ಪತ್ತೇದಾರಿ ಕಾದಂಬರಿ: ಆ ಕೊಲೆಗಾರ್ತಿ ಬಳಸಿದ್ದು ಕದ್ದ ಸಿಮ್ ಗಳನ್ನು
ಮಂಚದ ಮೇಲೆ ತೆರೆದ ಕಣ್ಣಿನಲ್ಲೇ ಹೆಣ ಅಂಗಾತ ಬಿದ್ದಿತ್ತು. ಗದ್ದದ ಕೆಳ ಭಾಗದ ಗಂಟಲಿಗೆ, ಅಡುಗೆ ಮನೆಯಲ್ಲಿ ಬಳಸುವಂತಹ ಚಾಕುವೊಂದು ಹೊಕ್ಕಿ, ಹಿಂದಿನಿಂದ ಹೊರಬಂದು, ಮಂಚದ ಮೇಲಿನ ಗಾದಿಗೆ ಚುಚ್ಚಿಕೊಂಡಿತ್ತು. ಗಾದಿ, ದಿಂಬುಗಳು ರಕ್ತಮಯವಾಗಿದ್ದವು.
ಚೆಂದದ ದುಂಡು ಮುಖ, ಬಂಗಾರದ ಬಣ್ಣದ ಮೆದು ಕೂದಲು, ಕುರುಚಲು ಮೀಸೆ, ಗಡ್ಡ. ಅವನ ಮೈ ಮೇಲೆ ಚಡ್ಡಿಯೊಂದು ಬಿಟ್ಟರೆ ಬೇರೇನೂ ಇರಲಿಲ್ಲ. ನಾನು ಕೋಣೆಯನ್ನು ಒಂದು ಸುತ್ತು ನೋಡಿದೆ; ಹೆಚ್ಚಿನ ವಿವರಗಳೇನೂ ಸಿಗಲಿಲ್ಲ. ತುಂಬಾ ಅಚ್ಚುಕಟ್ಟಾದ ಕೊಲೆ ಎನಿಸಿ, ಬಿಡಿಸುವುದು ಅಷ್ಟು ಸಲೀಸು ಅಲ್ಲವೇನೋ ಎನಿಸಿತು. ಅಲ್ಲಿಗಾಗಲೇ ವೈದ್ಯರೊಬ್ಬರು ಬಂದು ತಪಾಸಣೆ ಮಾಡುತ್ತಿದ್ದರು. ಭೈರೇಗೌಡ ನಮ್ಮಿಬ್ಬರ ಪರಿಚಯ ಮಾಡಿಸಿಕೊಟ್ಟ. ಅರೆ ಬೆತ್ತಲೆಯಾಗಿದ್ದ ದೇಹವನ್ನು ನೋಡುತ್ತಾ ನಾನು ಕೇಳಿದೆ,
"ನಿಮಗೇನನಿಸುತ್ತೆ ಡಾಕ್ಟ್ರೆ?"
ಒಂದೆರಡು ಕ್ಷಣ ತಡೆದು, "ನಿಮ್ಮ ಪ್ರಶ್ನೆ ಅರ್ಥವಾಯಿತು", ಎನ್ನುತ್ತಾ, "ಆಂ... ನನ್ ಪ್ರಕಾರ ಹುಡುಗ- ಹುಡುಗಿ ಶುರುಹಚ್ಕೊಂಡಿದ್ದಾರೆ... ಆದ್ರೆ ಮುಗಿಸಿಲ್ಲ", ಎಂದು ನನ್ನೆಡೆಗೆ ನೋಡಿದರು. ಬಾಗಿಲಿನಲ್ಲಿ ನಿಂತಿದ್ದ ಪೇದೆಯೊಬ್ಬ ಕಿಸಕ್ ಎಂದು ನಕ್ಕ. ನಗು ಸಾಂಕ್ರಾಮಿಕ. ನಾವೂ ನಕ್ಕೆವು.

ನಾನು ನಗು ಮುಗಿಸಿ ಕೇಳಿದೆ, "ಹಾಗಾದ್ರೆ ಅವನ ತುಟಿ, ಮತ್ತೆ ಮೀಸೆ ಮೇಲಿನ ಆರಿಹೋಗಿರುವ ಎಂಜಲಿನ ಸ್ಯಾಂಪಲ್ ತೊಗೊಂಡು, ಡಿ.ಎನ್.ಎ. ಟೆಸ್ಟ್ ನಲ್ಲಿ ಬಳಸಿಕೊಳ್ಳಬಹುದು, ಅಲ್ವಾ?"
