Get Updates
Get notified of breaking news, exclusive insights, and must-see stories!

ಕಥೆ : ಟಪ್ ಟಪ್ ಬುದ್ಧಿಸ್ಟ್ ಸೆಂಟರ್ (ಭಾಗ 7)

(ಕಥೆಯ ಮುಂದಿನ ಭಾಗ) ಮೈಸೂರಿನ ಓಪನ್ ಏರ್ ಥಿಯೇಟರ್ ಮುಂದಿನ ರಸ್ತೆ ಮುಚ್ಚಲಾಗಿತ್ತು. ಈ ರಾತ್ರಿ ಸುಮಾರು ಇಪ್ಪತ್ತು ಸಾವಿರ ಮಂದಿ ಅಲ್ಲಿ ಸೇರಿದ್ದರು. ಕೆಲವರಿಗೆ ಮಾತ್ರ ಸೀಟ್ ಸಿಕ್ಕಿತ್ತು. ಬಾಕಿಯವರೆಲ್ಲಾ ನಿಂತಲ್ಲೇ ಗಲಾಟೆಯೋ ಗಲಾಟೆ! ಸಾಮಾನ್ಯವಾಗಿ ಶಾಂತವಾದ ಮಾನಸಗಂಗೋತ್ರಿಯಲ್ಲಿ ಈ ರಾತ್ರಿ ಹಳ್ಳಿ ಜಾತ್ರೆಯ ಸಂಭ್ರಮ. ಕಾರ್ಯಕ್ರಮ ಆರಂಭವಾಗಲು ಸ್ವಲ್ಪ ತಡವಾಗಿತ್ತು. ಮುಖ್ಯ ಅತಿಥಿಗಳೆಲ್ಲಾ ವೇದಿಕೆಯ ಮೇಲೆ ಬಂದು ಆಸೀನರಾದ ತಕ್ಷಣ, ನಿರೂಪಕಿ, ತನ್ನ ಆಕರ್ಷಣೀಯ ಧ್ವನಿಯಲ್ಲಿ, ಕಾರ್ಯಕ್ರಮವನ್ನು ಪ್ರಾರಂಭಿಸಿದಳು - "ಈ ಸಂಜೆ ನಾವೆಲ್ಲಾ ಸೇರಿರುವುದು ಒಬ್ಬ ಸಾಮಾನ್ಯ ವ್ಯಕ್ತಿಯ ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಅಲ್ಲ. ಕನ್ನಡ ಚಲನಚಿತ್ರ ರಂಗದ ತಾರಾ ಲೋಕದಲ್ಲಿ ಜಗಮಗಿಸುವ ಹೆಸರುಗಳು ಹಲವು. ಆದರೆ ಹದಿನೈದು ವರ್ಷಗಳ ಹಿಂದೆ, ಕನ್ನಡಿಗರ ಮನದಲ್ಲಿ ಹುಟ್ಟಿದ ಹೊಸ ಹೆಸರು: ಕರ್ಣ".

