ಮಾದೇವಮ್ಮನ ಲಿವಿಂಗ್ ಟುಗೆದರ್ ಸಂಸಾರ!

By: ಕುಸುಮಬಾಲೆ, ಚಾಮರಾಜನಗರ
Subscribe to Oneindia Kannada

ನಿಜಕ್ಕೂ ಆಶ್ಚರ್ಯವಾಗುತ್ತೆ. ದೂರದೂರುಗಳ ನಡುವೆ ಸಂಸ್ಕೃತಿಯಲ್ಲಿ ವ್ಯತ್ಯಾಸ ಕಾಣುವುದು ಸಹಜ. ಆದ್ರೆ ಪ್ರತಿ ಅರ್ಧಗಂಟೆಯ ಹಾದಿಗೆ ಭಾಷೆ, ರೀತಿ-ನೀತಿಗಳು ವ್ಯತ್ಯಾಸವಾಗುವುದಿದೆಯಲ್ಲ, ಅದು ನಮ್ಮ ದೇಶದಲ್ಲಿ ಮಾತ್ರ ಸಾಧ್ಯವೇನೋ. ಇಲ್ಲೇ, ನಾನು ಕಂಡ ಅಕ್ಕಪಕ್ಕದ ಜಿಲ್ಲೆಗಳ (ಮೈಸೂರು- ಚಾಮರಾಜನಗರ) ನಡುವೆಯೇ ಅದೆಷ್ಟು ವ್ಯತ್ಯಾಸ! ಹಿಂದೆ ಚಾಮರಾಜನಗರ ಸ್ವತಂತ್ರ ಜಿಲ್ಲೆಯಾಗದೇ ಮೈಸೂರಿಗೇ ಸೇರಿದ್ದಾಗಲೂ ಈ ವ್ಯತ್ಯಾಸ ಇದ್ದೇ ಇತ್ತು.

ಮೈಸೂರೆಂದರೆ ಸಾಂಸ್ಕೃತಿಕ ರಾಜಧಾನಿ, ಕಲೆ, ಸಾಹಿತ್ಯ ಸಂಗೀತದ ತವರು ಅನ್ನುವಂತ ಮಾತುಗಳನ್ನ ಕೇಳಿರದವರಿರಲಾರರು. ಅದೇ ಚಾಮರಾಜನಗರ ಅಂದರೆ ಬರಗಾಡು ಅನ್ನುವ ಶಾಶ್ವತ ಹಣೆಪಟ್ಟಿ. ಆದರಿಲ್ಲಿ ಉಲ್ಟಾ ವಿಷಯವೂ ಒಂದಿದೆ. ಮೈಸೂರು ಸುತ್ತಲ ಹಳ್ಳಿಗರು ಪಕ್ಕಾ ರೈತಾಪಿಗಳಾಗಿ ಬದುಕಿಬಿಟ್ಟರು. ಇತರೆ ನಗರಗಳಂತೆ ಮೈಸೂರು, ಆಸ್ಪತ್ರೆ, ಖರೀದಿ ಮುಂತಾದವಕ್ಕೆ ಬಳಕೆಯಾಗಿದೆಯಷ್ಟೆ, ಉಳಿದಂತೆ ಬಹುತೇಕ ಹಳ್ಳಿಗಳಿಗೂ ಮೈಸೂರಿನ ಸಾಂಸ್ಕೃತಿಕ ವಿಷಯಗಳಿಗೂ ಕೊಂಡಿಯೇ ಇಲ್ಲ. ಒಮ್ಮೆಯೂ ಮೈಸೂರು ಅರಮನೆಯನ್ನೇ ನೋಡದ, ಚಾಮುಂಡಿಬೆಟ್ಟವನ್ನೇ ಏರದ ಲಕ್ಷಾಂತರ ಜೀವಗಳು ಮೈಸೂರು ಪಕ್ಕದ ಹಳ್ಳಿಗಳಲ್ಲಿವೆ.

