕ ಸಂಗತಿಯನ್ನು ನಿವೃತ್ತ ಎಎಸ್ಪಿ ಬಲರಾಮೇಗೌಡ ಅವರು ಒನ್ಇಂಡಿಯಾ ಕನ್ನಡ ಜತೆ ಹಂಚಿಕೊಂಡರು. ಆತನ ಬಳಿಯಿದ್ದ ಬ್ಯಾಗ್‌ನಲ್ಲಿ ಮಹಿಳೆಯರ ಒಳ ಉಡುಪು ನೋಡಿ ಇವನೇ ಉಮೇಶ್ ರೆಡ್ಡಿ ಎಂಬುದನ್ನು ಖಚಿತ ಪಡಿಸಿಕೊಂಡಿದ್ದೆವು. ಅವನ ವಿಕೃತ ಇತಿಹಾಸ ಅತಿ ಘೋರವಾದದ್ದು ಎಂದು ಹಳೇ ಪ್ರಕರಣವನ್ನು ಮೆಲುಕು ಹಾಕಿದರು.

ಸಿಆರ್‌ಪಿಎಫ್ ಯೋಧ ಈ ಉಮೇಶ್ ರೆಡ್ಡಿ !
ವಿಕೃತ ಕಾಮಿ ಉಮೇಶ್ ರೆಡ್ಡಿ ಚಿತ್ರದುರ್ಗ ಜಿಲ್ಲೆಯಲ್ಲಿ 1969 ರಲ್ಲಿ ಜನಿಸಿದ್ದು. ಬಸಪ್ಪ ಮಾಲಿಗೆ ಉಮೇಶ್ ರೆಡ್ಡಿ ಪೂರ್ಣ ಹೆಸರು. ಈತ ಸಿಆರ್‌ಪಿಎಫ್ ಯೋಧನಾಗಿ ಅಯ್ಕೆಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದ. ಕಮಾಂಡಂಟ್‌ನ ಮನೆಯ ಭದ್ರತೆಗೆ ನಿಯೋಜನಗೊಂಡಿದ್ದ ಉಮೇಶ್ ರೆಡ್ಡಿ ಕಮಾಂಡಂಟ್‌ನ ಪುತ್ರಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದ. ಹೀಗಾಗಿ ಸಿಆರ್‌ಪಿಎಫ್ ಸೇವೆ ಬಿಟ್ಟು ವಾಪಸು ಊರಿಗೆ ಬಂದಿದ್ದ. ಈ ಹಿಂದಿನ ಘಟನೆಯನ್ನು ಮುಚ್ಚಿಟ್ಟು ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್ )ಗೆ ನೇಮಕಗೊಂಡು ಪತ್ತೆ ಪೊಲೀಸ್ ಇಲಾಖೆಗೆ ಸೇರಿದ್ದ.

ಉಮೇಶ್ ರೆಡ್ಡಿ ವಿಕೃತ ಚರಿತ್ರೆ
ಗಂಡಸರು ಇಲ್ಲದ ಮನೆಗಳನ್ನು ಗುರುತಿಸಿ ನುಗ್ಗುತ್ತಿದ್ದ. ನೀರು ಕೊಡುವಂತೆ ಕೇಳುತ್ತಿದ್ದ. ನೀರು ತಂದು ಕೊಡುವಷ್ಟರಲ್ಲಿ ಚಾಕು ತೋರಿಸಿ ಬಟ್ಟೆ ಬಿಚ್ಚುವಂತೆ ಹೆದರಿಸುತ್ತಿದ್ದ. ಹೀಗೆ ಮಹಿಳೆಯರನ್ನು ಹೆದರಿಸಿ ಅತ್ಯಾಚಾರ ಮಾಡುತ್ತಿದ್ದ. ನಿತ್ರಾಣಗೊಂಡ ಬಳಿಕ ಅವರ ಮೈಮೇಲಿದ್ದ ಒಡವೆಗಳನ್ನು ಕಸಿದುಕೊಂಡು ಕೊಲೆ ಮಾಡುತ್ತಿದ್ದ. ಹಣಕ್ಕಾಗಿ ಕೊಲೆ ಮಾಡಿರುವಂತೆ ಬಿಂಬಿಸಿ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದ. ಅಷ್ಟೇ ಅಲ್ಲ, ಅತ್ಯಾಚಾರ ಮಾಡಿದವರ ಒಳ ಉಡುಪುಗಳನ್ನು ಕದ್ದುಕೊಂಡು ಹೋಗುತ್ತಿದ್ದ. ಈತ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್‌ನಲ್ಲಿ ಅನೇಕ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾನೆ. ಮರ್ಯಾದೆಗೆ ಅಂಜಿ ಅನೇಕರು ದೂರು ಕೊಟ್ಟಿಲ್ಲ. ಸಾಕ್ಷ್ಯಾಧಾರಗಳ ಕೊರೆಯಿಂದ ಕೆಲವು ಪ್ರಕರಣದಲ್ಲಿ ಆರೋಪ ಮುಕ್ತನಾಗಿದ್ದಾನೆ. ಒಟ್ಟು ಹದಿನೆಂಟಕ್ಕೂ ಹೆಚ್ಚು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಈತನ ಮೇಲಿವೆ.

