ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಣ್ಣಕಥೆ : ರಾಮಣ್ಣನ ಹೋಟ್ಲು ಮತ್ತು ಲಕ್ಷ್ಮಣನ ಹೋಟ್ಲು

By ಪ್ರಕಾಶ ಅಬ್ಬೂರು
|
Google Oneindia Kannada News

ಮಾಮಾ ಬೊಂಡ ತಂದ್ಕೊಡನೇ.... ಇದು ನಮ್ಮ ಅಣ್ಣನ ಮಗಳು ಸರಿತಾ ಹಬ್ಬಕ್ಕೆಂದು ಬಂದಿದ್ದ ನಮ್ಮ ಅಕ್ಕ ಜಯಮ್ಮನ ಅಳಿಯ ಕಾಳೇಗೌಡರಿಗೆ ನೀಡಿದ್ದ ಆಫರ್. ಈಗಲೂ ಆಕೆಯನ್ನು ತಮಾಷೆಗಾಗಿ ಮಾಮಾ ಬೊಂಡಾ.. ಎಂದು ರೇಗಿಸುವುದುಂಟು. ಇವಳು ಆಫರ್ ಮಾಡಿದ್ದ ಬೊಂಡಾ ಎದುರಿನ ರಾಮಣ್ಣನ ಹೋಟೆಲ್‌ನದು. ತೀರಾ ಚಿಕ್ಕವಳಿದ್ದ ಸರಿತಾ, ಬೊಂಡಾ ತರಲು ಹೇಳಿದರೆ ನನಗೊಂದು ಬೊಂಡಾ ಸಿಗುತ್ತದಲ್ಲಾ ಎಂಬ ಆಸೆಯಿಂದ ಈ ಆಫರ್ ಇಟ್ಟಿದ್ದಳು ಎಂದು ಕಾಣುತ್ತದೆ.

ಬಹಳ ಕಾಲದಿಂದ ನಮ್ಮ ಊರ ಮುಂದಿದ್ದ ಎರಡು ಹೋಟಲ್‌ಗಳು ರಾಮಣ್ಣನ ಹೋಟ್ಲು ಮತ್ತು ಲಕ್ಷ್ಮಣನ ಹೋಟ್ಲು. ರಾಮಣ್ಣ ಮತ್ತು ಲಕ್ಷ್ಮಣ ಇಬ್ಬರು ಅಣ್ಣ ತಮ್ಮಂದಿರು. ರಾಮಣ್ಣ ಹಿರಿಯವನು. ಇವರ ತಂದೆಯ ಹೆಸರು ದಶರಥ ಎಂದೇನೂ ಇರಲಿಲ್ಲ. ನಾವೂ ಸಹ ಇವರ ತಂದೆಯನ್ನು ನೋಡಿರಲಿಲ್ಲ.

ಈ ಇಬ್ಬರಿಗೂ ಜಮೀನು ಇದ್ದಂತೆ ಕಾಣುತ್ತಿರಲಿಲ್ಲ. ಹಾಗಾಗಿಯೇ ಹೋಟಲ್ ಉದ್ಯಮಕ್ಕೆ ಇಳಿದಿರಬೇಕು. ಇವರುಗಳ ಇಡೀ ಕುಟುಂಬವೇ ಹೋಟಲ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಿತ್ತು. ಹೆಣ್ಣು ಮಕ್ಕಳು ಮನೆಯಲ್ಲಿ ದೋಸೆ, ಇಡ್ಲಿಗೆ ಅಕ್ಕಿ ಹಿಟ್ಟು ರುಬ್ಬುವ ಕೆಲಸವನ್ನು ಮಾಡುವುದರ ಜತೆಗೇ ಹೋಟಲ್‌ನಲ್ಲಿ ಸಪ್ಲೈಯರ್ ಕೆಲಸವನ್ನೂ ಮಾಡುತ್ತಿದ್ದರು. ಗಂಡು ಮಕ್ಕಳು ಸೌದೆ ಹೊಂಚುವುದು ಜತೆಗೆ ಸಪ್ಲೈಯರ್ ಕೆಲಸ. [ಪಾತಕಿ, ಕೊಲೆಗಡುಕಿ... ಪಿಶಾಚಿ ಕಣೆ ನಾನು!]