ಚಾಮರಾಜನಗರದ ಬಹುತೇಕ ಹಳ್ಳಿಗರು ರೈತರೇ ಆದರೂ, ಅವರ ತಿಳುವಳಿಕೆ ತುಸು ಭಿನ್ನ. ನೀರು ಕಡಿಮೆ, ಹಾಗಾಗಿ, ಕೃಷಿಯನ್ನು ಬಿಟ್ಟು ಬೇರೆ ಕಸುಬುಗಳನ್ನು ಮಾಡುವುದು ಅನಿವಾರ್ಯವಾದ್ದಕ್ಕೇನೋ,, ಅವರದ್ದು ಪಕ್ಕಾ ಕೃಷಿಕ ಮನೋಭಾವವಲ್ಲ. ಚೆಂದದ ಬಟ್ಟೆಬರೆ, ಸೆಂಟು ವಾಸನೆ, ಟೆಂಟು ಸಿನೆಮಾಗಳ ಪರಿಚಯವಿರುವವರು. ನಾಜೂಕು (ಷೋಕಿ ಅಂದ್ರೆ ಬೇಜಾರು ಮಾಡ್ಕೋತಾರೇನೋ!) ಹೆಚ್ಚು. ಹಳೇ ಕಾಲದ ಫೋಟೋಗಳೇ ಸಾಕ್ಷಿ, ಅವರ ಬೆಲ್ ಬಾಟಮ್ ಪ್ಯಾಂಟಿಗೆ, ಹೆಂಗಸರ ಭಾರತಿಯಂತ ತುಂಡು ರವಿಕೆಗೆ, ತುರುಬಿಗೆ.. [ಬೆತ್ತಲಾದಳು ಗುರುಬಸವಿ ಊರ ಕೆರೆಯ ಮುಂದೆ!]

Nanjangud Madevama and live in relationship

ಬರೆಯಹೊರಟದ್ದು ಬೇರೆಯದ್ದೇ ಇದೆ. ಸುಮಾರು 50 ವರ್ಷಗಳ ಹಿಂದಿನ ಕಥೆ. ಕೇಳಿ, ಈ ಚಾಮರಾಜನರದ ಒಂದು ಹಳ್ಳಿಯಿಂದ ನಂಜನಗೂಡು ಕಡೆಯ ಹಳ್ಳಿಗೆ ಮದುವೆಯಾದವಳು ಮಾದೇವಮ್ಮ. ಆ ಅದೇ ಸಿನೆಮಾದವರಂತ ಉಡುಗೆ, ತೊಡುಗೆ, ನಡಿಗೆ, ಅವಳದು. ಇದೋ ಗದ್ದೆ ಸೀಮೆ. ಗಂಡು ಹೆಣ್ಣೆನ್ನದೇ ಕೈತುಂಬಾ ಕೆಸರ ಕೆಲಸ. ಮಾದೇವಮ್ಮ ಹೊಂದಿಕೊಂಡಳು. ಆ ಊರಲ್ಲಿ ಬ್ರಾಹ್ಮಣರೂ ಇದ್ದದ್ದು ಮಾದೇವಮ್ಮನ ಭಾಗ್ಯ. ತಲೆಗೆ ಬಾಚಣಿಗೆ ಹಾಕಲೂ ಪುರುಸೊತ್ತಾಗದೇ ಗೇಯುವ ಲಿಂಗಾಯತ ಹೆಂಗಸರಿಗಿಂತ, ಮಡಿಹುಡಿಯಾಡುವ ಬ್ರಾಹ್ಮಣರ ಹೆಂಗಸರೊಂದಿಗೆ ಮಾತಿಗೆ ನಿಲ್ಲುವುದು ಅವಳಿಗೆ ಇಷ್ಟವಾಗುತ್ತಿತ್ತು.

ಮಾದೇವಮ್ಮನ ಗಂಡ ಹಸುವಿನಂತ ಮನುಷ್ಯ. ಆದರೆ ಅದೇನಾಯಿತೋ ಇದ್ದಕ್ಕಿದ್ದಂತೆ ಮದುವೆಯಾದ ಮೂರೇ ವರ್ಷದಲ್ಲಿ ತೀರಿಕೊಂಡುಬಿಟ್ಟ. ಮಾದೇವಮ್ಮ ಒಂಟಿಯಾದಳು, ತವರು ಹೋಗುವ ಸ್ಥಿತಿಯಲ್ಲಿರಲಿಲ್ಲ. ಮಕ್ಕಳೂ ಆಗಿರಲಿಲ್ಲ. ಮನೆಗೊಬ್ಬಳೇ ಆದಳು.

