ಮೌನದ ಪ್ರತಿಕ್ರಿಯೆ ಮೂರ್ಖನನ್ನೂ ಗೆಲ್ಲಿಸಬಲ್ಲದು
ಅದೊಂದು ಝೆನ್ ದೇವಾಲಯ. ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಅಲ್ಲಿನ ನಿವಾಸಿಗಳನ್ನು ಸೋಲಿಸಿದ ಸನ್ಯಾಸಿಗೆ ಅಲ್ಲಿರಲು ಅವಕಾಶ ಸಿಗುತ್ತಿತ್ತು.
ಜಪಾನಿನ ಉತ್ತರಭಾಗದಲ್ಲಿದ್ದ ಆ ದೇವಾಲಯದಲ್ಲಿ ಇಬ್ಬರು ಸನ್ಯಾಸಿಗಳಿದ್ದರು. ದೊಡ್ಡವನು ತುಂಬಾ ಓದಿಕೊಂಡಿದ್ದ, ಚಿಕ್ಕವನು ಮೂರ್ಖ. ಅವನಿಗೆ ಇದ್ದದ್ದು ಒಂದೇ ಕಣ್ಣು.
ದಿನದ ಝೆನ್ ಕಥೆ: ಗುರುವಿನ 'ವಿಷದ ಬಾಟಲಿ' ಕಥೆ
ಅಲೆಮಾರಿ ಸನ್ಯಾಸಿಯೊಬ್ಬ ಅಲ್ಲಿಗೆ ಬಂದ. ದೇವಾಲಯದಲ್ಲಿ ಉಳಿಯಲು ಅವಕಾಶ ಕೇಳಿದ. ದೊಡ್ಡ ಸನ್ಯಾಸಿ ಅಂದು ದಿನವೆಲ್ಲ ಓದಿ, ಬರೆದು, ವಾದ ಮಾಡಿ ಸುಸ್ತಾಗಿದ್ದ. ಆದ್ದರಿಂದ ಚಿಕ್ಕವನನ್ನು ಕರೆದು ನೀನೇ ವಾದ ಮಾಡು ಎಂದ. ಹುಷಾರು, ಮೌನ ವಾಗ್ವಾದವನ್ನು ಮಾಡುತ್ತೇನೆ ಎಂದು ಮೊದಲೇ ಹೇಳಿಬಿಡು ಎಂದು ಎಚ್ಚರಿಕೆಯನ್ನೂ ನೀಡಿದ.
ಚಿಕ್ಕ ಸನ್ಯಾಸಿ ಮತ್ತು ಅಲೆಮಾರಿ ಸನ್ಯಾಸಿ ಇಬ್ಬರೂ ದೇವಾಲಯದೊಳಗೆ ಹೋಗಿ ಮೌನ ವಾಗ್ವಾದಕ್ಕೆ ಕುಳಿತರು.
ಕೊಂಚ ಹೊತ್ತಿನ ನಂತರ ಅಲೆಮಾರಿ ಸನ್ಯಾಸಿ ವಾಪಸ್ಸು ಬಂದು ಹೇಳಿದ, "ನಿಮ್ಮ ದೇವಾಲಯದ ಚಿಕ್ಕ ಸನ್ಯಾಸಿ ಬಹಳ ಅದ್ಭುತವಾದ ಮನುಷ್ಯ, ನನ್ನನ್ನು ವಾದದಲ್ಲಿ ಸೋಲಿಸಿಬಿಟ್ಟ" ಎಂದು ಹೇಳಿದ.
ದಿನದ ಝೆನ್ ಕಥೆ: ದಂಡನಾಯಕನಿಗೆ ಗುರುವಿನ ಸವಾಲು
"ಹೌದೆ? ನಿಮ್ಮ ಮೌನ ವಾಗ್ವಾದದಲ್ಲಿ ಯಾವ ವಿಚಾರ ಚರ್ಚಿಸಿದಿರಿ?" ಎಂದು ಹಿರಿಯ ಸನ್ಯಾಸಿ ಕೇಳಿದ.
ಅಲೆಮಾರಿ ಹೇಳಿದ; "ನಾನು ಮೊದಲು ಒಂದು ಬೆರಳು ತೋರಿಸಿದೆ. ಅದು ಪರಮಜ್ಞಾನವನ್ನು ಪಡೆದ ಬುದ್ಧನ ಅಖಂಡತೆಯ ಸಂಕೇತ. ಅದಕ್ಕೆ ಅವನು ಎರಡು ಬೆರಳು ತೋರಿಸಿದ. ಅದು ಬುದ್ಧ ಮತ್ತು ಅವನ ಬೋಧನೆಗಳನ್ನು ಸೂಚಿಸಿತು. ನಾನು ಮೂರು ಬೆರಳು ತೋರಿಸಿದೆ. ಅಂದರೆ ಬುದ್ಧ, ಅವನ ಚಿಂತನೆಗಳು ಮತ್ತು ಬುದ್ಧನ ಅನುಯಾಯಿಗಳು ಒಟ್ಟು ಮೂರು ಸಂಗತಿಗಳು ಎಂಬುದು ನನ್ನ ಅರ್ಥವಾಗಿತ್ತು. ಅವನು ತನ್ನ ಮುಷ್ಠಿ ಬಿಗಿಹಿಡಿದು ತೋರಿಸಿದ. ಅಂದರೆ ನಾನು ಹೇಳಿದ ಮೂರೂ ಸಂಗತಿಗಳು ಒಂದೇ ಆತ್ಮಜ್ಞಾನದ ಮೂಲದಿಂದ ಬಂದವು ಎಂದು ಸೂಚಿಸಿಬಿಟ್ಟ. ನಾನು ಸೋತೆ. ಇಲ್ಲಿರಲು ನನಗೆ ಹಕ್ಕಿಲ್ಲ. ಹೋಗುತ್ತೇನೆ" ಎಂದು ಹೇಳಿ ಅಲೆಮಾರಿ ಹೊರಟುಹೋದ.
ಎಲ್ಲರೂ ಬಂದು ಹೋಗುವ ಜಾಗ ಅರಮನೆಯಲ್ಲ, ಪ್ರವಾಸಿಗೃಹ!
ಸ್ವಲ್ಪ ಹೊತ್ತಿನ ಬಳಿಕ "ಎಲ್ಲಿ ಆ ದುಷ್ಟ" ಎಂದು ಕಿರುಚುತ್ತಾ ಚಿಕ್ಕ ಸನ್ಯಾಸಿ ಬಂದ.
"ಯಾಕೆ, ಏನಾಯಿತು? ನೀನೇ ವಾದದಲ್ಲಿ ಗೆದ್ದೆಯಂತಲ್ಲ" ಎಂದು ಹಿರಿಯ ಸನ್ಯಾಸಿ ಕೇಳಿದ.
"ಗೆದ್ದದ್ದೂ ಇಲ್ಲ, ಎಂಥ ಮಣ್ಣೂ ಇಲ್ಲ. ಎಲ್ಲಿ ಅವನು? ಅವನನ್ನು ಹಿಡಿದು ಬಾರಿಸಬೇಕು" ಎಂದು ಕೋಪದಿಂದ ಹೇಳಿದ ಚಿಕ್ಕ ಸನ್ಯಾಸಿ.
"ಮೌನ ವಾಗ್ವಾದದಲ್ಲಿ ಏನಾಯಿತು ಹೇಳು" ಎಂದು ಕೇಳಿದ ಹಿರಿಯ ಸನ್ಯಾಸಿ.
"ಅವನು ದೇವಾಲಯದಲ್ಲಿ ಕುಳಿತ ಕೂಡಲೆ ಒಂದು ಬೆರಳು ಎತ್ತಿ ತೋರಿಸಿದ. ನನಗೆ ಒಂದೇ ಕಣ್ಣು ಇದೆ ಎಂದು ಅಪಮಾನ ಮಾಡಿದ. ಅವನು ಅಪರಿಚಿತನಾದ್ದರಿಂದ, ಸೌಜನ್ಯ ತೋರಬೇಕೆಂದು ನನ್ನ ಎರಡು ಬೆರಳು ತೋರಿಸಿದೆ. 'ನಿನಗೆ ಎರಡೂ ಕಣ್ಣು ಇವೆಯಲ್ಲ ಸಂತೋಷ' ಎಂದು ಅದರ ಅರ್ಥ. ಅದಕ್ಕೆ ಆ ದುಷ್ಟ ಮೂರು ಬೆರಳು ತೋರಿಸಿದ. 'ನಮ್ಮಿಬ್ಬರಿಗೂ ಸೇರಿ ಇರುವುದು ಒಟ್ಟು ಮೂರೇ ಕಣ್ಣು' ಎಂದು ಹೇಳಿದಂತೆ ಇತ್ತು. ಅದಕ್ಕೆ ನನಗೆ ಸಿಟ್ಟು ಬಂದು ಮುಷ್ಠಿ ತೋರಿಸಿದೆ. ಅವನು ಓಡಿ ಹೋದ. ಇಷ್ಟೇ ಆದದ್ದು'' ಎಂದ.
(ಸಂಗ್ರಹ)