ಇದನ್ನು ಕೇಳುತ್ತಿದ್ದಂತೆಯೇ ಜನರೆಲ್ಲಾ ಹುಚ್ಚೆದ್ದರು. ನಿರೂಪಕಿಯ ಧ್ವನಿ ಸೀಟಿ ಕೂಗುಗಳ ಮಧ್ಯದಲ್ಲಿ ಮುಳುಗಿ ಹೋಯಿತು. ಹಾಗೆಯೇ ಮುಂದುವರೆದಳು, "ರಂಗಶಂಕರದ ಪ್ರತಿಭೆಯಾದ ಕರ್ಣ, ಮೊದಲು ಬೀದಿನಾಟಕಗಳಲ್ಲಿ ಭಾಗವಹಿಸಿದರು. ನಂತರ "ನಟನ ವ್ಯಾಘ್ರ" ಕುಡಿಗಾಲು ಸಿದ್ಧಯ್ಯನವರು ಕರ್ಣನ ಪ್ರತಿಭೆಯನ್ನು ಗುರುತಿಸಿ, ಹದಿನೈದು ರಂಗನಾಟಕಗಳಲ್ಲಿ, ವಿಭಿನ್ನ ಪಾತ್ರಗಳಲ್ಲಿ ಅವರನ್ನು ನಿರ್ದೇಶಿಸಿದರು. ಈ ರಂಗ ಪ್ರತಿಭೆಯನ್ನು ಕಂಡ ಖ್ಯಾತ ಸಿನಿಮ ನಿರ್ದೇಶಕ ಸಿವಿ ಕೇಸಂ ಕರ್ಣನಿಗೆ, "ಬೆಳ್ಳಂದೂರಿನ ನರಭಕ್ಷಕ" ಎಂಬ ಕಥೆ ಆಧಾರಿತ ಚಿತ್ರದಲ್ಲಿ ನಾಯಕ ಪಾತ್ರವನ್ನು ನೀಡಿ, ಅವರನ್ನು ಸಿನಿಮಾ ಲೋಕಕ್ಕೆ ಸ್ವಾಗತಿಸಿದರು. ಯಾವುದೇ ಪ್ರಚಾರವಿಲ್ಲದೆ ಬಿಡುಗಡೆಯಾದ ಈ ಚಿತ್ರ, ಹಲವು ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ನೂರನೇ ದಿನದ ಸಂಭ್ರಮವನ್ನು ದೊರಕಿಸಿತು.

Tup Tup Buddhist Center

ಇದರಿಂದ ಆರಂಭವಾದ "ಕರ್ಣರಾಜ್ಯ" ಈವತ್ತಿನವರೆಗೂ ಭರ್ಜರಿಯಾಗಿ ಸಾಗುತ್ತಿದೆ - ಕಾಮಿಡಿ ಚಿತ್ರಗಳಾದ "ಪಲ್ಲೇಶಿ ಪ್ರಸಂಗ", "ಡಿಸ್ಕೋ ಶೇಕರ್", ಥ್ರಿಲ್ಲರ್ ಗಳಾದ "ಭಾಸ್ಕರದ್ಯುತಿಹಿ", "ಜರ್ಮೇನಿಯಮ್", ಮತ್ತು ಸಾಮಾಜಿಕ ಜಾಗೃತಿ ಮೂಡಿಸುವಂತಹ "ಪನ್ನೀರು", "ಕಾಮತ್ತಿನ ಮೋಟರ್ಸೈಕಲ್"ಗಳಲ್ಲಿ ಭವ್ಯ ಅಭಿನಯ ನೀಡಿ, ಕರ್ಣ ಕನ್ನಡಿಗರನ್ನು ಮನರಂಜಿಸಿದ್ದಾರೆ. ಅವರ ಐತಿಹಾಸಿಕ-ಪ್ರೇಮ ಚಿತ್ರ "ಬಾಜಿರಾವ್" ಒಂದು ವರ್ಷ ಚಿತ್ರಮಂದಿರಗಳಲ್ಲಿ ಸತತವಾಗಿ ಪ್ರದರ್ಶನಗೊಂಡು ಅಭೂತಪೂರ್ವ ಯಶಸ್ಸು ಕಂಡಿತು. ಕರ್ಣ ಕನ್ನಡ ಚಲನಚಿತ್ರ ರಂಗದ ಚಿತ್ರಕಥೆ-ಅಭಿನಯಕ್ಕೆ ಒಂದು ಹೊಸ ಸುವರ್ಣಮಾನವನ್ನು ಒದಗಿಸಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಂತಾರ್ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿಯಾದ ಸೂಪರ್ ಸ್ಟಾರ್ ಕರ್ಣ ಅವರನ್ನು ಚಪ್ಪಾಳೆಯೊಂದಿಗೆ.... ".