ಶಾಲಾ ವಿದ್ಯಾರ್ಥಿ ಮೇಲೆ ಅತ್ಯಾಚಾರ ಯತ್ನ
1996 ರಲ್ಲಿ ಉಮೇಶ್ ರೆಡ್ಡಿ ಚಿತ್ರದುರ್ಗದ ಕೆಇಬಿ ಕಾಲೋನಿಯಲ್ಲಿ ಶಾಲಾ ವಿದ್ಯಾರ್ಥಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದ. ಶಾಲಾ ಬಾಲಕಿ ಕಲ್ಲಿನಿಂದ ಉಮೇಶ್ ರೆಡ್ಡಿಗೆ ಹೊಡೆದು ಆತನಿಂದ ಎಸ್ಕೇಪ್ ಆಗಿದ್ದಳು. ಇದಾಗಿ ಒಂದು ತಿಂಗಳ ಬಳಿಕ ರೂಪಾ ಎಂಬ ಹದಿನಾರು ವರ್ಷದ ಬಾಲಕಿ ಮನೆಗೆ ಹೋಗುವಾಗ ಉಮೇಶ್ ರೆಡ್ಡಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ವಿಶೇಷ ಅಂದರೆ ಈ ವಿಕೃತ ಕಾಮಿಗೆ ಕಲ್ಲು ಹೊಡೆದಿದ್ದ ಬಾಲಕಿ ಉಮೇಶ್ ರೆಡ್ಡಿಯನ್ನು ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಗುರುತಿಸಿದ್ದಳು. ಉಮೇಶ್ ರೆಡ್ಡಿಯನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು. ರೂಪ ಕೊಲೆ ಸೇರಿದಂತೆ ಇತರೆ ನಾಲ್ಕು ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪ ಈತನ ಮೇಲೆ ಹೊರಿಸಲಾಗಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದ 2004 ರಲ್ಲಿ ಈ ಪ್ರಕರಣದಲ್ಲಿ ನಿರ್ದೋಷಿಯಾಗಿದ್ದ.

ಎಸ್ಕೇಪ್ ರಾಜ!
ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಉಮೇಶ್ ರೆಡ್ಡಿಯನ್ನು ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡಲು ಕೋರ್ಟ್ ಸೂಚಿಸಿತ್ತು. ಅದರಂತೆ ಈತನನ್ನು ಬಳ್ಳಾರಿ ಜೈಲಿಗೆ ಕರೆದುಕೊಂಡು ಹೋಗುವಾಗ ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ. ಆ ಬಳಿಕ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಯ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದ. ಅದಾದ ಬಳಿಕ ಗುಜರಾತ್‌ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಸಾಲದೆಂಬಂತೆ ಬರೋಡಾದಲ್ಲಿ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ್ದ. ಕುಣಿಗಲ್‌ನಲ್ಲಿ ವಿಧವೆ ಮೇಲೆ ಅತ್ಯಾಚಾರ ನಡೆಸಿದ್ದ. ಹೀಗೆ ಸರಣಿ ಕೃತ್ಯಗಳನ್ನು ಎಸಗಿದ್ದ.

ಪೀಣ್ಯಾ ಪೊಲೀಸರಿಂದ ಬಂಧನ
1997 ರಲ್ಲಿ ಮಹಿಳೆಯರ ಒಳ ಉಡುಪು ಕದ್ದ ಪ್ರಕರಣದಲ್ಲಿ ಪೀಣ್ಯಾ ಪೊಲೀಸರು ಉಮೇಶ್ ರೆಡ್ಡಿಯನ್ನು ಬಂಧಿಸಿದ್ದರು. ಈತನ ಮನೆ ಶೋಧ ನಡೆಸಿದಾಗ ಮನೆಯಲ್ಲಿದ್ದ ಬ್ಯಾಗ್ ತುಂಬಾ ಮಹಿಳೆಯರ ಒಳ ಉಡುಪುಗಳು ಸಿಕ್ಕಿದ್ದವು. ಈ ವೇಳೆ ತನ್ನ ಹೆಸರು ರಮೇಶ್ ರೆಡ್ಡಿ ಎಂದು ಹೇಳಿಕೊಂಡು ಎಸ್ಕೇಪ್ ಆಗಿದ್ದ. ಇದೇ ಸಮಯದಲ್ಲಿ ಉಮೇಶ್ ರೆಡ್ಡಿ ನಾಪತ್ತೆಯಾಗಿರುವ ಬಗ್ಗೆ ಹೈಕೋರ್ಟ್‌ನಲ್ಲಿ ಆತನ ತಂದೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸರೇ ಅಮಾನತಿಗೆ ಒಳಗಾಗಿ ರಮೇಶ್ ರೆಡ್ಡಿ ಹೆಸರಿನಲ್ಲಿ ಲುಕ್ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು.

