ಹಸಿರು ಹಾವಿನ ಸೂಪ್ ಮತ್ತು ಅಡುಗೆಯವನ ಯಡವಟ್ಟು
ಒಮ್ಮೆ ಝೆನ್ ಗುರು ಫುಗೈ ಮತ್ತು ಅವರ ಶಿಷ್ಯರ ಭೋಜನ ತಡವಾಯಿತು. ಅಡುಗೆ ಇನ್ನೂ ಸಿದ್ಧವಾಗಿರಲಿಲ್ಲ. ಈಗಾಗಲೇ ತುಂಬಾ ತಡವಾಗಿದೆ ಎಂದು ಅಡುಗೆಯಾತ ಹಸಿರು ತರಕಾರಿಗಳನ್ನು ತರಲು ಅವಸರದಿಂದ ತರಕಾರಿ ತೋಟಕ್ಕೆ ಓಡಿದ. ತೋಟದಲ್ಲಿ ತರಕಾರಿಗಳನ್ನು ಸಾವಧಾನದಿಂದ ಬಡಿಸಿ ತರುವಷ್ಟು ಸಮಯವಿರಲಿಲ್ಲ. ತೋಟವನ್ನು ಹೀಗಳೆಯುತ್ತಲೇ ಕೈಗೆ ಸಿಕ್ಕ ಹಸಿರು ತರಕಾರಿಗಳ ಮೇಲ್ಭಾಗಗಳನ್ನು ಕತ್ತರಿಸಿ ತಂದನು.
ಗಡಿಬಿಡಿಯಲ್ಲಿ ಆತ ತರಕಾರಿಗಳನ್ನು ಕತ್ತರಿಸುವಾಗ ಅಲ್ಲಿಯೇ ಇದ್ದ ಹಸಿರು ಬಣ್ಣದ ಹಾವಿನ ತಲೆ ಕತ್ತರಿಸಿ ತರಕಾರಿಯೊಂದಿಗೆ ತಂದಿದ್ದು ಆತನಿಗೆ ಗೊತ್ತಾಗಲೇ ಇಲ್ಲ. ಸೊಪ್ಪು ಮತ್ತು ಹಾವಿನ ತಲೆಯನ್ನು ಒಟ್ಟಿಗೆ ತುಂಡರಿಸಿ ಸೂಪ್ ತಯಾರಿಸಿ ಗುರು ಫುಗೈ ಮತ್ತು ಅವರ ಅನುಯಾಯಿಗಳಿಗೆ ನೀಡಿದ. ಹಾವಿನ ತಲೆ ಆ ಸೂಪಿನಲ್ಲಿರುವುದು ಕೂಡ ಅವನಿಗೆ ತಿಳಿಯಲೇ ಇಲ್ಲ.
ಈ ಸೂಪ್ ಕುಡಿಯುತ್ತಿದ್ದ ಫುಗೈಯ ಶಿಷ್ಯರಿಗೆ ಸೂಪ್ ಇಷ್ಟು ದಿನಕ್ಕಿಂತ ಬೇರೆಯದೇ ಸ್ವಾದ ಹೊಂದಿದೆ ಎನಿಸಿತು. ಈ ಸೂಪ್ ಹೆಚ್ಚು ಸ್ವಾದಿಷ್ಟ ಮತ್ತು ಅಸಾಮಾನ್ಯ ರುಚಿ ಹೊಂದಿದೆ ಎನಿಸಿತು. ಸೂಪ್ ಕುಡಿಯುತ್ತಿದ್ದ ಪುಗೈ, ತಮ್ಮ ಬಟ್ಟಲಿನಲ್ಲಿ ಹಾವಿನ ತಲೆ ಕಂಡು ಬೆಚ್ಚಿ ಬಿದ್ದರು. ಕೂಡಲೇ ಅಡುಗೆಯವನನ್ನು ಕರೆದರು. ಅವರು ಕರೆದ ರೀತಿ ನೋಡಿಯೇ ಏನೋ ಅನಾಹುತವಾಗಿದೆ ಎಂದು ಅಡುಗೆಯವ ಬೆದರಿದ. ಫುಗೈ, ಅಡುಗೆಯವನಿಗೆ ಹಾವಿನ ತಲೆಯನ್ನು ಎತ್ತಿ ತೋರಿಸಿ "ಏನಿದು?," ಎಂದು ಕೇಳಿದರು.

ತನ್ನ ಅವಸರದಿಂದ ಆದ ತಪ್ಪಿನ ಅರಿವಾದ ಅಡುಗೆಯವನು "ಓಹ್, ಧನ್ಯವಾದಗಳು ಗುರುಗಳೇ'' ಎನ್ನುತ್ತಾ ಆ ಹಾವಿನ ತಲೆಯ ಭಾಗವನ್ನು ತೆಗೆದುಕೊಂಡು, ಥಟ್ಟನೆ ಬಾಯಿಗೆ ಹಾಕಿ ತಿನ್ನತೊಡಗಿದ.
ಇದನ್ನು ಕಂಡಯ ಫುಗೈ ಗುರು ಅವಾಕ್ಕಾದರು. "ಏನು ಮಾಡುತ್ತಿರುವೆ"? ಎಂದು ಕೇಳಿರು. "ನನ್ನ ತಪ್ಪನ್ನು ತಿನ್ನುತ್ತಿದ್ದೇನೆ" ಎಂದು ಅಡುಗೆಯವನು ಉತ್ತರಿಸಿದ.
(ಸಂಗ್ರಹ)












Click it and Unblock the Notifications