ನೀಳ್ಗತೆ : ಅಗೋಚರ ಶಕ್ತಿ

ಶ್ಯಾಮಲ ತಮಗಾದ ವಿಶೇಷ ಅನುಭವದ ಕುರಿತು ದಿನವಿಡೀ ಯೋಚಿಸಿದರು, ಆ "ಅಗೋಚರ ಶಕ್ತಿ" ಯಾವುದಿರಬಹುದೆಂದು. ಅದು ತಮ್ಮ "ಇಷ್ಟ ದೈವ" ಮೂಕಾಂಬಿಕೆಯೇ ಇರಬೇಕೆಂದು ಭಾವಿಸಲು, ಪತಿ ಸುಂದರ್ ಅಭಿಪ್ರಾಯವೂ ಕಾರಣವಾಗಿತ್ತು. ಏನೇ ಇರಲಿ, ಹಿತ ನುಡಿದುದುದಾದರೆ ವೈರಿಯೂ ಪ್ರಿಯವಾಗಿ ಬಿಡುತ್ತಾನೆ. ಅಂದ ಮೇಲೆ, ಆ ಶಕ್ತಿ ದೈವವೆನಿಸದೇ ಇರಲಾರದು. ಒಂದು ದಿನ, ಆ ಶಕ್ತಿಯ ಹರಕೆಯ ಉದ್ದೇಶ ಈಡೇರಿತ್ತು. ಈಗ ಅವರಿಗೆ ಸಾಕ್ಷಾತ್, ಆ ಮೂಕಾಂಬಿಕೆಯೇ ಬಂದು, ಅದು "ನಾನಲ್ಲ"ವೆಂದರೂ ಇವರು ನಂಬುವ ಸ್ಥಿತಿಯಲ್ಲಿರಲಿಲ್ಲ!
ಶುಭ ಘಳಿಗೆಯೊಂದರಲ್ಲಿ (ಮಕ್ಕಳು ಹುಟ್ಟುವ ಎಲ್ಲಾ ವೇಳೆಯೂ), ತಾಯಿ ಶ್ಯಾಮಲ ಮುದ್ದಾದ ಗಂಡು ಮಗುವೊಂದಕ್ಕೆ ಜನ್ಮವಿತ್ತರು. ಆ ಮಗುವಿಗೆ, ಶ್ರೇಷ್ಠ ನಕ್ಷತ್ರವೊಂದರಲ್ಲಿ ಜನಿಸಿದ ಕಾರಣ, ಉಜ್ವಲ ಭವಿಷ್ಯವಿದೆಯಂದು ಕೆಲ ಜ್ಯೋತಿಷಿಗಳ ಅಭಿಪ್ರಾಯ. ಹಾಗಾದರೆ, ಇದೇ ಮುಹೂರ್ತದಲ್ಲೇ ಬಯಸಿ ಹುಟ್ಟುವ ಈಗಿನ ಮಕ್ಕಳಿಗೆ ಏನೆನ್ನಬೇಕು? ಆ ಅವಕಾಶವನ್ನು ಕಲ್ಪಿಸಿಕೊಟ್ಟ ವೈದ್ಯರಿಗೊಂದು ಸಲಾಮು ಹೊಡೆಯಬೇಕು!
ಮೂರು ವರ್ಷಗಳ ಅವಿರತ ಅಭಿಲಾಷೆಯ ಕಾಣಿಕೆಯಾಗಿ ಜನಿಸಿದ ಶರಣ್ ಮೇಲೆ ಸಹಜವಾಗಿಯೇ ತಂದೆ-ತಾಯಿಗೆ ಎಲ್ಲಿಲ್ಲದ ಮಮಕಾರ. ಅವನ ಆಟ-ನೋಟಗಳಿಗೆ ತಾಯಿ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಅವರ ಎರಡು ಕಣ್ಣು ಮುಚ್ಚಿದಾಗಲೂ, ಕರುಳಿನ ಕಣ್ಣು ಕಂದನಿಗೆ ಕಾವಲಾಗಿತ್ತು. ರಾತ್ರಿ ಅಳುವ ಕಂದನಿಗೆ, ಯಾವ ದೈವ ತಾನೇ ಸಮಾಧಾನ ಪಡಿಸಬಲ್ಲದು?
ಸುಂದರ್ ಸರ್ಕಾರಿ ಕಛೇರಿಯೊಂದರಲ್ಲಿ ಸಾಧಾರಣ ಹುದ್ದೆಯಲ್ಲಿದ್ದರು. ಬರುವ ಸಂಬಳದಲ್ಲಿ ತಮ್ಮ ಪುಟ್ಟ ಕುಟುಂಬವನ್ನು ಹಾಯಾಗಿ ಮುನ್ನಡೆಸುತ್ತಿದ್ದರು. ಇರುವ ಒಬ್ಬ ಮಗನಿಗೆ ಮುಂದೆ ಸರ್ವಸ್ವವೂ ಸಿಗಬೇಕೆಂದು ಎಲ್ಲಾ ತಂದೆಯರಂತೆ ಆಶಿಸುತ್ತಿದ್ದರು. ಪುಟ್ಟ ಕಂದನೊಡನೆಯ ಸಂಜೆಯ ವಾಯುವಿಹಾರದ ಸೊಗಸನ್ನು ಮನಸಾರೆ ಆಸ್ವಾದಿಸುತ್ತಿದ್ದರು. ದುಡಿದ ದಣಿವೆಲ್ಲಾ ಕಂದನೊಡನಾಟದಲ್ಲಿ ಮರೆಯಾಗಿ ಬಿಡುತ್ತಿತ್ತು. ಮತ್ತೆ, ಉತ್ಸಾಹದ ಬುಗ್ಗೆ ಚಿಮ್ಮಿ ಬಿಡುತ್ತಿತ್ತು.












Click it and Unblock the Notifications