"ಇದ್ದರೆ ಖಡಿತ ತೊಗೋಬಹುದು", ಎಂದರು ಡಾಕ್ಟರ್.
"ಹುಡುಗ ಯಾರು?" ಕೇಳಿದೆ.
"ಹರೀಶ್ ಅಂತಾ ಸರ್. ಯಾರೋ ಬಿಬಿಎಂಪಿ ಕಾರ್ಪೊರೇಟರ್ ಮಗ ಅಂತೆ... ನಿಮಗೇನನ್ಸುತ್ತೆ ಸರ್?" ಕೇಳಿದ ಭೈರೇಗೌಡ.
"ನೀವು ಹೇಳುವ ಹಾಗೆ ಅವನ ಜೊತೆ ಬಂದದ್ದು ಹುಡುಗಿಯೇ ಆಗಿದ್ರೆ, ಒಂದೇ ಏಟಿಗೆ ಅವನ ಕತ್ತಿಗೆ ಚೂರಿ ಹಾಕಲು ಸಾಕಷ್ಟು ಗಟ್ಟಿ ಮನಸ್ಸಿನವಳೇ ಇರಬೇಕು. ಚಾಕು ಹೊಸದರಂತೆ ಕಾಣುತ್ತದೆ, ಆದ್ದರಿಂದ ಅವಳು ಕೊಲೆಯ ಪ್ಲಾನ್ ಮಾಡ್ಕೊಂಡೇ ಬಂದಿದ್ಳು. ಹಾಗೆ ಪ್ಲಾನ್ ಮಾಡ್ಕೊಂಡೇ ಬಂದಿದ್ದಾಳೆ ಅಂದ್ರೆ, ಅವ್ಳು ಇಲ್ಲಿಗೆ ಬಂದಿರೋ ವಿಷ್ಯ ಅವನನ್ನಾ ಬಿಟ್ಟು ಇನ್ಯಾರಿಗೂ ಗೊತ್ತಿರೋ ಸಾಧ್ಯತೆ ತುಂಬಾ ಕಮ್ಮಿ... ಇದಕ್ಕಿಂತ ಹೆಚ್ಚಿಗೆ ಏನೂ ಹೊಳೀತಾ ಇಲ್ಲ", ಎಂದೆ. ಅವನು ವಿಚಾರಮಗ್ನನಾಗಿ ತಲೆದೂಗಿದ.
"ನಿಮಗೇನಾದ್ರು ಕ್ಲೂ ಸಿಕ್ತಾ?" ನಾನು ಕೇಳಿದೆ.
"ಹುಂ ಸರ್. ಹುಡುಗಿಯರು ಮುಖಕ್ಕೆ ಹಚ್ಚಿಕೊಳ್ಳೋ ಫೌಂಡೇಷನ್ ಡಬ್ಬಿ ಸಿಕ್ತು... ಆ ಕನ್ನಡಿ ಹತ್ರ", ಎಂದು ಕೋಣೆಯಲ್ಲಿದ್ದ ಕನ್ನಡಿಯ ಮುಂದಿದ್ದ ಟೇಬಲ್ ಕಡೆಗೆ ಕೈ ಮಾಡಿದ. ನಾನು ಒಂದೆರಡು ಕ್ಷಣ ಯೋಚಿಸಿದೆ. ಅವನು ಮುಂದುವರೆಸಿ ಹೇಳಿದ, "ಅದರ ಮೇಲೆ ಫಿಂಗರ್ ಪ್ರಿಂಟ್ಸ್ ಕೂಡ ಇದೆ ಸರ್".
ಕೊಲೆ ನಾನು ಅಂದುಕೊಂಡಷ್ಟು ಅಚ್ಚುಕಟ್ಟಾಗಿ ನಡೆದಿಲ್ಲ ಎನಿಸಿ, ಇದು ಸರಿಹೊಂದುತ್ತಿಲ್ಲ ಅನಿಸಿತು. "ಇನ್ನೇನಾದ್ರು?" ಕೇಳಿದೆ.
"ಇಲ್ಲಾ ಸರ್. ಇಷ್ಟೇ", ಎಂದ.
ನಾನು ಅಮರ್ ಅವರಿಂದ ನನ್ನ ಪಾಲಿನ ಚೆಕ್ ಪಡೆದುಕೊಂಡು ಅಲ್ಲಿಂದ ಮರಳಿ ಮನೆಗೆ ಬಂದೆ.
