ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆರೆಯಂಗಳದ ನವಾಬ (ಭಾಗ 2)

By * ಶಿ.ಜು.ಪಾಶ, ಶಿವಮೊಗ್ಗ
|
Google Oneindia Kannada News

Shi Ju Pasha, Shivamogga
('ಕೆರೆಯಂಗಳದ ನವಾಬ' ಕಥೆಯ ಎರಡನೆಯ ಭಾಗ)

ರಾಜಿ ನಕ್ಕಿದ್ದು, ತನಗೆ ಖತ್ನಾ ಆಗಲಿಲ್ಲವೆಂದೇ ಇರಬಹುದೆಂದು ಭಾವಿಸಿದ. 'ಕೇರಿ ರಂಡಿಗೆ ಪೂರ ಗೊತ್ತಾಗ್ತೈತೆ" ಎನ್ನುತ್ತಲೇ ಗಾಳ ವನ್ನೇಲ್ಲ ಕೆರೆ ನೀರಿಗೆಸೆದು ರಾಜಿಗೆ ಬೆನ್ನು ನೀಡಿ ಝೋಪಡಿ ಗಳತ್ತ ಮುಖ ಮಾಡಿ ಕುಳಿತ. ಏನೋ ಮೋಹ ಮತ್ತೆ ಆವರಿಸಿ ಖತ್ನಾದ ವಿಷಯ ಮರೆವಿಗೆ ಸರಿದು ರಾಜಿಯ ಬಲಿತ ಸೊಂಟದ ಭಾಗವನ್ನು ಎಡೆಬಿ ಡದೆ ನೋಡಿ, ಮುಳುಗುವ ಸೂರ್ಯನ ಕೆಂಪು ಬೆಳಕಲ್ಲಿ ಬಂಗಾರದಂತೆ ಹೊಳೆಯುತ್ತಿರುವ ಮಂಡಿಯವರೆಗಿನ ಕಾಲುಗಳ ಮೇಲೆ ದೃಷ್ಟಿ ಹಾಯಿಸಿ ಅದೇಷ್ಟೋ ಹೊತ್ತು ಕಾಲ ತಳ್ಳಿದ. ರಾಜಿಯೂ ತನ್ನ ಕಡೆಯೇ ಕಳ್ಳ ನೋಟ ಹರಿಸುತ್ತಿದ್ದಾಳೆಂದು ಭ್ರಮಿಸಿಕೊಂಡ. ತನಗೆ ಖತ್ನಾ ಆಗಿಲ್ಲವೆಂಬ ವಿಷಯ ಅವಳಿಗೆ ಗೊತ್ತಿರಲಿಕ್ಕಿಲ್ಲ ಎಂದು ಸಮಾಧಾನ ತಂದುಕೊಂಡು ರಾಜಿಗೆ ಬೈದದಕ್ಕೆ ದಯಾಳುವಾದ ಅಲ್ಲಾಹನೆ ತನ್ನನ್ನು ಕ್ಷಮಿಸಿ ಎಂದು ಪ್ರಾರ್ಥಿಸುವಷ್ಟು ಭಾವುಕನಾಗತೊಡಗಿದ. ನವಾಬನ ಪ್ರಾರ್ಥನೆ ಮುಗಿಯುವಷ್ಟರಲ್ಲಿ ಕತ್ತಲಾಗಿ ರಾಜಿಯ ಮುಖವು ಅಸ್ಪಷ್ಟವಾ ಗತೊಡಗಿತು. ನೆರಳಿನಂತಹ ಆಕೃತಿಗಳು ದೊಡ್ಡ ಬಿದಿರು ಬುಟ್ಟಿಗಳನ್ನು ತಲೆ ಮೇಲೆ ಹೊತ್ತು ಕೆರೆಯಂಗಳದ ಏರಿಯಾ ದಾರಿ ಹಿಡಿದಿದ್ದು, ಅಂತಿಮವಾಗಿ ಗೋಚರಿ ಸಿದಾಗ, ನವಾಬನು ಅಂಡಿಗೆ ಅಂಟಿದ ಕೆಸರು ಮಣ್ಣು ಹೊರಿಸಿ ಕೊಂಡವನು ಆಕೃತಿಗಳನ್ನು ಹಿಂಬಾಲಿಸುವಂತೆ ಹೊರಟು ನಿಂತ.

ತನ್ನ ಝೋಪಡಿಯಲ್ಲಿ ನಿಂತು ರಾಜಿಯ ಝೋಪಡಿಯತ್ತ ಸೂಕ್ಷ್ಮ ದೃಷ್ಟಿ ಹಾಯಿಸಿದಾಗ ಉರಿಯುತ್ತಿರುವ ದೀಪವೊಂದರ ಪುಟ್ಟ ಬೆಳಕು ನವಾಬನಿಗೆ ಕೈಬೀಸಿ ಕರೆದಂತಾಯಿತು. ಅತ್ತ ಹೋಗಿ ರಾಜಿಯನ್ನೊಮ್ಮೆ ಕಣ್ತುಂಬ ನೋಡಿ ಅವಳನ್ನು ಮುಟ್ಟಿ ಬರಬೇಕೆಂದು ನವಾಬ ನಿರ್ಧರಿ ಸುವ ಹೊತ್ತಿಗೆ ರಾಜಿಯ ಗಂಡ ಭೀಮ ತನ್ನ ಮುಂದೆ ರಸ್ತೆ ಅಳೆಯುತ್ತ ಎದ್ದು ಬಿದ್ದು ಹೋಗುತ್ತಿದ್ದುದು ಕಂಡು ನವಾಬ ಇಡೀ ಕೆರೆಯಂಗಳದ ಕೇರಿಯನ್ನೊಮ್ಮೆ ಮೊದಲಬಾರಿಗೆ ಎಂಬಂತೆ ನೋಡತೊಡಗಿದ. ಸಖತ್ತು ಬೀಸಿಲಿನ ದಿನಗಳಾಗಿದ್ದರಿಂದ ನೆಮ್ಮದಿ ನಿದ್ದೆಗಾಗಿ ಗಂಡಸರು ಹೆಂಗಸರೆನ್ನದೇ ಹೊಸದಾಗಿ ಡಾಂಬರು ಹಾಕಿದ್ದ ಕೇರಿಯ ಮೇಲೆ ಚಾಪೆ ಹಾಸಿ ಮೈಚೆಲ್ಲಿ ಮಲಗಿದ್ದ ದೃಶ್ಯ ನವಾಬನಲ್ಲಿ ಏನೋ ಆಸೆ ಹುಟ್ಟಿಸತೊಡಗಿತು. ಇಬ್ಬರು ಮಲಗಿದರೇನೇ ತುಂಬಿ ಇಕ್ಕಟ್ಟುಕೊಳ್ಳುವ ಝೋಪಡಿಯಲ್ಲಿ ಸೆಖೆಯಲ್ಲಿ ಅಂಟಿ ಮಲಗುವುದು ರಾಜಿಗೂ ಸಾಧ್ಯ ವಾಗಲಿಕ್ಕಿಲ್ಲ ಎಂದು ಯೋಚಿಸಿದವನ ತೊಡೆ ಮತ್ತೆ ಕಂಪನಕ್ಕೊಳಗಾಗಿ ತನ್ನ ಝೋಪಡಿಯ ಒಳಗೆ ತೂರಿಕೊಂಡ. ಹಾಸಿದ್ದ ಚಾಪೆಯ ಮೇಲೆ ಮಲಗಿಕೊಂಡವನು ಕೆಲವಾರು ಕ್ಷಣಗಳಲ್ಲಿಯೇ “ಹಾಳು ಸೆಖೆ, ಇಕ್ಕಟ್ಟಿ ನೊಳಗೆ ಮಲಗೋದು ಹೇಗೆ? ಹೊರಕ್ಕೆ ಹಾಸಿಕೊಳ್ಳುತ್ತೇನಮ್ಮಿ" ಎಂದ ವನು ನಯೀಮಾಳ ಪ್ರತಿಮಾತಿಗೂ ಕಾಯದೆ ಕೆರೆಯಂಗಳದ ಕೆರೆಗೆ ಚಂಗನೆ ಜಿಗಿದು ಹಾಸಿಕೊಂಡ ಹಾಸಿಗೆ ಮೇಲೆ ಮೈ ಚೆಲ್ಲಿ ನಯೀಮಾ ಝೋಪಡಿಯ ತಟ್ಟಿ ಎಳೆದುಕೊಳ್ಳುವವರೆಗೆ ಸತ್ತವನಂತೆ ನಿದ್ದೆ ಹೋದ. ತಟ್ಟಿ ಎಳೆದುಕೊಳ್ಳುವ ಸದ್ದಾಗುತ್ತಿದ್ದಂತೆಯೇ ಕಣ್ಣು ಬಿಟ್ಟು ರಾಜಿಯ ಝೋಪಡಿಯ ಅಂಗಳದಂತಿದ್ದ ಡಾಂಬರು ರಸ್ತೆಗೆ ಕಣ್ಣು ಹಾಕಿದ. ಕತ್ತಲೊಳಗೆ ಮುಳುಗಿ ಸ್ಮಶಾನದಂತಾಗಿದ್ದ ಕೆರೆಯಂಗಳದ ಕೇರಿಯಲ್ಲಿ ರಾಜಿಯ ಝೋಪಡಿಯ ಪುಟ್ಟ ಬೆಳಕು ಮಾತ್ರ ಕತ್ತಲನ್ನು ಎತ್ತಿಹಿಡಿದ ಲೈಟು ಕಂಬದಂತೆ ಕಾಣುತ್ತಿರುವುದು ಗಮನಿಸುವಾಗಲೇ ಅಲ್ಲಿಯೂ ಕತ್ತಲಾಗಿ ತಟ್ಟಿಯನ್ನು ಬಿಗಿದ ಸದ್ದಾಗಿ ನವಾಬನ ಬೆಂಕಿಗೆ ನೀರು ಬಿತ್ತು.

ದೂರದ ಕಳ್ಳಿ ಗಿಡದಲ್ಲಿ ಮಿಂಚಿ ಮಿಂಚಿ ಮರೆಯಾಗುವ ಕ್ಷಣಿಕ ಬೆಳಕು ನವಾಬನಲ್ಲಿ ಜೋಸೆಫನ ಚಿತ್ರ ಮೂಡಿಸಿ, ಅವನು ಹೇಳಿದ ಪುಟ್ಟ ಕಥೆಯೊಂದು ದೆವ್ವಗಳು ಓಡಾಡುವ ಹೊತ್ತೆಂದು ಕೆರೆಯಂಗಳದ ಜನ ಭಾವಿಸುವ ಅಮಾವಾಸ್ಯೆಯ ರಾತ್ರಿಯಲ್ಲಿ ನೆನಪಾಗಿ ಕಾಡಿತು. ದೇವರು ಮಾನವರನ್ನೆಲ್ಲ ಸೃಷ್ಟಿಸಿ ಭೂಮಿಗೆ ಕಳಿಸಿದ. ಹಾಗೆ ಕಳಿಸುವಾಗ ಒಂದು ನಿಯಮವನ್ನು ಕಿವಿಯಲ್ಲಿ ಊದಿದನಂತೆ. ಇಲ್ಲಿಂದ ಹೇಗೆ ಹೊರಡುತ್ತೀರೋ ಹಾಗೆಯೇ ಜೀವನ ಮುಗಿಸಿ ವಾಪಸ್ ಬಂದರೆ ಮಾತ್ರ ನಿಮಗೆ ಸ್ವರ್ಗ. ಮಾನವರೆಲ್ಲ ಸರಿ ಹಾಗೇಯೇ ಆಗಲಿ ಎಂದು ಭೂಮಿಗೆ ಹೊರಟು ಬಂದರಂತೆ. ಮಜವಾಗಿ ಭೂಮಿಯ ಮೇಲೆ ಕಾಲ ಕಳೆದವರು ಯಾವುದಾವುದೋ ಧರ್ಮಗಳ ಜಂಜಡಕ್ಕೆ ಬಿದ್ದು ಅಸಲಿ ಮನುಷ್ಯ ಧರ್ಮವನ್ನೇ ಮರೆತುಬಿಟ್ಟರಂತೆ. ಅವರವರ ಜೀವನಾವಧಿ ಮುಗಿಸಿಕೊಂಡು ಸ್ವರ್ಗಕ್ಕೆ ಹೋದವರಿಗೆ ಕಟ್ಟುನಿಟ್ಟಿನ ಯಂತ್ರದೊಳಕ್ಕೆ ಹಾಕಿ ಯಾವ ಯಾವ ಅಂಗಗಳು ಊನವಾಗಿವೆ ಎಂಬ ವಿವರ ಪಡೆದುಕೊಂಡ ದೇವರು, ಧರ್ಮಧರ್ಮಗಳ ಜಗಳದಲ್ಲಿ ತಲೆ, ಕೈಕಾಲು ಕತ್ತರಿಸಿಕೊಂಡವರನ್ನೆಲ್ಲ ನಡುರಾತ್ರಿ ಎನ್ನದೇ ನಿಮ್ಮ ನಿಮ್ಮ ಕತ್ತರಿಸಲ್ಪಟ್ಟ ಅಂಗಗಳನ್ನೆಲ್ಲ ಹುಡುಕಿ ತನ್ನಿ ಎಂದು ಭೂಮಿಗೆ ಮಾನವರ ಗುಡ್ಡೆಯೊಂದನ್ನು ಹೊತ್ತುಹಾಕಿದನಂತೆ. ನಡುರಾತ್ರಿಯಲ್ಲಿ ಕಳೆದುಕೊಂಡ ಅಂಗಗಳನ್ನು ಹುಡುಕಲು ಬೆಳಕು ಬೇಕಲ್ಲವೇ? ಮಿಂಚು ಹುಳುಗಳನ್ನು ಸೃಷ್ಟಿಸಿ ಈ ಮಾನವರ ಜೊತೆಗಿದ್ದು ಸಹಕರಿಸಿ ಎಂದು ಆಜ್ಞೆ ಮಾಡಿದನಂತೆ. ಮಾನವರಿಗೆ ಕಳೆದುಕೊಂಡ ತಮ್ಮ ತಮ್ಮ ಅಂಗಗಳು ಕತ್ತಲಲ್ಲಿ ಸಿಕ್ಕವೋ ಇಲ್ಲವೋ, ಆದರೆ ಮಿಂಚು ಹುಳುಗಳು ಕತ್ತಲಾದ ಕೂಡಲೇ ಮಿಂಚತೊಡಗುತ್ತಿವೆ.

ಈ ಕಥೆಯನ್ನು ಸ್ಪಷ್ಟವಾಗಿ ನೆನಪಿಸಿಕೊಂಡ ನವಾಬ ತಾನಂತೂ ಜನ್ನತ್ತಿಗೇ ಹೋಗುವುದು ತನ್ನ ಯಾವುದೇ ಅಂಗ ಕತ್ತರಿಸಲ್ಪಟ್ಟಿಲ್ಲ ಎಂಬ ಜಂಬಕ್ಕೆ ಒಂದು ಕ್ಷಣ ಒಳಗಾಗಿ ಮತ್ತೊಂದು ಕ್ಷಣ ಏನೋ ನೆನಪಿಸಿಕೊಂಡವನಂತೆ ಧಕ್ಕನೆ ಎದ್ದು ಕುಳಿತ. ಹಾಗೆ ಎದ್ದು ಕುಳಿತ ನವಾಬನಲ್ಲಿ ಆತನ ಅರಿವಿಗೆ ಬರದಂತೆಯೇ “ನನ್ನ ಖತ್ನಾ ಆಗಿಬಿಟ್ಟರೆ, ಜನ್ನತ್ತಿಗೆ ಹೋಗಲಾದರೂ ಸಾಧ್ಯವೇ?" ಎಂಬ ಪ್ರಶ್ನೆ ಸುತ್ತಿನವರಿಗೂ ಕೇಳಿಸುವಂತೆ ಸದ್ದು ಮಾಡಿತು.

