• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆರೆಯಂಗಳದ ನವಾಬ (ಭಾಗ 3)

By Super
|

('ಕೆರೆಯಂಗಳದ ನವಾಬ' ಕಥೆಯ ಕೊನೆಯ ಭಾಗ)

ದಿನಗಳು ಮುಂದೆ ನಡೆದಂತೆಲ್ಲಾ ಕೆರೆಯಂಗಳದ ಬೀದಿಯಲ್ಲಿ ಸ್ಮಶಾನ ಮೌನದ ಛಾಪು ಹೆಚ್ಚಾಗಿ ಕೆರೆಯಂಗಳದ ಏರಿಯಲ್ಲಿ ಕೊಳಕು ಜನರ ಬದಲು ಸೂಟು ಬೂಟಿನ ಅಧಿಕಾರಿಗಳು ಬಂದು ಹೋಗುವುದು ಹೆಚ್ಚಾಯಿತು. ಎಲೆಕ್ಷನ್ನಿನ ವೇಳೆಯಲ್ಲಿ ಬ್ಯಾನರು ಕಟ್ಟಿದ, ಮತ ಕೊಡಿ ಎಂದು ಕೈ ಮುಗಿದು ನಿಂತ ಚಿತ್ರಗಳಿದ್ದ ಹಾಳೆಗಳನ್ನು ಹಂಚಿ ವಿವಿಧ ಪಾರ್ಟಿಗಳ ಪರ ಝೋಪಡಿಗಳ ತಟ್ಟಿ ತಟ್ಟಿದ್ದ. ಅಕ್ಕಪಕ್ಕದ ಕೊನೆಗೆ ಇದೇ ಕೇರಿಯ ಹುಡುಗರ ದಂಡು “ಯಾರೋ ಮಿನಿಸ್ಟ್ರು ಬರ್‍ತಾರಂತಪ್ಪೋ ಎಂದು ಕೂಗೂತ್ತಾ ಕೆರೆ ಏರಿಗೆ ನುಗ್ಗಿ ಬಂದು ಮಿನಿಸ್ಟ್ರು ಬರೋದನ್ನೇ ಕಾಯುತ್ತಾ ಸಂದಿಗೆ ಹೋಗಿ ಬೀಡಿ ಸೇದಿ ಬಾರಿಬಾರಿಗೆ ಬರುತ್ತಾ ನೋಡುತ್ತಾ ಮಾಡುತ್ತಿದ್ದರು. “ಮಿನಿಸ್ಟ್ರು ಬರ್ತಾವ್ರೆ, ಬರೋದಿಲ್ವೇನೇ ಬೂವಮ್ಮಾ? ಗೌರಕ್ಕ ಕೂಗಿ ಕರೆದಾಗ ನಯೀಮಾ ಪ್ರತಿಕ್ರಿಯಿಸದೆ ಇರಲಿಲ್ಲ. “ಬಂದೇನವ್ವೆ ಗೌರಿ, ಹೋಗದಿರು, ತಾಳು ಎಂದು ಹೇಳಿದ್ದನ್ನು ಗೌರಕ್ಕ ಕೇಳದೇ ಇರಲಿಲ್ಲ. ನಯೀಮಾಳ ಜೊತೆ ನವಾಬನೂ ಹೊರಡಲು ಅನುವಾದ, ತಟ್ಟಿಯನ್ನು ತಂತಿಯಲ್ಲಿ ಬಿಗಿದು. ಕೇರಿಗೆ ಕೇರಿಯೇ ಏರಿಗೆ ಹೋಗಿ ನೂಕುನುಗ್ಗಲು ಆರಂಭವಾಯಿತು. ಪೊಲೀಸ್ನೋರ ದೊಣ್ಣೆಗಳು ಜನರನ್ನು ಸಂಭಾಳಿಸುವಲ್ಲಿ ಸುಸ್ತಾಗತೊಡಗಿದ್ದವು.