********************************************
ಮೂರು ದಿನ ಕಳೆದಿತ್ತು. ಸಂಜೆಯ ಹೊತ್ತಿನಲ್ಲಿ ಅದೇ ಎಸ್. ಐ ಭೈರೇಗೌಡ ನನ್ನನ್ನು ಹುಡುಕಿಕೊಂಡು ನನ್ನ ಮನೆಗೆ ಬಂದನು, ನನ್ನಿಂದ ಸಲಹೆ ಪಡೆಯಲು. ಚಹಾ ಕುಡಿಯುತ್ತಾ ತನ್ನ ತನಿಖೆಯ ವಿವರಗಳನ್ನು ನೀಡಿದ.
"ಸತ್ತವನ ಹೆಸರು ಹರೀಶ್ ಅಂತಾ, ಇಪ್ಪತ್ನಾಲ್ಕು ವಯಸ್ಸು. ಇಂಜಿನಿಯರಿಂಗ್ ಅರ್ಧಕ್ಕೆ ಬಿಟ್ಟು, ಈಗ ನ್ಯಾಷನಲ್ ಕಾಲೇಜಿನಲ್ಲಿ ಬಿ.ಬಿ.ಎ ಓದ್ತಾ ಇದ್ದ. ಹುಡುಗಿಯರ ಸಹವಾಸ ಜಾಸ್ತಿ ಅಂತಾ ಅವನ ಫ್ರೆಂಡ್ಸ್ ಹೇಳಿದ್ರು. ಅವನ ಫ್ರೆಂಡ್ಸ್ ಪ್ರಕಾರ, ಇತ್ತೀಚಿಗೆ, ಅಂದ್ರೆ ಹದಿನೈದು ದಿನಗಳ ಹಿಂದೆ ಫೇಸ್ಬುಕ್ಕಿನಲ್ಲಿ ಒಬ್ಳು ಪರಿಚಯ ಆಗಿದ್ಳಂತೆ. ಆಮೇಲೆ ಇಬ್ರೂ ಫೋನಿನಲ್ಲಿ ಮಾತಾಡ್ಕೊಂಡಿದಾರೆ. ಆದ್ರೆ ಅವನನ್ನಾ ಬಿಟ್ಟು ಇನ್ಯಾರು ಆ ಹುಡುಗಿನಾ ನೋಡಿಲ್ಲ. ಆ ಹೋಟೆಲ್ ಹೋಗೋ ಮುಂಚೆ ಒಬ್ಬ ಫ್ರೆಂಡ್ ಹತ್ರ, ಹೀಗೆ ಹೋಗ್ತಾಯಿದೀನಿ ಅಂತಾ ಹೇಳಿದ್ನಂತೆ. ಇಷ್ಟ್ ಬಿಟ್ರೆ, ಆ ಹುಡುಗಿ ಬಗ್ಗೆ ಇನ್ನೇನೂ ಮಾಹಿತಿ ಸಿಗಲಿಲ್ಲ", ಎಂದು ಮಾತಿನ ನಡುವೆ ಬಿಡುವು ತೆಗೆದುಕೊಳ್ಳುವವರಂತೆ ಸುಮ್ಮನಾದ.
ನಾನು ತುಸು ಯೋಚಿಸಿದೆ. ದಾರಿ ಕಾಣದೆ ನನ್ನ ಬಳಿ ಬಂದಿದ್ದಾನೆ ಅಂದ್ರೆ ಹುಡುಗಿಯ ಫೋನಿನ ನಂಬರ್ ಅವಳ ಹೆಸರಿನಲ್ಲಿರದೆ, ಸುಳ್ಳು ಹೆಸರಿನಲ್ಲಿರಬಹುದು ಎಂದು ಅಂದಾಜಿಸಿದೆ.
"ಹಾಗಾದ್ರೆ ಅವಳ ಮೊಬೈಲ್ ನಂಬರ್ ಸುಳ್ಳಾ?"
"ಹೌದು ಸರ್. ಅವತ್ತು ಆ ಕೋಣೆಯಲ್ಲಿ ಅವನ ಮೊಬೈಲೂ ಸಿಕ್ತು. ಆದ್ರೆ ಅದರಿಂದ ಹೆಚ್ಚಿನ ಉಪಯೋಗ ಏನೂ ಆಗಿಲ್ಲ. ಈ ಕೇಸಿನಲ್ಲಿ ಒಂದು ತುಂಬಾ ಇಂಟರೆಸ್ಟಿಂಗ್ ವಿಷ್ಯ ಇದೆ ಸರ್", ಎಂದ. ನನ್ನಲ್ಲಿ ಸ್ವಲ್ಪ ಕುತೂಹಲ ಮೂಡಿ ಕುಂತಲ್ಲೇ ಮುಂದೆ ಸರಿದು, ಅವನೆಡೆಗೆ ಗಮನ ನೆಟ್ಟೆ. ಅವನು ಮುಂದುವರೆಸಿದ,
"ಆ ಹದಿನೈದು ದಿನಗಳಲ್ಲಿ ಅವ್ಳು ನಾಲ್ಕು ನಂಬರಿನಿಂದ ಅವನಿಗೆ ಕಾಲ್ ಮಾಡಿದ್ದಾಳೆ. ಎಲ್ಲಾ ಸಿಮ್ ಗಳೂ ಕದ್ದಿರುವವು".
