ಅಗೋಚರ ಶಕ್ತಿ : ಭವಿಷ್ಯ ಅರಸಿ ಹೊರಟ ಶರಣ್
(ಮುಂದುವರಿದಿದೆ...) ಈಗ ಶರಣ್ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದಾನೆ. ಓದಿನಲ್ಲಿ ಅಷ್ಟೇನೂ ಮುಂದಿಲ್ಲದವರು ಆರಿಸಿಕೊಳ್ಳುವಂತಹ ಬಿ.ಎಸ್.ಸಿ. ಪದವಿಗೆ ಸೇರ ಹೊರಟಿದ್ದಾನೆ, ಅದೇ ಕಾರಣಕ್ಕೆ. ಪದವಿ ಪಡೆಯಬೇಕೆಂದರೆ, ತನ್ನ ಸ್ವಂತ ಊರು ಬಳ್ಳಾರಿಯನ್ನು ತೊರೆಯಲೇ ಬೇಕು, ಪದವಿಯೊಂದಿಲ್ಲದೆ ಮನುಷ್ಯ ಬದುಕಲಾರ ಎಂಬ ಅನಿವಾರ್ಯ ಕಾರಣಕ್ಕಾಗಿ. ಅವನ ತಂದೆ-ತಾಯಿ ಒಲ್ಲದ ಮನಸಿನಿಂದಲೇ ಬೆಂಗಳೂರಿಗೆ ಕಳಿಸಿಕೊಟ್ಟರು. ಅವನ ಮುಂದಿನ ಭವಿಷ್ಯ ಉಜ್ವಲಗೊಳಿಸಲು, ಜ್ಯೋತಿಷಿಗಳ ಮಾತಿನಂತೆ.
ಶರಣ್ ಗೆ ಬೆಂಗಳೂರು ಹೊಸ ಪ್ರಪಂಚವೆನಿಸಿತು. ಅಲ್ಲಿನ ರಸ್ತೆಗಳು, ವಾಹನ ದಟ್ಟಣೆ, ಎತ್ತರದ ಮಹಲುಗಳು, ಎಲ್ಲವುದಕ್ಕಿಂತ ಮುಖ್ಯವಾಗಿ ಎಲ್ಲಿ ನೋಡಿದರೂ ಜನಜಂಗುಳಿ ಅವನನ್ನು ಬೆರಗುಗೊಳಿಸಿತ್ತು, ಕ್ಷಣದಲ್ಲಿ ಬೇಸರಗೊಳಿಸಿತ್ತು. ಕೂಪದಲ್ಲಿರುವ ಕಪ್ಪೆಗೆ ಸಾಗರದ ದರ್ಶನ ಮಾಡಿಸಿದಂತಿತ್ತು! ಎಲ್ಲವೂ ಕೇವಲ ಒಂದು ಮಾತಿನಲ್ಲಿ ದೊರೆಯುತ್ತಿತ್ತು ಅಲ್ಲಿ; ಆದರೆ ಇಲ್ಲಿ, ಎಲ್ಲವೂ ಎಲ್ಲಿ ಸಿಗುತ್ತದೆ ಕುಳಿತಲ್ಲಿಯೆ? ಆದರೂ, ದೂರವಿರುವ ಮಗನಿಗೆ ದುಡ್ಡಿಗೆಂದು ಯಾವ ತಂದೆ-ತಾಯಿ ಕೊರತೆ ಮಾಡಿದ್ದಾರೆ? ಹಾಗಾದರೆ, ಒಂದರ್ಥದಲ್ಲಿ ನಮ್ಮ ಶರಣ್ ಏಕಾಂಗಿಯೂ ಹೌದು, ಸ್ವೇಚ್ಛಾಚಾರಿಯೂ ಹೌದು.
ಮೊದಲೇ ಆಲಸಿಯಾದವನಿಗೆ, ಸುಮ್ಮನೆ ಬರುವ ಹಣ ಮತ್ತಷ್ಟು ಸುಖಿಜೀವಿಯನ್ನಾಗಿಸುತ್ತದೆ. ನಮ್ಮ ಶರಣ್ ಪಾಡೂ ಇದೆ. ನಮ್ಮ ಯುವಕರಲ್ಲಿ ಸುಳ್ಳಿಗೆಂದು ಬರ ಬಂದಿದೆ ಹೇಳಿ, ಸುಮ್ಮನೆ ಹಣ ಕೀಳಲು? ಬರೆಯದ ಪರೀಕ್ಷೆಗಳಿಗೆಲ್ಲಾ ಶುಲ್ಕ ಭರಿಸಿಯಾಯಿತು. "ಕೆಡುವ ಕಪಿಗೊಂದು ಕೆಡಿಸುವ ಹತ್ತು ಕಪಿ" ಎಂಬಂತೆ ಗೆಳೆಯರ ಬಳಗದ ಸಹವಾಸವಿತ್ತು. ಬದುಕು ಹೀಗೆ ಸಾಗುವಾಗ ಕೊನೆಯವರೆಗೂ ಯೌವನವೊಂದೇ ಇರಲಿ ಎನಿಸಿ ಬಿಡುತ್ತದೆ. ಶರಣ್ ಅದರ ಆಚೆ-ಈಚೆ ಕೂಡ ಯೋಚಿಸಿದವನಲ್ಲ.
ಎಲ್ಲಾ ಕಡೆಯೂ ಒಳ್ಳೆಯದು-ಕೆಟ್ಟದ್ದು ಎರಡೂ ಇರುತ್ತದೆ ಎಂಬಂತೆ ರಾಮ್ ಎಂಬಾತ ಶರಣ್ ಗೆ ಆತ್ಮೀಯ. ನಿಜ ಹೇಳಬೇಕೆಂದರೆ, ಶರಣ್ ರಾಮ್ ಗೆ ಆತ್ಮೀಯನಷ್ಟೆ. ರಾಮ್ ಶ್ರೀಮಂತ ಕುಟುಂಬದಲ್ಲಿ ಜನಿಸಿದವನು. ಎಲ್ಲಾ ವೈಭೋಗಗಳಿದ್ದೂ ವಿದ್ಯೆಗೆ ಮಹತ್ವ ಕೊಟ್ಟವನು, ಸ್ನೇಹ ಜೀವಿ. ಶ್ರೀಮಂತನ ಗೆಳೆತನ ಎಲ್ಲಾರಿಗೂ ಬೇಕಾದುದೆ; ಅಂದಮೇಲೆ, ಅದು ಮಧ್ಯಮ ವರ್ಗದ ಆಲಸಿ ಹುಡುಗನಿಗೆ ಹೇಗೆ ತಾನೆ ಬೇಡವಾದೀತು.












Click it and Unblock the Notifications