ಏರಿಯ ಮೇಲೆ ಮಿನಿಸ್ಟ್ರು ಯಾಕೆ ಬರುತ್ತಿದ್ದಾರೆ? ಲಾರಿಗಳು ಯಾಕೆ ನುಗ್ಗಿ ಬಂದವು? ಸೂಟುಬೂಟಿನ ಅಧಿಕಾರಿಗಳಿಗೆ ಏರಿಯ ಮೇಲೆ ಕೆಲಸವೇನು? ಯಾವ ಯಾವುದೂ ನಿಂತು ನೂಕುನುಗ್ಗಲು ಆರಂಭಿಸಿದ್ದ ಜನಕ್ಕೆ ಗೊತ್ತಿರಲಿಲ್ಲವೋ? ಗೊತ್ತಾಗಿದ್ದರೂ ಮಾಡುವುದೇನು? ಎಂದು ಸುಮ್ಮನಾಗಿ ಬಂದೋರ ಹೋಗೋರ ನೋಡಿಕೊಂಡರಾತು ಎಂಬಂತಿದ್ದರು ಆ ಜನ. ನವಾಬನೂ ಹಿಂದಿನಿಂದ ಮುಂದಕ್ಕೆ ಮುಂದಿನಿಂದ ಹಿಂದಕ್ಕೆ ನೂಕಲ್ಪಟ್ಟು ಜನ ಜಾತ್ರೆಯ ನೂಕುನುಗ್ಗಲಲ್ಲಿ ಜೋಲಿ ಆಡುತ್ತಲೇ ಆಗಬಹುದಾದ ಅನಾಹುತವನ್ನು ಯೋಚಿಸುತ್ತಿದ್ದ. ತನ್ನ ಪಕ್ಕಕ್ಕೇ ಬಂದು ನಿಂತು ಜೋಲಿ ಆಡುತ್ತಿದ್ದ ರಾಜಿಯನ್ನು ನೋಡಿದ ಕೂಡಲೇ ಅವನ ಯೋಚನೆಯ ದಿಕ್ಕು ಬದಲಾಗಿ ಅವಳ ಇನ್ನಷ್ಟು ಪಕ್ಕಕ್ಕೇ ಮೈ ಉಜ್ಜುವಷ್ಟು ಅಂಟಿ ಪುಳಕಿತಗೊಂಡು ಮೈಮೇಲೆ ಹಿಡಿತವೇ ಇಲ್ಲದಷ್ಟು ಮೈಮರೆತು ರಾಜಿಯೊಂದಿಗೆ ಜೋಲಿ ಆಡತೊಡಗಿದ. ರಾಜಿಗೂ ತನ್ನ ಪಕ್ಕ ನವಾಬ ನಿಂತಿರುವುದು ಹಿತವೆನಿಸಿ, ಎಂದಿನ ಧಾಟಿಯಲ್ಲಿಯೇ ಅತೀ ಸಲಿಗೆಯಿಂದ ಎಂಬಂತೆ ಮಾತಿಗಾರಂಭಿಸಿದಾಗ ಮೈಮರೆತಿದ್ದ ನವಾಬ ತನ್ನನ್ನು ಸಂಭಾಳಿಸಿಕೊಂಡು ತನ್ನ ಮೇಲೆ ರಾಜಿ ಅನುಮಾನಪಟ್ಟಾಳೆಂದು ಹೆದರಿ, “ಹಾಳು ಜನ, ನೂಕೋದು ನಿಲ್ಲಿಸ್ರಪ್ಪ ಎಂದು ಉಸುರಿದ್ದ ರಾಜಿಗಷ್ಟೇ ಕೇಳುವಂತೆ ಹೇಳಿ ಅವಳ ಮುಖ ನೋಡಿದ. ಆ ಮಾತಿಗವಳು ಪ್ರತಿಕ್ರಿಯೆ ವ್ಯಕ್ತಪಡಿಸದಿದ್ದಾಗ ಹಿಂದಕ್ಕೊಮ್ಮೆ ಒತ್ತಿ ನೂಕಿನಿಂತ ನವಾಬನ ಸಾಹಸ ರಾಜಿಯ ಮುಖದಲ್ಲಿ ಮುಗುಳ್ನಗು ಅರಳುವಂತೆ ಮಾಡಿತು.