Ramanna hotel and Lakshama hotel

ನಮ್ಮೂರಿನಲ್ಲಿ ಈ ಎರಡು ಹೋಟಲ್‌ಗಳಿಗೆ ವಿಶೇಷವಾದ ಸ್ಥಾನಮಾನಗಳಿದ್ದವು. ಊರಿನ ಅಷ್ಟೇ ಏಕೆ ರಾಜ್ಯದ, ದೇಶದ, ಜಗತ್ತಿನ ರಾಜಕಾರಣವೆಲ್ಲಾ ಇಲ್ಲಿ ಚರ್ಚೆಯಾಗುತ್ತಿತ್ತು. ಊರಿನಲ್ಲಿ ಆಗಿನ್ನು ಸಾರಾಯಿ ಅಂಗಡಿ ಬಂದಿರಲಿಲ್ಲ. ಪೆಟ್ಟಿಗೆ ಅಂಗಡಿಗಳಲ್ಲಿ ಬಾಟ್ಲಿ ಮಾರುವ ಅಭ್ಯಾಸ ಇರಲಿಲ್ಲ. ಅಷ್ಟೇಕೆ ಕುಡಿತದ ಚಟ ಇದ್ದ ಮಂದಿಯೂ ತೀರಾ ಕಡಿಮೆ. ಆದರೆ ಟೀ ಕುಡಿಯುವ ಚಟ ಇದ್ದವರು ತುಂಬಾ ಜನರಿದ್ದರು. ಹೀಗಾಗಿ ಎರಡೂ ಹೋಟಲ್‌ಗಳಿಗೆ ಚೆನ್ನಾಗಿಯೇ ವ್ಯಾಪಾರ ನಡೆಯುತ್ತಿತ್ತು.

ಮನೆಯ ಅಕ್ಕಿ ರೊಟ್ಟಿ, ರಾಗಿ ರೊಟ್ಟಿ ಕಡಿಯಲು ಇಷ್ಟವಿಲ್ಲದ ಜನ ಹೋಟಲ್‌ನ ನಾಷ್ಟಾ ಮಾಡಲು ಬರುತ್ತಿದ್ದರು. ಬಹಳಷ್ಟು ಜನ ಬೆಳಗಿನ ಟೀ ಹಾಗೂ ರಾಜಕೀಯದ ಚರ್ಚೆಗಾಗಿ ಮಾತ್ರ ಬರುತ್ತಿದ್ದರು. ಈ ಹೋಟಲ್‌ಗಳ ಎದುರೇ ನಮ್ಮ ಅಕ್ಕ ಜಯಮ್ಮನ ಮನೆ ಇದ್ದು, ಇವರ ಮನೆಯ ಪಡಸಾಲೆಯೂ ಹೋಟಲ್ ಟೀ ಗೆ ಬರುವವರಿಗೆ ಆಶ್ರಯ ನೀಡಿತ್ತು. ಬೆಳಿಗ್ಗೆ 5 ಗಂಟೆಗೇ ಇವರ ಚಟುವಟಿಕೆ ಶುರುವಾಗುತ್ತಿತ್ತು.