ಪೀಣ್ಯಾಗೆ ಬಂದು ಮೃತ ದೇಹದ ಮೇಲೆ ಅತ್ಯಾಚಾರ
1998 ರಲ್ಲಿ ಪೀಣ್ಯಾದಲ್ಲಿ ವಿಧವೆ ಜಯಶ್ರೀ ಮರಡಿ ಸುಬ್ಬಯ್ಯ ಎಂಬ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಆ ಬಳಿಕ ಮೃತದೇಹದೊಂದಿಗೆ ಸಂಭೋಗ ಮಾಡಿದ್ದ. ಜಯಶ್ರೀ ಎಂಟು ವರ್ಷದ ಪುತ್ರ ಶಾಲೆಯಿಂದ ಮನೆಗೆ ಬರುವಾಗ ಉಮೇಶ್ ರೆಡ್ಡಿ ಮನೆಯಲ್ಲಿ ಇದ್ದಿದ್ದನ್ನು ನೋಡಿದ್ದ. ನಿಮ್ಮ ತಾಯಿ ಮೈಮೇಲೆ ದೆವ್ವ ಬಂದಿದೆ. ಡಾಕ್ಟರ್ ಕರೆದುಕೊಂಡು ಬರ್ತೀನಿ ಅಂತ ಉಮೇಶ್ ರೆಡ್ಡಿ ಎಸ್ಕೇಪ್ ಆಗಿದ್ದ. ಇದೇ ವೇಳೆ ಮತ್ತೊಬ್ಬ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಕಾಂಪೌಂಡ್ ಗೋಡೆ ಜಿಗಿದು ಓಡಿ ಹೋಗಲು ಯತ್ನಿಸಿದಾಗ ಸಾರ್ವಜನಿಕರೇ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ವಿಪರ್ಯಾಸವೆಂದರೆ 1999 ರಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಿದ್ದ. ಆ ಬಳಿಕ ಚಿಕ್ಕಬಳ್ಳಾಪುರ ಪೊಲೀಸರು ಈತನನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದರು. 2002 ರಲ್ಲಿ ಈತ ಪೊಲೀಸರಿಗೆ ಚಿಕನ್ ತಂದು ಕೊಡುವುದಾಗಿ ನಂಬಿಸಿ ಬಳ್ಳಾರಿ ಜೈಲಿಗೆ ಕರೆದೊಯ್ಯುವಾಗ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದ.