ನಾಲ್ಕು ಜನ ಒಟ್ಟಾಗಿ ತಿರುಗಾಡಿದರೆ ಚಿಕ್ಕದೆನಿಸತೊಡಗುವ ಕೆರೆಯಂಗಳದ ಬೀದಿಯಲ್ಲಿ ಲಾರಿಗಳು ಒಮ್ಮೆಲೇ ನುಗ್ಗಿ ರಣಕಹಳೆಯ ಸದ್ದು ಮಾಡಿದಾಗ ಇಡೀ ಕೇರಿಗೆ ಎಚ್ಚರವಾದಂತಾಯಿತು. ಈ ಕೇರಿಗೆ ಲಾರಿಗಳು ನುಗ್ಗಿ ಬಂದದ್ದನ್ನು ಕೆರೆಯಂಗಳದ ಜನ ಈವರೆಗೆ ನೋಡಿಯೇ ಇರಲಿಲ್ಲವಾದ್ದರಿಂದ ತಮ್ಮ ತಮ್ಮ ಝೋಪಡಿಗಳಿಂದ ಏನೋ ಆಗಬಾರದ್ದು ಆಗಿಹೋಯಿತೇನೋ ಎಂಬಂತೆ ಬಿಟ್ಟ ಕಣ್ಣು ಬಿಟ್ಟು ಹೊರಕ್ಕೆ ದೌಡಾಯಿಸಿ ಗುಂಪು ಗುಂಪಾಗಿ ನಿಲ್ಲತೊಡಗಿದರು. ತಡರಾತ್ರಿಯಲ್ಲಿ ಮೈಮರೆತು ನಿದ್ದೆಹೋಗಿದ್ದ ನವಾಬನಿಗೆ ಅದೇಕೋ ಎಚ್ಚರವಾಗದಿದ್ದಾಗ ನಯೀಮಾ ತಂದು ಸುರಿದ ಚೊಂಬು ತಣ್ಣೀರು ಅವನ ನಿದ್ದೆ ಓಡಿಸಲು ಸಾಕಾದಂತಿತ್ತು. ಎದ್ದು ಕುಳಿತ ನವಾಬನಿಗೂ ಕೆರೆಯಂಗಳದ ಕೇರಿಯ ಜನಕ್ಕೆಲ್ಲ ಆದ ಆಘಾತವೇ ಆಯಿತು ಎಂದು ಹೇಳಬೇಕಾಗಿಲ್ಲ ತಾನೇ? ಮುಖ, ಮೈಮೇಲೆ ಬಿದ್ದ ನೀರನ್ನು ಕೊಡವಿಕೊಂಡ ನವಾಬನಿಗೆ ಲಾರಿಗಳೂ ಧೂಳೆಬ್ಬಿಸಿ ನುಗ್ಗಿ ಬರುತ್ತಿರುವ ದೃಶ್ಯ ಯಾಕೆಂದು ಅರ್ಥವಾಗಿ ಇನ್ನು ರಾಜಿಯನ್ನು ಕೆರೆಯ ಬಂಡೆಕಲ್ಲುಗಳ ಮೇಲೆ ನೋಡಲು ಸಾಧ್ಯವೇ ಇಲ್ಲವೇನೋ ಎಂದು ತನ್ನಷ್ಟಕ್ಕೇ ವಿಷಾದಕ್ಕೆ ಜಾರಿಬಿದ್ದ.