ಹೋಟಲ್‌ನ ರಾಮಣ್ಣ ಮತ್ತು ಲಕ್ಷ್ಮಣ ಬರುವವರೆಗೂ ಜನರೇನೂ ಕಾಯುತ್ತಿರಲಿಲ್ಲ. ಇವರೇ ಒಲೆ ಹೊತ್ತಿಸಿ ಬಿಸಿ ನೀರು ಕಾಯಿಸಿ ರೆಡಿ ಮಾಡಿಡುತ್ತಿದ್ದರು. ಹೋಟಲ್‌ನವರ ಕೆಲಸವೆಂದರೆ ಬರುತ್ತಿದ್ದ ಹಾಗೆಯೇ ಟೀ ಸೊಪ್ಪು, ಬೆಲ್ಲ ಹಾಕುವುದು. ಕೆಲವರಿಗೆ ಇಲ್ಲೊಂದು ಟೀ ಕುಡಿದು ತೊರೆ ಕಡೆ ಹೋಗುವುದು, ಅಥವಾ ತೊರೆ ಕಡೆ ಹೋಗಿ ಬಂದು ಟೀಗೆ ಕುಳಿತುಕೊಳ್ಳುವುದು ಈ ರೀತಿಯಾಗಿ ರೂಢಿಯಾಗಿ ಹೋಗಿದ್ದರು. [ಓಡಿಬಂದು ಮಣಿಯ ಬೆನ್ನು ತಟ್ಟಿದ್ದ ಕಿಟ್ಟು]

ಇಡ್ಲಿ, ದೋಸೆಯ ಗಿರಾಕಿಗಳು ಹೆಚ್ಚಿನ ಮಟ್ಟಿಗೆ ನಮ್ಮೂರ ಪರಿಶಿಷ್ಟರ ಕೇರಿಯವರೇ ಆಗಿರುತ್ತಿದ್ದರು. ಕೂಲಿ ಕೆಲಸಕ್ಕೆ ಹೆಚ್ಚಾಗಿ ಇವರೇ ಹೋಗುತ್ತಿದ್ದುದರಿಂದ ಕೂಲಿಯ ನಗದಿನ ಜತೆಗೇ ಇಡ್ಲಿ ದೋಸೆ ಒಂದು ಕಾಂಪೊನೆಂಟ್ ಆಗಿತ್ತು. ಈಗ ಬಾಟ್ಲಿ ಕಡ್ಡಾಯವಾಗಿದೆ. ನಮ್ಮೂರ ಪರಿಶಿಷ್ಟರ ಕೇರಿಯ ಜನರಿಗೆ ಅದೇಕೋ ಟೀ ಎನ್ನಲು ನಾಲಗೆ ಹೊರಳುತ್ತಿರಲಿಲ್ಲ. ಟೀಯು, ಟೀಯು ಎನ್ನುತ್ತಿದ್ದರು. ಇವರ ಬಾಯಲ್ಲಿ ನಾಥವ್ವಾ, ಒಂದು ಟೀಯು ಎನ್ನುವುದೇ ಬರುತ್ತಿತ್ತು. ಈ ನಾಥವ್ವಾ ಟೀ ಸಪ್ಲೈ ಮಾಡುತ್ತಿದ್ದವಳು. ರಾಮಣ್ಣನ ಮಗಳು. ನಾವೆಲ್ಲ ನಾತೀ ಎಂದು ಕರೆಯುತ್ತಿದ್ದುದು.

ಹನ್ನೊಂದು ಗಂಟೆಯ ವೇಳೆಗೆ ವಡೆ ಮತ್ತು ಬೋಂಡದ ಗಮಲು ಹೋಟಲ್ ಸುತ್ತ ಮುತ್ತ ಆವರಿಸಿಕೊಳ್ಳುತ್ತಿತ್ತು. ಜಮೀನಿನ ಕೆಲಸ ಮಾಡುವವರಿಗೆ ಹನ್ನೊಂದು ಗಂಟೆ ವೇಳೆಗೆ ಒಂದು ಟೀ ಕೊಡಬೇಕಾಗಿತ್ತು. ಕೆಲವರು ಟೀ ಜತೆಗೆ ವಡೆ ಅಥವಾ ಬೊಂಡಾ ಡಿಮ್ಯಾಂಡ್ ಮಾಡುತ್ತಿದ್ದರು. ಎಲ್ಲರೂ ಅಲ್ಲದಿದ್ದರೂ ಅನುಕೂಲ ಇದ್ದವರು ಟೀ ಜತೆ ವಡೆ-ಬೊಂಡಾ ಕೊಡಿಸುತ್ತಿದ್ದರು. ಹೋಟಲ್ ಟೀಗೆ ಕಾಸು ಏಕೆ ಹಾಕಬೇಕು ಎನ್ನುವವರು ಮನೆಯಲ್ಲೇ ಟೀ ಮಾಡಿ ಕಳುಹಿಸುತ್ತಿದ್ದರು.

ಹೋಟೆಲ್ ರಾಮಣ್ಣ ಹೋಟೆಲ್‌ನಿಂದಾಚೆಯೂ ಪ್ರಸಿದ್ದಿಯಾಗಿದ್ದುದು ಅವನ ನಾನ್‌ವೆಜ್ ಅಡುಗೆಯಿಂದಾಗಿ. ನಮ್ಮೂರಿನಲ್ಲಿ ಯಾವುದೇ ಬೀಗರ ಊಟವಿದ್ದು ನಾನ್‌ವೆಜ್ ಅಡುಗೆ ಇದ್ದರೆ ರಾಮಣ್ಣನದೇ ಒಗ್ಗರಣೆ. ಆ ಕಾಲಕ್ಕೆ ಈಗಿನಷ್ಟು ವೆರೈಟಿ ಇರಲಿಲ್ಲ. ಒಂದೆರಡು ಮರಿ ಕಡಿದು, ಸಾರು ಮುದ್ದೆ ಮಾಡುತ್ತಿದ್ದರು. ಸಾರಿನ ಬೆಂದ ಮಾಂಸವನ್ನೆಲ್ಲ ತೆಗೆದು ಅದಕ್ಕೆ ಒಗ್ಗರಣೆ ಹಾಕಿ ಪಂಕ್ತಿಯ ಮೇಲೆ ಎರಡೆರಡು ಪೀಸ್ ಹಾಕಿದರಾಯಿತು. ಜತೆಗೆ ಒಂದಿಷ್ಟು ಒಗ್ಗರಣೆ ಅನ್ನ ಇದ್ದರೆ ಅದೇ ಭಾರಿ ಮೆನು. ಕಳ್ಳು-ಪಚ್ಚಿಗೆ ಅದೂ-ಇದೂ ತರಕಾರಿ ಹಾಕಿ ಗೊಜ್ಜು ಮಾಡುತ್ತಿದ್ದರು. [ಟಪ್ ಟಪ್ ಬುದ್ಧಿಸ್ಟ್ ಸೆಂಟರ್ (ಭಾಗ 1)]

ಲಕ್ಷ್ಮಣ ಸ್ವಾತಂತ್ರ ಹೋರಾಟಗಾರನೆಂದೂ ಮಾನ್ಯತೆ ಪಡೆದಿದ್ದವನು. ಮೈಸೂರು ಚಲೊ ಚಳವಳಿಯ ವೇಳೆ ತಾಲ್ಲೂಕು ಆಫೀಸಿನ ಮೇಲೆ ಬಾವುಟ ಹಾರಿಸಲು ಹೋಗಿ ಪೊಲೀಸರಿಂದ ಏಟು ತಿಂದು ಜೇಲು ಕಂಡಿದ್ದವನು. ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿಯೂ ಬರುತ್ತಿತ್ತು. ಲಕ್ಷ್ಮಣನ ಜತೆಗೆ ನಮ್ಮೂರಿನ ಕೃಷ್ಣಮೂರ್ತಿ ಹಾಗೂ ಚನ್ನಿಗಯ್ಯ ಅವರುಗಳೂ ಪಾಲ್ಗೊಂಡಿದ್ದು, ಮೈಸೂರು ಚಲೊ ಚಳುವಳಿಯಲ್ಲಿ ಅಬ್ಬೂರಿನ ಹೆಸರನ್ನು ದಾಖಲಿಸಿದ್ದಾರೆ.