“ನವಾಬ್ ಸಾಬಿ... ಎಂದು ಮಾತಿಗೆ ತೊಡಗಿದ ರಾಜಿಯ ಈ ರೀತಿಯ ಸಲಿಗೆ ಕ್ಷಣಮಟ್ಟಿಗೆ ಕೋಪ ತರಿಸಿದರೂ, ಹಲ್ಕಿರಿಯುತ್ತಲೇ 'ಆಂ ಎಂದು ಕಿವಿ ಚುರುಕು ಮಾಡಿಕೊಂಡು ನವಾಬ ರೋಮಾಂಚನಕ್ಕೊಳಗಾಗಿ ನಿಂತಾಗ “ಮಿನಿಸ್ಟ್ರಂದ್ರೆ ಯಾವ್ ಮಿನಿಸ್ಟ್ರಪ್ಪ? ಎಂದು ಪ್ರಶ್ನಿಸಿಬಿಡುವುದೇ ರಾಜಿ? ನವಾಬ ರಾಜಿಯ ಪ್ರಶ್ನೆಗೆ ಉತ್ತರಿಸುವುದೇನು ಎಂದು ಗೊತ್ತಾಗದೇ ಗೊಂದಲಕ್ಕೆ ಬಿದ್ದು “ಏ ಸುವ್ವರ್‌ಗಳಾ ಹಿಂದಕ್ಕೆ ಸರೀರೋ ಎಂದು ಕೂಗಿ ತನ್ನ ಕುಂಡಿಯನ್ನು ಮತ್ತೊಮ್ಮೆ ಹಿಂದಕ್ಕೆ ನೂಕಿ ನೆಟ್ಟಗೆ ನಿಂತು ಗೊತ್ತಿಲ್ಲವೆಂಬಂತೆ ತುಟಿಗಳನ್ನು ವಿಚಿತ್ರಗೊಳಿಸಿ ರಾಜಿಯ ಮುಖ ನೋಡಿದ. “ಕೆರೆಗೆ ಬರ್‍ತಾವ್ರಂದ್ರೆ ಕೆರೆಮಿನಿಸ್ಟ್ರೇ ಇರ್‍ಬೇಕಲ್ವೆನೋ ಸಾಬಿ ಎಂದಾಗ, ರಾಜಿ ಎಷ್ಟು ದಡ್ಡಿ ಇದ್ದಾಳೆ ಎಂದರಿತು ಮೌನವಾಗಿಯೇ ಮುಗುಳ್ನಕ್ಕು “ಹೂಂ, ಇರ್‍ಬೋದು" ಎಂದ. ಯಾವ ಮಿನಿಸ್ಟ್ರು ಬರುತ್ತಿದ್ದಾನೆಂದು ಅವನಿಗೂ ಗೊತ್ತಿರಲಿಲ್ಲದ್ದರಿಂದ ಹಾಗನ್ನುವುದು ಅನಿವಾರ್ಯವಾಗಿತ್ತು ಅವನಿಗೆ. ನವಾಬ ಹೂಂಗುಟ್ಟಿದ್ದು ತನ್ನ ಬುದ್ಧಿವಂತಿಕೆಗೆ ಸಾಕ್ಷಿ ಎಂದು ಭಾವಿಸಿದ ರಾಜಿ ಅವನ ಮತ್ತಷ್ಟು ಪಕ್ಕಕ್ಕೆ ನಿಂತುಕೊಂಡಳು. ತಾನು ಸುಳ್ಳೇ ಹೂಂಗುಟ್ಟಿದ್ದು ರಾಜಿಯ ಎದೆ ಉಜ್ಜಲು ಕಾರಣವಾಯಿತೆಂದರಿತ ನವಾಬ ತಾನೂ ಮತ್ತಷ್ಟು ಪಕ್ಕಕ್ಕೆ ಸರಿದು ಸಂಪೂರ್ಣ ಅಂಟಿ ನಿಂತು ಮೈ ಸ್ಪರ್ಶದ ಸುಖಕ್ಕೆ ಜಾರಿಕೊಂಡ. ಇಂಥ ಎಷ್ಟೋ ಸ್ಪರ್ಶಗಳಿಗೆ ಒಳಗಾಗಿ ಅಂತ ಸುಖಗಳನ್ನು ಕ್ಷೀಣವೆಂದು ಭಾವಿಸುವ ಮಟ್ಟಕ್ಕೆ ಬಂದಿದ್ದ ರಾಜಿ ನವಾಬನ ಆಂತರ್ಯ ಅರ್ಥ ಮಾಡಿಕೊಂಡವಳಂತೆ ಅವನು ತನ್ನನ್ನು ಸ್ಪರ್ಶಿಸಿ ಪಡುತ್ತಿರುವ ಸುಖಕ್ಕೆ ಈ ಸಾರ್ವಜನಿಕ ಸ್ಥಳದಲ್ಲಿ ತಡೆಯೊಡ್ಡಬೇಕೆಂದು ಎಣಿಸಿದ ರಾಜಿ “ನಿನ್ನಮ್ಮಿ ಖತ್ನಾ ಮಾಡ್ಸೋದ್ಯಾವಾಗಂತೋ?" ಎಂದು ಹಲ್ಕಿರಿಯುತ್ತಲೇ ಪೋಲಿ ಹೆಂಗಸಂತೆ ನಾಚಿಕೆ ಬಿಟ್ಟು ನೇರವಾಗಿ ಕೇಳಿಬಿಟ್ಟಾಗ ನವಾಬನ ಸ್ಪರ್ಶ ಸುಖದ ಮೂಡೆಲ್ಲ ಹಾಳಾಯ್ತು. ಅವನ ಮುಖ ಸುಣ್ಣದ ಕಲರಿನಿಂದ ರಕ್ತದ ಕೆಂಪಿಗೆ ಬದಲಾಗಿಯೋಯ್ತು. ಅಲ್ಲಿ ನಿಲ್ಲಲಾಗದೆ ನಾಚಿಕೆ ಅವಮಾನದಿಂದ ನವಾಬ ನೂಕುನುಗ್ಗಲಿನ ನಡುವಿನಿಂದ ಮಾಯವಾದ.

ಮಿನಿಸ್ಟ್ರು ಬಂದು ಹೋದ ಮೇಲೆ ಕೆರೆಯಂಗಳದ ಜನಕ್ಕೆ ನಿಜವಾಗಲೂ ಬಾಯಿ ಹುಣ್ಣಿನ ರೋಗ ಬಂದಾಯ್ತು ಎನ್ನುವ ರೀತಿಯಲ್ಲಿ ವಾತಾವರಣವೇ ಬದಲಾಯ್ತು. ಯಾರ ಮುಖದಲ್ಲೂ ಅವರಿವರ ಬಗ್ಗೆ ಆಡಿಕೊಳ್ಳುವ ಹುಮ್ಮಸ್ಸು ಇರಲಿಲ್ಲ. ಮುನ್ಸಿಪಾಲ್ಟಿಯ ಏಕಮಾತ್ರ ನಲ್ಲಿಯ ಬಳಿಯೂ ಎಳ್ಳಷ್ಟು ಮಾತು ಕೇಳಿಬರದಂತಾಯಿತು. ಆ ಜನರ ಬದುಕು ಮೊದಲ ಬಾರಿಗೆ ಭಾರವೆನಿಸತೊಡಗಿತು. ಊರಿಗೆ ಊರೇ ತನ್ನ ಕೊಳಕನ್ನು ತೊಳಕೊಳ್ಳುವ, ದುಡ್ಡಿಲ್ಲದಿದ್ದಾಗ ಮೀನಿಗೆ ಗಾಳ ಎಸೆಯುವ ಈ ಜನರ ಕೆರೆಯನ್ನು ಒಡೆದು ಬಸ್‌ಸ್ಟ್ಯಾಂಡ್ ನಿರ್ಮಿಸುವ ಕೆಲಸಕ್ಕೆ ದೊಡ್ಡ ದೊಡ್ಡ ಯಂತ್ರದ ಕೈಗಳು ಕೈ ಹಾಕಿದ್ದವು. ಕೆರೆ ಏರಿಯ ಒಂದು ಕಡೆ ದಾರಿಯಲ್ಲಿ ತುಂಡರಿಸಿಹಾಕಿದ್ದ ಯಂತ್ರಗಳು ಮತ್ತೊಂದು ಕಡೆ ಲಾರಿಗಟ್ಟಲೆ ಮಣ್ಣನ್ನು ಅದಾಗಲೇ ಖಾಲಿಗೊಂಡಿದ್ದ ಕೆರೆಯ ಚಕ್ಕಳದ ಮೇಲೆ ಮುಚ್ಚುತ್ತಿದ್ದವು. ಅಲ್ಲಿನ ಮುದುಕಿಯರಿಗಿಂತ ಹಳೆಯದಾಗಿ ಕಾಣುತ್ತಿದ್ದ ಹೇಗೋ ಬೆಳೆದು ಬಾಗಿ ಇನ್ನೂ ಜೀವ ಉಳಿಸಿಕೊಂಡಿದ್ದ ಈಚಲು ಮರಗಳ ಅಸಂಖ್ಯ ತುಂಡುಗಳು ಕೆರೆಯಂಗಳದ ಸರ್ವನಾಶವನ್ನು ಪ್ರತಿಬಿಂಬಿಸುತ್ತಿದ್ದವು. 'ಶಿವಮೊಗ್ಗೆಗೆ ಬರ ಬಂದರೂ ಈ ಕೆರೆಗೇನೂ ಆಗುವುದಿಲ್ಲ. ಇಲ್ಲಿನ ನೀರು ಇಂಗುವುದೇ ಇಲ್ಲ" ಎಂದು ಹೇಳುತ್ತಿದ್ದ ಕೆರೆಯಂಗಳದ ಜನ, ಜೀವಂತ ಕೆರೆಯೊಂದು ಮಣ್ಣು ಹಾಸಿದ ಹೊಸ ರಸ್ತೆಯತೆ ಕಾಣುತ್ತಿರುವುದನ್ನು ಕಂಡು ಕಣ್ಣೀರು ಹಾಕಿದರು. ಎಲ್ಲದಕ್ಕೂ ಕೆರೆಯೊಂದಿಗೆ ನೆಂಟಸ್ತನ ಬೆಳೆಸಿಕೊಂಡಿದ್ದ ಕೆರೆಯಂಗಳದ ಜನರಲ್ಲಿ ಏನೋ ಕಳೆದುಕೊಂಡ ನೋವು ಮಾತ್ರ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗಿತ್ತು. ಏರಿಗೆ ಸಮನಾಗಿ ಕೆರೆಯನ್ನು ಮುಚ್ಚಿದ ಸೂಟುಬೂಟಿನ ಜನ ಝೋಪಡಿಗಳ ಮುಂದೆ ನಿಂತು ಕಣ್ಣಳತೆ ಮಾಡಿ, ಗೆರೆ ಕೊರೆದು ಹೋದಾಗಲಂತೂ ಈ ಜನರ ಕಣ್ಣೀರು ತಡೆಯುವ ಏರಿಯೂ ಅಲ್ಲಿ ಇರದಹಾಗಾಯಿತು. ಕೆರೆಯಂಗಳದ ಝೋಪಡಿಗಳು ಅವರವರಿಗೆ ತಮ್ಮ ಮಕ್ಕಳಂತೆ ಕಂಡು ಮಕ್ಕಳ ಮೇಲೆ ಸಾವಿನ ನೆರಳು ಬಿದ್ದು ಅವಚುತ್ತಿರುವುದನ್ನು ನೋಡಿಯೂ ಮೌನ ವಹಿಸಬೇಕಾದ ಅನಿವಾರ್ಯತೆಗೆ ಒಳಗಾದಂತಾಗಿದ್ದರು.