ನಿರೂಪಕಿಯ ಮಾತನ್ನು ಯಾರೂ ಕೇಳುತ್ತಿರಲಿಲ್ಲ. ಪ್ರೇಕ್ಷಕರಲ್ಲಿ ಒಬ್ಬರಿಂದ ಒಬ್ಬರಿಗೆ ರೋಮಾಂಚನ ಹರಡಿತು. ಎಲ್ಲರೂ ಒಂದೇ ಧ್ವನಿಯಲ್ಲಿ ಮೈಮರೆತು ಕೂಗುತ್ತಿದ್ದರು, "ಕರ್ಣಾ... ಕರ್ಣಾ... ". ಸಾಧಾರಣ ಎತ್ತರ, ಕಟ್ಟುಮಸ್ತು ದೇಹದ ಒಬ್ಬ ವ್ಯಕ್ತಿ ಕೈ ಬೀಸಿಕೊಂಡು ವೇದಿಕೆಯನ್ನು ಪ್ರವೇಶಿಸಿದ. ಸರಳ ಬಿಳಿ ಶರ್ಟು ಮತ್ತು ಹಳೆಯ ಜೀನ್ಸ್ ಪ್ಯಾಂಟ್ ಧರಿಸಿದ್ದ. ಮುಂದೆ ಇದ್ದ ಪ್ರೆಸ್ ಕ್ಯಾಮೆರಾಗಳ ಬೆಳಕು ಅವನನ್ನು ಆವರಿಸಿತು. ಮುಖ್ಯ ಅತಿಥಿಗಳೆಲ್ಲಾ ಬೆಳಕನ್ನು ತಡೆಯಲಾಗದೆ ಕಣ್ಣು ಮುಚ್ಚಿದರು. ಹಲವು ಹುಡುಗಿಯರ ಕಾಲು ಸೋತವು. ಏವಿಯೇಟರ್ ಸನ್ಗ್ಲಾಸ್ ಧರಿಸಿ, ಸ್ಪೈಕ್ ಕೇಶವಿನ್ಯಾಸ ಮಾಡಿಸಿಕೊಂಡಿದ್ದ ಕರ್ಣ, ಆರಾಮಾಗಿ ಕೈಬೀಸುವುದನ್ನು ಮುಂದುವರಿಸಿದ.

ಕಾರ್ಯಕ್ರಮ ಮುಗಿದ ನಂತರ, ಕರ್ಣ ಮತ್ತು ಅವನ ಸೇವಾ ಸಿಬ್ಬಂದಿಗೆ ವೇದಿಕೆಯಿಂದ ಹೊರಬರಲು ಅಭಿಮಾನಿಗಳು ಬಿಡಲೇ ಇಲ್ಲ. ಕರ್ಣ ತಾಳ್ಮೆಯಿಂದ ಆಟೋಗ್ರಾಫ್ ಗಳನ್ನು ಕೊಟ್ಟು, ಫೋಟೋಗಳಿಗೆ ಪೋಸ್ ಮಾಡಿದರೂ ಜನ ಬಿಡಲೇವಲ್ಲರು. ಕಡೆಗೆ ಅವನ ಬಾಡಿಗಾರ್ಡ್ ಗಳು ಜನ ಸಾಗರದ ಮಧ್ಯೆಯೇ ಕಷ್ಟ ಪಟ್ಟಿಕೊಂಡು ಕರ್ಣ ಮತ್ತು ಅವನ ತಂಡವನ್ನು ವೇದಿಕೆಯ ಹಿಂಭಾಗಕ್ಕೆ ಮುಟ್ಟಿಸಿದರು. ಅಲ್ಲಿಂದ ಅವರು, ಕಾರುಗಳು ನಿಂತಿದ್ದ ನಿರ್ಜನ ಪಾರ್ಕಿಂಗ್ ಲಾಟ್ ಗೆ ನಡೆದುಕೊಂಡು ಹೋದರು. ಅಷ್ಟರಲ್ಲೇ ಎಲ್ಲಿಂದಲೋ ಪ್ರತ್ಯಕ್ಷರಾದ ಕೆಲವು ಕಾಲೇಜು ಹುಡುಗಿಯರು, "ಓ ಕರ್ಣಾ! ಯು ಆರ್ ಸೋ ಕ್ಯೂಟ್!" ಎಂದು ಚೀರುತ್ತಾ ಬಾಡಿಗಾರ್ಡ್ ಗಳಿಂದ ತಪ್ಪಿಸಿಕೊಂಡು ಕರ್ಣನನ್ನು ಅಪ್ಪಿಕೊಂಡೇ ಬಿಟ್ಟರು. ಸ್ವಲ್ಪ ಅಚ್ಚರಿಗೊಂಡ ಕರ್ಣ ಶಾಂತವಾಗಿ ನಕ್ಕು, ಅವರಿಗೆ ಆಟೋಗ್ರಾಫ್ ನೀಡಿದನು.