ಗಂಡ ಬಿಟ್ಟುಹೋದ ಜಮೀನು ದಕ್ಕಿದ್ದರೆ, ಹೇಗೋ ಬೆಳಕೊಂಡು ಜೀವನ ಮಾಡ್ತಿದ್ದಳೇನೋ. ಆದರೆ ಅದು ಅವನ ಅಣ್ಣತಮ್ಮಂದಿರ ಪಾಲಾಗಿಹೋಯ್ತು. ಇವಳು ಬ್ರಾಹ್ಮಣರ ಮನೆ ಬಾಗಿಲು ಕಾದಳು, ಮುಸುರೆಗಳಿಗೆ ಕೈಯಾದಳು. ಕೊಳೆಬಟ್ಟೆಗಳಿಗೆ ನೀರು ಸೋಪು ಹಾಕಿದಳು. ಹೊಟ್ಟೆ ತುಂಬುತ್ತಿತ್ತು. [ಸಣ್ಣಕಥೆ : ಪಾತಕಿ, ಕೊಲೆಗಡುಕಿ... ಪಿಶಾಚಿ ಕಣೆ ನಾನು!]

ಇತ್ತ ಅದೇ ಊರಿನ ಗುರುಶಾಂತಪ್ಪ ಚಿಕ್ಕವಯಸಿಗೇ ಹೆಂಡತಿ ಕಳಕೊಂಡ. ಪಾಪ ಅವನಿಗೋ ಒಲೆ ಹಚ್ಚಲೂ ಬಾರದು. ಹೆಂಡತಿ ಸತ್ತ ಹೊಸತರಲ್ಲಿ ಅವರಿವರು ಕರುಣೆ ತೋರಿಸಿದರು. ಆದರೆ ಎಷ್ಟು ದಿನ? ಗುರುಶಾಂತಪ್ಪ ದೂರದ ದಾಯಾದಿಯೂ ಆದ ಮಾದೇವಮ್ಮನ ಸಹಾಯ ಕೇಳಿದ. ಅವಳೂ ತಲೆಯಾಡಿಸಿದಳು. ಅವನ ಹೊಟ್ಟೆ, ಬಟ್ಟೆ ನೋಡಿದಳು. ಇದೆಲ್ಲ ಹಗಲ ಕೆಲಸ. ಆದರೆ ಮಾದೇವಮ್ಮ ರಾತ್ರಿಯೂ ಅಲ್ಲೆ ಇರೋದು ಯಾಕೋ? ಸುದ್ದಿ ಗಾಳಿ ಸೇರಿಯಾಗಿತ್ತು.

ಈ ಬೆಳವಣಿಗೆ ಜಾತಸ್ತರ ಕಣ್ಣು ಕುಕ್ಕಿತು, ಜಗಲಿಗಳ ಮಾತಾಯಿತು. ಕಡೆಗೊಂದು ದಿನ ಪಂಚಾಯಿತಿ ಮೆಟ್ಟಿಲನ್ನೂ ಮುಟ್ಟಿತು. ಜನ ಗುಂಪಾದರು, ಮುಖಂಡರು ಜಗಲಿಯೇರಿದರು. ಮಾದೇವಮ್ಮನನ್ನೂ, ಗುರುಶಾಂತಪ್ಪನ್ನೂ ಕರೆತಂದು ನಿಲ್ಲಿಸಿದರು. ಅವಳು ರಾತ್ರಿ ಅಲ್ಲೆ ಇದ್ದುದನ್ನ ಕಂಡ ಸಾಕ್ಷಿಗಳೂ ಇದ್ದರು. ಶುರುವಾಯ್ತು ವಿಚಾರಣೆ...

"ಯಾನ ಗುರುಸಾಂತಪ್ಪ ನಿಮ್ಮಪ್ಪ ಎಂತಾ ಒಳ್ಳಿ ಮನ್ಸ, ನೀನು ಈ ತರವಾಗ್ ಮಾಡಬೋದಾ?" ಪೀಠಿಕೆಯ ಪ್ರಶ್ನೆ.
"ನಾ ಯಾನ್ ಮಾಡಿದ್ದನು ಅಂತಾ ಮಾಡಬಾರದ ಕೆಲಸವ?" ಇವನ ಉತ್ತರ.
ಪ್ರ: ಮಾದೇವಮ್ಮ ನಿಮ್ಮಟ್ಟಿಗ್ ಬಂದಳಂತಲ್ಲ?
ಉ: ಹ್ಞೂ ಬತ್ತಳ. ಇಲ್ಲ ಅಂದವರ್ಯಾರ?
ಪ್ರ: ಇಲ್ಲ ಅನ್ನಿಲ್ಲ. ಉಂಟು ಅಂದದ್ದಕ್ಕೇ ಅಲ್ವ ನ್ಯಾಯಕ್ ಕರದಿರಾದು? ಅಂವ ಗಂಡ್ ಸತ್ ಮುಂಡ, ನೀ ಇರಾಂವ ಒಬ್ಬ, ಅಂವ ಬರದು ತರವಾ ಯೋಳು ಮತ್ತ?
ಉ: ಬ್ಯಾಡ ಅಂದ್ರ ನನ್ ಲಗುಬಗ ನೀವ್ ನೋಡಿರ್ಯಾ ಯೋಳಿ? ಉಣ್ಣಕ್ ಯಾರಟ್ಟಿಗೋಗ್ಲಿ?
ಪ್ರ: ಉಣ್ಣ ತಿನ್ನ ಇಚಾರ ಅಲ್ಲ ಕಣ್ ಗುರುಶಾಂತ ಇದು, ಅಂವ ಬರ್ಬುಡು, ನಿನಗ್ ಅಡುಗ ಮಾಡ್ಬುಡು, ಬಟ್ಟ ಒಗಾಬಡು. ಆದ್ರ ಇನ್ನೊಸಿ ಮುಂದ್ಕೋದ್ರ ಕಷ್ಟವಾಯ್ತದ.
ಗುಂಪಿನಿಂದ: ರಾತ್ರಹೊತ್ಲಿ ಯಾನ್ ಕೆಲ್ಸವ ಅಂತ ಕ್ಯೋಳಿ ಮತ್ತ? ಬ್ಯಾರೆ ಜಾತಿಯವರ್ ಮುಂದ ನಮಗ್ ಮಾನ ಓಯ್ತ ಕೂತದ.
ಪ್ರ: ಕ್ಯೋಳಿದ್ಯಪ್ಪ ಗುರುಶಾಂತ. ನಮ್ಮ ಜಾತೀಲಿ ಇದೆಲ್ಲ ನಡೀಬೋದಾ? ತಿಳದಂವ ನೀನೇ ಯೋಳು ಮತ್ತ?
ಉ: ನಾ ಮಾಡ್ತಿರದು ಜಾತಿ ಮರ್ಯಾದಿ ಉಳಿಸಾ ಕೆಲ್ಸನಿಯೇ.

ಅವನಂದ ಮಾತಿನ ಅರ್ಥವಾಗದೇ ಎಲ್ಲರೂ ಮುಖ ಮುಖ ನೋಡಿಕೊಂಡರು.

ಪ್ರ: ಇದ್ಯಾವ್ ಮಾತು ಅಂತ್ ಆಡೀಯೇ ಗುರುಶಾಂತ?

ಉ: ಇನ್ನೇನ ಮತ್ತ? ಊರ್ಲಿ ಅಗಸರವರ, ಹೊಲೆಯರವರ, ಶೆಟ್ಗಳವರ, ಇವಳಿಗೂ ವಯಸೂ ಕಾಲ, ಯಾವನ್ನಾರೂ ಕಟ್ಗಂಟ್ ಓಡೋದ್ರ ಜಾತಿ ಮರ್ಯಾದಿ ಎಲ್ಲುಳ್ಕಂಡದು ನೀವೇ ಯೋಳಿ? ಪ್ರಶ್ನೆಗೇ ಪ್ರಶ್ನೆ ಹಾಕಿದ. ಅವರು ನಿರುತ್ತರರಾದಾಗ ತಾನೇ ಮುಂದುವರೆಸಿದ. ನಾನೂ ಒಬ್ಬಂಟಿಗ, ಜಾತಸ್ಥ, ದಾಯಾದಿ. ತಪ್ಪೇನಿದ್ದದು ಯೋಳಿ? ಅಂದ. ಸುತ್ತ ಹಳ್ಳಿಗಳಲ್ಲಿ ಇತರೆಯವರೊಂದಿಗೆ ಓಡಿ ಹೋಗಿ ಜಾತಸ್ತರು ತಲೆತಗ್ಗಿಸುವಂಗಾದ ಪ್ರಕರಣಗಳ ಲಿಸ್ಟು ಕೊಟ್ಟ. ಪಂಚಾಯಿತಿದಾರರು ಚೌಕ ವದರಿ ಹೆಗಲಿಗೆ ಹಾಕೊಂಡು, ಜಗುಲಿ ಬಿಟ್ಟೆದ್ದರು.

ಮಾದೇವಮ್ಮ ಮರುದಿನವೇ ಅಧಿಕೃತವಾಗಿ ಗುರುಶಾಂತನ ಮನೆಗೆ ಶಿಫ್ಟ್ ಆದಳು. ಗುರುಶಾಂತ ಪೊಳ್ಳೆಗೂಡು (ಸರಿಯಾಗಿ ಕಟ್ಟದ ರೇಷ್ಮೆಗೂಡು) ಮಾರೋ ವ್ಯಾಪಾರ ಶುರುಮಾಡಿದ. ಆ ಮಾದೇವಮ್ಮ ಮನೆಗೆ ಬಂದ ಗಳಿಗೆಯೋ, ಇವನ ನಸೀಬೋ.. ವ್ಯಾಪಾರ ಕೈ ಹಿಡೀತು. ದುಡ್ಡು ಕಾಸಿಗೆ ಕೊರತೆಯಾಗಲಿಲ್ಲ. ಅವನು ಊರೂರು ತಿರುಗಿ ರೇಷ್ಮೆ ಬೆಳೆಗಾರರ ಬಳಿ ಪೊಳ್ಳೆ ಗೂಡು ಸಂಗ್ರಹ ಮಾಡಿ, ಕೊಳ್ಳೆಗಾಲ, ರಾಮನಗರ, ಅಂತ ವ್ಯಾಪಾರಕ್ಕೆ ಹೋಗುತ್ತಿದ್ದ. ಮಾದೇವಮ್ಮ ಅಷ್ಟಿಷ್ಟು ಬಡ್ಡಿಗೆ ಕೊಡಲೂ ಶುರು ಮಾಡಿದ್ಲು.

ಊರಿಂದ ನಂಜನಗೂಡಿಗೆ ಅಲ್ಲಿಂದ ಮೈಸೂರಿಗೆ ಎರಡೆರಡು ಬಸ್ಸತ್ತಿ ಹೋಗಿ ಬರುತ್ತಿದ್ದಳು. ಕೆಲಸವಿಷ್ಟೆ, ಪದ್ಮ ಥಿಯೇಟರಿನ ಪಕ್ಕದ ಗಣೇಶ ಟೇಲರಿಗೆ ಬ್ಲೌಸು ಹೊಲಿಯಲು ಕೊಟ್ಟುಬರೋದು, ಅದೇ ನೆಪದಲ್ಲಿ ಇಂದ್ರಭವನದಲ್ಲಿ ಊಟ, ಗಂಡನಿದ್ದರೆ ಜೊತೇಲಿ. ಇಲ್ಲದಿದ್ದರೂ ಒಬ್ಬಳೇ. "ಐ ನಂಗೀ ಹಳ್ಳಿ ಹೊಲಿಗೆಗಳು ಹಿಡಿಸದೇ ಇಲ್ಲ" ಅಂತಿದ್ದಳು. "ಇಂದ್ರಭವನ ಅಂತದ ನೋಡಿದರ್ಯಾ?" ಅಂತ ಬಾಚಣಿಕೆ ಕಾಣದ ಕೂದಲ ಹೆಂಗಸರ ಕೇಳುತ್ತಿದ್ದಳು. "ಐ ಸಾರು ಅಂದ್ರೇನ್ ಯೋಳಿರಿ, ಬೆರಳ ಕಡ್ಕಳಂಗಿರ್ತದ" ಅಂದು ಅವರ ಬಾಯಲ್ಲಿ ನೀರೂರಿಸುತ್ತಿದ್ದಳು.