ನವಾಬನ ಖತ್ನಾ ಮಾಡಿಸಲೇಬೇಕೆಂದು ಹಟತೊಟ್ಟಿದ್ದ ನಯೀಮಾ ಮತ್ತೀಗ ಗೊಂದಲದಲ್ಲಿ ಬೀಳುವಂತಾಯ್ತು. ಮೂರು ಬೀದಿಗಳಲ್ಲಿ ಘೋಡಾ ಸವಾರಿ ಮಾಡಿಸಿ, ಕೆರೆಯಂಗಳದ ಜನರೆಲ್ಲ ನಿಂತು ಆಶ್ಚರ್ಯಪಡುವಂತೆ ನವಾಬನ ಖತ್ನಾ ಮಾಡಿಸುತ್ತೇನೆ. ಮೂರು ಕೇರಿಗೂ ತಪ್ಪದೇ ಕುರಿ ಊಟ ಹಾಕಿಸ್ತೇನೆ ಎಂದು ಜಂಬ ಕೊಚ್ಚಿಕೊಂಡಿದ್ದ ನವಾಬನ ಅಮ್ಮಿ ನಯೀಮಾಳ ಝೋಪಡಿಗೂ ಸೂಟುಬೂಟಿನ ಅಧಿಕಾರಿಗಳು ಗೆರೆ ಎಳೆದು ಹೋಗಿದ್ದರು. ನವಾಬನ ಖತ್ನಾಕ್ಕೆಂದು ಜೋಡಿಸಿ ಕೊಂಡಿದ್ದ ತಾಂಬೆಯ ಕೊಡ, ಕೆಂಪು ಕಲರಿನ ಪಂಚೆಯಾಕಾರಕ್ಕೆ ಕತ್ತರಿಸಿದ ಬಟ್ಟೆ, ಆ ಬಟ್ಟೆಯ ನಾಲ್ಕು ತುದಿಗೂ ಹೊಲಿದ ಮಿರಿ ಮಿರಿ ಮಿಂಚುವ ರೇಶಿಮೆಯ ಪಟ್ಟಿ, ತುಪ್ಪದೊಳಗೆ ಅದ್ದಲು ತಯಾರು ಮಾಡಿಕೊಂಡ ಖರ್ಜೂರ, ಒಣಗಿದ ದ್ರಾಕ್ಷಿ... ಎಲ್ಲ ಎಲ್ಲವನ್ನೂ ಮೂಟೆಕಟ್ಟಿ ಝೋಪಡಿಯನ್ನು ಖಾಲಿ ಮಾಡಲು ಸಿದ್ಧವಾಗಿ ನಿಂತಳು.

ಕೆರೆಯಂಗಳದ ಕೇರಿಯ ಛಾತಿ ಬೆಳೆದ ಹುಡುಗಿಯರು, ತಾವೂ ಸರದಿಯಂತೆ ಖಾಲಿಯಾಗುತ್ತೇವೆ ಎಂಬ ಭಾವನೆಯೊಂದಿಗೆ ನಯೀಮಾಳಿಗೆ ಮೌನದಲ್ಲಿಯೇ ಸಹಕರಿಸತೊಡಗಿದರು. 'ಖತ್ನಾ ಮಾಡಿಸಿಕೊಂಡು ನಮ್ಮ ಕುತೂಹಲ ತಣಿಸಲೇ ಇಲ್ಲವಲ್ಲೋ" ಎಂಬಂತೆ ಮೂಲೆಯಲ್ಲಿ ನಿಂತಿದ್ದ ನವಾಬನತ್ತ ಈ ಹುಡುಗಿಯರು ದೃಷ್ಟಿ ಹಾಯಿಸಿ 'ಜಟ್‌ಪಟ್ ನಗರದೊಳ್ಗೆ, ಜಾಗವಿದ್ರೆ ನಮ್ಮ ಅಬ್ಬ ಅಮ್ಮಿಗೂ ತಿಳಿಸು. ಝೋಪಡಿ ಕಿತ್ತು ಬರ್‍ತೇವೆ" ಎಂದು ಉಸುರಿದಂತಾಯಿತು.

ರಾಜಿಯೂ ಅಲ್ಲಿಗೆ ಬಂದು, ನವಾಬನ ಪಕ್ಕಕ್ಕೆ ನಿಂತವಳೇ ಹೆಗಲಿಗೆ ಕೈಹಾಕಿ “ಬೂವಕ್ಕಾ, ನವಾಬನ ಖತ್ನಾಕ್ಕೆ ನಮ್ಗೂ ಕರಿಯೇ ಮರೀಬ್ಯಾಡ" ಎಂದು ಕೋಳಿಯಂತೆ ಕೂಗು ಹಾಕಿ, ಅವನ ತಲೆಯನ್ನು ಪ್ರೀತಿಯಿಂದ ತಟ್ಟಿದಾಗ, ನವಾಬನಲ್ಲಿ ಮುಂದಿನ ಬೇಸಿಗೆಯು ಜನ್ನತ್ತಿನ ಸಂತೋಷವನ್ನು ಕನಸಿನ ಮೂಲಕ ತಂದೊಡ್ಡಿತು.

« 'ಕೆರೆಯಂಗಳದ ನವಾಬ' ಕಥೆಯ ಮೊದಲ ಭಾಗ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nawab on the tank bed, Kannada short story by shi ju pasha, Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more