ಮಿತಿ ಮೀರಿದ ಅತ್ಯಾಚಾರಗಳು
ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಉಮೇಶ್ ರೆಡ್ಡಿ ಎರಡು ತಿಂಗಳಲ್ಲಿ ಮೂವರು ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ್ದ. ದಾವಣಗೆರೆ, ಹುಬ್ಬಳ್ಳಿ, ಪುಣೆದಲ್ಲಿ ಕೃತ್ಯ ಎಸಗಿದ್ದ. ಪೂನಾದಲ್ಲಿ ಹೋಟೆಲ್‌ನಲ್ಲಿ ವೇಟರ್ ಕೆಲಸಕ್ಕೆ ಸೇರಿಕೊಂಡು ಅಲ್ಲಿಂದ ಹಣ ಕದ್ದು ಧಾರವಾಡಕ್ಕೆ ಬಂದು ಅತ್ಯಾಚಾರ ಎಸಗಿದ್ದ.
ಆಟೋ ಚಾಲಕನಿಂದ ಸೆರೆಸಿಕ್ಕ ವಿಕೃತ ಕಾಮಿ: ಸರಣಿ ಅತ್ಯಾಚಾರ ಕೃತ್ಯಗಳಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದ ಉಮೇಶ್ ರೆಡ್ಡಿ 2002 ರಲ್ಲಿ ತುಮಕೂರಿನಿಂದ ಬೆಂಗಳೂರಿನ ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ. ಕ್ಲಾಕ್ ರೂಮ್‌ನಲ್ಲಿ ಲಗೇಜ್ ಇಟ್ಟು ಯಶವಂತಪುರದ ಶೇವಿಂಗ್ ಶಾಪ್‌ಗೆ ತೆರಳಿ ಶೇವಿಂಗ್ ಹಾಗೂ ಕಟಿಂಗ್ ಮಾಡಿಸಿಕೊಳ್ಳುತ್ತಿದ್ದ. ಈತನನ್ನು ಸತ್ಯವೇಲು ಎಂಬ ಆಟೋ ಚಾಲಕ ಗುರುತು ಹಿಡಿದಿದ್ದ. ಈತನ ಬಗ್ಗೆ ಪತ್ರಿಕೆಗಳಲ್ಲಿ ಬರುತ್ತಿದ್ದ ಸುದ್ದಿ ಗಮನಿಸಿದ್ದ ಶಕ್ತಿವೇಲು, ಪೊಲೀಸರಿಗೆ ಸುಳಿವು ನೀಡಿದ್ದ. ಈತನನ್ನು ಯಶವಂತಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸರಣಿ ಅತ್ಯಾಚಾರ ಕೃತ್ಯಗಳು ಹೊರ ಬಂದಿದ್ದವು. ಉಮೇಶ್ ರೆಡ್ಡಿಯ ಬ್ಯಾಗಿನಲ್ಲಿ ಹದಿನೆಂಟು ಜತೆ ಬ್ರಾ, ಸೀರೆ, ಬ್ಲೌಸ್ ಮತ್ತಿತರ ಒಳ ಉಡುಪುಗಳು ಪತ್ತೆಯಾಗಿದ್ದವು.

20 ಪ್ರಕರಣದಲ್ಲಿ 9 ರಲ್ಲಿ ಶಿಕ್ಷೆ
ವಿಕೃತ ಕಾಮಿ ಉಮೇಶ್ ರೆಡ್ಡಿ ಎಸಗಿರುವ ಅಪರಾಧ ಕೃತ್ಯಗಳಲ್ಲಿ ಬೆಳಕಿಗೆ ಬಂದು ಕಾನೂನು ಸಮರಕ್ಕೆ ನಾಂದಿ ಹಾಡಿದ್ದು 20 ಪ್ರಕರಣ. ಅದರಲ್ಲಿ ಹನ್ನೊಂದು ಪ್ರಕರಣಗಳಲ್ಲಿ ಸಾಕ್ಷಿಗಳಿಲ್ಲದೇ ನಿರಪರಾಧಿಯಾಗಿದ್ದ. ಇತರೆ 9 ಪ್ರಕರಣಗಳಲ್ಲಿ ಸರಣಿ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಈತ ಎಸಗಿರುವ ಅಪರಾಧ ಪರಿಗಣಿಸಿ ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ನ್ಯಾ. ವಿ.ಜಿ. ಸುಕನ್ಯ ಅವರು ಮೊದಲು ಗಲ್ಲು ಶಿಕ್ಷೆ ನೀಡಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ ಮಾಡಿ ಹೈಕೋರ್ಟ್ ವಿಭಾಗೀಯ ಪೀಠ ಕೂಡ ಗಲ್ಲು ಶಿಕ್ಷೆ ನೀಡಿತ್ತು. ನ್ಯಾಯಮೂರ್ತಿ ಬನ್ನೂರಮಠ ಅವರು ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ನೀಡಿರುವುದು ಸರಿಯಿದೆ ಎಂದು ತೀರ್ಪು ನೀಡಿದ್ದರು. ಸುಪ್ರೀಂ ಮೊರೆ ಹೋದ ರೆಡ್ಡಿ ಗಲ್ಲು ಶಿಕ್ಷೆಯಿಂದ ಪಾರಾಗಲು ಸಾಧ್ಯವಾಗಲಿಲ್ಲ. ಆ ಬಳಿಕ ವಿಕೃತಕಾಮಿ ಸಲ್ಲಿಸಿದ್ದ ಕ್ಷಮಾದಾನ ಪತ್ರ ರಾಜ್ಯ ಸರ್ಕಾರ ಹಾಗೂ ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ಆ ಬಳಿಕ ಸುಪ್ರೀಂಕೋರ್ಟ್ ಸಂವಿಧಾನ ಪೀಠದ ಮೊರೆ ಹೋಗಿದ್ದ. ಅಂತಿಮವಾಗಿ ಇದೀಗ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ ಮಾಡಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.












Click it and Unblock the Notifications