ಈ ಲಿವಿಂಗ್ ಟುಗೆದರ್ ದಂಪತಿಗಳಿಗೆ ಹಣಕಾಸು, ನೆಮ್ಮದಿ ಎಲ್ಲವೂ ಇತ್ತು. ಆದರೆ ಯಾಕೋ ಮಾದೇವಮ್ಮನಿಗೆ ಮಕ್ಕಳ ಭಾಗ್ಯ ದೊರೆಯಲಿಲ್ಲ. ಮಾದೇವಮ್ಮನಿಗಿಂತ ಹೆಚ್ಚಾಗಿ ಗುರುಶಾಂತನಿಗೆ ಇದರ ಚಿಂತೆ ಹೆಚ್ಚಾಗಿತ್ತು. ಕಡೆಗೆ ಯಾರೋ ಗುರುಶಾಂತನ ದೂರದ ಸಂಬಂಧಿಯೊಬ್ಬರ 7-8 ವರ್ಷದ ಹುಡುಗನ್ನ ಕರ್ಕೊಂಡು ಬಂದು ದತ್ತು ಮಾಡಿಕೊಂಡರು. ಅಲ್ಲಿಗೆ "ಡೈರೆಕ್ಟರ್ ಸ್ಪೆಷಲ್" ಸಿನೆಮಾದಂತ ಒಂದು ಕಂಪ್ಲೀಟ್ ಫ್ಯಾಮಿಲಿ ಆಯ್ತು. ಮಾದೇವಮ್ಮನಿಗೆ ಒಂಥರ ಹೊಸ ಸಂಭ್ರಮ. ಅಗತ್ಯಕ್ಕಿಂತ ಹೆಚ್ಚಾಗಿ ಹೋದ ಕಡೆ ಬಂದ ಕಡೆ ಗಂಡ ಮತ್ತು ಮಗನ ಮಾತನ್ನೇ ಆಡುತ್ತಿದ್ದಳು. ಮೈಸೂರಿಗೆ ಹೋಗಿ ಬರೋಕೆ ಈಗ ಅವಳ ಹೊಸ ಮಗನೂ ಜೊತೆಯಾಗುತ್ತಿದ್ದ.

ಬದುಕಲ್ಲಿ ನಮ್ಮ ಪ್ರಪೋಸಸ್ಸೂ.. ಯಾರೋ ಎಲ್ಲೋ ಕುಂತು ಮಾಡುವ ಡಿಸ್ಪೋಸಸ್ಸು ಮನುಷ್ಯ ಹುಟ್ಟಿದ ಕಾಲದಿಂದ ಇರೋದೇ.. ಇದು ಈ ಟೋಟಲ್ ಫ್ಯಾಮಿಲೀನೂ ಬಿಡಲಿಲ್ಲ. ಒಂದಿನ ಇದ್ದಕ್ಕಿದ್ದಂತೆ ಗುರುಶಾಂತ ಪ್ರಾಣಬಿಟ್ಟುಬಿಟ್ಟ. ಗುರುಶಾಂತನ ಕಾರ್ಯಗಳು ಮುಗಿಯೋ ಹೊತ್ತಿಗೆ ಹುಡುಗನ ಕಡೆಯವರು ಬಂದರು. ಪಂಚಾಯಿತಿ ಸೇರಿಸಿದರು.

"ನಾವ್ ಗಂಡ್ ಕಳಿಸಿದ್ದು ಗುರುಶಾಂತನ್ ಮುಖ ನೋಡಿ. ಈಗ ಅವನೇ ಇಲ್ಲದಿದ್ ಮ್ಯಾಲ ಇವಳ ನಂಬಿ ಬುಡಕಾದದ್ದಾ? ಗಂಡ ಸತ್ತ ಮೇಲ ಇವನಟ್ಟಿ ಸೇರ್ಕಂಡಿರಂವ ಈಗ ಇನ್ನೊಬ್ಬನ ನೋಡದೇ ಇರಾಂವಳ ಯೋಳಿ ಮತ್ತ?" ನ್ಯಾಯ(!) ಕೇಳಿದರು.