"ಕದ್ದಿರುವವು?" ನನಗೆ ಗೊಂದಲವಾಯಿತು.
"ಹೌದು ಸರ್. ಆ ನಂಬರ್ ಗಳು ಯಾರ ಹೆಸರಿನಲ್ಲಿ ಇದ್ದವೋ ಅವರನ್ನ ವಿಚಾರಿಸಿದಾಗ ಅವರೆಲ್ಲ ತಮ್ಮ ತಮ್ಮ ಮೊಬೈಲ್ ಗಳು ಕಳೆದು ಹೋಗಿದ್ವು ಅಂತಾ ಹೇಳಿದ್ರು. ಅದರಲ್ಲಿ ಮೂವರು ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ, ಆದ್ರೆ ಒಬ್ರು ಮಾತ್ರ ಕೊಟ್ಟಿಲ್ಲ."
"ಯಾಕೆ ಕೊಟ್ಟಿಲ್ಲ?"
"ಅವರ ಮೊಬೈಲು ಹೇಗಿದ್ರೂ ಹಳೆಯದಾಗಿತ್ತಂತೆ, ಅದಕ್ಕೆ".
"ಸರಿ. ಮುಂದುವರೆಸಿ".
"ಆ ಹುಡುಗಿ ತುಂಬಾ ಸ್ಮಾರ್ಟ್ ಸರ್. ಮೊದ್ಲು ಒಬ್ಬರ ಮೊಬೈಲು ಕದ್ದು, ಅದರಿಂದ ಒಂದೇ ದಿನ ಹರೀಶ್ ಜೊತೆ ಮಾತಾಡಿದ್ದಾಳೆ. ಆಮೇಲೆ ಎರಡು ದಿನ ಬಿಟ್ಟು ಇನ್ನೊಂದು ಮೊಬೈಲ್ ಕದ್ದಿದ್ದಾಳೆ. ಮತ್ತೆ ಅದನ್ನ ಬಳಸಿ ಮಾತಾಡಿದ್ದಾಳೆ. ಹೀಗೇ ಎರಡು ಮೂರು ದಿನಕ್ಕೊಮ್ಮೆ ಒಂದೊಂದು ಮೊಬೈಲು ಕದ್ದು ಅವನ್ ಜೊತೆ ಮಾತಾಡಿದ್ದಾಳೆ. ಕೊನೇ ದಿನ ಮಾತಾಡಿದ್ದೂ ಕದ್ದ ಮೊಬೈಲ್ ನ ಸಿಮ್ ಬಳಸಿಯೇ."
"ಮೊಬೈಲ್ ಕಳವಾದ ಮೇಲೆ, ಕಳೆದುಕೊಂಡವ್ರು ಆ ಸಿಮ್ ಬ್ಲಾಕ್ ಮಾಡ್ಸಿ, ಡ್ಯುಪ್ಲಿಕೇಟ್ ಸಿಮ್ ತಗೊಂಡಿಲ್ವಾ?"
"ಇವರೆಲ್ಲ ಡ್ಯೂಪ್ಲಿಕೇಟ್ ಸಿಮ್ ತಗೊಂಡಿರೋದು ಮೊಬೈಲ್ ಕಳುವಾದ ಆರು ಗಂಟೆಗಳ ನಂತರ ಸರ್. ಅದರ ನಡುವೆ ಅವ್ಳು ಕಾಲ್ ಮಾಡಿದ್ದಾಳೆ. ಅಷ್ಟೇ ಅಲ್ಲಾ... ತಾನು ಮಾತಾಡಿದ ಮೇಲೆ ಸಿಮ್ ಕಾರ್ಡನ್ನಾ ಟ್ರೇಸ್ ಮಾಡ್ದೆ ಇರೋ ಹಾಗೆ ಮುರದಾಕಿದ್ದಾಳೆ".
ಮುಂದುವರಿಯುವುದು
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications