Vaibhav Sooryavanshi: ಯುವ ಆಟಗಾರರನ್ನು ನಡೆಸಿಕೊಳ್ಳುವ ರೀತಿ ಇದೆನಾ? ಗಂಭೀರ್, ಅಯ್ಯರ್‌ಗೆ ಮಾಜಿ ಕ್ರಿಕೆಟರ್ ತರಾಟೆ
Vaibhav Sooryavanshi: ಇತ್ತೀಚೆಗಷ್ಟೇ ಟೀಮ್ ಇಂಡಿಯಾವು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಕೈಚೆಲ್ಲಿ ಭಾರಿ ಮುಖಭಂಗ ಅನುಭವಿಸಿತು. ಈ ವೇಳೆ 15 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಟೀಮ್ ಇಂಡಿಯಾ ಮಾಜಿ ನಾಯಕ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಸಂದರ್ಭದಲ್ಲಿ ಬಾಲಕ ವೈಭವ್ ಸೂರ್ಯವಂಶಿ ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಭಾರತ ತಂಡದ ಮಾಜಿ ನಾಯಕ ಹಾಗೂ ವಿಶ್ವಕಪ್ ವಿಜೇತ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಅವರು ಆಕ್ರೋಶ ಹೊರಗಾಕಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ವೈಭವ್ ಸಾಧನೆ
ಇಂಗ್ಲೆಂಡ್ ಪ್ರವಾಸದ ಟಿ20 ಸರಣಿಯ ಆರಂಭದಲ್ಲಿ ಭಾರತದ ಪರ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಆಡಿಸಿರಲಿಲ್ಲ. ಆದರೆ ಆರಂಭಿಕ ಪಂದ್ಯಗಳಲ್ಲಿ ಹಿರಿಯ ಆಟಗಾರ ಸಂಜು ಸ್ಯಾಮ್ಸನ್ ಸತತವಾಗಿ ರನ್ ಗಳಿಸಲು ವಿಫಲರಾದಾಗ ವೈಭವ್ ಅವರನ್ನು ಪ್ಲೇಯಿಂಗ್ 11ಗೆ ಸೇರಿಸಿಕೊಳ್ಳಲಾಯಿತು. ಇವರು ತಾವು ಆಡಿದ ಮೂರು ಪಂದ್ಯಗಳಲ್ಲಿ ಕ್ರಮವಾಗಿ 14, 13, 15ರನ್ ಗಳಿಸಿದರು.
ಗಂಭೀರ್ ಹಾಗೂ ಅಯ್ಯರ್ ವಿರುದ್ಧ ಆಕ್ರೋಶ
ಆದರೆ, ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಿಂದ ಈ ಯುವ ಆಟಗಾರನನ್ನು ಇದ್ದಕ್ಕಿದ್ದಂತೆ ತಂಡದಿಂದ ಕೈಬಿಡಲಾಯಿತು. ಈ ಸರಣಿಯಲ್ಲಿ ಭಾರತ 0-4 ಅಂತರದಿಂದ ಹೀನಾಯ ಸೋಲನುಭವಿಸಿತು. ಇನ್ನೂ ಈ ಬಗ್ಗೆ ಶ್ರೀಕಾಂತ್ ಅವರು ಪ್ರತಿಕ್ರಿಯಿಸಿ ಟೀಮ್ ಇಂಡಿಯಾ ಮುಖ್ಯ ಕೋಚ್ ಗಂಭೀರ್ ಹಾಗೂ ನಾಯಕ ಅಯ್ಯರ್ ವಿರುದ್ಧ ಕೆಂಡಕಾರಿದ್ದಾರೆ.
ಶ್ರೇಯಸ್ ಅಯ್ಯರ್ ಹೇಳಿಕೆಗೆ ಶ್ರೀಕಾಂತ್ ತಿರುಗೇಟು
ಅಂತಿಮ ಪಂದ್ಯದ ಟಾಸ್ ವೇಳೆ ತಂಡದಲ್ಲಿನ ಬದಲಾವಣೆ ಮಾಡಿದ ಬಗ್ಗೆ ಮಾತನಾಡಿದ್ದ ನಾಯಕ ಶ್ರೇಯಸ್ ಅಯ್ಯರ್,' 'ಒಂದು ತಂಡವಾಗಿ ಮುಂದಿನ ದಿನಗಳಲ್ಲಿ ನಮಗೆ ಯಾವುದು ಅತ್ಯುತ್ತಮವೋ ಅದನ್ನು ನಾವು ಈಗ ಪ್ರಯೋಗಿಸಿ ನೋಡಬೇಕಿದೆ. ಆ ಆಧಾರದ ಮೇಲೆಯೇ ನಾವು ವೈಭವ್ ಅವರನ್ನು ಕೈಬಿಡುವ ನಿರ್ಧಾರ ತೆಗೆದುಕೊಂಡಿದ್ದೇವೆ,' ಎಂದು ಹೇಳಿದ್ದರು.