ಆ ಗೆಳೆತಿಯರ ಗುಂಪು ಹೇಗೆ ಹುಚ್ಚರಂತೆ ಕರ್ಣನನ್ನೇ ಪ್ರೀತಿಸುತ್ತಾರೆ ಎಂಬುದನ್ನು ತಾಳ್ಮೆಯಿಂದ ಕೇಳಿಸಿಕೊಂಡು ಮೆದುವಾಗಿ ನಕ್ಕನು. ಒಂದು ಹುಡುಗಿಯಂತೂ ಭಾವೋತ್ಕರ್ಷತೆಯಿಂದ ಅಳುವುದಕ್ಕೇ ಆರಂಭಿಸಿ, ಇನ್ನೊಮ್ಮೆ ಕರ್ಣನನ್ನು ಅಪ್ಪಿಕೊಳ್ಳಲು ಮುಂದಾದಳು. ಆಗ, ಪಮ್ಮಿ ಅಡ್ಡ ಬಂದು, "Excuse me, mam! Please control yourself. We have to leave now", ಎಂದು ತಡೆದನು. ಕರ್ಣ ಹುಡುಗಿಯರಿಗೆಲ್ಲಾ ವಿದಾಯ ಹೇಳಿ, "My manager is very strict" ಎಂದು ಪಮ್ಮಿಯ ಕಡೆ ತುಂಟನ ಹಾಗೆ ನೋಡುತ್ತಾ ಹೇಳಿದ. ಹುಡುಗಿಯರೆಲ್ಲಾ ಸ್ವಲ್ಪ ನಿರಾಸೆಯಿಂದ ಹಿಂತಿರುಗಿದರು. ಪಾರ್ಕಿಂಗ್ ಲಾಟ್ ನಲ್ಲಿ ಮೌನ ಆವರಿಸಿತು. ಕರ್ಣನ ತಂಡ ಮತ್ತೆ ಕಾರಿನ ಕಡೆ ನಡೆಯಲು ಶುರು ಮಾಡಿದರು.

ಹುಣ್ಣಿಮೆ ರಾತ್ರಿಯಾದರೂ ಸುತ್ತಮುತ್ತಲೂ ಕತ್ತಲಿನ ವಾತಾವರಣ. ಕರ್ಣ ಸ್ವಲ್ಪ ದೂರ ನಡೆದು, ಏನೂ ಕಾರಣವಿಲ್ಲದೆ ಎಡಗಡೆಗೆ ನೋಡಿದ. ಕೆಲವು ಅಡಿ ದೂರದಲ್ಲಿ ಒಂದು ಒಂಟಿ ಸೋಡಿಯಂ ಬೀದಿದೀಪವಿತ್ತು. ಅದರ ಕೆಳಗೆ ಒಂದು ಹೆಣ್ಣಿನ ಆಕಾರ ಕಾಣಿಸಿತು. ಇದ್ದಕ್ಕಿದ್ದಂತೆ ಕರ್ಣ ಆ ಹೆಣ್ಣಿನ ಕಡೆ ನಡೆದ. ಅವನ ತಂಡ ಸ್ವಲ್ಪ ಗೊಂದಲದಿಂದ ನೋಡುತ್ತಾ ಅಲ್ಲೇ ನಿಂತಿತು. ಕರ್ಣ ಅವಳ ಹತ್ತಿರ ಬಂದ. ಹದಿನೈದು ವರ್ಷ ಚಲಿಸಿದ ಕಾಲಚಕ್ರದ ಸಾಕ್ಷಿ ಅವನ ಮುಂದೆ ನಿಂತಿತ್ತು. ಅವಳ ಕಣ್ಣಿನಲ್ಲಿ ಹೊಳಪು ಇದ್ದರೂ, ಸ್ವಲ್ಪ ಆಯಾಸವಾದಂತೆ ಕಾಣುತ್ತಿತ್ತು. ನೆತ್ತಿಯಲ್ಲಿ ಒಂದೆರಡು ಬಿಳಿ ಕೂದಲು. ಸ್ವಲ್ಪ ಸುಕ್ಕಾದ ಕತ್ತಿನಲ್ಲಿ ಕರಿಮಣಿ. ಸರಳ ಸೀರೆ ಮತ್ತು ಸಣ್ಣ ಜಡೆ. ಏಳೆಂಟು ವರ್ಷದ ಬಾಲಕ ಅವಳ ಕೈಯನ್ನು ಹಿಡಿದುಕೊಂಡು ಪಕ್ಕದಲ್ಲಿ ನಿಂತಿದ್ದನು. ಕರ್ಣ ಹತ್ತಿರ ಬರುತ್ತಿದ್ದಂತೆಯೇ ಅವಳ ಕಣ್ಣು ಅವನ ಬದಲಾದ ಮೈಕಟ್ಟು, ಉಡುಪು, ಮತ್ತು ಕೂದಲ ಶೈಲಿ, ಎಲ್ಲವನ್ನೂ ಕ್ಷಣಾರ್ಧದಲ್ಲೇ ಅನ್ವೇಷಿಸಿತು.