ಕಳೆಹೀನಗೊಂಡ ನವಾಬನ ಮುಖದಲ್ಲಿ ಮತ್ತೂ ಒಂದು ಸಮಸ್ಯೆ ಎದ್ದುಕಾಣುತ್ತಿತ್ತು. 'ನನ್ನ ಖತ್ನಾ ಆಗುವವರೆಗೆ ಈ ಝೋಪಡಿಗಳಿಗೇನೂ ಆಗದಿರಲಿ." ಅವನು ಪ್ರಾರ್ಥನೆ ಸಲ್ಲಿಸಲು ಶಿಸ್ತಾಗಿ ನಿಂತುಕೊಂಡಂತೆ ಕಾಣಬರುತ್ತಿರುವಾಗಲೇ ನಾಲ್ಕಾರು ಲಾರಿಗಳ ಸಾಲು ಅವನ ಬಳಿಗೆ ಬಂದು ನಿಂತುಕೊಂಡಿತು. ಮುಂದಿನ ಲಾರಿಯ ಡ್ರೈವರೇನೋ ಜೋಸೆಫ ಆಗಾಗ ಭಯಂಕರವಾಗಿ ಹೇಳುತ್ತಿದ್ದ ನರಕದ ಅಧಿಪತಿ 'ಲೂಸೀಫೆರ"ನಂತೆ ಕಂಡು ಕಂಪಿಸತೊಡಗಿದ. 'ಹಡ್ಸೀ ಮಗನ, ಅತ್ಲಾಗ ಸರಿಯೋ" ಎಂದು ಆ ಲೂಸೀಫೆರ ಬೆದರಿಸಿದಾಗಲಂತೂ ನವಾಬ ಕಕ್ಕಾಬಿಕ್ಕಿಯಾಗಿ ಝೋಪಡಿಯೊಳಗೆ ಹೊಕ್ಕು ತಟ್ಟಿಯನ್ನು ಆಧಾರಕ್ಕೆ ಹಿಡಿದು ಲಾರಿಗಳು ಮುಂದೆ ಹೋಗುವುದನ್ನು ಇನ್ನಿತರರಂತೆ ಭಯದ ದೃಷ್ಟಿಯಲ್ಲಿಯೇ ನೋಡತೊಡಗಿದ.ಲಾರಿಗಳು ಕೆರೆಯ ಏರಿಯತ್ತ ಒಂದೇ ಓಟದಲ್ಲಿ ದೌಡಾಯಿಸಿ ರಣಕಹಳೆಯ ಸದ್ದನ್ನು ಕೆರೆ ನೀರಿನಲ್ಲಿ ಅಂತಿಮವಾಗಿ ಮುಳುಗಿಸಿದಾಗ 'ಅಬ್ಬಾ ಬದುಕಿದೆವು" ಎಂದುಕೊಳ್ಳುತ್ತಲೇ ಕೆರೆಯಂಗಳದ ಕೇರಿಯ ಜನ ಮುನ್ಸಿಪಾಲ್ಟಿಯ ಏಕಮಾತ್ರ ನಲ್ಲಿಗೆ ಹಂಡೆ ಕೊಡಪಾನಗಳೊಂದಿಗೆ ಮುತ್ತಿಗೆ ಹಾಕಿ ಅವರಿವರನ್ನು ಬೈಯುತ್ತಲೇ ತಮ್ಮ ದಿನನಿತ್ಯದ ಕೆಲಸಗಳಿಗೆ ಕೈಕಾಲು ಸೊಂಟಗಳನ್ನು ಬಳಸಿಕೊಂಡರು.

ತನ್ನ ಕೇರಿಯ ಜನರ ಈ ಬಗೆಯ ವರ್ತನೆಯನ್ನು ತಟ್ಟಿ ಹಿಡಿದೇ ನೋಡುತ್ತಿದ್ದ ನವಾಬ 'ಹಾಳಾದ ಜನ ಗೂಟ ಕೀಳೋ ಹೊತ್ತು ಬಂದು ಜಗಳಕ್ಕಿಳಿಯೋದನ್ನ ಬಿಡೋದಿಲ್ಲ ಇವರದು ದಿನನಿತ್ಯದ್ದು ಇದೇ ಬದುಕಾಗಿ ಹೋಯ್ತು. ಇವ್ರ ಉದ್ಧಾರನಾದ್ರೂ ಹೇಗೆ?" ಒಳಗೊಳಗೇ ಅಸಮಾಧಾನ ಪಟ್ಟುಕೊಂಡು ಝೋಪಡಿಯೊಳಗೆ ನಿಲ್ಲಲಾರದೆ ಕೆರೆಯತ್ತ ಚೊಂಬು ಹಿಡಿದು ಸಂಡಾಸಿಗೆ ಹೊರಟು ನಿಂತ. ಹಾಗೆ ಹೊರಡುವ ಮುನ್ನ ಅಮ್ಮಿ ನಡುಬಗ್ಗಿಸಿ ಕಟ್ಟಿಟ್ಟಿದ್ದ ಒಂದೆರಡು ಒಣ ಬೀಡಿಗಳನ್ನು ಕೇರುವ ಮರದಿಂದ ಕಣ್ಣುತಪ್ಪಿಸಿ ಹೆಕ್ಕಿ ಜೇಬೊಳಗೆ ಇಳಿಸಿ, ಅಲ್ಲಿಯೇ ಬಿದ್ದಿದ್ದ ಬೆಂಕಿ ಪೊಟ್ಟಣದೊಡನೆ ಕೆರೆಯತ್ತ ಹೆಜ್ಜೆ ಹಾಕಿದ. ಹಾಗೆ ಹೋಗುವಾಗಲೇ ಕೇರಿಯ ಪ್ರತಿಯೊಂದು ಝೋಪಡಿಯನ್ನೂ ನೋಡುತ್ತಾ ಇದೆಲ್ಲವೂ ನೆಲಸಮವಾಗುವ, ಝೋಪಡಿಗಳ ಮುರಿದುಬಿದ್ದ ದೇಹದ ಮೇಲೆಲ್ಲ ಬಸ್ಸುಗಳು ಓಡಾಡುವ ಸಂಗತಿ ಕಲ್ಪಿಸಿಕೊಂಡು ಬೆಂಕಿಯಿಟ್ಟ ಬೀಡಿಯಿಂದ ಹೊಗೆ ಬಿಡಲು ಶುರುಹಚ್ಚಿಕೊಂಡ. ಇದ್ದಕ್ಕಿದ್ದ ಹಾಗೆ ಬಂದೊದಗಿದ ಸಮಸ್ಯೆಯಿಂದಾಗಿ ನವಾಬನಿಗೆ ಏನು ಮಾಡುವುದೆಂದು ಅರ್ಥವಾಗದೇ ತೊಳಲಾಡಿ ಕೊನೆಗೆ ತಾನು ಹೊರಟಿದ್ದು ಸಂಡಾಸಿಗೆಂದು ನೆನಪಿಸಿಕೊಂಡು ಕೆರೆಯತ್ತ ಹೋಗಿ ತನ್ನ ಮಾಮೂಲಿನ ದಟ್ಟ ಕಳ್ಳಿಗಳಲ್ಲಿ ತೂರಿಕೊಂಡು ಕುಳಿತ. ಮತ್ತೊಂದು ಬೀಡಿ ಹಚ್ಚಿಕೊಂಡವನು ಕಳ್ಳಿಗಳ ಮರೆಯಲ್ಲಿಯೇ ನಿಂತ ಲಾರಿಗಳ ಕಡೆ ನೋಡಿದ. ಕೆರೆ ಮುಚ್ಚಿ ಹಾಕುವ ಅವರ ಹುನ್ನಾರಗಳು ಅಲ್ಲಲ್ಲಿ ಕೈ ಸನ್ನೆ ಮಾಡುತ್ತಾ ನಿಂತ ಮಂದಿಯಿಂದ ಸ್ಪಷ್ಟವಾಗತೊಡಗಿತ್ತು. ನವಾಬನಿಗೆ ತನ್ನ ಜನರ ಬದುಕು ಈ ಹೇಲಿಗಿಂತ ಕಡೆಯಾಗುತ್ತಿರುವ ಕುರಿತು ಅವನ ಮೈ ಉರಿಯತೊಡಗಿತ್ತು. ತಾನೂ ಆ ಜನರ ನಡುವೆ ಇರುವುದು ನೆನಪಾಗಿ ತನ್ನ ಮೇಲೆಯೂ ಕನಿಕರ ಹುಟ್ಟತೊಡಗಿತು.

'ಕೆರೆಯಂಗಳದ ನವಾಬ' ಕಥೆಯ ಕೊನೆಯ ಭಾಗ</a> »<br> « <a href='ಕೆರೆಯಂಗಳದ ನವಾಬ' ಕಥೆಯ ಮೊದಲ ಭಾಗ" title="'ಕೆರೆಯಂಗಳದ ನವಾಬ' ಕಥೆಯ ಕೊನೆಯ ಭಾಗ »
« 'ಕೆರೆಯಂಗಳದ ನವಾಬ' ಕಥೆಯ ಮೊದಲ ಭಾಗ" />'ಕೆರೆಯಂಗಳದ ನವಾಬ' ಕಥೆಯ ಕೊನೆಯ ಭಾಗ »
« 'ಕೆರೆಯಂಗಳದ ನವಾಬ' ಕಥೆಯ ಮೊದಲ ಭಾಗ

English summary
Nawab on the tank bed, Kannada short story by shi ju pasha, Shivamogga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X