ಸ್ವಚ್ಛ ಭಾರತ ಅಭಿಯಾನವನ್ನೇನಾದರೂ ಅಂದು ಆರಂಭಿಸಿದ್ದರೆ ನಮ್ಮೂರಿನ ಈ ಹೋಟೆಲ್‌ಗಳಿಂದಲೇ ಆರಂಭಿಸಬೇಕಾಗಿತ್ತು. ಜೊಯ್ ಎನ್ನುವ ನೊಣ, ಕೂತ ಕಡೆಯೇ ಉಗುಳುವ ಮಂದಿ, ಎದುರಿನ ಬಚ್ಚಲಿನಲ್ಲಿ ದಾಳಿಯಿಡುವ ಸೊಳ್ಳೆಗಳು. ದೋಸೆ ಹಾಕುವ ವೇಳೆ ಲಕ್ಷ್ಮಣ ಗೊಣ್ಣೆ ತೆಗೆದನೆಂದರೆ ಚಡ್ಡಿಗೆ ಕೈ ಒರಸಿದರೂ ಆಯಿತು, ಇಲ್ಲದಿದ್ದರೂ ಆಯಿತು. ಆದರೆ ಟೀ ಸೊಪ್ಪಿನ ಬಟ್ಟೆಯನ್ನು ಮಾತ್ರ ಇದೇ ಕೈಯಲ್ಲಿ ಹಿಂಡುತ್ತಿದ್ದುದು! ಜನರೇನೂ ಇದರ ಬಗ್ಗೆ ತಲೆ ಕೆಡಿಸಿಕೊಂಡ ಹಾಗೇ ಕಾಣುತ್ತಿರಲಿಲ್ಲ. ಜನಕ್ಕೆ ಮುಖ್ಯವಾಗಿದ್ದುದು ಬಿಸಿ ಬಿಸಿ ಟೀ ಹಾಗೂ ಅದನ್ನು ಕುಡಿಯುತ್ತಾ ಮಾಡುತ್ತಿದ್ದ ಲೋಕಾಭಿರಾಮದ ಚರ್ಚೆ ಮಾತ್ರ.

ರಾಮಣ್ಣ ಮತ್ತು ಲಕ್ಷ್ಮಣ ಇಬ್ಬರೂ ಇಂದು ಇಲ್ಲ. ಆದರೆ ಅವರ ಹೋಟಲ್ ಪರಂಪರೆ ಮುಂದುವರೆದಿದೆ. ಮಕ್ಕಳು ಹೋಟಲ್ ಉದ್ಯಮವನ್ನು ಮುಂದುವರಿಸಿದ್ದಾರೆ. ಟೀ ದೋಸೆ ಜತೆಗೆ ಕಾಲದ ಅಗತ್ಯಕ್ಕೆ ತಕ್ಕ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಹೋಟಲ್‌ಗಳು ಇದ್ದ ಜಾಗಗಳೂ ಬದಲಾಗಿವೆ.

ರಾಮಣ್ಣನ ಹೋಟಲ್ ಈಗ ನಾತಿ ಹೋಟಲ್ ಆಗಿದೆ. ಲಕ್ಷ್ಮಣದ ಹೋಟಲ್ ಪದ್ದಿ ಹೋಟಲ್ ಆಗಿದೆ. ಇವುಗಳ ಜತೆಗೇ ಇನ್ನೊಂದೆರಡು ಹೋಟಲ್‌ಗಳೂ ತಲೆ ಎತ್ತಿವೆ.

English summary
Ramanna hotel and Lakshama hotel - A Kannada short story by Prakash Abbur. It is a story of two hotels, two owners and their family. Villagers had special bonding with these two hotels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X