"ರವಕ ಒಲಿಸಕ ಮೈಸೂರ್ಗಂಟ ಓಗಾ ಬಡ್ಡಿ ಇಂವ. ನಾಲಗ ರುಚಿ ಕಂಡಿರಂವ. ಊರ್ಲಿ ಒಕ್ಕಲಾಗದುಂಟಾ?" ಮಾದೇವಮ್ಮನ ಮೊದಲ ಗಂಡನ ತಮ್ಮಂದಿರು "ಸೇಡು" ತೀರಿಸಿಕೊಂಡರು. ಆ ಹುಡುಗನ್ನ ದತ್ತು ಅಂತ ಕೆರ್ಕಂಡ್ ಬಂದಿದ್ದರಿ. ಅದೇನ್ ಕೊಡಬೇಕೋ ಕೊಡಿ. ನಾವು ವಾಪಸ್ ಕರ್ಕಂಡ್ ಓಯ್ತಿವಿ. ಅಂತ ಭಾಗಕ್ಕೆ ನಿಂತರು. ಅವನ ತುಂಡು ಭೂಮಿ ಆ ಹುಡುಗನಿಗೂ. ಅವನ ದುಡ್ಡು ಕಾಸು, ಇರೋ ಹಟ್ಟಿ ಮಾದೇವಮ್ಮನಿಗೂ ಅಂತ ತೀರ್ಮಾನವಾಯ್ತು. ಹುಡುಗ ಪುನಃ ಊರು ಸೇರಿಕೊಂಡಿತು. ಮಾದೇವಮ್ಮ ಮತ್ತೆ ಒಂಟಿ.

ಮಾದೇವಮ್ಮ ಬಡ್ಡಿಗೆ ಕೊಟ್ಟಿದ್ದಳಲ್ಲ ಆ ಕಾಸು ಅವಳ ಜೀವನಕ್ಕೆ ಸಾಲುತ್ತಿತ್ತು. ಆದರೆ ಗಂಡ ಸತ್ತ ಮೇಲೆ ಸಾಲ ತಗೊಂಡವರು ಬಡ್ಡಿಯಿರಲಿ, ಅಸಲಿಗೂ ಕೈ ಎತ್ತಿದರು. ಕೇಳಲು ಹೋದರೆ "ಇಬ್ಬರು ಗಂಡರ..." ಅಂತೆಲ್ಲ ಹೊಲಸು ಮಾತು. ಕೂತು ತಿನ್ನೋನಿಗೆ ಕುಡಿಕೆ ಹೊನ್ನು ಸಾಲದು" ಅಂತ ಗಾದೆ. ಇನ್ನು ಗುರುಶಾಂತನ ಇಟ್ಟಿದ್ದ ಪೊಳ್ಳೆಗೂಡಿನ ಪುಡಿಗಾಸು ಎಲ್ಲಿಗೆ ಸಾಕಾದೀತು? ಕೆಲವೇ ದಿನಗಳಲ್ಲಿ ಕೈ ಪೂರ್ತಿ ಖಾಲಿಯಾಯ್ತು.

ಹಸಿವು.. ಬದುಕು...ಎಲ್ಲಕ್ಕಿಂತ ದೊಡ್ಡದು ಮಾದೇವಮ್ಮ ಮತ್ತೆ ಉಳ್ಳವರ ಮನೆ ಹಿತ್ತಲು ಸೇರಿದಳು. ಮುಸುರೆಗಳಿಗೆ ಕೈಯಾದಳು. ಬಟ್ಟೆಗಳಿಗೆ ಸೋಪು ತಿಕ್ಕಿದಳು. ಮದುವೆ ಮನೆಗಳ ಹಪ್ಪಳ ತೀಡಿದಳು. ಕಜ್ಜಾಯದ ಪಾಕ ಎತ್ತಿದಳು.ಬದುಕಿದಳು.

ಅವಳೀಗ ಹಣ್ಣಣ್ಣು ಮುದುಕಿ. ಸರ್ಕಾರದ ವೃದ್ಧಾಪ್ಯ ವೇತನ ಬರುತ್ತದೆ. ಮೈಸೂರಿಗೆ ಹೋಗೋರ ಕೈಲಿ ಇಂಧ್ರಭವನದ ಸ್ವೀಟು ತರಿಸುತ್ತಾಳೆ. ಬೊಚ್ಚುಬಾಯಲ್ಲಿ ಚಪ್ಪರಿಸಿ. ಮೊದಲಿನ ಹಾಗಿಲ್ಲ ಅನ್ನುತ್ತಾ ಹಿಂದೆ ಇದ್ದ ಕ್ವಾಲಿಟಿಯನ್ನು ನೆನೆಯುತ್ತಾಳೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Kannada short story by Kusumabaale about a widow woman who had a live in relationship with a married man. She and the man adopted a boy. One day the man also died. Madevamma had to face ugly words from the society. What happened next? Read this short story.
Please Wait while comments are loading...