ಅವನಿಗೆ ಅವಳನ್ನು ನೇರವಾಗಿ ನೋಡಲು ಆಗಲಿಲ್ಲ. ಮಗುವಿನ ಕಡೆ ನೋಡಿದ. ಮಗು ನಗುತ್ತಾ ಟಾಟಾ ಮಾಡಿತು. ಕರ್ಣ ಮೆಲ್ಲನೆ ನಕ್ಕಿ ಪಮ್ಮಿಯ ಕಡೆ ನೋಡಿದ. ಪಮ್ಮಿ ಮುಂದೆ ಬಂದು ಕರ್ಣನ ಕೈಗೆ ಏನ್ನನ್ನೋ ಕೊಟ್ಟು ಹಿಂದೆ ನಡೆದ. ಕರ್ಣ ಮಂಡಿಯೂರಿ, ಆ ಸಾವಿರ ರೂಪಾಯಿಯ ನೋಟನ್ನು ಹುಡುಗನ ಕೈಯಲ್ಲಿಟ್ಟನು. ಅವಳು ಬೇಡ ಎನ್ನುವಂತೆ ತಡೆದಳು. ಕರ್ಣನ ಪ್ರಜ್ವಲಿಸುತ್ತಿದ್ದ ಕಣ್ಣು ಅವಳ ಕಡೆ ನೋಡಿತು. ಅವಳು ಕೆಳಗೆ ನೋಡಿ ಸುಮ್ಮನಾದಳು. ಮಗುವಿಗೆ ಮುತ್ತು ಕೊಟ್ಟು, ಕರ್ಣ ಎದ್ದು ನಿಂತು ಎರಡು ಹೆಜ್ಜೆ ಹಿಂದೆ ಸರಿದ. ಹುಡುಗ ಹುಡುಗಿಯ ಕಣ್ಣುಗಳು ಭೇಟಿಯಾದವು. ಅವಳ ಮೂಗು ಕೆಂಪಾಗಿ, ಕೆನ್ನೆಯ ಮೇಲೆ ಕಣ್ಣೀರು ಹರಿಯುತ್ತಿತ್ತು. ಕರ್ಣ ಹಿಂದೆ ತಿರುಗಿ, ಏವಿಯೇಟರ್ ಸನ್ಗ್ಲಾಸ್ ಧರಿಸಿ, ಕಾರಿನ ಕಡೆ ನಡೆದ. ಸನ್ಗ್ಲಾಸ್ ಕೆಳಗಿಂದ ಕಣ್ಣೀರು ತುಟುಕಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+