ಅಯ್ಯರ್ ಅವರ ಈ ಹೇಳಿಕೆ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿಕ್ರಿಯಿಸಿದ ಶ್ರೀಕಾಂತ್ ಅವರು, 'ಟಾಸ್ ಮುಗಿದ ನಂತರದ ಆ ಸಂದರ್ಶನವನ್ನು ನೋಡಿ ನನಗೆ ತುಂಬಾ ಬೇಸರವಾಯಿತು. ಆಟಗಾರರ ಬಗ್ಗೆ ಮಾತನಾಡುವ ಅಥವಾ ನಡೆಸಿಕೊಳ್ಳುವ ರೀತಿ ಇದಲ್ಲ. ಯುವ ತಂಡವನ್ನು ನೀವು ಹೇಗೆ ಮುನ್ನಡೆಸುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ,' ಎಂದು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ಪರ ನಿಂತ ಶ್ರೀಕಾಂತ್
'ಕೇವಲ ಮೂರು ಪಂದ್ಯಗಳನ್ನು ಆಡಿದ ವೈಭವ್ ಸೂರ್ಯವಂಶಿ ಮಾಡಿದ ತಪ್ಪಾದರೂ ಏನು? ಯುವ ಆಟಗಾರರನ್ನು ಬೆಳೆಸುವ ರೀತಿ ಇದೇನಾ? ಕೇವಲ ಮೂರು ಪಂದ್ಯಗಳ ನಂತರ ಅವನನ್ನು ಕೈಬಿಡುವ ಮೂಲಕ ನೀವು ಅವನ ಭವಿಷ್ಯವನ್ನು ಹಾಳುಮಾಡುತ್ತಿದ್ದೀರಿ ಮತ್ತು ಅವನ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದ್ದೀರಿ,' ಎಂದು ಶ್ರೀಕಾಂತ್ ಆಕ್ರೋಶ ಹೊರಹಾಕಿದ್ದಾರೆ.
ನಾಯಕನ ಪ್ರದರ್ಶನದ ಬಗ್ಗೆ ಪ್ರಶ್ನೆ
'ನೀವು ಉತ್ತಮ ಭವಿಷ್ಯದ ದಾರಿ ಹುಡುಕುತ್ತಿದ್ದೇವೆ ಎಂದು ಹೇಳುತ್ತೀರಿ. ಪ್ರದರ್ಶನದ ಆಧಾರದ ಮೇಲೆ ಆಟಗಾರರನ್ನು ತಂಡದಿಂದ ಕೈಬಿಡುವುದಾದರೆ, ಅದೇ ನಿಯಮವನ್ನು ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್‌ಗೂ ಅನ್ವಯಿಸಬೇಕು. ಆಟಗಾರರು ಪ್ರದರ್ಶನ ನೀಡುತ್ತಿಲ್ಲ ಎಂದು ಬೆರಳು ತೋರಿಸುವ ನಿಮ್ಮಿಬ್ಬರ ಪ್ರದರ್ಶನ ಏನಾಗಿದೆ?,' ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಮೊದ್ಲು ಯುವ ಆಟಗಾರನಿಗೆ ಸಾಥ್ ನೀಡಿ'
1989ರ ಪಾಕಿಸ್ತಾನ ಪ್ರವಾಸದ ಸಂದರ್ಭದಲ್ಲಿ ತಾವು ಭಾರತ ತಂಡದ ನಾಯಕರಾಗಿದ್ದಾಗ 16 ವರ್ಷದ ಸಚಿನ್ ತೆಂಡೂಲ್ಕರ್‌ಗೆ ಪದಾರ್ಪಣೆ ಮಾಡಲು ಅವಕಾಶ ನೀಡಿದ್ದನ್ನು ಶ್ರೀಕಾಂತ್ ಅವರು ನೆನಪಿಸಿಕೊಂಡಿದ್ದಾರೆ. 'ನಾನು ಸಚಿನ್ ಬಳಿ ಹೋಗಿ ಈ ಇಡೀ ಪ್ರವಾಸದಲ್ಲಿ ನಿನ್ನನ್ನು ತಂಡದಿಂದ ಕೈಬಿಡುವುದಿಲ್ಲ. ನೀನು ಯಾವುದೇ ಭಯವಿಲ್ಲದೆ ಆಡು ಎಂದು ಧೈರ್ಯ ತುಂಬಿದ್ದೆ. ಅಂತಹ ಬೆಂಬಲವನ್ನು ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ಈ ಯುವ ಆಟಗಾರನಿಗೆ ನೀಡಬೇಕಿತ್ತಲ್ಲವೇ?,' ಎಂದು ಪ್ರಶ್ನಿಸುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಸಂಜು ಸ್ಯಾಮ್ಸನ್ ಅವರೇ ಸೂಕ್ತ ಆಟಗಾರ ಎನಿಸಿದ್ದರೆ ಅವರನ್ನೇ ಸರಣಿಯುದ್ದಕ್ಕೂ ಆಡಿಸಬೇಕಿತ್ತು. ಅದನ್ನು ಬಿಟ್ಟು ಯುವ ಆಟಗಾರ ವೈಭವ್ ಅವರನ್ನು ಮಧ್ಯದಲ್ಲಿ ತಂದು ಕೇವಲ ಮೂರೇ ಪಂದ್ಯಕ್ಕೆ ಕೈಬಿಟ್ಟು ಅವರ ಆತ್ಮವಿಶ್ವಾಸ ಕೆಡಿಸಿದ್ದು ತಪ್ಪು ಎಂಬುದು ಶ್ರೀಕಾಂತ್ ಅವರ ಹೇಳಿಕೆಯ ಅರ್ಥವಾಗಿದೆ.


Click it and Unblock the Notifications
